ರಾಜ್ಯದಲ್ಲಿನ 40 ರಿಂದ 45 ಲಕ್ಷ ಅನಧಿಕೃತ ಆಸ್ತಿಗಳಿಗೆ ದುಪ್ಪಟ್ಟು ತೆರಿಗೆ ಪಾವತಿಸಿಕೊಂಡು ಒಂದು ಬಾರಿ ಬಿ ಖಾತೆ ನೀಡುವ ಮಹತ್ವದ ಯೋಜನೆ ಸರಕಾರದ ಬೊಕ್ಕಸಕ್ಕಿಂತ ಇವರ ಜೇಬು ಹೆಚ್ಚು ತುಂಬಿ ಕೊಳ್ಳುತ್ತಿದ್ದಾರೆ.
ಕರ್ನಾಟಕ ಸರಕಾರ ಬಿ ಖಾತೆಗೆ ಮೂರು ತಿಂಗಳು ಫೆಬ್ರವರಿ 10 ರಿಂದ ಮೇ 10 ರ ವರೆಗೆ ಗಡುವು ನೀಡಿತ್ತು, ಈಗ ಮೇ 10 ರ ಗಡುವು ಮುಕ್ತಾಯಗೊಂಡ ಮೇಲೆ ಅಧಿಕೃತವಾಗಿ ಕರ್ನಾಟಕದ ಮಹಾನಗರಪಾಲಿಕೆಗಳು ಮತ್ತು ನಗರ ಸ್ಥಳೀಯ ಸಂಸ್ಥೆಗಳಲ್ಲಿನ ಅನಧಿಕೃತ ಕಟ್ಟಡಗಳಿಗೆ ಬಿ-ಖಾತಾ ನೀಡುವ ಅವಧಿಯನ್ನು ಸರ್ಕಾರವು ಮತ್ತೆ ಮೂರು ತಿಂಗಳವರೆಗೆ ವಿಸ್ತರಿಸಿದೆ. ಸಾರ್ವಜನಿಕರಿಗೆ ಅನುಕೂಲವಾಗುವಂತೆ ಈ ನಿರ್ಧಾರ ಕೈಗೊಳ್ಳಲಾಗಿದ್ದು, ಜಿಪಿಎ ಮತ್ತು ಅಗ್ರಿಮೆಂಟ್ದಾರರಿಗೂ ಬಿ-ಖಾತಾ ನೀಡುವ ಬಗ್ಗೆ ಚಿಂತನೆ ನಡೆಸಲಾಗುತ್ತಿದೆ. ಈ ಹಿಂದೆ ನೀಡಲಾದ ಅವಕಾಶದಲ್ಲಿ ಸುಮಾರು 2 ಲಕ್ಷ ಆಸ್ತಿಗಳಿಗೆ ಬಿ-ಖಾತೆ ವಿತರಿಸಲಾಗಿದೆ.
ಸರಕಾರ ಕೊಟ್ಟಿರುವ ಆದೇಶದ ಅನ್ವಯ ಬಡ, ಮಧ್ಯಮ ವರ್ಗದವರಿಗೆ ಹೆಚ್ಚಿನ ಅನುಕೂಲವಾಗುವಂತಿದೆ, ಅಧಿಕಾರಿಗಳು ಮುಗ್ಧ ಜನರ ಹತ್ತಿರ ಬಿ ಖಾತೆ ಮಾಡಿಕೊಡಲು ನಾನಾ ಕಾರಣ ಕೊಟ್ಟು ಜನರನ್ನು ಗೊಂದಲಕ್ಕೆ ಗುರಿ ಮಾಡಿ ಹೆಚ್ಚು ಹಣ ವಸೂಲಿ ಮಾಡುತ್ತಿದ್ದಾರೆ.
ಸರಕಾರದ ಸೂಚನೆಯಂತೆ 1992 ರ ನಂತರ ಭೂ ಪರಿವರ್ತನೆಯಾಗಿ ಸಕ್ಷಮ ಪ್ರಾಧಿಕಾರದಿಂದ ಅನುಮೋದನೆ ಪಡೆದಿರುವ ಆಸ್ತಿಗಳು, ರಿಜಿಸ್ಟರ್ ಆಗಿರುವ ರೆವಿನ್ಯೂ ನಿವೇಶನಗಳು, ಸಕ್ಷಮ ಪ್ರಾಧಿಕಾರಗಳಿಂದ ಲೈಸೆನ್ಸ್ ಪಡೆಯದೆ ನಿರ್ಮಿಸಿಕೊಂಡಿರುವ ಆಸ್ತಿಗಳು, 2024 ರ ಸೆಪ್ಟೆಂಬರ್ 25 ರ ಹಿಂದಿನ ನೋಂದಣಿಯಾಗಿರುವ ಆಸ್ತಿಗಳು ಬಿ ಖಾತೆ ಪಡೆಯಲು ಅರ್ಹ ವಾಗಿವೆ, ಈಗಾಗಲೇ ಸಾಕಷ್ಟು ಅರ್ಜಿಗಳ ಸ್ವೀಕೃತಗೊಂಡಿವೆ.
ರಾಜ್ಯ ಸರಕಾರದಿಂದ ನಗರ ಪ್ರದೇಶ ವ್ಯಾಪ್ತಿಯಲ್ಲಿ ಅನಧಿಕೃತ ಸ್ವಯಂ ಆಸ್ತಿಗಳಿಗೆ ಬಿ-ಖಾತಾ ಪಡೆಯಲು ಅವಕಾಶ ನೀಡಿದರೆ, ನಗರ ವ್ಯಾಪ್ತಿಯಲ್ಲಿ ನೋಂದಣಿಗೆ ತೆರಿಗೆ ಪಾವತಿಯೊಂದಿಗೆ ಪ್ರತ್ಯೇಕವಾಗಿ ಹಣ ನೀಡಿದರೆ ಮಾತ್ರ ಸುಲಭವಾಗಿ ನೋಂದಣಿ ಕಾರ್ಯ ಆಗಲಿದೆ ಎಂಬ ಆರೋಪಗಳು ಸಾರ್ವಜನಿಕ ವಲಯದಿಂದ ಕೇಳಿ ಬರುತ್ತಿವೆ.
ನೋಂದಣಿಗೆ ಬರುವ ಜನ ಹೆಚ್ಚುವರಿಯಾಗಿ ಹಣ ನೀಡುವ ಪರಿಸ್ಥಿತಿ ನಿರ್ಮಾಣವಾಗಿದ್ದು, ಹಣ ನೀಡಿದರೆ ಮಾತ್ರ ಕಾರ್ಯ ಸುಲಭ ಎಂಬ ಅನಿವಾರ್ಯತೆ ಎದುರಾಗಿದೆ ಎನ್ನುತ್ತಾರೆ ಜನ.
ಗಮನಿಸಬೇಕಾದ ವಿಷಯಗಳು
ನಿರ್ದಿಷ್ಟ ಆಸ್ತಿಯ ಅಥವಾ ಕಟ್ಟಡದ ಕನ್ವರ್ಷನ್ ಪ್ರಕ್ರಿಯೆಯಲ್ಲಿ, ನಿರ್ಮಾಣದಲ್ಲಿ ಅಥವಾ ಇತರ ಯಾವುದೇ ಪ್ರಕ್ರಿಯೆಯಲ್ಲಿ ನಿಯಮಗಳ ಉಲ್ಲಂಘನೆಯಾಗಿದ್ದರೆ ಬಿ ಖಾತಾ ನೀಡಲಾಗುತ್ತದೆ. ಸರಳವಾಗಿ ಹೇಳುವುದಾದರೆ, ನಾಗರಿಕ ಶುಲ್ಕಗಳು ಮತ್ತು ತೆರಿಗೆಗಳ ಪಾವತಿಯ ಹೊರತಾಗಿಯೂ ಸಂಪೂರ್ಣವಾಗಿ ಕಾನೂನುಬದ್ಧವಲ್ಲದ ಆಸ್ತಿಯೇ ಬಿ ಖಾತಾ.
2014 ರ ಡಿಸೆಂಬರ್ನಲ್ಲಿ ಕರ್ನಾಟಕ ಹೈಕೋರ್ಟ್ ನೀಡಿದ ತೀರ್ಪಿನ ಪ್ರಕಾರ, ಬಿ ಖಾತಾ ಆಸ್ತಿಗಳಿಗೆ ಸಂಪೂರ್ಣವಾದ ಕಾನೂನು ಮಾನ್ಯತೆ ಇಲ್ಲ. ಹಾಗೆಂದು ಅವುಗಳಿಗೂ ತೆರಿಗೆಗಳು ಅಥವಾ ನಾಗರಿಕ ಶುಲ್ಕಗಳ ಪಾವತಿ ಮಾಡಬೇಕಾಗುತ್ತದೆ. ಹೀಗೆ ಪಾವತಿಸುವುದರಿಂದ ಬಿ ಖಾತಾ ಆಸ್ತಿಯನ್ನು ಕಾನೂನುಬದ್ಧಗೊಳಿಸಿದಂತೆ ಆಗುವುದಿಲ್ಲ ಎಂಬುದನ್ನು ಗಮನಿಸಬೇಕಿದೆ.
ಕರ್ನಾಟಕ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದ, ಕಳೆದ ಎರಡು ವರ್ಷಗಳಲ್ಲಿ ವಿದ್ಯುತ್, ವಾಹನ ನೋಂದಣಿ ಶುಲ್ಕದಲ್ಲಿ ಹೆಚ್ಚಳ, ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ಮಾರಾಟ ತೆರಿಗೆ, ಹಾಗೆಯೇ ಮೆಟ್ರೋ ದರಗಳಲ್ಲಿ ಇತ್ತೀಚಿನ ಹೆಚ್ಚಳ, ಬಸ್ ದರಗಳು, ಕಸ ಸಂಗ್ರಹ ಶುಲ್ಕಗಳು ಮತ್ತು ವಿದ್ಯುತ್ ಸುಂಕಗಳು ಸೇರಿದಂತೆ ಹಲವಾರು ದರ ಮತ್ತು ತೆರಿಗೆ ಹೆಚ್ಚಳ ಮಾಡಿದ್ದು ಇನ್ನೂ ಯಾವ ತೆರಿಗೆ ಹೆಚ್ಚಗುತ್ತೇ ಅನ್ನೋ ಭಯದಲ್ಲಿರುವ ಸಮಯದಲ್ಲಿ ಕರ್ನಾಟಕದಾದ್ಯಂತ ಬಿ ಖಾತೆ ಹೆಸರಿನಲ್ಲಿ ಸರಕಾರಕ್ಕೆ ದುಪ್ಪಟ್ಟು ತೆರಿಗೆ ಕಟ್ಟಿಸಿಕೊಂಡು ಹಾಗೆ ತಮ್ಮ ಜೇಬು ತುಂಬಿ ಕೊಳ್ಳುತ್ತಿರುವ ಅಧಿಕಾರಿಗಳು ಅವರಿಗೆ ಸಾಥ್ ನೀಡುತ್ತೀರುವ ಚುನಾಯಿತ ಸದಸ್ಯರು, ಮದ್ಯವರ್ತಿಗಳು ಜನರ ಸಮಸ್ಯೆ ಗಳಿಗೆ ಇನ್ನಷ್ಟು ಹೊರೆ ಆಗಿದ್ದಂತೂ ನಿಜ.
ಸಾರ್ವಜನಿಕರ ವಲಯದಲ್ಲಿ ಒಂದು ಖಾತಾ ಮಾಡಿಸಲು ಈಗಾಗಲೇ ಸರಕಾರಕ್ಕೆ ತೆರಿಗೆ ರೂಪದಲ್ಲಿ ಹಣ ಪಾವತಿ ಮಾಡಿದ ಮೇಲೂ ಅಧಿಕಾರಿಗಳಿಗೆ ಅವರು ಕೇಳಿದಷ್ಟು ಹಣ ನೀಡಲಾಗಿತ್ತಿದೆ ಎಂದು ಅಲ್ಲಲ್ಲಿ ಮಾತು ಜೋರಾಗಿ ಕೇಳಿ ಬರುತ್ತಿದೆ.
ಇದಕ್ಕೆ ಕಡಿವಾಣ ಹಾಕುವದು ಬೆಕ್ಕಿನ ಕೊರಳಿಗೆ ಗಂಟೆ ಕಟ್ಟುವದು ಒಂದೇ ಅನ್ನುವ ಹಾಗಾಗಿದೆ, ಡಿ ಗ್ರೂಪ್ ನೌಕರರಿಂದ ಹಿಡಿದು, ಸದಸ್ಯರು, ಅಧಿಕಾರಿಗಳು, ಎಲ್ಲರೂ ಲಂಚಕ್ಕೆ ಮಾರು ಹೋಗಿರುವಾಗ ಸಾಮಾನ್ಯರು ಈ ಕುರಿತಾಗಿ ಎಲ್ಲೂ ಹೇಳದ ಪರಿಸ್ಥಿತಿ ಎದುರಾಗಿದೆ.
ವರದಿ: ಜಗದೀಶ್ ಕುಮಾರ್ ಭೂಮಾ
