ಬಳ್ಳಾರಿ / ಕಂಪ್ಲಿ : ಈಗಾಗಲೇ ಬಿಎಸ್ವಿ ಶಾಲೆ ಕಟ್ಟಡ ದುರಸ್ಥಿಯಲ್ಲಿದ್ದು, ಕೂಡಲೇ ಮಕ್ಕಳ ಹಿತದೃಷ್ಠಿಯಿಂದ ಪುರಸಭೆಗೆ ಹಸ್ತಾಂತರಿಸಿ ಶಾಲೆಯನ್ನು ಬೇರೆ ಸ್ಥಳಾಂತರಿಸಬೇಕು ಎಂದು ದಲಿತ ಮುಖಂಡ ಜಿ. ರಾಮಣ್ಣ ಆಗ್ರಹಿಸಿದರು.
ಸ್ಥಳೀಯ ಅತಿಥಿ ಗೃಹದಲ್ಲಿ ಪಟ್ಟಣದ ಹಿತೈಷಿಗಳು, ಪ್ರಗತಿಪರ ಒಕ್ಕೂಟ ಹಾಗೂ ವಿವಿಧ ಸಂಘಟನೆಗಳ ನೇತೃತ್ವದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಇಲ್ಲಿನ ಬಿಎಸ್ವಿ ಶಾಲಾ ಸ್ಥಳ ಮತ್ತು ಕಟ್ಟಡವು ಪುರಸಭೆ ಆಸ್ತಿಯಾಗಿದ್ದು, ಉಚಿತ ಶಿಕ್ಷಣಕ್ಕಾಗಿ ಈ ಹಿಂದೆ ಪುರಸಭೆಯಿಂದ ಶಾಲೆಗೆ ಅವಕಾಶ ಮಾಡಲಾಗಿತ್ತು. ಆದರೆ, ಈಗ ಕುಂಟು ನೆಪ ಹೇಳಿಕೊಂಡು ಪುರಸಭೆಗೆ ಬಿಟ್ಟುಕೊಡದೇ, ಸತಾಯಿಸುತ್ತಿರುವುದು ಸರಿಯಲ್ಲ. ಶಾಲಾ ಆಡಳಿತದವರ ನಿರ್ಲಕ್ಷ್ಯದಿಂದ ವಿದ್ಯಾರ್ಥಿಗಳ ಅನಾಹುತಕ್ಕೆ ಕಾರಣವಾಗಲಿದೆ. ಶಾಲೆಯನ್ನು ಪುರಸಭೆ ಜಾಗದಲ್ಲಿ ಅನಧಿಕೃತವಾಗಿ ನಡೆಸಲಾಗುತ್ತಿದೆ. ಶಾಲೆಯ ಕಟ್ಟಡಗಳು ಹಲವು ವರ್ಷಗಳ ಹಳೆಯದಾಗಿದ್ದು, ಮೇಲ್ಚಾವಣಿ ಪದರು ಕಿತ್ತಿ ದುರಸ್ಥಿಯೊಂದಿಗೆ ಶಾಲೆ ನಡೆಸಲು ಯೋಗ್ಯ ಇಲ್ಲದಾಗಿದೆ. ಇಲ್ಲಿನ ಶಾಲಾ ಕಟ್ಟಡದ ಬುನಾದಿಯಲ್ಲಿ ದೊಡ್ಡದಾದ ಚರಂಡಿ ಹಾದು ಹೋಗಿದ್ದು, ಈ ಬೇಸ್ ಮಟ್ಟವು ಸಂಪೂರ್ಣ ಶಿಥಿಲವಾಗಿದೆ. 2025 – 26 ನೇ ಸಾಲಿನಲ್ಲಿ ಶಾಲೆ ನಡೆಸಲು ಯೋಗ್ಯವಿಲ್ಲ, ಶಾಲಾ ಆಡಳಿತ ಮಂಡಳಿಯವರು ಕರಪತ್ರಗಳ ಮುಖೇನ ಮಕ್ಕಳ ಪ್ರವೇಶಾತಿ ಮತ್ತು ದಾಖಲಾತಿ ಮಾಡಿಕೊಳ್ಳಲು ಮುಂದಾಗಿರುವುದು ಸರಿಯಲ್ಲ. ಸುಸಜ್ಜಿತ ಕಟ್ಟಡ, ಮೈದಾನ ಸೇರಿದಂತೆ ನಾನಾ ಸೌಲಭ್ಯಗಳು ಇವೆ ಎಂದು ಸುಳ್ಳು ಹೇಳಿ ಮಕ್ಕಳ ಭವಿಷ್ಯದ ಜೊತೆ ಚಲ್ಲಾಟವಾಡುತ್ತಿದ್ದಾರೆ. ಸುಮಾರು ಹತ್ತು ವರ್ಷದಿಂದ ಶಾಲೆಯ ಸ್ಥಳವನ್ನು ಪುರಸಭೆಗೆ ಬಿಟ್ಟುಕೊಡಬೇಕೆಂಬ ಹೇಳುತ್ತಾ ಬಂದರೂ, ನಿರ್ಲಕ್ಷ್ಯ ಧೋರಣೆ ಅನುಸರಿಸುತ್ತಾ ಬಂದಿದ್ದಾರೆ. ಆದರೆ, ಈಗ ಕಾಲ ಕೂಡಿ ಬಂದಿದೆ. ಇತ್ತೀಚೆಗೆ ನಡೆದ ಸಾಮಾನ್ಯ ಸಭೆಯಲ್ಲಿ ಶಾಲಾ ಆಡಳಿತ ಮಂಡಳಿ ಅಧ್ಯಕ್ಷರಿಗೆ ಖಡಕ್ಕಾಗಿ ತಿಳಿಸಿದ್ದು, ಏಪ್ರಿಲ್ ೩೦ರೊಳಗಾಗಿ ಹಸ್ತಾಂತರಿಸದಿದ್ದಲ್ಲಿ ಮೇ. ೧ರಂದು ಪುರಸಭೆಯವರು ವಶಕ್ಕೆ ಪಡೆಯಲಿದ್ದಾರೆ. ಆದ್ದರಿಂದ ಶಾಲಾ ಆಡಳಿತ ಮಂಡಳಿಯವರು ಮೂಗಿಗೆ ತುಪ್ಪ ಸುರಿಯುವ ಬದಲು ಬೇರೆ ಕಡೆ ಶಾಲೆಯನ್ನು ಸ್ಥಳಾಂತರಿಸಬೇಕು. ಇಲ್ಲವಾದಲ್ಲಿ ಮುಂದಿನ ಅನಾಹುತಕ್ಕೆ ಶಾಲೆಯವರೇ ಕಾರಣವಾಗುತ್ತಾರೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಮುಖಂಡರಾದ ಬಿ. ಸಿದ್ದಪ್ಪ, ಬಿ. ದೇವೆಂದ್ರ, ಎಂ. ಸಿ. ಮಾಯಪ್ಪ, ಚನ್ನಬಸವ, ಮಾವಿನಹಳ್ಳಿ ಲಕ್ಷ್ಮಣ ಇದ್ದರು.
ವರದಿ : ಜಿಲಾನಸಾಬ್ ಬಡಿಗೇರ್
