ಬಳ್ಳಾರಿ: ಸಿರುಗುಪ್ಪ ತಾಲೂಕಿನ ಶಿಕ್ಷಣ ಇಲಾಖೆಯ ಅಧಿಕಾರಿಗಳಿಗೆ ಮತ್ತು ಅನೇಕ ಶಾಲೆಯ ಮುಖ್ಯ ಗುರುಗಳಿಗೆ ಒಂದು ಅಗತ್ಯ ಇರುವ ಸುತ್ತೋಲೆ ಹೊರಡಿಸಬೇಕಿದೆ ಅದು ಯಾವುದೆಂದರೆ, ಶಾಲಾ ಶೈಕ್ಷಣಿಕ ಪ್ರವಾಸ ಹೆಸರಿನಲ್ಲಿ ಲಕ್ಷಾಂತರ ಸಾವಿರಾರು ಹಣ ಖರ್ಚು ಮಾಡಿ ಅನೇಕ ಐತಿಹಾಸಿಕ ಧಾರ್ಮಿಕ ಮತ್ತು ಶಿಕ್ಷಣಕ್ಕೆ ಪೂರಕ ಪ್ರದೇಶಗಳನ್ನು ಪ್ರವಾಸಕ್ಕೆಂದು ಕರೆದುಕೊಂಡು ಹೋಗಿ ತೋರಿಸಿಕೊಂಡು ಬರುತ್ತಿದ್ದಾರೆ ಈ ಒಂದು ಸಾಲಿಗೆ ಈ ಸಿರುಗುಪ್ಪ ತಾಲೂಕಿನ ಇಬ್ರಾಹಿಂಪುರ ಗ್ರಾಮದ ಪ್ರಮುಖ ಮೂರು ರಸ್ತೆಗಳು ಸೇರುವ ಸಂಗಮ ಸ್ಥಳ ಹೊಂದಿದ್ದು ಇಲ್ಲಿ ಅನೇಕ ವರ್ಷಗಳಿಂದ ಸರ್ಕಾರಗಳ ಕೊಡುಗೆಯಾಗಿ ಇಲ್ಲಿ ಈಗಾಗಲೇ ಅನೇಕ ಗುಂಡಿಗಳಿದ್ದು ಲಕ್ಷಾಂತರ ರೂಪಾಯಿಗಳ ನಷ್ಟ ಉಂಟಾಗಿದೆ ಇಲ್ಲಿ ಅನೇಕರು ಪ್ರಾಣಭಯದಿಂದ ಪಾರಾಗಿ ಬಂದವರು ಈ ಜಾಗದ ಮಹತ್ವಗಳನ್ನು ತಮ್ಮದೇ ಆದ ಶೈಲಿಯಲ್ಲಿ ಉಲ್ಲೇಖಿಸುತ್ತಿದ್ದಾರೆ ಕ್ಷೇತ್ರದ ವ್ಯಾಪ್ತಿಯಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಕೋಟಿಗಟ್ಟಲೆ ಹಣವನ್ನು ಕಾಣದ ಮೂಲೆಗಳಲ್ಲಿ ಅಭಿವೃದ್ಧಿ ಹೆಸರಿನಲ್ಲಿ ಹಣ ಮಾಡುತ್ತಿದ್ದು ಆದ್ಯತೆಯ ಮೇರೆಗೆ ನೀಡುವುದಾದರೆ ಪ್ರಪ್ರಥಮವಾಗಿ ಇಲ್ಲಿನ ಈ ಇತಿಹಾಸ ನಿರ್ಮಿಸುತ್ತಿರುವ ಗುಂಡಿ ಮುಚ್ಚಿ ಉತ್ತಮ ಆವೃತ್ತ ಮಾಡಿ ಅಪಘಾತವಲ್ಲದ ಸ್ಥಳವನ್ನಾಗಿ ಮಾಡುವುದನ್ನು ಇಲ್ಲಿನ ಜನಪ್ರತಿನಿಧಿಗಳು ಅಧಿಕಾರಿಗಳು ಮತ್ತು ಸರ್ಕಾರಗಳು ಮರೆತಿವೆ ಕಾರಣ ಇದಕ್ಕಾಗಿಯೇ ಅನೇಕ ವರ್ಷಗಳಿಂದ ಇತಿಹಾಸ ನಿರ್ಮಿಸುತ್ತಿರುವ ಈ ರಸ್ತೆಯನ್ನು ತಾಲೂಕಿನ ಪ್ರಮುಖ ಪ್ರಸಿದ್ಧ ವೀಕ್ಷಣಾ ಸ್ಥಳವನ್ನಾಗಿ ಮಾಡುವುದು ಅಗತ್ಯವೆನಿಸುತ್ತಿದೆ ಇಲ್ಲಿರುವ ಅಂಗಡಿಕಾರರ ಮತ್ತು ರಸ್ತೆ ಹೋಕರನ್ನು ಮಾತನಾಡಿಸಿದರೆ ಈ ಬೃಹದಾಕಾರದ ರಸ್ತೆಗುಂಡಿಯ ಇತಿಹಾಸವನ್ನು ಎಲ್ಲಾ ಭಾಷೆಗಳಲ್ಲಿ ಎಲ್ಲಾ ಶೈಲಿಗಳನ್ನು ತಿಳಿಸುತ್ತಾರೆ ಆದ್ದರಿಂದ ಈಗಿನ ಅವಸ್ಥೆಯನ್ನು ಪ್ರತಿಯೊಬ್ಬರೂ ಜೀವನದಲ್ಲಿ ಒಮ್ಮೆಯಾದರೂ ನೋಡಬೇಕಾದ ಬಳ್ಳಾರಿ ಜಿಲ್ಲೆಯ ಸಿರುಗುಪ್ಪ ತಾಲೂಕಿನ ಇಬ್ರಾಂಪುರ ರಸ್ತೆಯ ತಗ್ಗು ಗುಂಡಿಯಾಗಿದೆ.
ಸಿರುಗುಪ್ಪ ತಾಲೂಕಿನ ತಾಲೂಕು ನಗರ ವ್ಯಾಪ್ತಿಯಲ್ಲಿ ವಾಹನಗಳನ್ನು ಚಲಾಯಿಸ
ಬೇಕೆಂದರೆ ಗಟ್ಟಿ ಗುಂಡಿಗೆ ಇರಬೇಕು. ಅದರಲ್ಲಿ ರಾತ್ರಿ ಹೊತ್ತು ಸಂಚಾರ ಮಾಡಲು ನಿಮ್ಮ ಅದೃಷ್ಟ ಮತ್ತು ಆಯುಷ್ಯಗಳು ಅಷ್ಟೇ ಪೂರಕವಾಗಿರಬೇಕು ಇವೆರೆಡೂ ಇಲ್ಲದಿದ್ದರೆ ಮನೆ ಸೇರುವ ಮುಂಚೆ ಆಸ್ಪತ್ರೆ ಅಥವಾ ಶಿವನಪಾದ ಸೇರಬೇಕಾಗುತ್ತದೆ.
ಈ ರಸ್ತೆಯು ಸಂಪೂರ್ಣವಾಗಿ ತಗ್ಗು ಗುಂಡಿಗಳಿಂದ ಆವೃತವಾಗಿದೆ. ಹೆಜ್ಜೆ ಹೆಜ್ಜೆಗೂ ಆಳವಾದ ತಗ್ಗು ಗುಂಡಿಗಳನ್ನು ನೋಡಬಹುದು.
ಗುಂಡಿಯಲ್ಲಿ ರಸ್ತೆಯೋ..?
ರಸ್ತೆಯಲ್ಲಿ ಗುಂಡಿಯೋ…?
ಅನ್ನುವ ಪ್ರಶ್ನೆ ಸಹಜವಾಗಿ ಉದ್ಭವವಾಗುತ್ತದೆ
ಪ್ರತಿ ಬಾರಿಯೂ ಇಲ್ಲಿ ಕಳಪೆ ಕಾಮಗಾರಿ ರಸ್ತೆಯಲ್ಲಿ ಬೃಹತ್ ಗಾತ್ರದ ಗುಂಡಿಗಳು ಸ್ವಾಭಾವಿಕವಾಗಿ ನಿರ್ಮಾಣಗೊಂಡಿವೆ. ಈ ಗುಂಡಿಗಳು ಬಿದ್ದ ರಸ್ತೆಗಳಲ್ಲಿ ವಾಹನ ಸಂಚಾರವೇ ಕಷ್ಟವಾಗಿದೆ. ಇಲ್ಲಿ ಸಂಚರಿಸಲು ಜನರು ತಮ್ಮ ಜೀವವನ್ನು ಕೈಯಲ್ಲಿ ಹಿಡಿದು ಕೊಂಡು ಸಂಚರಿಸುತ್ತಿದ್ದಾರೆ.ರಾತ್ರಿ ಸಮಯದಲ್ಲಿ ಸವಾರರಿಗೆ ಜೀವಕ್ಕೆ ಆಪತ್ತು ಯಾವಾಗಲೂ ಕಾದಿರುತ್ತದೆ
ಅದರಲ್ಲಿ ಮಳೆಗಾಲದಲ್ಲಿ ಗುಂಡಿಗಳಲ್ಲಿ ನೀರು ತುಂಬಿ ಮಿನಿ ಸ್ವಿಮ್ಮಿಂಗ್ ಪೂಲ್ ತರಹ ಮಾರ್ಪಾಡು ಆಗಿ ವಾಹನ ಚಾಲಕರಿಗೆ ರಸ್ತೆ ಕಾಣದೇ ಅನೇಕ ಅನಾಹುತಗಳು ಸಂಭವಿಸಿವೆ ಮತ್ತು ಸಂಭವಿಸುತ್ತಿವೆ ಪ್ರತಿನಿತ್ಯವೂ ಯಾವುದೋ ಒಂದು ಅನಾಹುತ ಇಲ್ಲಿ ಸರ್ವೇ ಸಾಮಾನ್ಯ
ಈ ರಸ್ತೆಗಳು ಜನರಿಗೆ ಮೃತ್ಯುಕೂಪವಾಗಿ ಮಾರ್ಪಟ್ಟಿವೆ. ಇಲ್ಲಿನ ರಸ್ತೆಗಳಲ್ಲಿ ಅನೇಕ ಅವಘಡಗಳು ನಡೆದಿವೆ. ಇಂತಹ ಭೀಕರ ದುರಂತಗಳು ಸಂಭವಿಸಿದರೂ ಸಹ ಅಧಿಕಾರಿಗಳು ತಿರುಗಿಯೂ ನೋಡುತ್ತಿಲ್ಲ.
ರಸ್ತೆಯು ಅನೇಕ ವರ್ಷಗಳಿಂದ ಹೀಗೆ ಇದ್ದು ತಗ್ಗು ಗುಂಡಿಗಳ ಜೊತೆಗೆ ವಾಹನ ಚಾಲಕರಿಗೆ ಧೂಳಿನ ಸಮಸ್ಯೆ ಎದುರಾಗುತ್ತಿದೆ… ರಸ್ತೆ ಕಾಮಗಾರಿ ಸಂಪೂರ್ಣವಾಗಿ ಹದೆಗೆಟ್ಟಿದ್ದು ಇದು ರಾಜ್ಯದ 150 / ಎ ಸಂಖ್ಯೆಯ ರಾಜ್ಯ ಹೆದ್ದಾರಿಯಾಗಿದೆ
ಇಲ್ಲಿ ಪ್ರತಿದಿನ ಸಾವಿರಾರು ವಾಹನಗಳು ಸಂಚರಿಸುವ ಈ ರಸ್ತೆ ಪೂರ್ತಿಯಾಗಿ ಧೂಳಿನಿಂದ ಆವೃತವಾಗಿದೆ ಇದು ಸಿರುಗುಪ್ಪ ಅಲ್ಲ ಧೂಳುಗುಪ್ಪ ಅನ್ನುವುದು ಸಾರ್ವಜನಿಕರ ಅಪಹಾಸಕ್ಕೆ ಗುರಿಯಾಗಿದೆ ಇದರಿಂದ ತಾಲೂಕಿನ ಮಾನ ಹರಾಜು ಆಗುತ್ತಿದೆ ಆದರೂ ದಪ್ಪ ಚರ್ಮದ ಅಧಿಕಾರಿಗಳಿಗೆ ಕಿವಿ ಕಿವುಡು ಆಗಿರುವ ಜನಪ್ರತಿನಿಧಿಗಳಿಗೆ ಇವುಗಳು ಕಾಣುತ್ತಿಲ್ಲ ಮತ್ತು ಕೇಳುತ್ತಿಲ್ಲ
ಈ ರಸ್ತೆಯ ಧೂಳಿನಿಂದ ಸಣ್ಣ ವಾಹನ ಸವಾರರಿಗೆ ತುಂಬಾ ತೊಂದರೆ ಉಂಟಾಗುತ್ತಿದೆ. ಕಣ್ಣಿಗೆ ಧೂಳಿನ ಸಮಸ್ಯೆಯಿಂದ ರಸ್ತೆ ಕಾಣದೇ ಅನೇಕ ದುರಂತಗಳಾಗಿವೆ .
ಜನರು ಮುಖಕ್ಕೆ ಮಾಸ್ಕ್, ಕೈ ವಸ್ತ್ರ, ದುಪ್ಪಟ, ಹೆಲ್ಮೆಟ್, ಕನ್ನಡಕ ಇಂತಹ ಪರಿಕರಗಳನ್ನು ಬಳಸಿ ಸಂಚರಿಸುತ್ತಿದ್ದಾರೆ.
ಈ ಧೂಳಿನಿಂದ ಕಾಯಿಲೆಗಳು ಪುಕ್ಕಟೆಯಾಗಿ ಎಲ್ಲರಿಗೂ ಸಮಾನ ನ್ಯಾಯ ಎನ್ನುವಂತೆ ಸಿಗುತ್ತಿದ್ದು ಜನರ ಶ್ವಾಸಕೋಶಕ್ಕೆ, ಹೃದಯ ಸಂಬಂಧಿಸಿದ ಕಾಯಿಲೆಗಳು, ಕಣ್ಣಿಗೆ ಸಂಬಂಧಿಸಿದ ತೊಂದರೆಗಳು, ಕೆಮ್ಮು, ಶೀತ, ಹೀಗೆ ಹಲವಾರು ಸಾಂಕ್ರಾಮಿಕ ರೋಗಗಳು ಇಲ್ಲಿನ ಸವಾರರಿಗೆ ಬಳುವಳಿಯಾಗಿ ಸಿಗುತ್ತವೆ
ಈ ಧೂಳಿನಿಂದ ತಗ್ಗು ಗುಂಡಿಗಳಿಂದ ಸಂಚಾರ ದಟ್ಟಣೆ ಸಮಸ್ಯೆ ಹೆಚ್ಚಾಗಿದೆ. ಈ ಎಲ್ಲಾ ಸಮಸ್ಯೆ ಗಳನ್ನು ಗಮನಿಸಿದರೆ ಇಲ್ಲಿನ ಸವಾರರ ಗೋಳು ಎಷ್ಟರ ಮಟ್ಟಿಗೆ ಇದೆ ಎಂದು ಅರ್ಥ ಮಾಡಿಕೊಳ್ಳಬಹುದಾಗಿದೆ
ಈ ಸಿರುಗುಪ್ಪ ತಾಲೂಕಿನ ರಸ್ತೆ ಗುಂಡಿಗಳು ಜನರ ಪಾಲಿಗೆ ಯಮಕೂಪ
ವಾಗಿವೆ. ಭಯದ ವಾತಾವರಣ ಸೃಷ್ಟಿಯಾಗಿದೆ.
ದೊಡ್ಡ ಮಟ್ಟದ ಗುಂಡಿಗಳಿದ್ದರೂ ಅಧಿಕಾರಿಗಳು ಗಮನವಹಿಸುತ್ತಿಲ್ಲ.
ಈ ರಸ್ತೆ ಗುಂಡಿ ಮುಚ್ಚೋಕ್ಕೆ ಇನ್ನೆಷ್ಟು ಮಂದಿಯ ಬಲಿ ಬೇಕಾಗಿದೆ..? ಅಂತಾ ಕಾದು ಕುಳಿತ್ತಿದ್ದಾರಾ ಅಧಿಕಾರಿಗಳು ಎಂದು ಇಲ್ಲಿನ ಸಾರ್ವಜನಿಕರು ತಮ್ಮ ಆಕ್ರೋಶ ವ್ಯಕ್ತ ಪಡಿಸುತ್ತಿದ್ದಾರೆ
ಪ್ರತಿ ದಿನವೂ ಹಿಡಿಶಾಪವನ್ನು ಹಾಕುತ್ತಾ ಸಂಚರಿಸುತ್ತಿದ್ದಾರೆ.
ಹಳ್ಳಿಗಳಿಂದ ಶಾಲೆಗೆ, ಕಾಲೇಜುಗಳಿಗೆ, ತೆರುಳುವ ಮಕ್ಕಳ, ಶಿಕ್ಷಕರ ಗೋಳನ್ನು ಕೇಳುವವರಿಲ್ಲದಂತಾಗಿದೆ .
ಜನರು ಪ್ರತಿದಿನ ತಮ್ಮ ಕೆಲಸ ಕಾರ್ಯ ಗಳನ್ನೂ ನಿರ್ವಹಿಸಲು ಇದೇ ರಸ್ತೆ ಮಾರ್ಗದ ಮೂಲಕ ನಗರವನ್ನು ತಲುಪುವ ಅನಿವಾರ್ಯತೆ ಇದೆ.
ಇಂತಹ ರಸ್ತೆ ಮತ್ತು ಗುಂಡಿಗಳಿಂದ ತಾಲೂಕಿನ ಮಾನ ಹರಾಜು ಎಲ್ಲೆಡೆ ಆಗುತ್ತಿದೆ. ಆದ್ದರಿಂದ ತಾಲೂಕಿನ ಮಾನ ಕಾಪಾಡಲಿಕ್ಕಾದರೂ ಕನಿಷ್ಠ ಸೌಜನ್ಯತೆಯಿಂದ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳು ಈ ರಸ್ತೆ ಗುಂಡಿ ಮುಚ್ಚಿ ಉತ್ತಮ ಸಂಚಾರ ವ್ಯವಸ್ಥೆ ಮಾಡಿಕೊಡುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ
ವರದಿ: ಎಮ್ ಪವನ್ ಕುಮಾರ್