ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಮಹಾ ಶಿವಶಿವರಣೆ ಹೇಮರಡ್ಡಿ ಮಲ್ಲಮ್ಮ

ತ್ಯಾಗ, ಭಕ್ತಿ, ವಾತ್ಸಲ್ಯ, ಪ್ರೇಮ, ಸಹನಶೀಲತೆಯ ಪ್ರತೀಕವಾದ ಹೇಮರಡ್ಡಿ ಮಲ್ಲಮ್ಮ ನಮ್ಮೆಲ್ಲರಿಗೂ ಆದರ್ಶಪ್ರಾಯಳು. ಮೇ.೧೦ ರಂದು ಹೇಮರಡ್ಡಿ ಮಲ್ಲಮ್ಮನ ಜಯಂತಿಯನ್ನು ನಾಡಿನಾದ್ಯಂತ ಆಚರಿಸಲಾಗುತ್ತಿದೆ. ಆದರ್ಶ ಸೊಸೆಯ ಪ್ರತೀಕವಾದ ಮಲ್ಲಮ್ಮನ ಸಂಕ್ಷಿಪ್ತ ಪರಿಚಯ ಈ ಲೇಖನ.

ಭರತ ಭೂಮಿಯಲ್ಲಿ ಸಾಧು ಸಂತರು, ಸಿದ್ಧಿಪುರುಷರು, ತಪಸ್ವಿಗಳು ಅವತರಿಸಿ ಈ ನೆಲವನ್ನು ಪಾವನ ಕ್ಷೇತ್ರವನ್ನಾಗಿ ಮಾಡಿದ್ದಾರೆ. ಆಧ್ಯಾತ್ಮಿಕ ಕ್ಷೇತ್ರಕ್ಕೆ ಮಹಿಳೆಯರೂ ಹಿಂದೆ ಬಿದ್ದಿಲ್ಲ. ಅವರಲ್ಲಿ ಅಕ್ಕಮಹಾದೇವಿ, ನೆಲ್ಲೂರು ನಿಂಬೆಕ್ಕ, ಸಂಚಿ ಹೊನ್ನಮ್ಮನಂತಹ ಮಹಾಶಿವಪರಣೆಯರು ಆಗಿ ಹೋಗಿ ಇಲ್ಲಿಯ ಆಧ್ಯಾತ್ಮಿಕ ಕ್ಷೇತ್ರವನ್ನು ಶ್ರೀಮಂತಗೊಳಿಸಿದ್ದಾರೆ. ಅಂಥ ಮಹಾಮಹಿಮರಲ್ಲಿ ಶಿವಶರಣೆ ಹೇಮರಡ್ಡಿ ಮಲ್ಲಮ್ಮ ಒಬ್ಬಳು.
ಭಾರತೀಯ ಆಧ್ಯಾತ್ಮಿಕ ಇತಿಹಾಸದಲ್ಲಿ ಹೇಮರಡ್ಡಿ ಮಲ್ಲಮ್ಮಳಿಗೆ ವಿಶಿಷ್ಟ ಸ್ಥಾನವಿದೆ. ಶಿಶುನಾಳ ಶರೀಫರಂತಹ ಸಂತರು ಮಲ್ಲಮ್ಮನನ್ನು ‘ಸೊಸೆ ಇದ್ದರ ಇರಬೇಕು ಎಂಥಾಕಿ ಆ ಹೇಮರೆಡ್ಡಿ ಮಲ್ಲಮ್ಮನಂತಾಕಿ’ ಎಂದು ಹಾಡಿ ಹೊಗಳಿದ್ದಾರೆ. ಇದು ಮಲ್ಲಮ್ಮನ ಉದಾತ್ತ ವ್ಯಕ್ತಿತ್ವವನ್ನು ಸಂಕೇತಿಸುತ್ತದೆ.
ಹೇಮರಡ್ಡಿ ಹಾಗೂ ಪದ್ಮಾವತಿ ಇವರ ಸುಪುತ್ರ ಭರಮರಡ್ಡಿ ಈತನ ಸತಿಯೇ ಮಹಾಶಿವಶರಣೆ ಹೇಮರಡ್ಡಿ ಮಲ್ಲಮ್ಮ. ಶ್ರೀಶೈಲದ ದಕ್ಷಿಣಕ್ಕಿರುವ ವೆಲ್ಲೂರ ಜಿಲ್ಲೆಗೆ ಸೇರಿದ ರಾಮಾಪೂರ ಹೇಮರಡ್ಡಿ ಮಲ್ಲಮ್ಮನ ತವರೂರು. ಅಲ್ಲಿ ನಾಗರಡ್ಡಿ ಹಾಗೂ ಗೌರಮ್ಮ ದಂಪತಿಗಳ ಸುಪುತ್ರಿಯೆ ಮಲ್ಲಮ್ಮ. ಇವರು ಮಲ್ಲಿಕಾರ್ಜುನನ ಪರಮ ಭಕ್ತರಾಗಿದ್ದರು. ಹೀಗಾಗಿ ಮಲ್ಲಮ್ಮ ಬಾಲ್ಯದಲ್ಲಿಯೇ ಆಧ್ಯಾತ್ಮವನ್ನು ರೂಢಿಸಿಕೊಂಡು ಬೆಳೆದಿದ್ದಾಳೆ.
ಮಲ್ಲಮ್ಮ ಗಂಡನ ಮನೆಗೆ ಹೋಗುವಾಗ ತಂದೆ ಹೇಳಿದ ಮಾತು ಪ್ರತಿಯೊಬ್ಬ ಆದರ್ಶ ಹೆಣ್ಣು ಮಕ್ಕಳಿಗೂ ದಾರಿ ದೀಪದಂತಿದೆ. ಆತ ಹೇಳಿದ್ದು ಹೀಗೆ, ‘ಅತ್ತೆ, ಮಾವ, ಗಂಡನ ಸೇವೆ ಮಾಡು. ಅವರ ಸೇವೆಯಲ್ಲಿಯೇ ದೇವರನ್ನು ಕಾಣು’ ಎಂದು. ತಂದೆ ಹೇಳಿದ ನೀತಿಯ ಮಾತುಗಳನ್ನು ಮಲ್ಲಮ್ಮ ಜೀವನವಿಡಿ ಪಾಲಿಸಿಕೊಂಡು ಬಂದಳು. ಆದ್ದರಿಂದ ಮಲ್ಲಮ್ಮ ಆದರ್ಶ ಹೆಣ್ಣುಮಗಳಾಗಿ, ಆದರ್ಶ ಸೊಸೆಯಾಗಿ ನಮ್ಮೆಲ್ಲರ ಹೃದಯದಲ್ಲಿ ಶಾಶ್ವತ ಸ್ಥಾನ ಪಡೆದಿದ್ದಾಳೆ. ಅವಳ ನೈತಿಕಶಕ್ತಿ, ಆಧ್ಯಾತ್ಮಿಕ ಶಕ್ತಿ ಅವಳನ್ನು ದೇವತೆಯನ್ನಾಗಿಸಿತು.
ಬುದ್ದಿಮಾದ್ಯ ಗಂಡ, ಕಾಡುವ ಅತ್ತೆ-ನಾದಿನಿಯರ ಮಧ್ಯೆ ಕಷ್ಟದಲ್ಲಿ ಬದುಕಿದರೂ ತನ್ನ ಸಹನಶೀಲತೆಯನ್ನು ಕಳೆದುಕೊಳ್ಳದೇ ಶ್ರೀಶೈಲ ಮಲ್ಲಿಕಾರ್ಜುನನ್ನು ಅನನ್ಯ ಭಕ್ತಿಯಿಂದ ಪೂಜಿಸಿದ್ದು ಅವಳ ಧಾರ್ಮಿಕತೆಯನ್ನು ಎತ್ತಿ ತೋರಿಸುತ್ತದೆ. ಅತ್ತೆ ನಾದಿನಿಯರು ಹೊರಗೆ ಹಾಕಿ ಅಡವಿಗೆ ಅಟ್ಟಿದರೂ ಮಲ್ಲಮ್ಮ ದನಕಾಯುವ, ಸೆಗಣಿ ಹಿಡಿಯುವ ಕಾಯಕದಲ್ಲಿ ನಿಷ್ಠೆ ತೋರಿಸಿ, ತನ್ನ ನೋವು ನಲಿವುಗಳನ್ನು ದೇವರಿಗೆ ಅರ್ಪಿಸಿ ಸಮಚಿತ್ತದಿಂದ ಇದ್ದುದು ಆಧ್ಯಾತ್ಮಿಕ ಇತಿಹಾಸದಲ್ಲಿ ಅಚ್ಚಳಿಯದೆ ಉಳಿದ ಸಂಗತಿ.
ವಿನಮ್ರರಾದ ಜನರು ಲೋಕದ ವಾರಸುದಾರಿಕೆಯನ್ನು ಪಡೆಯುತ್ತಾರೆ ಎನ್ನುವ ಬೈಬಲ್ಲಿನ ವಾಣಿಯಂತೆ ವಿನಮ್ರತೆಯಿಂದ ಜನರ ಹೃದಯವನ್ನು ಮಲ್ಲಮ್ಮ ಗೆದ್ದಳು, ಅವಳು ಯಾವ ಪುರಾಣ, ಪುಣ್ಯ ಕಥೆ, ಶಾಸ್ತ್ರಗಳನ್ನು ಕೇಳಿದವಳಲ್ಲ. ಓದಿದವಳಲ್ಲ, ಯಾವ ಗ್ರಂಥಗಳನ್ನು ಬರೆಯಲಿಲ್ಲ ಆದರೂ ಮಲ್ಲಮ್ಮನ ಬಗ್ಗೆ ಸಾಕಷ್ಟು ಸಾಹಿತ್ಯ ರಚನೆಯಾಗಿದೆ. ಇದು ಮಲ್ಲಮ್ಮನ ಭಕ್ತಿಯಲ್ಲಿರುವ ಶಕ್ತಿ. ಮಲ್ಲಮ್ಮನ ಮುಗ್ಧತೆ, ಸರಳ ಜೀವನ, ಉದಾತ್ತ ವಿಚಾರ, ವಿದ್ವಾಂಸರನ್ನು ದಂಗುಬಡಿಸುವಂತಿದೆ. ಅವಳು ನಮಗೆ ಮಹಾಶಿವಶರಣೆಯಾಗಿ, ಆದರ್ಶಮಾತೆಯಾಗಿ ಕಂಡಿದ್ದಾಳೆ.
ಮಲ್ಲಮ್ಮ ೧೫ ನೇ ಶತಮಾನದಲ್ಲಿ ಆಗಿ ಹೋದ ಒಬ್ಬ ಶಿವಶರಣೆ, ನಮ್ಮ ಮತ್ತು ಮಲ್ಲಮ್ಮಳ ನಡುವೆ ಐದುನೂರು ವರ್ಷದ ಸುದೀರ್ಘ ಅಂತರವಿದೆ. ಆಧ್ಯಾತ್ಮಿಕ ಇತಿಹಾಸದಲ್ಲಿ ಮಲ್ಲಮ್ಮಳಿಗೆ ಸರಿಯಾದ ಪ್ರಚಾರ ಸಿಗದಿದ್ದರೂ ಐದನೂರು ವರ್ಷಗಳ ಸುದೀರ್ಘ ಅಂತರದ ಮಧ್ಯೆಯೂ ಮಲ್ಲಮ್ಮ ನಮ್ಮ ಹೃದಯದಲ್ಲಿ ನೆಲೆ ನಿಂತಿದ್ದಾಳೆ. ಅವಳು ಬದುಕಿನಲ್ಲಿ ಅನುಭವಿಸಿದ ಕಡುಕಪ್ಪಗಳ ಮಧ್ಯೆಯೂ ಆಧ್ಯಾತ್ಮಿಕ ಸಾಧನೆಯನ್ನು ಮಾಡಿ ತೋರಿಸಿದ್ದು. ಆಧ್ಯಾತ್ಮಿಕ ಕ್ಷೇತ್ರದ ಅಪರೂಪದ ಘಟನೆ ಎಂದು ಹೇಳಬಹುದು.
೧೮ನೇ ಶತಮಾನದ ನಂತರ ಇತ್ತೀಚೆಗೆ ಶ್ರೀಕಂಠ ಶಾಸ್ತ್ರಿಗಳು ಹೇಮರಡ್ಡಿ ಮಲ್ಲಮ್ಮಳ ನಾಟಕವನ್ನು ಬರೆದರು. ವೃತ್ತಿ ನಾಟಕ ತಂಡದವರು, ಹವ್ಯಾಸಿ ಕಲಾಕಾರರು ಮಲ್ಲಮ್ಮನ ನಾಟಕವನ್ನು ಅಲ್ಲಲ್ಲಿ ಆಡಿದ್ದು ಮಲ್ಲಮ್ಮನ ಮೇಲಿರುವ ಭಕ್ತಿಯನ್ನು ತೋರಿಸುತ್ತದೆ. ನಾಟಕ ಕಂಪನಿ ದಿವಾಳಿ ತೆಗೆಯುವ ಸ್ಥಿತಿಯಲ್ಲಿದ್ದಾಗ ಮಲ್ಲಮ್ಮನ ನಾಟಕ ಆಡಿದಾಗ ಕಂಪನಿಗಳು ಉತ್ತೇಜನಗೊಂಡವು ಎಂದು ಹೇಳಲಾಗುತ್ತಿದೆ. ಇದು ಮಲ್ಲಮ್ಮನಲ್ಲಿರುವ ಆಧ್ಯಾತ್ಮಿಕ ಶಕ್ತಿಗೆ ಸಾಕ್ಷಿ. ಇದರಿಂದ ಮಲ್ಲಮ್ಮನ ಬಗ್ಗೆ ಪ್ರಚಾರವೂ ಸಿಕ್ಕಿತು. ಜನಸಾಮಾನ್ಯರಲ್ಲಿ ಭಕ್ತಿಯನ್ನು ಹುಟ್ಟಿಸಲು ಇದು ಪ್ರೇರಕವಾಯಿತು.
ಮಲ್ಲಿಕಾರ್ಜುನನ ಶಾಪದಿಂದ ಅತ್ತೆ ನಾದಿನಿಯರಿಗೆ ಭವರೋಗಗಳು ಬಂದು ಹೊರಳಾಡುತ್ತಿದ್ದರೂ ಅವರ ತಪ್ಪನ್ನು ಮಲ್ಲಮ್ಮ ಮನ್ನಿಸಿದಳು. ಯಾರಿಂದ ಮಿತಿಮೀರಿದ ತೊಂದರೆಯಾಗಿತ್ತೊ ಮಲ್ಲಮ್ಮ ಅವರನ್ನೇ ಕ್ಷಮಿಸಿದಳು. ಮಲ್ಲಿಕಾರ್ಜುನನ್ನು ಬೇಡಿಕೊಂಡು ನಾದಿನಿಯರ ಭವರೋಗಗಳನ್ನು ವಾಸಿ ಮಾಡಿಸಿದ್ದು ಮಲ್ಲಮ್ಮಳ ಸಹನಶೀಲತೆ, ತ್ಯಾಗ ಹಾಗೂ ವಾತ್ಸಲ್ಯಕ್ಕೆ ಹಿಡಿದ ಕನ್ನಡಿ. ಇದು ಮಾನವ ಜನಾಂಗಕ್ಕೆ ತೋರಿದ ದಿವ್ಯ ದಾರಿಯಂತಿದೆ.
ಒಂದು ಸಲ ಮಲ್ಲಮ್ಮಳಿಗೆ ಮಾವ ಬಹಳ ದುಃಖದಿಂದ ಹೇಳುತ್ತಾನೆ. ನೀನು ದೇವತೆಯ ಸ್ವರೂಪ, ನಮ್ಮ ಮನೆಯವರು ನಿನ್ನನ್ನು ಹೀನಾಯವಾಗಿ ನಡೆಸಿಕೊಂಡರು. ನಾನು ಎಷ್ಟೇ ಹೇಳಿದರು ಕೇಳಲಿಲ್ಲ. ನನ್ನ ಮಾತು ಸ್ವಲ್ಪವೂ ನಡೆಯಲಿಲ್ಲ, ಕ್ಷಮಿಸು ತಾಯಿ ನನ್ನನ್ನು ಎಂದು ಹೇಳಿದಾಗ, ಮಲ್ಲಮ್ಮ ಹೇಳಿದಳಂತೆ ಅವರೆಲ್ಲಾ ನಮ್ಮ ಮನೆಯವರು, ಅದಕ್ಕೇಕೆ ಸಿಟ್ಟಾಗಬೇಕು. ಅವರು ಹಂಗ ಮಾಡ್ಯಾರಂತ ನನಗೆ ಗೋವು ಕಾಯುವ, ಅಡವಿಯಲ್ಲಿ ತಪಸ್ಸು ಮಾಡುವ ಅವಕಾಶ ಸಿಕ್ಕಿತು. ನಾನು ಆಧ್ಯಾತ್ಮಿಕ ಸಾಧನೆ ಮಾಡಿದೆ. ಇದರಿಂದ ಮಲ್ಲಿಕಾರ್ಜನನ ದರ್ಶನವಾಯಿತು. ಅವರೆಲ್ಲರೂ ನನ್ನನ್ನು ಸರಿಯಾಗಿ ನೋಡಿಕೊಂಡಿದ್ದರೆ ನನಗೆ ದೇವರ ದರ್ಶನ ಆಗುತ್ತಿತ್ತೆ? ಅದೆಲ್ಲ ಪ್ರಾರಬ್ಧ ಕರ್ಮ ಎಂದು ಹೇಳಿದಳಂತೆ. ಆ ನೋವುಗಳನ್ನು ನಾನು ಎಂದೂ ಮನಸ್ಸಿಗೆ ಹಚ್ಚಿಕೊಂಡಿಲ್ಲ ಎಂದಳಂತೆ. ಈ ಉದಾರತೆ ಮಲ್ಲಮ್ಮಳನ್ನು ದೇವತೆಯಾಗಿಸಿತು.
“ವೇಶ್ಯಾ ಸಂಗದಲ್ಲಿ ಹುಚ್ಚೆದ್ದು ತಿರುಗುತ್ತಿದ್ದ ಮೈದುನ ವೇಮಣ್ಣನನ್ನು, ಮಲ್ಲಮ್ಮ ಒಂದು ಕ್ಷಣದಲ್ಲಿ ಮಹಾಯೋಗಿಯನ್ನಾಗಿ, ಮಹಾ ಸಂತನನ್ನಾಗಿ ಪರಿವರ್ತಿಸಿದ್ದುದು ಮಲ್ಲಮ್ಮನ ಆಧ್ಯಾತ್ಮಿಕ ಶಕ್ತಿಗೆ ಹಿಡಿದ ಕನ್ನಡಿಯಾಗಿದೆ. ವೇಮನನು ಮಹಾಯೋಗಿಯಾಗಿ ಪರಿವರ್ತನೆಯಾಗಿದ್ದುದು ಭಾರತೀಯ ಆಧ್ಯಾತ್ಮಿಕ ಲೋಕದಲ್ಲಿ ಇದೊಂದು ಆಶ್ಚರ್ಯ ಹಾಗೂ ಅಪೂರ್ವ ಘಟನೆ ಎಂದು ಹೇಳಬಹುದು. ಇದಕ್ಕೆ ಮಲ್ಲಮ್ಮನ ಆಧ್ಯಾತ್ಮಿಕ ಶಕ್ತಿಯೇ ಕಾರಣ ಎಂದು ಬೇರೆ ಹೇಳಬೇಕಾಗಿಲ್ಲ.
ಸಂಸಾರದಲ್ಲಿದ್ದುಕೊಂಡು ಹಲವಾರು ಕಷ್ಟಗಳ ಮಧ್ಯೆ ಬದುಕಿ ಸದ್ಗತಿಯನ್ನು ಕಂಡ ಅತಿ ವಿರಳ ಶಿವಶರಣೆಯರಲ್ಲಿ ಹೇಮರಡ್ಡಿ ಮಲ್ಲಮ್ಮ ಒಬ್ಬಳು. ಒಂದು ಕುಟುಂಬದ ಏರು ಪೇರುಗಳನ್ನು ಸರಿಗೊಳಿಸಿ ಸುಂದರ ಸಮಾಜ ನಿರ್ಮಿಸುವಲ್ಲಿ ಮಲ್ಲಮ್ಮ ಹಾಕಿಕೊಟ್ಟ ಹಾದಿ ನಮಗೆ ಇಂದಿಗೂ ಆದರ್ಶಪ್ರಾಯವಾಗಿದೆ. ಅವರ ಆದರ್ಶ ಗುಣಗಳಾದ ತ್ಯಾಗ ಪ್ರೇಮ ಸಹನಶೀಲತೆ, ಕ್ಷಮಾಗುಣ ನಮಗೆಲ್ಲ ದಾರಿದೀಪ. ಅವಳ ಆಧ್ಯಾತ್ಮಿಕ ಬೆಳಕು ನಮ್ಮನ್ನು ಪಾವನರನ್ನಾಗಿ ಮಾಡಬಲ್ಲದು, ಅವುಗಳ ಅನುಕರಣೆಯೇ ನಮ್ಮ ಬದುಕಿನ ಆದರ್ಶಗಳಾಗಿವೆ. ಅವಳು ನೀಡಿದ ದಿವ್ಯ ಬೆಳಕಿನಲ್ಲಿ ಸಾಗಿ ನಾವೆಲ್ಲಾ ಪುನೀತರಾಗಬೇಕಾಗಿದೆ.

  • ಎಸ್.ಎಸ್.ಹಳ್ಳೂರ, ಸಾಹಿತಿಗಳು,
    ನವನಗರ ಬಾಗಲಕೋಟೆ. ಮೊ 7022243709
ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ