ಇರುವುದೆಲ್ಲವನ್ನೂ ಅನುಭವಿಸದೆ, ಇರದೆ ಇರುವುದರ ಕುರಿತು ಹಲುಬುವ, ತಾನು ಬಯಸಿದ್ದು ತನಗೆ ಬೇಕೇ ಬೇಕೆಂದು ಹಪಹಪಿಸುವ ಜನರ ನಡುವೆ ಸಕಲಾಂಗಗಳಿದ್ದೂ ವಿಕಲಾಂಗರಂತೆ ಬದುಕುವ ನೂರಾರು, ಸಾವಿರಾರು ಜನರ ನಡುವೆ, ತನ್ನವರು ಎಂಬ ಯಾರೂ ಇಲ್ಲದೆ ಇದ್ದರೂ ದೈಹಿಕವಾಗಿ ಗಟ್ಟಿಮುಟ್ಟಾಗಿದ್ದರೂ ಕಣ್ಣು ಕಾಣದ ಅಂಧಳಾಗಿ ತನ್ನ ವೈಯುಕ್ತಿಕ ಕೆಲಸಗಳನ್ನು ತಾನೇ ನಿರ್ವಹಿಸುತ್ತಾ ಬದುಕನ್ನು ಸಾಗಿಸುತ್ತಿರುವ ಮಹಿಳೆಯೇ ನಮ್ಮ ಇಂದಿನ ಕಥಾ ನಾಯಕಿ ಶೋಭಾ ಮಲ್ಲಾಡದ್.
ಹುಟ್ಟಿದ ಹತ್ತು ವರ್ಷಗಳವರೆಗೆ ಸಾಮಾನ್ಯ ಬಾಲಕಿಯರಂತೆ ಬೆಳೆದ ಆಕೆಗೆ ಹತ್ತನೇ ವಯಸ್ಸಿನ ಸುಮಾರಿಗೆ ಆಕೆಯ ಪಾಲಕರ ಸಂಬಂಧಿಗಳ ದ್ವೇಷಕ್ಕೆ ಬಲಿಯಾಗಿ ಕಣ್ಣುಗಳನ್ನು ಕಳೆದುಕೊಂಡಳು. ಕೊಬ್ಬರಿ ಎಣ್ಣೆಯಲ್ಲಿ ಯಾವುದೋ ಎಲೆಯ ರಸವನ್ನು ಹಾಕಿ ತಲೆಯ ಕೂದಲಿಗೆ ಹಚ್ಚಿದ ಪರಿಣಾಮವಾಗಿ ಆ ರಸ ಕಣ್ಣೊಳಗೆ ಹೋಗಿ ಆಕೆಯ ಕಣ್ಣುಗಳ ದೃಷ್ಟಿ ಇಂಗಿ ಹೋಯಿತು ಎಂದು ಆಕೆ ಹೇಳುತ್ತಾಳೆ.
ಇಷ್ಟರಲ್ಲೇ ಆಕೆಯ ಮದುವೆಯನ್ನು ಪಕ್ಕದ ಪಟ್ಟಣದ ಯುವಕನೊಂದಿಗೆ ಮಾಡಲಾಗಿತ್ತು. 12ನೇ ವರ್ಷಕ್ಕೆ ಋತುಮತಿಯಾದ ಆಕೆಯನ್ನು ಮುಂದಿನ ಶುಭ ದಿನದಲ್ಲಿ ಗಂಡನ ಮನೆಗೆ ಕಳುಹಿಸಿಕೊಡಲಾಯಿತು.
ಈಗಾಗಲೇ ಎರಡು ಕಣ್ಣುಗಳನ್ನು ಕಳೆದುಕೊಂಡು ತನ್ನ ಪಾಡಿಗೆ ಮನೆಯ ಎಲ್ಲಾ ಕೆಲಸ ಕಾರ್ಯಗಳನ್ನು ಆಕೆ ನಿರ್ವಹಿಸಿಕೊಂಡು ಹೋಗುತ್ತಿದ್ದಳಾದರೂ ಆಕೆಯನ್ನು ಸೊಸೆ ಎಂದು ಒಪ್ಪಿಕೊಳ್ಳಲು ಆಕೆಯ ಅತ್ತೆ ಮಾವರಾಗಲಿ, ಹೆಂಡತಿ ಎಂದು ಒಪ್ಪಿಕೊಳ್ಳಲು ಗಂಡನಾಗಲಿ ತಯಾರಾಗಲಿಲ್ಲ. ಮುಂದೆ ಒಂದೆರಡು ವಾರಗಳಲ್ಲಿ ಆಕೆಯನ್ನು ತವರಿಗೆ ವಾಪಸ್ಸು ಕಳುಹಿಸಿಬಿಟ್ಟರು ಆಕೆಯ ಅತ್ತೆ ಮಾವ.
ತಮ್ಮ ಒಬ್ಬಳೇ ಮಗಳ ಬಾಳು ಹೀಗೆ ಹಾಳಾದುದನ್ನು ಕಂಡು ವ್ಯಸನಕ್ಕೆ ಈಡಾದ ತಂದೆ ತಾಯಿಗಳು ಕೊರಗಿ ಮುಂದಿನ ಕೆಲವೇ ವರ್ಷಗಳಲ್ಲಿ ಮರಣ ಹೊಂದಿದರು. ನಂತರ ಹಲವಾರು ವರ್ಷಗಳ ಕಾಲ ಆಕೆಯನ್ನು ತನ್ನ ಮನೆಯಲ್ಲಿಯೇ ಇಟ್ಟುಕೊಂಡು ಜೋಪಾನ ಮಾಡಿದ್ದು ಆಕೆಯ ದೊಡ್ಡಮ್ಮ. ಕೆಲವು ವರ್ಷಗಳ ಹಿಂದೆ ಆಕೆಯ ದೊಡ್ಡಮ್ಮನೂ ತೀರಿ ಹೋದಾಗ ಅಕ್ಷರಶಃ ಒಂಟಿಯಾದಳಾಕೆ.
ಅನಿವಾರ್ಯವಾಗಿ ಆಕೆಯ ಸೋದರ ಮಾವ ಮತ್ತು ಆತನ ಪತ್ನಿ ಆಕೆಯನ್ನು ಜೋಪಾನ ಮಾಡಿದರಾದರೂ ಎಲ್ಲಿಯವರೆಗೆ ಹೀಗೆ ಆಕೆಯನ್ನು ನೋಡಿಕೊಳ್ಳುವುದು ಎಂದು ಬೇಸತ್ತ ಸೋದರ ಮಾವನ ಪತ್ನಿ ತನ್ನ ಪತಿಯನ್ನು ಕರೆದುಕೊಂಡು ತನ್ನ ತವರೂರಿಗೆ ವಲಸೆ ಹೋದಳು… ಇದೀಗ ಮೊತ್ತ ಮೊದಲ ಬಾರಿಗೆ ನೀರಿನಿಂದ ಹೊರ ಬಿದ್ದ ಮೀನಿನಂತಾದಳು ಆಕೆ.
ಆದರೆ ಬದುಕಿನ ಬಂಡಿ ಸಾಗಲೇಬೇಕಲ್ಲ!
ಸೋದರಮಾವ ಬಿಟ್ಟು ಹೋದ ಪುಟ್ಟ ಮನೆಯಲ್ಲಿ ತಾನೊಬ್ಬಳೆ ಇದ್ದು ಇಡೀ ಮನೆಯ ಕಸ ಗುಡಿಸುವ, ಸುಣ್ಣ ಸಾರಿಸುವ, ಪಾತ್ರೆ ತಿಕ್ಕುವ, ಬಟ್ಟೆ ಒಗೆಯುವ
ಅಡುಗೆ ಮಾಡಿಕೊಳ್ಳುವ ಆಕೆ ರೊಟ್ಟಿ ತಟ್ಟುವುದನ್ನು ಕೂಡಾ ಕಲಿತಿದ್ದಳು. ತನ್ನ ಮನೆ ಮತ್ತು ಹಿತ್ತಲುಗಳಿಗೆ ಸರಾಗವಾಗಿ ಒಬ್ಬಳೇ ಓಡಾಡುತ್ತಿದ್ದ ಆಕೆಗೆ ಹೊಲಕ್ಕೆ ಹೋಗಲು ಮಾತ್ರ ಯಾರಾದರೂ ಜೊತೆ ಬೇಕಾಗುತ್ತಿತ್ತು.
ಒಂದೊಮ್ಮೆ ಹೊಲಕ್ಕೆ ಕರೆದೊಯ್ದು ಆಕೆಯನ್ನು ಬಿಟ್ಟರೆ ಉಳಿದೆಲ್ಲ ಕೂಲಿ ಹೆಣ್ಣುಮಕ್ಕಳಂತೆ ಆಕೆಯೂ ಕೂಡಾ ಬೀಜ ಬಿತ್ತುವ, ಗದ್ದೆಯಲ್ಲಿ ಸಸಿ ನೆಡುವ, ಕಳೆ ಕೀಳುವ, ರಾಶಿ ಮಾಡುವ ಎಲ್ಲ ರೈತಾಪಿ ಕೆಲಸಗಳಲ್ಲಿ ತನ್ನನ್ನು ತಾನು ತೊಡಗಿಸಿಕೊಂಡು ಕೆಲಸ ನಿರ್ವಹಿಸುವ ಶೋಭಾ ಆರ್ಥಿಕವಾಗಿ ಪರಾವಲಂಬಿಯಾಗಿಲ್ಲ.
ಕೂಲಿ ಮಾಡಿ ತನ್ನ ಬದುಕಿನ ಬಂಡಿಯನ್ನು ಎಳೆಯುತ್ತಿರುವ ಶೋಭಾಗೆ ಆಕೆಯ ಊರಿನ ಸಮಸ್ತ ಜನರ ಸಹಾಯ ಸಹಕಾರಗಳು ದೊರೆಯುತ್ತಿದೆ ಎಂಬುದು ಸಮಾಧಾನದ ವಿಷಯ.
ಪ್ರಸ್ತುತ ಗದಗ ಜಿಲ್ಲೆಯ ಮುಂಡರಗಿ ತಾಲೂಕಿನ ಹೆಸರೂರು ಗ್ರಾಮದಲ್ಲಿ ವಾಸವಾಗಿರುವ ಶೋಭಾ ಮಲ್ಲಾಡದ ಬದುಕು ಅನುಕರಣೀಯವಾದುದು.
ಇನ್ನು ನಮ್ಮ ಗ್ರಾಮೀಣ ಪ್ರದೇಶಗಳಲ್ಲಿ ಇಂತಹ ನೂರಾರು ಹೆಣ್ಣು ಮಕ್ಕಳು ದೈಹಿಕ ಅಂಗಗಳ ನ್ಯೂನತೆಯನ್ನು ಹೊಂದಿದ್ದರೂ ಕೂಡ ಮಾನಸಿಕವಾಗಿ ಬಲಿಷ್ಠರು ಎಂಬುದಕ್ಕೆ ಸಾಕ್ಷಿಯಾಗಿ ಶೋಭಾ ಮಲ್ಲಾಡದ ನಮ್ಮ ಮುಂದೆ ಇದ್ದಾರೆ.
ಇತ್ತೀಚೆಗೆ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು ಆಚರಿಸಿದ ಮುಂಡರಗಿ ತಾಲೂಕ ಕದಳಿ ಮಹಿಳಾ ವೇದಿಕೆ ಮತ್ತು ವೀರಭದ್ರೇಶ್ವರ ಮಹಿಳಾ ಘಟಕಗಳು ಶೋಭಾ ಮಲ್ಲಾಡದವರನ್ನು
ಕರೆಸಿ ಸನ್ಮಾನಿಸಿದ್ದು ಆಕೆಗೆ ಸಂತಸವನ್ನು ಉಂಟುಮಾಡಿದೆ.
ಆಕೆಯನ್ನು ಮಾತನಾಡಿಸಿದಾಗ ತನ್ನೆಲ್ಲಾ ಕಥೆಯನ್ನು ಹೇಳಿಕೊಂಡ ಆಕೆ ತನ್ನವರೆನ್ನುವ ಯಾರೂ ಇಲ್ಲ ಎಂಬ ನೋವನ್ನು ತೋಡಿಕೊಂಡಳಾದರೂ ತನ್ನೂರಿನ ಜನರ ಪ್ರೀತಿ ಸಹಕಾರಗಳನ್ನು ಧನ್ಯತೆಯಿಂದ ನೆನೆದಳು..
ಕೈಕಾಲು ಗಟ್ಟಿ ಇರುವವರೆಗೂ ನಾನು ಬದುಕಬಲ್ಲೆ ಆದರೆ ಪರಾಧೀನಳಾಗುವ ಹೊತ್ತಿಗೆ ದೇವರು ನನ್ನನ್ನು ಕರೆದುಕೊಳ್ಳಲಿ ಎಂದು ಆಶಿಸುವ ಆಕೆ ಸಣ್ಣಪುಟ್ಟದಕ್ಕೂ ದೇವರನ್ನು, ಸಮಾಜವನ್ನು, ಹೆತ್ತವರನ್ನು ಮತ್ತು ವ್ಯವಸ್ಥೆಯನ್ನು ದೂಷಿಸುವ ಇಂದಿನ ಸಾಮಾಜಿಕ ಮನಸ್ಥಿತಿಯ ಜನರ ನಡುವೆ ಅಂಧೆಯಾಗಿಯೂ ಬದುಕನ್ನು ಅದು ಇರುವ ರೀತಿಯಲ್ಲಿಯೇ ಸ್ವೀಕರಿಸಿ ಇಂದಿನ ಯುವ ಜನಾಂಗಕ್ಕೆ ಮಾರ್ಗದರ್ಶಿಯಾಗಿದ್ದಾಳೆ.
- ವೀಣಾ ಹೇಮಂತ್ ಗೌಡ ಪಾಟೀಲ್, ಮುಂಡರಗಿ ಗದಗ
