ನವದೆಹಲಿ: ಬಹುದೊಡ್ಡ ರಾಜಕೀಯ ಪರಿಣಾಮ ಉಂಟು ಮಾಡುವ ತೀರ್ಮಾನ ಕೈಗೊಂಡಿರುವ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರವು ಮುಂದಿನ ದಶಕದ ಜನಗಣತಿಯೊಂದಿಗೆ ಜಾತಿ ಗಣತಿ ನಡೆಸಲು ತೀರ್ಮಾನಿಸಿದೆ.
ಸ್ವಾತಂತ್ರ್ಯದ ನಂತರ, ದೇಶದಾದ್ಯಂತ ಜಾತಿ ಗಣತಿ ನಡೆಯುತ್ತಿರುವುದು ಇದೇ ಮೊದಲು. 1931ರ ಜನಗಣತಿಯ ನಂತರ ಜಾತಿ ಗಣತಿಯನ್ನು ಕೈಬಿಡಲಾಗಿತ್ತು. ಜಾತಿ ಗಣತಿಯ ರಾಜಕೀಯ ಲಾಭ ಪಡೆಯಲು ಬಿಜೆಪಿ ಹಾಗೂ ಕಾಂಗ್ರೆಸ್ ನಡುವೆ ಬುಧವಾರವೇ ‘ಸಮರ’ ಆರಂಭವಾಗಿದೆ.
ಬುಧವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಈ ಮಹತ್ವದ ತೀರ್ಮಾನ ಕೈಗೊಳ್ಳಲಾಯಿತು. ಆದರೆ, ಈಗಾಗಲೇ ವಿಳಂಬವಾಗಿರುವ ಜನಗಣತಿಯ ವೇಳಾಪಟ್ಟಿಯನ್ನು ಸರ್ಕಾರ ಪ್ರಕಟಿಸಿಲ್ಲ. ಪಹಲ್ಗಾಮ್ನಲ್ಲಿ ಉಗ್ರರ ದಾಳಿಯಿಂದ 26 ಮಂದಿ ಮೃತಪಟ್ಟ ಒಂದು ವಾರದ ಬಳಿಕ ಹಾಗೂ ಬಿಹಾರದ ಚುನಾವಣೆಗೆ ಕೆಲವೇ ತಿಂಗಳುಗಳು ಉಳಿದಿರುವಾಗ ಕೇಂದ್ರ ಸರ್ಕಾರ ಜಾತಿ ಗಣತಿಯ ದಾಳ ಉರುಳಿಸಿದೆ.
ಕಾಂಗ್ರೆಸ್ ಸೇರಿದಂತೆ ಐಎನ್ಡಿಐಎ ಮೈತ್ರಿಕೂಟದ ಪಕ್ಷಗಳು ದೇಶಾದ್ಯಂತ ಜಾತಿ ಗಣತಿ ನಡೆಸಬೇಕೆಂದು ಸರಕಾರದ ಮೇಲೆ ಒತ್ತಡ ಹೇರುತ್ತಲೇ ಬಂದಿದ್ದವು. ಕರ್ನಾಟಕ, ಬಿಹಾರ, ತೆಲಂಗಾಣವು ಜಾತಿ ಗಣತಿ ಸ್ವರೂಪದ ಜಾತಿಗಳ ಸಾಮಾಜಿಕ ಆರ್ಥಿಕ ಸಮೀಕ್ಷೆ ನಡೆಸಿದ್ದವು. ಬಿಹಾರ ಚುನಾವಣೆ ಹೊಸ್ತಿಲಲ್ಲೇ ಜನಗಣತಿಯಲ್ಲಿಜಾತಿ ಗಣತಿಯನ್ನೂ ಸೇರಿಸುವ ನಿರ್ಧಾರ ಪ್ರಕಟಿಸಿದ ಸರಕಾರದ ನಿಲುವಿನ ಹಿಂದೆ ರಾಜಕೀಯ ಲೆಕ್ಕಾಚಾರವಿದೆ ಎನ್ನಲಾಗಿದೆ.
ವರದಿ : ಜಿಲಾನಸಾಬ್ ಬಡಿಗೇರ್
