ಹನ್ನೆರಡನೆಯ ಶತಮಾನದಲ್ಲಿ ಬಸವಣ್ಣನವರ ಆಗಮನಕ್ಕೆ ಕಾಯ್ದುಕೊಂಡಿದ್ದ ಕಾಲವದು.
ದಲಿತರು, ಅಸ್ಪೃಶ್ಯರು ಮಹಿಳೆಯರಿಗೆ ಸೇರಿದಂತೆ ಕೆಳ ಸಮುದಾಯದವರನ್ನು ಅಂದಿನ ದಿನಗಳಲ್ಲಿ ಬಹಳ ಕೇವಲವಾಗಿ ನೋಡುತ್ತಿದ್ದ ಕಾಲವಾಗಿತ್ತು. ಇವರೆಲ್ಲರಿಗೂ ದೇವರ ದರ್ಶನ ಪಡೆಯುವದಂತೂ ದೂರದ ಮಾತಾಗಿತ್ತು. ದೇವರ ಪೂಜೆ ಮಾಡುವ ಮತ್ತು ದೇವಸ್ಥಾನಕ್ಕೆ ಪ್ರವೇಶ ಕೊಡದೇ ಇರದ ಆ ಸಮಯದಲ್ಲಿ ಆಕಾಶ ದೀಪವಾಗಿ ಮೂಡಿ ಬಂದವರೇ ಅಣ್ಣ ಬಸವಣ್ಣನವರು.
ಬಂದವರೇ ಅಣ್ಣ ಬಸವಣ್ಣನವರು ಮೊದಲನೆಯದಾಗಿ ಅಸಮಾನತೆಯನ್ನು ಹೋಗಲಾಡಿಸುವ ನಿಟ್ಟಿನಲ್ಲಿ ಸರ್ವರಿಗೂ ದೇವರ ಧ್ಯಾನ, ದರ್ಶನ ಪಡೆಯುವಂತಾಗಬೇಕೆಂದು ನಿಶ್ಚಯಿಸಿ ವಿಶ್ವಾತ್ಮನ ಕುರುಹಾದ ಇಷ್ಟಲಿಂಗವನ್ನು ಅಂಗದ ಮೇಲೆ ಇಟ್ಟು ಪೂಜಿಸುವ ಶಿವಯೋಗವನ್ನು ಕರುಣಿಸಿದರು. ಜಾತಿ, ಮತ, ಪಂಥ, ಭೇದಗಳೆನ್ನದೆ
ಸರ್ವರಿಗೂ ಇಷ್ಟಲಿಂಗ ಧಾರಣೆ ಮಾಡಿದರು. ತರುವಾಯ ಸರ್ವರೂ ದೇವರ ದರ್ಶನ ಪಡೆಯುವಂತಾಯಿತು. ನಂತರ
ನೊಂದವರ ಪರವಾಗಿ ಹತ್ತು ಹಲವು ಕ್ರಾಂತಿಕಾರಿ ಕ್ರಮ ಕೈಗೊಳ್ಳುವ ಮೂಲಕ ಅವರುಗಳನ್ನು ಸಮಾಜದ ಮುಖ್ಯವಾಹಿನಿಗೆ ತರುವ ಕೆಲಸ ನಿರಂತರವಾಗಿ ಮಾಡಿರುತ್ತಾರೆ. ಕೆಳ ಸಮುದಾಯಕ್ಕೆ ಅನುಭವ ಮಂಟಪದಲ್ಲಿ ಅವಕಾಶ ನೀಡಿ, ಅವರೆಲ್ಲರೂ ವಚನ ರಚನೆಗಳಲ್ಲಿ ತೊಡಗುವಂತೆ ಪ್ರೇರೇಪಿಸಿ,ವಚನಗಳನ್ನು ಬರೆಯುವಂತೆ ಮಾಡಿದವರು. ಅಂತರ್ಜಾತಿ ವಿವಾಹಕ್ಕೆ ಪ್ರೋತ್ಸಾಹ ನೀಡಿ, ಹಲವರ ಮದುವೆ ಮಾಡಿಸಿದವರು. ಮಾನವರೆಲ್ಲರೂ ದೇವರ ಮಕ್ಕಳು ಎಂಬ ನಿಲುವು ಪ್ರತಿಪಾದಿಸಿ, ಸರ್ವರೂ ಸಮಾನರು ಎಂದು ಜಾಗತಿಕ ಪ್ರಪಂಚಕ್ಕೆ ಸಾರಿದವರು. ಸಮಾಜದ ಕಟ್ಟ ಕಡೆಯ ವ್ಯಕ್ತಿಗೂ ಈ ಸಮಾಜದಲ್ಲಿ ನೆಮ್ಮದಿಯಿಂದ ಬಾಳುವಂತಾಗಬೇಕೆಂದು ಕರೆ ನೀಡಿ, ಇದರಂತೆ ಹೋರಾಟ ಮಾಡಿರುತ್ತಾರೆ ಇನ್ನು ವಿಶ್ವಕ್ಕೆ ಮೊಟ್ಟ ಮೊದಲ ಬಾರಿಗೆ ಪ್ರಜಾಪ್ರಭುತ್ವದ ಕಲ್ಪನೆ ನೀಡಿ, ಭಾವೈಕ್ಯತೆಯನ್ನು ಸಾರಿದವರು.
ಸತ್ಯ, ಅಹಿಂಸೆ, ಪ್ರಾಮಾಣಿಕತೆ, ಪ್ರಬುದ್ಧತೆ, ಸಹೋದರತ್ವ, ಸಹಬಾಳ್ವೆ, ಸೌಹಾರ್ದತೆಯನ್ನು ಸರ್ವರ ಹೃದಯ ಮಂದಿರದಲ್ಲಿ ಬಿತ್ತಿದವರು.
ಅಂದು ಬಸವಣ್ಣನವರು ಕೆಳಗೆ ಬಿದ್ದವರನ್ನು ಯಾವ ರೀತಿ ಅಪ್ಪಿಕೊಂಡು ಮೇಲೆತ್ತಿದರೂ ಎಂಬುದಕ್ಕೆ ನಮಗಿಲ್ಲಿ ಅವರ ವಚನಗಳೆ ಸಾಕ್ಷಿಪ್ರಜ್ಞೆಯಾಗಿವೆ. ಇನ್ನು ತಮ್ಮನ್ನು ತಾವು ಕನಿಷ್ಠ ಮಟ್ಟದಲ್ಲಿ ಇಳಿದುಕೊಂಡು ಬಹು ಎತ್ತರಕ್ಕೆ ಬೆಳೆದ ಮಹಾನ್ ಚೇತನರಾಗಿದ್ದರು. ಅದಕ್ಕೆ ಅವರ ವಚನಗಳೇ ಸಾಕ್ಷಿ, ಅವರ ವಚನಗಳೇ ಅವರ ಸಂಪೂರ್ಣ ವ್ಯಕ್ತಿತ್ವವನ್ನು ನಿರೂಪಿಸುತ್ತದೆ ಎನ್ನುವುದಂತೂ ಸತ್ಯ.
ನಾನು ಎಲ್ಲವರಿಗಿಂತಲೂ ಚಿಕ್ಕವನಾಗಿದ್ದೇನೆ ಎಂದು ಪರಿಪಾರಿಯಾಗಿ ದೇವರಲ್ಲಿ ಪ್ರಾರ್ಥಿಸುವ ಅವರ ಮನಸ್ಸು ಎಷ್ಟು ದೊಡ್ಡದಾಗಿತ್ತು ಎಂಬುದನ್ನು ಈ ವಚನದಿಂದ ನಾವೆಲ್ಲರೂ ತಿಳಿದುಕೊಳ್ಳಬಹುದಾಗಿದೆ. ಅವರು ಪ್ರತಿಯೊಬ್ಬರನ್ನು ಸಂಪರ್ಕಿಸಿ ನಿಮ್ಮ ಮನೆಯ ಮಗನೆಂದು ಹೇಳಿಕೊಳ್ಳುತ್ತಾ ಅವರನ್ನು ಆಲಿಂಗಿಸಿಕೊಂಡು, ಯಾರೂ ಮಾಡದಂತ ವೈಜ್ಞಾನಿಕ, ವೈಚಾರಿಕ ಹಾಗೂ ಸಾಮಾಜಿಕ ಕ್ರಾಂತಿಯನ್ನು 12ನೇ ಶತಮಾನದಲ್ಲಿ ಮಾಡಿರುವುದು ಯಾರೂ ಮರೆಯುವಂತಿಲ್ಲ ಅಂದಹಾಗೆ ಅವರ ಒಂದು ವಚನ ಹೀಗಿದೆ.
“ಚೆನ್ನಯ್ಯನ ಮನೆಯ ದಾಸನ ಮಗನು, ಕಕ್ಕಯ್ಯನ ಮನೆಯ ದಾಸಿಯ ಮಗಳು, ಇವರಿಬ್ಬರೂ ಹೊಲದಲು ಹೋಗಿ, ಸಂಗವ ಮಾಡಿದರು. ಇವರಿಬ್ಬರಿಗೆ ಹುಟ್ಟಿದ ಮಗ ನಾನು, ಕೂಡಲ ಸಂಗಮದೇವ ಸಾಕ್ಷಿಯಾಗಿ.”
ಕೂಡಲಸಂಗಮದೇವನ ಸಾಕ್ಷಿಯಾಗಿ ಎಂದು ಎನ್ನಬೇಕಾದರೆ ಬಸವಣ್ಣನವರಿಗೆ ಅದೆಂಥ ತ್ಯಾಗದ ಮನೋಭಾವ, ನಾನು ಸಣ್ಣವ, ನಾನು ಅತ್ಯಂತ ಕೆಳ ಸಮಾಜದವ, ನಾನು
ದಾಸ – ದಾಸಿಯ ಮಗ ಎಂದು ಹೇಳುವ ತಾಕತ್ತು ಎಷ್ಟು ಇತ್ತು ಎಂಬುದು ಈ ವಚನದಲ್ಲಿ ಕಾಣಬಹುದಾಗಿದೆ.
ಈ ವಚನ ಅವರ ಎತ್ತರದ ವ್ಯಕ್ತಿತ್ವವನ್ನು ಅನಾವರಣಗೊಳಿಸುತ್ತದೆ. ಇನ್ನು ನಾನು ಕೆಳಸ್ತರದ ಜನಾಂಗದಲ್ಲಿ ಹುಟ್ಟಿದ ಮಗ ಎಂದು ಗೌರವದಿಂದ ಹೇಳುವ ಅವರ ಮಾತು ನಿಜಕ್ಕೂ ಮಹೋನ್ನತ ಶ್ರೇಷ್ಠ ವಿಚಾರವಾಗಿದೆ. ಮಾನವೀಯ ನಡೆಗೆ ಇದು ಸಾಕ್ಷಿ
ಪ್ರಜ್ಞೆಯಾಗಿದೆ. ಇದೆ ತೆರನಾಗಿ ಎಲ್ಲಾ ಸಮುದಾಯದ ಜನರಲ್ಲಿ ಹೋಗಿ ಅವರೆಲ್ಲರನ್ನೂ ಒಂದಡೆ ಸೇರಿಸಿ , ಒಟ್ಟುಗೂಡಿಸಿದ ಇವರ ಪ್ರಯತ್ನ ನಿಜಕ್ಕೂ ಅವಿಸ್ಮರಣೀಯವಾದದ್ದು ಹಾಗೂ
ಶ್ಲಾಘನೀಯವಾದುದು.
ಹಾಗೆಯೇ ಅವರ ಇನ್ನೊಂದು ವಚನದಲ್ಲಿ ಹೀಗೆ ಹೇಳುತ್ತಾರೆ.
” ಆನು ಭಕ್ತನಲ್ಲಯ್ಯಾ, ಆನು ವೇಷಧಾರಿಯಯ್ಯಾ, ಕಾಟುಗ, ಕೇತುಗ, ಪೋಲುಗ ಎಂಬುದು ಎನ್ನ ಹೆಸರು. ಕೂಡಲಸಂಗಮದೇವಾ ನಿಮ್ಮ ಶರಣರ ಮನೆಯ ಮಗ ನಾನಯ್ಯಾ.”
ನಿಮ್ಮ ಶರಣರ ಮನೆಯ ಮಗನು ನಾನಾಗಿದ್ದೇನೆ, ಎಂದು ಈ ವಚನದಲ್ಲಿ ಇಡೀ ಮಾನವ ಸಮಾಜದ ಮಗುವಾಗಿದ್ದೇನೆ ಎಂಬರ್ಥದಲ್ಲಿ ಹೇಳುತ್ತಾ ಅವರಲ್ಲಿ ಉತ್ಸಾಹ ಹುರುಪು ತುಂಬಿ, ನವ ಚೈತನ್ಯವನ್ನೆ ಬರುವಂತೆ ಮಾಡುತ್ತಾರೆ ಬಸವಣ್ಣನವರು. ಕೊನೆಯಲ್ಲಿ ಅವರು ತಮ್ಮ ವಚನದ ಮೂಲಕ ಶೋಷಿತ ಸಮುದಾಯಕ್ಕೆ ತಮ್ಮನ್ನು ಅವರೆಲ್ಲಾ ಅಪ್ಪಿಕೊಳ್ಳಲಿ ಎಂಬ ಮನೋಭಾವದಿಂದ ಅವರಿಗೆ ಈ ರೀತಿಯಾಗಿ ನಿವೇದನೆ ಮಾಡಿಕೊಳ್ಳುತ್ತಾರೆ. “ಇವನಾರವ, ಇವನಾರವ, ಇವನಾರವನೆಂದೆನಿಸದಿರಯ್ಯಾ ಇವ ನಮ್ಮವ, ಇವ ನಮ್ಮವ, ಇವ ನಮ್ಮವನೆಂದೆನಿಸಯ್ಯಾ. ಕೂಡಲಸಂಗಮದೇವಾ ನಿಮ್ಮ ಮನೆಯ ಮಗನೆಂದೆನಿಸಯ್ಯಾ.” ಎಂದು
ಈ ರೀತಿಯಾಗಿ ಅಣ್ಣ ಬಸವಣ್ಣನವರು ವಚನ ಚಳುವಳಿಯನ್ನು ಆರಂಭಿಸಿ ಸಮಾನತೆಗೆ ಮುನ್ನುಡಿ ಬರೆದಿದ್ದಾರೆ. ಅಂದು ಬಸವಣ್ಣನವರು ಅಸಮಾನತೆಯನ್ನು ಹೋಗಲಾಡಿಸಲು ಅವರು ಪಟ್ಟ ಪರಿಶ್ರಮ ನಿಜಕ್ಕೂ ಜಾಗತಿಕ ಸಮುದಾಯಕ್ಕೆ ಪ್ರೇರಣಾದಾಯಕ. ಹಾಗೆಯೇ ಅಂದಿನ ಕಾಲದ ದಿನಗಳಲ್ಲಿ ಆರ್ಥಿಕ, ಶೈಕ್ಷಣಿಕ,ಸಾಂಸ್ಕೃತಿಕ, ಸಾಮಾಜಿಕ ಕ್ಷೇತ್ರಗಳಿಗೆ ಹೆಚ್ಚು ಆದ್ಯತೆ ಕೊಟ್ಟು ವಿಶಿಷ್ಟ ರೀತಿಗಳಲ್ಲಿ ಸೇವೆ ಸಲ್ಲಿಸಿ, ಈ ಕ್ಷೇತ್ರಗಳನ್ನು ಸಂಪತ್ತಭರಿತವಾಗಿ ಮಾಡಿದ ಕೀರ್ತಿ ಸಹ ಬಸವಣ್ಣನವರಿಗೆ ಸಲ್ಲುತ್ತದೆ
ಅದಕ್ಕಾಗಿಯೇ ಇವರನ್ನು ಭಕ್ತಿ ಭಂಡಾರಿ, ಸಮಾನತೆಯ ಹರಿಕಾರ, ವಿಶ್ವ ಗುರು, ಪ್ರಜಾಪ್ರಭುತ್ವದ ಪಿತಾಮಹ ಎನ್ನುತ್ತಾರೆ.
ಪಿತಾಮಹ :
ವಿಶ್ವದ ಮೂಲೆ ಮೂಲೆಗಳಿಂದ ಆಗಮಿಸಿದ ಪ್ರತಿಯೊಬ್ಬ ಶರಣರು ಬಸವಣ್ಣನವರಲ್ಲಿ ದೇವರನ್ನು ಕಂಡರು. ಬಸವಣ್ಣನವರು
ಹೆಣ್ಣುಮಕ್ಕಳಿಗೆ ಸಮಾನತೆಯ ಭಾಗ್ಯ ಕಲ್ಪಿಸಿದರು, ಅನಕ್ಷರಸ್ಥರಿಗೆ ಕಲಿಕೆ ವ್ಯವಸ್ಥೆ ಮಾಡಿದರು, ಸರ್ವರೂ ಸಮಾನರು ಎಂದು ಸಾರಿದರು, ದಯವೇ ಧರ್ಮ ಎಂದರು, ಕಾಯಕವೇ ಕೈಲಾಸವೆಂದರು, ದಾಸೋಹ ಪರಂಪರೆಗೆ ನಾಂದಿ ಹಾಡಿದರು, ನುಡಿದಂತೆ ನಡೆದರು, ಪ್ರಾಮಾಣಿಕತೆಗೆ ಹೆಸರಾದರು,ಸಕಲ ಜೀವಾತ್ಮರಿಗೆ ಲೇಸಾಗಲೆಂದರೂ, ಸೇವೆಯೇ ಶ್ರೇಷ್ಠ ಜೀವನ ಎಂದು ತಿಳಿದು ನಡೆದರು. ಒಂದಾ, ಎರಡಾ… ಹೀಗೆ
ಸಾವಿರಾರು ವಿಚಾರಗಳಿಂದ ಪ್ರಜಾಪ್ರಭುತ್ವ ವ್ಯವಸ್ಥೆಗೆ ಭದ್ರ ಬುನಾದಿಯನ್ನು ಹಾಕಿದ್ದು ಕಾಣುತ್ತೇವೆ. ಅದಕ್ಕಾಗಿಯೇ
ಇವರನ್ನು ವಿಶ್ವದ ಪ್ರಥಮ ಪ್ರಜಾಪ್ರಭುತ್ವ ಪಿತಾಮಹ ಎಂದು ಹೆಮ್ಮೆಯಿಂದ ಕರೆಯುತ್ತಾರೆ.
ಆಶಯ ನುಡಿ :
ಯಾವುದೇ ಒಂದು ಜನಾಂಗದ ಸೊತ್ತಾಗಿರದೆ, ಸಕಲ ಜೀವರಾಶಿಗಳ ಜೀವಾಳವಾಗಿದ್ದ
ಅಣ್ಣ ಬಸವಣ್ಣನವರು ವಿಶ್ವದ ಮೊದಲ ವೈಚಾರಿಕ ಪ್ರಜ್ಞೆಯ, ಪ್ರಜಾಪ್ರಭುತ್ವದ ಮಹಾನ್ ನಾಯಕ, ಮೌಲ್ಯಾಧಾರಿತ ವಿಚಾರವಾದಿ ಪ್ರತಿಪಾದಕ, ಜಾಗತಿಕ ಸಮುದಾಯದಕ್ಕೆ ಸೌಹಾರ್ದತೆ, ಸಮಾನತೆ ಸಾರಿದ ಭಾವೈಕ್ಯತೆಯ ಮಹಾಸಂತ. ಶೋಷಿತ ವರ್ಗದವರನ್ನು, ನಿರ್ದೋಷಿಗಳನ್ನು ಸಂರಕ್ಷಣೆ ಮಾಡಿದ ಸಮತಾವಾದಿ. ವಚನಗಳು ಕನ್ನಡದಲ್ಲಿ ರಚನೆ ಮಾಡಿ, ಕನ್ನಡ ಭಾಷೆಯನ್ನು ಶ್ರೀಮಂತಗೊಳಿಸಿದ ಸರ್ವ ಶ್ರೇಷ್ಠ ಪರಿವರ್ತಕರು. ಮೇಲು ಕೀಳು ಎಂಬ ಭಾವನೆ ತೊಡೆದು ಹಾಕಿ, ಸರ್ವರಿಗೂ ಸಮಪಾಲು, ಸ್ವಾತಂತ್ರ್ಯ, ಸಮಾನತೆ, ಸಾಮಾಜಿಕ ನ್ಯಾಯ ಬಸವಣ್ಣನವರು ಪ್ರತಿಪಾದಿಸಿದ ಯುಗಪುರುಷ. ಬನ್ನಿ ನಾವೆಲ್ಲರೂ ಜೊತೆಯಾಗಿ ಮತ್ತೆ ಬಸವಣ್ಣನವರ ವೈಚಾರಿಕ ವಿಚಾರಗಳನ್ನು ಜಾರಿಗೆ ತಂದು. ನವ ಸಮಾಜ ನಿರ್ಮಾಣ ಮಾಡೋಣ.

ಲೇಖಕರು – ಸಂಗಮೇಶ ಎನ್. ಜವಾದಿ.
ಸಾಹಿತಿ, ಸಾಮಾಜಿಕ ಸೇವಕರು, ಪರಿಸರ ಸಂರಕ್ಷಕರು.
ಅಧ್ಯಕ್ಷರು : ಕಲ್ಯಾಣ ಕರ್ನಾಟಕ ಸಾಹಿತ್ಯ ಪರಿಷತ್ತು ಹಾಗೂ ಕಲ್ಯಾಣ ಕಾಯಕ ಪ್ರತಿಷ್ಠಾನ.
