ಕಲಬುರಗಿ: ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್ ನಲ್ಲಿ ಅಮಾಯಕರ ಮೇಲೆ ದಾಳಿ ಮಾಡಿರುವುದು ಇದೊಂದು ಹೇಯ ಕೃತ್ಯ ಮತ್ತು ಇದು ಭಯೋತ್ಪಾದನೆ ಮರುಸ್ಥಾಪಿಸುವ ಪ್ರಯತ್ನ ಇದನ್ನು ಪ್ರತಿಯೊಬ್ಬ ನಾಗರಿಕರು ಖಂಡಿಸುತ್ತೇವೆ ಎಂದು ಮಹಾಗಾಂವ ಬಿಜೆಪಿ ಮುಖಂಡ ಮಲ್ಲಿಕಾರ್ಜುನ ಮರತೂರಕರ್ ಅವರು ತೀವ್ರವಾಗಿ ಖಂಡಿಸಿದ್ದಾರೆ.
ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿದ ಅವರು, ಧರ್ಮದ ಹೆಸರು ಕೇಳಿ ಗುಂಡು ಹಾರಿಸಿರುವುದು ಭಾರತದ ವಿರೋಧಿ ಶಕ್ತಿಗಳ ಕೈವಾಡ ಇರುವುದು ಬಹಳ ಸ್ಪಷ್ಟ, ಇದನ್ನು ಕೂಡಲೇ ಕೇಂದ್ರ ಸರ್ಕಾರ ಗಂಭೀರವಾಗಿ ತೆಗೆದುಕೊಂಡು ಮಟ್ಟ ಹಾಕಬೇಕು. ಮತ್ತು ಜಮ್ಮು ಕಾಶ್ಮೀರ ಕಣಿವೆಯಲ್ಲಿರುವ ಕನ್ನಡಿಗರನ್ನು ಸುರಕ್ಷಿತವಾಗಿ ಕರೆ ತರಲು ರಾಜ್ಯ ಸರ್ಕಾರ ಎಲ್ಲಾ ವ್ಯವಸ್ಥೆಯನ್ನು ಮಾಡಬೇಕು.
ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದ ಕೇಂದ್ರ ಸರ್ಕಾರ ಭಾರತದ ಕಿರೀಟವೆನಿಸಿದ ಜಮ್ಮು- ಕಾಶ್ಮೀರವನ್ನು ಸಂರಕ್ಷಿಸಿ ಭಾರತಾಂಬೆಯ ಮಡಿಲಿಗೆ ಸಮರ್ಪಿಸಿ ಆರ್ಟಿಕಲ್ 370 ರದ್ದುಗೊಳಿಸುವ ಮೂಲಕ ಬೇರು ಸಮೇತ ಭಯೋತ್ಪಾದನೆಯನ್ನು ಬೇರು ಸಮೇತ ಕಿತ್ತೊಗೆದ ದಿಟ್ಟ ಕ್ರಮದ ಪರಿಣಾಮ ಉಗ್ರರು ಅತೀವ ಹತಾಶೆಗೊಂಡಿದ್ದು ಇದರ ಪ್ರತೀಕವೆಂಬಂತೆ ಮುಗ್ಧ ಪ್ರವಾಸಿಗರನ್ನು ಹತ್ಯೆಗೈಯ್ಯುವ ಹೇಡಿತನವನ್ನು ಪ್ರದರ್ಶಿಸಿದ್ದಾರೆ ಎಂದು ಅವರು ಕಿಡಿಕಾರಿದ್ದಾರೆ.ಈ ಹೇಡಿತನದ ಉಗ್ರರ ದಾಳಿಗೆ ಬಲಿಯಾಗಿರುವ ಶಿವಮೊಗ್ಗದ ಮಂಜುನಾಥ್ ರಾವ್ ಅವರ ಸಾವು ಅತ್ಯಂತ ನೋವು ತಂದಿದೆ. ಮೃತರ ಕುಟುಂಬಕ್ಕೆ ಈ ಧಾರುಣ ಘಟನೆಯ ಆಘಾತ ಸಹಿಸಿಕೊಳ್ಳುವ ಶಕ್ತಿಯನ್ನು ಭಗವಂತನು ಕರುಣಿಸಲಿ ಎಂದು ಪ್ರಾರ್ಥಿಸುವೆ.ಮಂಜುನಾಥ್ ರಾವ್ ಅವರ ಕುಟುಂಬದ ನೋವಿನೊಂದಿಗೆ ನಾವೆಲ್ಲರೂ ಇದ್ದೇವೆ ಎಂದಿದ್ದಾರೆ. ಮುಂದಿನ ದಿನಗಳಲ್ಲಿ ಇಂತಹ ಹತಾಶ ಉಗ್ರರ ರಣಹೇಡಿ ಕೃತ್ಯಗಳು ಮರುಕಳಿಸದಂತೆ ಅವರ ಹುಟ್ಟಡಗಿಸುವ ನಿಟ್ಟಿನಲ್ಲಿ ಮುಗ್ಧರು, ಅಮಾಯಕರನ್ನು ಬೆದರಿಸುವ, ಚಟುವಟಿಕೆಗಳನ್ನು ಬಗ್ಗು ಬಡಿದು ಜಮ್ಮು-ಕಾಶ್ಮೀರದ ಸ್ಥಿರತೆ ಹಾಗೂ ಸುರಕ್ಷತೆಗೆ ಎಳ್ಳಷ್ಟೂ ಭಂಗ ತರಲು ಸಾಧ್ಯವಿಲ್ಲ ಎಂಬ ಸಂದೇಶ ಕೇಂದ್ರ ಸರ್ಕಾರದಿಂದ ಉಗ್ರರಿಗೆ ರವಾನೆಯಾಗಲಿದೆ ಎಂದು ಅವರು ಹೇಳಿದ್ದಾರೆ.
- ಕರುನಾಡ ಕಂದ
