ಬೆಂಗಳೂರು: ಐಪಿಎಲ್ ಸೀಸನ್ 18ರಲ್ಲಿ ಆರ್ ಸಿಬಿ ಮೊದಲ ಬಾರಿಗೆ ಚಾಂಪಿಯನ್ ಆಗಿದ್ದು, ಇದೇ ಖುಷಿಯಲ್ಲಿ ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಸಂಭ್ರಮಾಚರಣೆ ಆಯೋಜನೆ ಮಾಡಲಾಗಿತ್ತು. ಆ ವೇಳೆ ಕಾಲ್ತುಳಿತ ಸಂಭವಿಸಿ 11 ಜನ ಜೀವ ಕಳೆದುಕೊಂಡಿದ್ದಾರೆ. ಈ ಪ್ರಕರಣವನ್ನು ರಾಜ್ಯ ಸರ್ಕಾರ ಗಂಭೀರವಾಗಿ ಪರಿಗಣಿಸಿದ್ದು, ಆರ್ ಸಿಬಿ ಮ್ಯಾನೇಜ್ ಮೆಂಟ್, ಕೆಎಸ್ ಸಿಎ ಪೊಲೀಸ್ ಅಧಿಕಾರಿಗಳನ್ನು ತಲೆದಂಡ ಮಾಡಿದೆ. ಇದರ ಬೆನ್ನಲ್ಲೇ ಇದೀಗ ವಿರಾಟ್ ಕೊಹ್ಲಿ ವಿರುದ್ಧವೂ ಸಹ ಎಫ್ಐಆರ್ ದಾಖಲಿಸುವಂತೆ ಕೂಗು ಕೇಳಿಬಂದಿದೆ.
ವಿರಾಟ್ ಕೊಹ್ಲಿ ವಿರುದ್ದವೂ ಕೂಡಾ ಎಫ್ಐಆರ್ ದಾಖಲಿಸುವಂತೆ ನೈಜ ಹೋರಾಟಗಾರರ ವೇದಿಕೆ ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಗೆ ದೂರು ನೀಡಲು ಆಗಮಿಸಿದೆ. ಆದ್ರೆ, ಕಬ್ಬನ್ ಪಾರ್ಕ್ ಪೊಲೀಸರು ದೂರು ಪಡೆಯಲು ಹಿಂದೇಟು ಹಾಕಿದ್ದರು.
ಕೊನೆಗೂ ದೂರು ಸ್ವೀಕರಿಸಿದ ಪೊಲೀಸರು
ಹಲವು ಗಂಟೆಗಳ ಬಳಿಕ ಕೊನೆಗೂ ವಿರಾಟ್ ಕೊಹ್ಲಿ ವಿರುದ್ಧ ದೂರು ದಾಖಲಿಸಿಕೊಂಡಿದ್ದಾರೆ. ನೈಜ ಹೋರಾಟಗಾರರ ವೇದಿಕೆಯ ಎಚ್ ಎಂ ವೆಂಕಟೇಶ್ ಅವರಿಂದ ದೂರು ಸ್ವೀಕರಿಸಿದ್ದು, ಎಫ್ ಐ ಆರ್ ಜೊತೆಗೆ ಕೊಹ್ಲಿ ವಿರುದ್ಧದ ದೂರನ್ನು ಪರಿಗಣಿಸುವುದಾಗಿ ಕಬ್ಬನ್ ಪಾರ್ಕ್ ಪೊಲೀಸರು ಹಿಂಬರಹ ನೀಡಿದ್ದಾರೆ.
ವರದಿ : ಜಿಲನಸಾಬ್ ಬಡಿಗೇರ್
