ನನ್ನ ಪ್ರೀತಿಯ ಪ್ರಿಯತಮ..
ನನ್ನ ಈ ಒಕ್ಕಣೆಯನ್ನು ನೋಡಿ ಆಶ್ಚರ್ಯವಾಯಿತು ಅಲ್ಲವೇ! ಮನದಲ್ಲಿ ನೂರೆಂಟು ಗೊಂದಲಗಳು, ತಲೆಯಲ್ಲಿ ಇಲ್ಲದ ಕೋಲಾಹಲ, ಎದೆ ಬಡಿತ ತಪ್ಪಿದ ಹಾಗೆ ಅನುಭವ ಆಗುತ್ತಿದೆ ಅಲ್ಲವೇ? ಎಂದೂ ಇಲ್ಲದ ಹೊಸ ರೀತಿಯ ಒಂದು ಒಕ್ಕಣೆ ನಿನ್ನ ಮನಸ್ಸಿನಲ್ಲಿ ಮೊದಮೊದಲು ಗಾಬರಿ, ಭಯ ದಿಗಿಲುಗಳನ್ನು ಮೂಡಿಸಿದರೆ ನಂತರದಲ್ಲಿ ನನ್ನ ಕುರಿತು ರೇಜಿಗೆ, ಅಸಹ್ಯ ಉಂಟಾಗಬಹುದು. ಅಯ್ಯೋ, ನಾನು ಇವರನ್ನು ದೇವರಂತೆ ಭಾವಿಸುತ್ತಿದ್ದೆ. ನನಗೆ ಬುದ್ಧಿ ಹೇಳುವ ನನ್ನ ಬದುಕನ್ನು ಸರಿದಾರಿಗೆ ತರುವ ದೇವತೆಯ ಸ್ಥಾನ ನೀಡಿ ಮನದಲ್ಲಿ ಆರಾಧಿಸುತ್ತಿದ್ದೆ
ಛೀ !ಈಕೆ ಇಂತಹ ಹೆಣ್ಣು ಮಗಳು ಎಂದು ಭಾವಿಸಿರಲಿಲ್ಲ ಎಂಬೆಲ್ಲಾ ಯೋಚನೆಗಳು ಮನವನ್ನು ಮುತ್ತಿ ದಾಳಿ ಮಾಡುತ್ತಿವೆ ಅಲ್ಲವೇ?
ಅವೆಲ್ಲವನ್ನೂ ಪಕ್ಕಕ್ಕಿಟ್ಟು ಒಂದು ಕ್ಷಣ ಪತ್ರವನ್ನು ಮುಂದೆ ಓದು.
ನಾವಿಬ್ಬರೂ ಒಂದೇ ಶಾಲೆಯ ಒಂದೇ ತರಗತಿಯಲ್ಲಿ ಓದದೆ ಇದ್ದರೂ, ಕೆಲ ತಿಂಗಳುಗಳ ವ್ಯತ್ಯಾಸವಿದ್ದರೂ ಒಂದೇ ವಯಸ್ಸಿನವರಂತೂ ಹೌದು.
ಸ್ನೇಹಿತರಲ್ಲಿ ಬುದ್ಧಿವಾದ ರುಚಿಸುವುದಿಲ್ಲ! ನೀನೇನು ನನಗೆ ಹೇಳುವುದು ಎಂಬ ಭಾವ ಒಂದು ರೀತಿಯ ಅಸಹನೆಯ ರೂಪದಲ್ಲಿ ಹೊರಬರುತ್ತದೆ. ಸಿಟ್ಟಿನ ಸಮಯದಲ್ಲಿ “ದೊಡ್ಡದಾಗಿ ಬಂದ್ಲು ಹೇಳಿ ಬಿಡೋಕೆ” ಎಂಬ ಮಾತುಗಳು ಬಾಯಿಂದ ಬರದೇ ಇದ್ದರೂ ಮನದ ಮೂಲೆಯಲ್ಲಿ ಆ ರೀತಿಯ ಅಗೋಚರ ಭಾವ ತೋಚಬಹುದು.
ಆದ್ದರಿಂದ ನಾನೇ ಮುಂದಾಗಿ ನಿನಗಿಂತ ಕೆಲ ದಿನಗಳು ದೊಡ್ಡವಳಾಗಿರುವ ಕಾರಣ ನನ್ನನ್ನು ನಾನೇ ಅಕ್ಕ ಎಂದು ಭಾವಿಸಿಕೊಂಡು ನನ್ನ ತಮ್ಮನೆಂದು ನಿನ್ನನ್ನು ಭಾವಿಸಿ ಕಿವಿ ಹಿಂಡಿ ಮಾತನಾಡುವ ಸ್ವಾತಂತ್ರ್ಯವನ್ನು ನನಗೆ ನಾನೇ ಕೊಟ್ಟುಕೊಂಡಿದ್ದೇನೆ.
ಕೇವಲ ಒಂದು ಒತ್ತು ಕೊಡದೆ ಇದ್ದರೆ ಒಂದು ಇಡೀ ಪದವೇ ತನ್ನ ಅರ್ಥವನ್ನು ಕಳೆದುಕೊಂಡು ಹೊಸದೊಂದು ಅರ್ಥವನ್ನು ಸ್ಪುರಿಸಿ…. ಹೊಸ ಹೊಸ ಅರ್ಥಗಳಿಗೆ ಎಡೆ ಮಾಡಿಕೊಡುತ್ತದೆ ಎಂಬುದನ್ನು ನನ್ನ ಪತ್ರದ ಒಕ್ಕಣೆಯನ್ನು ಓದಿ ನಿನಗೆ ಅರಿವಾಗಿರಬಹುದು.
ಪ್ರಿಯ ತಮ್ಮ ಎಂದು ಬರೆಯುವ ಬದಲು ಪ್ರಿಯತಮ ಎಂದು ಬರೆದು ಎರಡು ಪದಗಳ ನಡುವಿನ ಅಂತರವನ್ನು ಕಲ್ಪಿಸದೆ ಹೋದ ಕಾರಣ ಉಂಟಾದ ಗೊಂದಲದ ಅರಿವು ನಿನಗೀಗ ಆಗಿರಬಹುದು.
ಅವಸರದಲ್ಲಿ (ಬೇಕೆಂದೇ ಮಾಡಿದ್ದರೂ ಕೂಡಾ) ಯೇ
ಮಾಡಿದ್ದರೂ ಈ ಪದಗಳಿಗೆ ನಾವು ತೆರಬೇಕಾದ ಬೆಲೆ ಅಪಾರ ಅಲ್ವೇ?
ಕೇವಲ ಒಂದು ಪದ ಈ ರೀತಿಯ ವ್ಯತ್ಯಾಸವನ್ನು ಸೃಷ್ಟಿಸಬಲ್ಲುದಾದರೆ ನಮ್ಮ ಜೀವನದಲ್ಲಿ ನಡೆಯುವ ಯಾವುದೋ ಒಂದು ಕ್ಷಣಿಕ ಘಟನೆ ನಮ್ಮ ಬದುಕಿನ ಮೇಲೆ ಬೀರುವ ಪ್ರಭಾವ ಇನ್ನೆಷ್ಟು ಎಂಬುದನ್ನು ಈಗಲಾದರೂ ಯೋಚಿಸು. ಕೇವಲ ನಿನ್ನ ದಿಕ್ಕಿನಲ್ಲಿ ಮಾತ್ರ ಯೋಚಿಸಿದರೆ ಸಾಲದು. ನಿನ್ನ ಎದುರಿಗೆ ಇರುವವರ, ನೀನು ಆಪಾದಿಸುವವರ ಶೂಸಿನಲ್ಲಿ ಕಾಲಿಟ್ಟು ಯೋಚಿಸು. ವೈಜ್ಞಾನಿಕ ಪರಿಭಾಷೆಯಲ್ಲಿ ೩೬೦ ಡಿಗ್ರಿ ಆಂಗಲ್ ಎಂದು ಕರೆಯುವ ಈ ಯೋಚನಾ ಕ್ರಮ ಎಲ್ಲರಿಗೂ ಸಿದ್ಧಿಸುವುದಿಲ್ಲ ನಿಜ…. ಆದರೆ ಖಂಡಿತವಾಗಿಯೂ ದೈನಂದಿನ ಬದುಕಿನಲ್ಲಿ ಈ ರೀತಿಯ ಯೋಚನಾ ಕ್ರಮವನ್ನು ನೀನು ರೂಢಿಸಿಕೊಂಡಾಗ ಬೇರೆಯವರನ್ನು ಜಡ್ಜ್ ಮಾಡದೆ ಇರಲು ಸಾಧ್ಯವಾಗುತ್ತದೆ.
ಬೆಚ್ಚನಾ ಮನೆ ಇರಲು ವೆಚ್ಚಕ್ಕೆ ಹೊನ್ನಿರಲು
ಇಚ್ಛೆಯನರಿತು ನಡೆಯುವ ಸತಿ ಇರಲು
ಸ್ವರ್ಗಕ್ಕೆ ಕಿಚ್ಚು ಹಚ್ಚೆಂದ ಸರ್ವಜ್ಞ
ನಿನಗೆ ಬೆಚ್ಚನೆ ಇರಲು ಮನೆ ಇದೆ ವೆಚ್ಚಕ್ಕೆ ಹೊನ್ನಿದೆ, ಹಣವಿದೆ. ಇಲ್ಲಿಯವರೆಗೂ ನಿನ್ನ ಇಚ್ಛೆಯಂತೆ ನಿನಗಾಗಿ ಬಾಯಿ ಮುಚ್ಚಿಕೊಂಡು ತನ್ನೆಲ್ಲಾ ನೋವು ಸಂಕಟಗಳನ್ನು ಬಚ್ಚಿಟ್ಟು ನಿನಗಾಗಿ, ನಿನ್ನ ಆರೋಗ್ಯಕ್ಕಾಗಿ ಹೆದರಿ ನಡೆದ ಸತಿ ಇದ್ದಾಳೆ, ಚಿಕ್ಕ ಮಕ್ಕಳಿದ್ದಾರೆ …ಸ್ವರ್ಗಕ್ಕೆ ಕಿಚ್ಚು ಹಚ್ಚೆಂದ ಸರ್ವಜ್ಞ ಎಂದೆನ್ನಲು ಏನೂ ಅಡ್ಡಿಯಿರಲಿಲ್ಲ… ಅಲ್ಲವೇ?
ಬದುಕಿನ ವಿಪರ್ಯಾಸ ಎಂದರೆ ಇದೇ…ಎಲ್ಲವೂ ಇದ್ದು ಏನೂ ಇಲ್ಲದಂತೆ ಭಾಸವಾಗುವುದು. ಎಲ್ಲವನ್ನೂ ಹೊಂದಿರುವ ನಿನ್ನ ಮನಸ್ಸು ಎಲ್ಲರೂ ನಿನ್ನ ತಾಳಕ್ಕೆ ತಕ್ಕಂತೆ ಕುಣಿಯುವ ನೀನು ಹೇಳಿದಂತೆ ಕೇಳುವ ಕೀಲು ಗೊಂಬೆಗಳಂತೆ ವರ್ತಿಸುವ ರೀತಿ ಬದಲಾಗಬೇಕೆಂದು ನೀನು ಬಯಸಿದೆ ಅಲ್ಲವೇ?
ನೀನು ವಿಜ್ಞಾನದ ವಿದ್ಯಾರ್ಥಿ…. ವಿರುದ್ಧ ಧ್ರುವಗಳು ಪರಸ್ಪರ ಒಂದನ್ನೊಂದು ಆಕರ್ಷಿಸುತ್ತವೆ ಎಂಬುದನ್ನು ನೀನು ಮರೆತಿರುವೆ. ನಿನ್ನ ಮತ್ತು ನಿನ್ನ ಪತ್ನಿಯ ವೈರುಧ್ಯಗಳ ನಡುವೆ ನಿಮ್ಮ ಬದುಕು ಆಕರ್ಷಕವಾಗಿರಬೇಕಿತ್ತು ಅಲ್ವೇ?
ನೀವಿಬ್ಬರೂ ಒಂದೇ ತಾಯಿಯ ಮಕ್ಕಳಲ್ಲ…. ನಿಜ ಹೇಳಬೇಕೆಂದರೆ ಒಂದೇ ತಾಯಿಯ ಮಕ್ಕಳಲ್ಲಿಯೂ ಸಾಕಷ್ಟು ವೈರುಧ್ಯಗಳಿರುತ್ತವೆ ಅಂತಹದ್ದರಲ್ಲಿ ವಿಭಿನ್ನ ಪರಿಸರದಲ್ಲಿ, ವಿಭಿನ್ನ ಹಿನ್ನೆಲೆಯಲ್ಲಿ ಹುಟ್ಟಿದ, ಬಾಲ್ಯವನ್ನು ಕಳೆದ, ಬೆಳೆದ ನಿಮ್ಮಿಬ್ಬರ ನಡುವಿನ ಆಕರ್ಷಣೆ ಪ್ರೀತಿಯಾಗಿ, ಪ್ರೀತಿ ಒಬ್ಬರನ್ನೊಬ್ಬರು ಬಾಳ ಸಂಗಾತಿಯಾಗಿ ಪಡೆಯಲೇಬೇಕು ಎಂಬ ಹಂಬಲವಾಗಿ ಆ ಹಂಬಲ ಹಠವಾಗಿ ಒಬ್ಬರನ್ನೊಬ್ಬರು ಪಡೆದುಕೊಂಡಾಗ ಅದು ತನ್ನ ಮೊದಲಿನ ಎಲ್ಲಾ ಆಕರ್ಷಣೆಗಳನ್ನು ಕಳೆದುಕೊಳ್ಳಲು ಕಾರಣ ಏನು ಎಂದು ಯೋಚಿಸಿದ್ದೀಯಾ?
ನಿನ್ನ ಭಾವನೆಗಳನ್ನು, ಯೋಚನೆಗಳನ್ನು, ವಿಚಾರಗಳನ್ನು ಆಕೆ ಒಪ್ಪಿಕೊಳ್ಳಲೇಬೇಕೆಂಬ ನಿನ್ನ ಹಟದಲ್ಲಿ ಶತಾಯಗತಾಯ ನಿನ್ನನ್ನು ಸಮಾಧಾನವಾಗಿರಿಸುವ ನಿಟ್ಟಿನಲ್ಲಿ ಆಕೆ ತನ್ನನ್ನು ತಾನೇ ಕಳೆದುಕೊಂಡಿದ್ದಾಳೆ. ಬಹುಶಃ ಕವಿಯಾಗಿದ್ದರೆ ಹೇಳುತ್ತಿದ್ದಳೇನೋ , ನೀನು ಇಚ್ಚಿಸಿದಂತೆಯೇ ಉಡುಗೆ, ತೊಡುಗೆ, ನಿನಗೆ ಬೇಕಾದ ಅಡುಗೆ, ನಿನ್ನದೇ ನೋಟ ನಿನ್ನದೇ ಪರಿಪಾಠಗಳಲ್ಲಿ ಮುಳುಗಿ ಹೋಗಿರುವ ನಾನು ಈಗೀಗ ಕನ್ನಡಿಯಲ್ಲಿ ನೋಡಿಕೊಂಡರೆ ನನ್ನ ಮುಖದ ಬದಲು ನಿನ್ನ ಮುಖವೇ ಕಾಣುತ್ತಿದೆ ಎಂದು.
ಹಂಗಿಸುತ್ತಿದ್ದೇನೆ ಎಂದು ಭಾವಿಸಬೇಡ ತಮ್ಮಾ…. ಈ ಭೂಮಿಗೆ ಬರುವಾಗ ನಾವು ಒಬ್ಬರೇ ಬಂದಿರುತ್ತೇವೆ ಹೋಗುವಾಗಲೂ ಕೂಡ ಒಬ್ಬರೇ. ನಡುವೆ ಕಳೆಯುವ ಹಲ ಕೆಲ ವರುಷಗಳು ಋಣಾನುಬಂಧದ ರೂಪದಲ್ಲಿ, ದಾಂಪತ್ಯದ ರೂಪದಲ್ಲಿ ನೀವಿಬ್ಬರೂ ಸತಿಪತಿಯಾಗಿದ್ದೀರಿ ಲೋಕದ ನಿಯಮವೇ ಹಾಗೆ ಅಲ್ಲವೇ?. ಇಲ್ಲಿ ನೀವಿಬ್ಬರೂ ಪ್ರತಿಸ್ಪರ್ಧಿಗಳಲ್ಲ, ಅಂದಮೇಲೆ ಸೋಲು ಗೆಲುವಿನ ಪ್ರಶ್ನೆಯೇ ಇಲ್ಲ.
ನೀವಿಬ್ಬರೂ ಒಬ್ಬರಿಗೊಬ್ಬರು ಪೂರಕವಾಗಿ ಬದುಕಿನ ಈ ಆಟದಲ್ಲಿ ಒಂದು ತಂಡವಾಗಿ ಆಡಬೇಕು.
ತಪ್ಪುಮಾಡಿಬಿಟ್ಟೆ ನೀನು….ನಿನ್ನ ಬದುಕಿನ ಅತ್ಯಮೂಲ್ಯ ಸಮಯವನ್ನು ಪತ್ನಿ, ಮಕ್ಕಳೊಂದಿಗೆ ಕಳೆಯುವ ಹಲವಾರು ಸುಖದ ನೆನಪುಗಳನ್ನು ಹುಟ್ಟು ಹಾಕುವ ಗಳಿಗೆಗಳನ್ನು ನಿನ್ನ ಕೈಯಾರೆ ನೀನೇ ಕಳೆದುಕೊಂಡಿರುವೆ ಇದರಲ್ಲಿ ನಿನ್ನ ಪತ್ನಿಯ ಪಾಲೂ ಇದೆ ಎಂದರೆ ನಿಮ್ಮಿಬ್ಬರಿಗೂ ಬೇಸರವಾಗಬಹುದು, ಆದರೆ ಹೇಳದೆ ವಿಧಿ ಇಲ್ಲ.
ಕೈಯಲ್ಲಿ ಸುತ್ತಿಗೆಯನ್ನು ಹಿಡಿದಿರುವ ವ್ಯಕ್ತಿಯ ಕಣ್ಣಿಗೆ ಎಲ್ಲವೂ ಮೊಳೆಯಂತೆ ಗೋಚರವಾಗುತ್ತದೆ ಎಂಬ ಗಾದೆಯಂತೆ ನಿನ್ನ ಕಣ್ಣಿಗೆ ಹೆಂಡತಿ,ಮಕ್ಕಳು ಅವರು ಮಾಡುವ ಪ್ರತಿಯೊಂದು ಕೆಲಸಗಳು ಅವರ ಮಾತುಕತೆ ಆಹಾರ ವಿಹಾರ ಪದ್ಧತಿಗಳು ಎಲ್ಲವೂ ತಪ್ಪು ಎಂದು ಕಂಡರೆ ಅವರಾದರೂ ಏನು ಮಾಡಿಯಾರು? ತಪ್ಪನ್ನು ತಪ್ಪೆಂದು ಗುರುತಿಸಲು ಕೇವಲ ನೀನು ಹೇಳಿದರೆ ಮಾತ್ರ ಸಾಲದು ಅಥವಾ ಅದನ್ನು ಯಾರು ಬೇಕಾದರೂ ಹೇಳಬಹುದು ಆದರೆ ಎಂದಾದರೂ ಆ ತಪ್ಪನ್ನು ನೀನು ಕೂಡ ಸೇರಿದಂತೆ ಎಲ್ಲರನ್ನೂ ಒಳಗೊಂಡು ಸರಿಪಡಿಸುವ ಪ್ರಯತ್ನವನ್ನು ಎಂದಾದರೂ ನೀನು ಮಾಡಿರುವೆಯಾ? ಯೋಚಿಸು.
ಮಕ್ಕಳಿಗೆ ಇಂಥದ್ದೇ ಅಡುಗೆ ಬೇಕೆಂದಿಲ್ಲ, ಆದರೆ ಕುಟುಂಬದ ಎಲ್ಲರೂ ಒಟ್ಟಾಗಿ ಕುಳಿತು, ನಗುನಗುತ್ತಾ ಮಾತನಾಡುತ್ತಾ ಉಂಡು, ತಿಂದು, ಆಡಿ ನಲಿದರೆ ಬಡತನದಲ್ಲೂ ನೆಮ್ಮದಿ, ಸಂತೃಪ್ತಿ ತಾಂಡವವಾಡುತ್ತದೆ ಎಂದು ನೀವೇಕೇ ಅರಿಯಲಿಲ್ಲ. ನಿಮ್ಮದೇ ಮನೆಯಲ್ಲಿ ಮನಗಳ ನಡುವೆ ಗೋಡೆಯನ್ನು ಕಟ್ಟಿಕೊಂಡು ಬದುಕಿನ ಸುಂದರ ಕ್ಷಣಗಳನ್ನು ನಿಮ್ಮ ಕೈಯಾರೆ ಹಾಳು ಮಾಡಿಕೊಂಡಿರಲ್ಲವೇ?
ಇದೀಗ ಎಲ್ಲವನ್ನು ಒತ್ತಟ್ಟಿಗಿರಿಸಿ ನಿಮ್ಮಿಬ್ಬರ ಬದುಕನ್ನು ನಿಮಗಾಗಿ, ನಿಮ್ಮ ಮಕ್ಕಳಿಗಾಗಿ,ಅವರ ಏಳ್ಗೆಗಾಗಿ
ನೀವು ಕಾರ್ಯನಿರ್ವಹಿಸಬೇಕಾಗಿದೆ.
ಜೀವನದಲ್ಲಿ ಬಹಳಷ್ಟು ಮುಂದೆ ಬಂದಿದ್ದೇವೆ… ಇನ್ನು ಹಿಂದಿರುಗಿ ಮೊದಲಿನಂತೆ ಎಲ್ಲವನ್ನು ಸರಿಪಡಿಸಲು ಸಾಧ್ಯವಾಗುವುದಿಲ್ಲ ಎಂಬ ಭಯ ಬೇಡ.
ನಾವು ಶೂನ್ಯದಿಂದ ಮುಂದೆ ಬಂದಿದ್ದೇವೆ ಮತ್ತೆ ಶೂನ್ಯಕ್ಕೆ ಹೋದರೂ ಕೂಡ ಖಂಡಿತವಾಗಿಯೂ ಮುಂದೆ ಬರುವ ಸಾಧ್ಯತೆಗಳಿವೆ. ಕಡಿವಾಣವನ್ನು ಹಾಕುವುದೇ ಆದರೆ ನಿನ್ನ ಅತಿಯಾದ ಆಲೋಚನೆಗಳಿಗೆ, ಮಾನಸಿಕ ತಳಮಳಗಳಿಗೆ ಹಾಕು. ಪೂರ್ಣ ವಿರಾಮ ಇಡುವುದಾದರೆ ನಿನ್ನ ವಿನಾಕಾರಣದ ಶಂಕೆ, ಅನುಮಾನಗಳಿಗೆ ಇಡು.
ನಿಮ್ಮಿಬ್ಬರ ನೆಮ್ಮದಿಯಲ್ಲಿ ನಿಮ್ಮ ಕುಟುಂಬದ ಒಳಿತಿದೆ ಮತ್ತೆ ಎಲ್ಲವನ್ನು ಮೊದಲಿನಿಂದ ಆರಂಭಿಸಿದಾಗ ನೂರೆಂಟು ಕಿರಿಕಿರಿಗಳು, ಅವಮಾನಗಳು, ಮೇಲರಿಮೆ ಕೀಳರಿಮೆ ಅಹಮಿಕೆಗಳು ನಿಮ್ಮಿಬ್ಬರ ನಡುವೆ ತಡೆಗೋಡೆಯಾಗುವುದು ಬೇಡ. ಇಬ್ಬರಲ್ಲಿ ಒಬ್ಬರ ಬದುಕು ಸಾವಿನಲ್ಲಿ ಅಂತ್ಯವಾಗುವವರೆಗೆ ಜೊತೆಯಾಗಿರುವ ಈ ದಾಂಪತ್ಯವೆಂಬ ಬಂಧನದಲ್ಲಿ ನೀವಿಬ್ಬರು ಸಂತಸಾರೋಗ್ಯದಿಂದ ಇರಿ ಎಂದು ಹಾರೈಸುವ
- ನಿನ್ನ ಪ್ರೀತಿಯ ಅಕ್ಕ,
ವೀಣಾ ಹೇಮಂತ್ ಗೌಡ ಪಾಟೀಲ್, ಮುಂಡರಗಿ ಗದಗ : ಜಿಲ್ಲೆ
