ಪದವಿ ತರಗತಿಯ ಮೊದಲ ದಿನ, ಪ್ರೊಫೆಸರ್ ಒಬ್ಬರು ತರಗತಿಯನ್ನು ಪ್ರವೇಶಿಸಿ ಇಂಟ್ರಡಕ್ಷನ್ ಟು ಲಾ ಎಂಬ ವಿಷಯದ ಕುರಿತು ಮಕ್ಕಳಿಗೆ ಬೋಧನೆ ಮಾಡಲು ಬಂದರು. ನೇರವಾಗಿ ತರಗತಿಯನ್ನು ಪ್ರವೇಶಿಸಿದ ಅವರು ಮುಂದಿನ ಸಾಲಿನಲ್ಲಿ ಕುಳಿತ ಓರ್ವ ವಿದ್ಯಾರ್ಥಿಯನ್ನು ಉದ್ದೇಶಿಸಿ ನಿನ್ನ ಹೆಸರೇನು ಎಂದು ಕೇಳಿದರು ವಿದ್ಯಾರ್ಥಿ ತನ್ನ ಹೆಸರನ್ನು ಹೇಳಿದ. ಕೂಡಲೇ ಆ ವಿದ್ಯಾರ್ಥಿಗೆ ತನ್ನ ತರಗತಿಯಿಂದ ಹೊರಗೆ ಹೋಗಲು ಪ್ರೊಫೆಸರ್ ಆದೇಶಿಸಿದರು.
ವಿದ್ಯಾರ್ಥಿಗೆ ತುಸು ಗಲಿಬಿಲಿಯಾಯಿತು… ಅಂತೆಯೇ ಉಳಿದ ವಿದ್ಯಾರ್ಥಿಗಳು ಪರಸ್ಪರ ಒಬ್ಬರ ಮುಖ ಒಬ್ಬರು ನೋಡಿಕೊಂಡರು. ಎಲ್ಲರ ಮುಖದಲ್ಲೂ ಒಂದು ರೀತಿಯ ದಿಗಿಲು. ಸರ್ ಎಂದು ಆ ವಿದ್ಯಾರ್ಥಿ ಪ್ರೊಫೆಸರರನ್ನು ಕರೆಯಲು ಕೂಡಲೇ ನನ್ನ ತರಗತಿಯನ್ನು ಬಿಟ್ಟು ಹೊರಟು ಹೋಗು ಹೊರಗೆ ನಿಂತುಕೋ, ಇನ್ನೆಂದೂ ನನ್ನ ತರಗತಿಯನ್ನು ಪ್ರವೇಶಿಸುವ ಪ್ರಯತ್ನ ಮಾಡಬೇಡ ಎಂದು ಜೋರಾಗಿ ಕೂಗಿದರು.
ಗಾಬರಿ ಮತ್ತು ಆತಂಕದಿಂದ ಕೂಡಿದ ವಿದ್ಯಾರ್ಥಿ ತನ್ನೆಲ್ಲ ಪರಿಕರಗಳನ್ನು ಜೋಡಿಸಿಕೊಂಡು ಕೂಡಲೇ ತರಗತಿಯಿಂದ ಹೊರಗೆ ಹೋದ. ಆ ಇಡೀ ಕೋಣೆಯಲ್ಲಿ ಸ್ಥಬ್ದತೆ ಆವರಿಸಿತ್ತು… ಯಾರೊಬ್ಬರೂ ಸೊಲ್ಲೆತ್ತುವ ಧೈರ್ಯ ಮಾಡಲಿಲ್ಲ.
ವಿದ್ಯಾರ್ಥಿ ಹಾಗೆ ಹೊರಟು ಹೋದ ಮೇಲೆ ಪ್ರೊಫೆಸರ್ ರ ಮುಖದ ಮೇಲೆ ನಸುನಗು ಮೂಡಿತು. ಇನ್ನು ತರಗತಿಯನ್ನು ಮುಂದುವರಿಸೋಣ ಎಂದು ಹೇಳಿದ ಅವರು ನಮಗೆ ಕಾನೂನುಗಳು ಏಕೆ ಬೇಕು? ಎಂದು ಪ್ರಶ್ನಿಸಿದರು.
ವಿದ್ಯಾರ್ಥಿಗಳಲ್ಲಿ ತಳಮಳ ಕಡಿಮೆಯಾಗಿರದಿದ್ದರೂ ನಿಧಾನವಾಗಿ ಒಬ್ಬೊಬ್ಬರಾಗಿ ಎದ್ದು ನಿಂತು ಉತ್ತರಿಸಲು ಆರಂಭಿಸಿದರು.
ಸಾಮಾಜಿಕ ಸುವ್ಯವಸ್ಥೆಯನ್ನು ಕಾಪಾಡಲು ನಮಗೆ ಕಾನೂನಿನ ಅವಶ್ಯಕತೆ ಇದೆ.
ಜನರು ನಿಯಮಗಳನ್ನು ಪಾಲಿಸಲು ಕಾನೂನಿನ ಅವಶ್ಯಕತೆ ಇದೆ ನಿಯಮಗಳನ್ನು ಮುರಿಯುವವರನ್ನು ಶಿಕ್ಷಿಸಲು ನಮಗೆ ಕಾನೂನಿನ ಅವಶ್ಯಕತೆ ಇದೆ. ಹೀಗೆ ಒಬ್ಬೊಬ್ಬರೇ ಉತ್ತರ ಕೊಡುವಾಗ ಕೊನೆಯಲ್ಲಿ ಎದ್ದು ನಿಂತ ಓರ್ವ ವಿದ್ಯಾರ್ಥಿನಿ ತುಸು ಸಂಕೋಚ ಮತ್ತು ಮುಜುಗರದಿಂದ ನ್ಯಾಯವನ್ನು ಪಡೆಯಲು ನಮಗೆ ಕಾನೂನಿನ ಅವಶ್ಯಕತೆ ಇದೆ ಎಂದು ಹೇಳಿದಳು.
ಎಕ್ಸಾಕ್ಟ್ಲಿ… ನ್ಯಾಯವನ್ನು ಪಡೆಯಲು ಪರಿಪಾಲಿಸಲು ನಮಗೆ ಕಾನೂನಿನ ಅವಶ್ಯಕತೆ ಇದೆ ಎಂದು ಹೇಳಿದ ಪ್ರೊಫೆಸರ್ ವಿದ್ಯಾರ್ಥಿಗಳೆಲ್ಲರೆಡೆ ಕೈ ಮಾಡಿ
” ಈಗ ಹೇಳಿ ನಾನು ಆ ವಿದ್ಯಾರ್ಥಿಯನ್ನು ವಿನಾಕಾರಣ ತರಗತಿಯಿಂದ ಹೊರಗೆ ಹಾಕಿದ್ದು ಸರಿ ಎಂದೆನಿಸುತ್ತದೆಯೇ? “
ಯಾರೊಬ್ಬರ ಬಾಯಿಂದಲೂ ಯಾವುದೇ ಉತ್ತರ ಬರಲಿಲ್ಲ. ಮೌನವಾಗಿಯೇ ಉಳಿದ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಪ್ರೊಫೆಸರ್ ಕೇಳಿದರು “ಹಾಗಾದರೆ ಹೇಳಿ ಆ ವಿದ್ಯಾರ್ಥಿಯನ್ನು ಹೊರಹಾಕಿದ್ದು ಸರಿಯೇ… ಆ ವಿದ್ಯಾರ್ಥಿಯನ್ನು ಹೊರ ಹಾಕಲು ಕಾರಣವೇನು ಎಂದು ಯಾರಾದರೂ ಪ್ರಶ್ನಿಸಿದಿರೇ?” ಎಂದಾಗ ಇಲ್ಲವೆಂಬಂತೆ ಎಲ್ಲ ವಿದ್ಯಾರ್ಥಿಗಳು ತಲೆಯಾಡಿಸಿದರು.
“ಹಾಗಾದರೆ ನಿಮ್ಮಲ್ಲಿ ಯಾರೊಬ್ಬರೂ ಏಕೆ ಆ ವಿದ್ಯಾರ್ಥಿಯನ್ನು ಹೊರ ಹಾಕುವುದನ್ನು ತಡೆಯಲಿಲ್ಲ” ಎಂದು ಪ್ರೊಫೆಸರ್ ಪ್ರಶ್ನಿಸಲು ಎಲ್ಲರೂ ನಿರುತ್ತರರಾದರು.
ತಪ್ಪು ಮಾಡದೆ ಇದ್ದಾಗ ಪ್ರಶ್ನಿಸುವ ಧೈರ್ಯ ಇಲ್ಲದೆ ಹೋದರೆ ನಮಗೆ ಕಾನೂನು ಇದ್ದರೂ ಅದರಿಂದ ಪ್ರಯೋಜನವೇನು? ಎಂದು ಪ್ರೊಫೆಸರ್ ಪ್ರಶ್ನಿಸಿದರು.
ನಿಮ್ಮ ಕಣ್ಣೆದುರು ಅನ್ಯಾಯ ನಡೆದರೂ ನೀವು ಮೌನವಾಗಿ ಉಳಿದದ್ದು ಏಕೆ? ಎಂದು ಪ್ರೊಫೆಸರ್ ಮತ್ತೊಮ್ಮೆ ಪ್ರಶ್ನಿಸಿದರು.
ಹೋಗಿ ಆ ವಿದ್ಯಾರ್ಥಿಯನ್ನು ಕರೆದುಕೊಂಡು ಬನ್ನಿ ಎಂದು ಹೇಳಿದರು. ಆತನೇ ನಿಮ್ಮ ನಿಜವಾದ ಪ್ರೊಫೆಸರ್ ನಾನು ಕಾನೂನಿನ ಬೇರೊಂದು ವಿಭಾಗದಲ್ಲಿ ಓದುತ್ತಿರುವ ಇದೇ ಕಾಲೇಜಿನ ವಿದ್ಯಾರ್ಥಿ ಎಂದು ಹೇಳಿದ ಆತ ಗಂಭೀರವಾಗಿ ಕೋಣೆಯನ್ನು ಬಿಟ್ಟು ಹೊರ ನಡೆದನು.
ಇನ್ನೂ ದಿಗ್ಭ್ರಮೆಯಿಂದ ವಿದ್ಯಾರ್ಥಿಗಳು ಹೊರ ಬಂದಿರಲಿಲ್ಲ. ಕೇವಲ ಒಂದು ಘಟನೆಯ ಮೂಲಕ ಆತ ಕಾನೂನಿನ ಅವಶ್ಯಕತೆಯನ್ನು ವಿದ್ಯಾರ್ಥಿಗಳಿಗೆ ಮನಗಾಣಿಸಿದ್ದನು.
ನೆನಪಿಡಿ… ನಮ್ಮ ಹಕ್ಕುಗಳಿಗಾಗಿ ನಾವು ಎದ್ದು ನಿಲ್ಲದಿದ್ದರೆ ನಮ್ಮ ಆತ್ಮ ಗೌರವವನ್ನು ಕಳೆದುಕೊಳ್ಳುತ್ತೇವೆ, ನಮ್ಮ ಆತ್ಮ ಗೌರವ ಇರಲಿ ಬಿಡು/ ಹೋಗಲಿ ಬಿಡು ಎಂದು ಕಡೆಗಾಣಿಸುವ ವಿಷಯವಲ್ಲ.
ಆತ್ಮಗೌರವವನ್ನು ಕಳೆದುಕೊಂಡ ವ್ಯಕ್ತಿ ತನ್ನನ್ನು ತಾನು ಗೌರವಿಸಿಕೊಳ್ಳಲು ಸಾಧ್ಯವಿಲ್ಲ…. ಬದುಕಿಯೂ ಸತ್ತಂತಹ ಅನುಭವ.
ಸ್ನೇಹಿತರೆ,… ನಮ್ಮ ಬದುಕಿನಲ್ಲಿ ಪಾಲಕರು, ಒಡಹುಟ್ಟಿದವರು, ಸಂಬಂಧಿಗಳು, ಶಿಕ್ಷಕರು, ಸ್ನೇಹಿತರು
ಹೀಗೆ ಹತ್ತು ಹಲವರು ತಮ್ಮದೇ ಅದ ಮಹತ್ತರ ಪಾತ್ರಗಳನ್ನು ವಹಿಸುತ್ತಾರೆ. ಎಲ್ಲರೊಂದಿಗೂ ಹೊಂದಾಣಿಕೆಯ ಬಾಳನ್ನು ನಡೆಸುವ ನಾವು ನಮ್ಮ ವ್ಯಕ್ತಿತ್ವವನ್ನು ಉನ್ನತವಾಗಿ ಕಟ್ಟಿಕೊಳ್ಳುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸಬೇಕು.
ನಮ್ಮ ಸಂವಿಧಾನವು ನಮಗೆ ಹಕ್ಕುಗಳನ್ನು ಕೊಟ್ಟಿರುವಂತೆಯೇ ಕರ್ತವ್ಯಗಳನ್ನು ಕೂಡಾ ಕೊಟ್ಟಿದೆ. ನಮ್ಮ ಹಕ್ಕುಗಳು ನಮ್ಮ ಸ್ವಾತಂತ್ರ್ಯವನ್ನು ತೋರಿದರೆ ನಮ್ಮ ಕರ್ತವ್ಯಗಳು ನಮ್ಮ ಜವಾಬ್ದಾರಿಯನ್ನು ನೆನಪಿಸುತ್ತವೆ. ಹಕ್ಕುಗಳು ಮತ್ತು ಕರ್ತವ್ಯಗಳು ಒಂದೇ ನಾಣ್ಯದ ಎರಡು ಮುಖಗಳು.
ಅವಶ್ಯಕತೆ ಇದ್ದಲ್ಲಿ ನಮ್ಮ ಹಕ್ಕನ್ನು ಪ್ರತಿಪಾದಿಸುವ ನಾವುಗಳು ನಮ್ಮ ಕರ್ತವ್ಯಕ್ಕೂ ಕೂಡ ಅದೇ ರೀತಿಯಲ್ಲಿ ಬದ್ಧರಾಗಿರಲೇಬೇಕಾದದ್ದು ಅತ್ಯವಶ್ಯಕ.
ಎಲ್ಲೋ ಏನೋ ಒಂದು ತಪ್ಪು ಘಟಿಸಿದೆ ಎಂದರೆ ಅದು ನಮಗೆ ಸಂಬಂಧಿಸಿದ್ದಲ್ಲ ಎಂಬ ವಿಸ್ಮೃತಿ ಬೇಡ…. ಅರಮನೆಗೆ ಹತ್ತಿದ ಬೆಂಕಿ ನೆರೆಮನೆಯವರೆಗೆ ಬರುತ್ತದೆ ಎಂದರೆ ನಮ್ಮ ಮನೆಗೆ ಬರಲು ಮತ್ತಷ್ಟು ಸಮಯ ಬೇಕಾಗುತ್ತದೆಯೇ ಹೊರತು ಬರುವುದೇ ಇಲ್ಲ ಎಂದಲ್ಲ.
ಅಲ್ಲೆಲ್ಲೋ ದೂರ ದ್ವೀಪ ಪ್ರದೇಶಗಳ ಸಮುದ್ರದ ನಟ್ಟ ನಡುವಿನಲ್ಲಿ ಉಂಟಾಗುವ ಚಂಡಮಾರುತ, ಸುನಾಮಿಗಳು ಸಾವಿರಾರು ಮೈಲು ದೂರದಲ್ಲಿರುವ ಪ್ರದೇಶಗಳಿಗೂ ಹಬ್ಬಿ ಹವಾಮಾನದಲ್ಲಿ ಬದಲಾವಣೆ ಉಂಟಾಗಿ, ವಿಪರೀತ ಪ್ರವಾಹ ಮಳೆಯಂತಹ ಪರಿಸ್ಥಿತಿಗಳು ಜನ ಜೀವನವನ್ನು ಅಸ್ತವ್ಯಸ್ತವಾಗಿಸಲು ಸಾಧ್ಯವಿದೆ ಎಂದಾದರೆ, ಇಂದು ಜಗತ್ತಿನ ಯಾವುದೋ ಒಂದು ಮೂಲೆಯಲ್ಲಿ ಆಗಿರುವ ಆಕಸ್ಮಿಕಗಳು ದುರ್ಘಟನೆಗಳು ನಮ್ಮಲ್ಲಿ ಸಂಭವಿಸುವುದಿಲ್ಲ ಎಂಬುದರ ಗ್ಯಾರಂಟಿ ಏನು ?
ಜಗತ್ತಿನ ಎಲ್ಲಾ ದೇಶಗಳ ಕಾನೂನು ನ್ಯಾಯವನ್ನು ಎತ್ತಿ ಹಿಡಿಯುವ, ಅನ್ಯಾಯವನ್ನು ಮಟ್ಟ ಹಾಕುವ ತಪ್ಪಿತಸ್ಥರಿಗೆ ಶಿಕ್ಷೆ ನೀಡುವ ಮತ್ತು ನಿರಪರಾಧಿಗಳನ್ನು
ಶಿಕ್ಷೆಯಿಂದ ತಪ್ಪಿಸುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸುತ್ತವೆ. ನೂರು ಅಪರಾಧಿಗಳು ತಪ್ಪಿಸಿಕೊಂಡರೂ ಓರ್ವ ನಿರಪರಾಧಿಗೆ ಶಿಕ್ಷೆಯಾಗಬಾರದು ಎಂಬ ಕಾನೂನಿನ ಪಾಠ ಜಗತ್ತಿನ ಎಲ್ಲೆಡೆ ಚಾಲ್ತಿಯಲ್ಲಿದ್ದು, ತುಸು ತಡವಾಗಿಯಾದರೂ ನ್ಯಾಯ ದೊರಕುತ್ತದೆ ಎಂಬ ಭರವಸೆ ಜನರಿಗಿದೆ.
ಅತ್ಯಂತ ಶ್ರೀಮಂತ ವ್ಯಕ್ತಿಯಿಂದ ಹಿಡಿದು ಸಮಾಜದ ಕಟ್ಟ ಕಡೆಯ ವ್ಯಕ್ತಿಯವರೆಗೂ ಸಮಾನ ಹಕ್ಕು, ಕರ್ತವ್ಯಗಳನ್ನು ನಮ್ಮ ಸಂವಿಧಾನವು ನಮಗೆ ಕೊಡ ಮಾಡಿದ್ದು ನಮ್ಮ ಸಾಮಾಜಿಕ ಹಕ್ಕು ನ್ಯಾಯಗಳಿಗೆ ನಾವು ಹೋರಾಡದೆ ಮತ್ತಾರು ಹೋರಾಡಬೇಕು?
ಎಷ್ಟೋ ಬಾರಿ ದೀಪದ ಅಡಿಯಲ್ಲಿ ಕತ್ತಲೆ ಇರುವಂತೆ ಸಾಮಾಜಿಕ ನ್ಯಾಯವನ್ನು ಅನುಷ್ಠಾನಗೊಳಿಸುವಲ್ಲಿ ಭ್ರಷ್ಟಾಚಾರ, ಅಧರ್ಮ, ಅನ್ಯಾಯಗಳು ಮುಸುಗಿನಲ್ಲಿ ಕಾರ್ಯನಿರ್ವಹಿಸುತ್ತಿದ್ದು ಬಹುಸಂಖ್ಯಾತ ಜನರು ಶೋಷಣೆಗೆ ಒಳಗಾಗುತ್ತಿರಬಹುದು! ಆದರೆ ತಮ್ಮ ಹಕ್ಕುಗಳಿಗೆ ಹೋರಾಡುವ ದನಿಯನ್ನೇ ಕಳೆದುಕೊಂಡ,
ಯಾರೋ ಬಂದು ತಮ್ಮನ್ನು ಉದ್ದರಿಸುವರು ಎಂಬ
ಪೊಳ್ಳು ನಂಬಿಕೆಗಳನ್ನು ಇಟ್ಟುಕೊಂಡ, ಆಸೆ ಆಮಿಷಗಳಿಗೆ ಬಲಿಯಾಗಿ ತಮ್ಮ ಆತ್ಮಗೌರವವನ್ನು ಕಳೆದುಕೊಂಡ ಜನರು ಸಮಾಜದ ನೀತಿ ನಿಯಮಗಳನ್ನು ಲೇವಡಿ ಮಾಡುತ್ತಾರೆ. ಆದರೆ ಹೀಗೆ ಮಾಡುವ ಮೂಲಕ ತಮ್ಮ ಕಾಲಡಿಯ ನೆಲವನ್ನು ತಾವೇ ಕೆದರಿ ತಮ್ಮ ಸಮಾಧಿಯನ್ನು ತೋಡಿಕೊಳ್ಳುತ್ತಿದ್ದಾರೆ ಎಂಬ ಅರಿವು ಅವರಿಗೆ ಇಲ್ಲ… ಬಹುಶಹ ಅವರು ಮರೆತಿರಬಹುದು… ನಮ್ಮ ಬದುಕು ಈ ಜಗತ್ತಿನಲ್ಲಿ ಶಾಶ್ವತವಾದದ್ದಲ್ಲ… ಆದರೆ ಅಂತಿಮವಾಗಿ ಸತ್ಯ ನ್ಯಾಯಗಳು ಬದುಕಿನ ಕೊನೆಯವರೆಗೂ ನಮ್ಮನ್ನು ಕಾಯುತ್ತವೆ.
ಮನುಷ್ಯನಾಗಿ ಹುಟ್ಟಿದ ಮೇಲೆ ಆರೋಗ್ಯವಂತ ಸಮಾಜದ ನಾಗರಿಕನಾಗಿ ನಮ್ಮ ನೆಲದ ಕಾನೂನನ್ನು ಈ ಭೂಮಿಯ ಮೇಲೆ ಹುಟ್ಟಿದ ಪ್ರತಿಯೊಬ್ಬರು ಗೌರವಿಸಲೇಬೇಕಾದ್ದು ಅವರ ಕರ್ತವ್ಯ ಮಾತ್ರವಲ್ಲ… ಜವಾಬ್ದಾರಿ ಕೂಡ.
‘ಸತ್ಯಮೇವ ಜಯತೆ’ ಎಂದು ಹೇಳಿರುವುದು ಈ ಕಾರಣಕ್ಕೆ ಅಲ್ಲವೇ ಸ್ನೇಹಿತರೆ?
- ವೀಣಾ ಹೇಮಂತ್ ಗೌಡ ಪಾಟೀಲ್, ಮುಂಡರಗಿ ಗದಗ
