ಬಳ್ಳಾರಿ: ಕಂಪ್ಲಿ ತಾಲ್ಲೂಕಿನ ಎಮ್ಮಿಗನೂರು ಗ್ರಾಮ ಪಂಚಾಯತಿ ವ್ಯಾಪ್ತಿಯ ಬಳ್ಳಾಪುರ ಗ್ರಾಮದಲ್ಲಿ ಹಿಂದೂ ಮುಸ್ಲಿಂ ಸಮುದಾಯಗಳ ಭಾವೈಕ್ಯತೆಯ ಸಂಕೇತವಾದ ಮೊಹರಂ ಹಬ್ಬವು ಹಿಂದೂ ಸಮುದಾಯದವರ ನೇತೃತ್ವದಲ್ಲಿ ಕಳೆಕಟ್ಟಿದ್ದು,ಹಬ್ಬ ರಂಗೇರಿದೆ. ಕುರುಬರು, ತಳವಾರ, ವೀರಶೈವ ಲಿಂಗಾಯತ, ಭೋವಿ ಸೇರಿದಂತೆ ಇತರೆ ಸಮುದಾಯಗಳು ಮಾತ್ರ ಈ ಗ್ರಾಮದಲ್ಲಿದ್ದು, ಮುಸ್ಲಿಂರೇ ಇಲ್ಲದ ಬಳ್ಳಾಪುರದಲ್ಲಿ ಮೊಹರಂ ಹಬ್ಬ ಪ್ರತಿವರ್ಷ ಸಡಗರ, ಸಂಭ್ರಮಗಳಿಂದ ಜರುಗತ್ತಿದೆ.
ಗ್ರಾಮದಲ್ಲಿ ಮೋಹರಂ ಹಬ್ಬದಲ್ಲಿ ಮಸಿದಿಗಳ (ಅಸೀರ ಖಾನ) ಲ್ಲಿ ಪ್ರತಿಷ್ಠಾಪಿಸುವ ಪೀರಲ ದೇವರುಗಳನ್ನು ಪ್ರಥಮವಾಗಿ ಭೋವಿ ಜನಾಂಗದವರು ಹೋರುತ್ತಿದ್ದರು. ಈಗ ಎಲ್ಲಾ ಸಮುದಾಯದವರು ದೇವರುಗಳನ್ನು ಹೊತ್ತು ಮೆರವಣಿಗೆ ಮಾಡಲಿದ್ದು, ಹಬ್ಬ ಜೋರಾಗಿ ನಡೆಯುತ್ತಿದೆ. ಅದ್ದೂರಿ ಮೊಹರಂ ಹಬ್ಬವೂ ಈಗಾಗಲೇ ಕೊನೆಯ ಹಂತವನ್ನು ತಲುಪಿದ್ದು, ಮಸೀದಿಯಲ್ಲಿ ಪೀರಲ ದೇವರನ್ನು ಪ್ರತಿಷ್ಠಾಪಿಸಿದ್ದು, ಶನಿವಾರ ಕತ್ತಲರಾತ್ರಿ ಸಂಭ್ರಮ ಮನೆ ಮಾಡಿದೆ. ಮೊಹರಂ ಹಬ್ಬದ ಕೊನೆಯ ದಿನವಾದ ಭಾನುವಾರ ಹಬ್ಬದ ಸಂಭ್ರಮ ಮೇರೆ ಮೀರಲಿದ್ದು, ಅಂದು ಇಡೀ ದಿನ ಪೀರಲ ದೇವರುಗಳನ್ನು ಗ್ರಾಮದ ತುಂಬೆಲ್ಲಾ ಮೆರವಣಿಗೆ ಮಾಡಲಿದ್ದು, ರಾತ್ರಿ ಸಮೀಪದ ನದಿ, ಹಳ್ಳಗಳಲ್ಲಿ ಧಪನ್ ಕಾರ್ಯಕ್ರಮ ನಡೆಯಲಿದೆ.
ತಾಲ್ಲೂಕಿನ ಎಮ್ಮಿಗನೂರು, ಕಂಪ್ಲಿ, ರಾಮಸಾಗರ, ನಂ10 ಮುದ್ದಾಪುರ, ಮೆಟ್ರಿ, ದೇವಲಾಪುರ, ದೇವಸಮುದ್ರ, ಸುಗ್ಗೇನಹಳ್ಳಿ, ಹಂಪಾದೇವನಹಳ್ಳಿ, ಸಣಾಪುರ, ನೆಲ್ಲುಡಿ ಗ್ರಾಮಗಳಲ್ಲಿಯೂ ಹಬ್ಬದ ಸಂಭ್ರಮ ಮನೆ ಮಾಡಿದ್ದು, ಮೊಹರಂ ಹಬ್ಬದ ನಿಮಿತ್ತ ಎಲ್ಲಾ ಮಸೀದಿಗಳನ್ನು ಸುಣ್ಣ, ಬಣ್ಣಗಳಿಂದ ಶೃಂಗಾರ ಮಾಡಿ ವಿದ್ಯುತ್ ದೀಪಗಳಿಂದ ಅಲಂಕರಿಸಿದ್ದಾರೆ. ಹಿಂದೂ ಮುಸ್ಲಿಂ ಸಮುದಾಯದವರು ಮನೆಗಳನ್ನು ಶುಚಿಗೊಳಿಸಿ ಹಬ್ಬ ಆಚರಿಸುತ್ತಿದ್ದಾರೆ. ಕೆಲ ಮಸೀದಿಗಳಲ್ಲಿ 5,7,ದಿನಗಳ ಸವಾರಿಗಳು ಎದ್ದು ಮೆರವಣಿಗೆ ಕಾರ್ಯ ನಡೆದಿದ್ದರೆ, ಮೊಹರಂ ಹಬ್ಬದ ಪ್ರಮುಖ ಘಟ್ಟವಾದ ಕತಲ್ರಾತ್ ಹಬ್ಬವನ್ನು ನಾಡಿನಾದ್ಯಂತ ಇಂದು ಆಚರಿಸುತ್ತಿದ್ದು, ಬಹುತೇಕ ಎಲ್ಲಾ ಸಮುದಾಯಗಳ ಜನರು ಮಸೀದಿಗಳಿಗೆ ತೆರಳಿ ಕೆಂಪು ಸಕ್ಕರೆ, ಬೆಲ್ಲದ ಪಾನಕ ನೈವೇದ್ಯವನ್ನು ಸಮರ್ಪಿಸುತ್ತಿರುವುದು ಕಂಡು ಬರುತ್ತಿದೆ.
ತಾಲ್ಲೂಕಿನಲ್ಲಿ ಹಿಂದೂ ಮುಸ್ಲಿಂ ಸಮುದಾಯಗಳ ಭಾವೈಕ್ಯದ ಮೋಹರಂ ಆಚರಣೆ ಸಂಭ್ರಮದಿಂದ ನೆಡೆದಿದೆ. ಮುಸ್ಲಿಂರಿಲ್ಲದ ಹಾಗೂ ಒಂದೇ ಮುಸ್ಲಿಂ ಮನೆ ಇರುವ ಗ್ರಾಮಗಳಲ್ಲೂ ಮೋಹರಂ ಹಬ್ಬವು ಶ್ರದ್ಧೆ-ಭಕ್ತಿಯಿಂದ ಆಚರಿಸಲಾಗುತ್ತಿದೆ.
ತಾಲ್ಲೂಕಿನ ಬಳ್ಳಾಪುರ, ಜೀರಿಗನೂರು, ಕಣ್ವಿ ತಿಮ್ಮಲಾಪುರ ಗ್ರಾಮಗಳಲ್ಲಿ ಮುಸ್ಲಿಂರ ಮನೆಗಳಿಲ್ಲ.
ಮಾವಿನಹಳ್ಳಿ,ಉಪ್ಪಾರಹಳ್ಳಿಗಳಲ್ಲಿ ಒಂದೇ ಮುಸ್ಲಿಂ ಮನೆಯಿದ್ದು, ಗ್ರಾಮಸ್ಥರೆಲ್ಲರೂ ಒಗ್ಗಟ್ಟಾಗಿ ಪೀರಲು ದೇವರನ್ನು ಸ್ಥಾಪಿಸಿ ಹಬ್ಬವನ್ನು ಆಚರಿಸಿ ಹರಕೆ ತೀರಿಸುತ್ತಿದ್ದಾರೆ. ಬಳ್ಳಾಪುರ ಗ್ರಾಮದ ಮಸೀದಿಯಲ್ಲಿ ಹೊನ್ನೂರು ತಾತಾ, ಯಮುನಪ್ಪ ತಾತಾ, ಸಿಟ್ಟಿನ ದೇವರು, ಹಸೇನ್, ಹುಸೇನ್ ಸೇರಿದಂತೆ 5 ಪೀರಲು ದೇವರನ್ನು ಸ್ಥಾಪಿಸಿದ್ದು, ಎಮ್ಮಿಗನೂರಿನ ಖಾದರ್ ಭಾಷಾ ಪೂಜೆ ಸಲ್ಲಿಸಿದರೂ ಗ್ರಾಮಸ್ಥರೇ ಪೀರಲು ದೇವರನ್ನು ಹಿಡಿಯುತ್ತಾರೆ.ಕಣ್ವಿ ತಿಮ್ಮಲಾಪುರ ಗ್ರಾಮದ ಮೌಲಾಲಿ ತಾತನ ಮಸೀದಿಯಲ್ಲಿ ಮೌಲಾಲಿ, ಹುಸೇನ್ಭಾಷಾ, ಚಾಂದ್ಬಾಷಾ ಪೀರಲು ದೇವರನ್ನು ಕೂಡಿಸಲಾಗಿದೆ. ಹಂಪಾದೇವನಹಳ್ಳಿ ಗ್ರಾ.ಪಂ.ವ್ಯಾಪ್ತಿಯ ಜೀರಿಗನೂರು ಗ್ರಾಮದಲ್ಲಿ ಸಿಟ್ಟಿನಸ್ವಾಮಿ, ಹೊನ್ನೂರುಸ್ವಾಮಿ, ಮೌಲಾಲಿ ತಾತ, ಹಸೇನ್,ಹುಸೇಣ್ ದೇವರನ್ನು ಕೂಡಿಸಲಾಗಿದೆ.ಮಾವಿನಹಳ್ಳಿಯಲ್ಲಿ ಹೊನ್ನೂರುಸ್ವಾಮಿ, ಹಸೇನ್-ಹುಸೇನ್, ಸೂರ್ಯ, ಚಂದ್ರ, ಸಿದ್ದಪ್ಪತಾತ, ನೀರಗಂಟಿ, ಒಂದುಕಣ್ಣು ದೇವರನ್ನು ಕೂಡಿಸಿದ್ದಾರೆ.
ಹಬ್ಬದ ವೈಶಿಷ್ಟತೆಃ
ಮೊಹರಂ ಹಬ್ಬದ ನಿಮಿತ್ತ ಹರಕೆ ಹೊತ್ತ ಭಕ್ತರು ಮೈಗೆ ಹುಲಿ ಬಣ್ಣ ಹಾಕಿಸಿಕೊಂಡು ವೇಷ ಹಾಕುವುದು, ಗ್ರಾಮದ ಮಸೀದಿಗಳ ಮುಂದೆ ಹಾಗೂ ಪ್ರಮುಖ ಬೀದಿಯಲ್ಲಿ ಕುಣಿಯುವುದು, ಅಚ್ಚಳ್ಳಿ, ಬಿಚ್ಚಳ್ಳಿ, ಫಕ್ಕೀರರ ವೇಷ ತೊಟ್ಟು ಸಂಭ್ರಮಿಸುವುದು ನಡೆದಿದೆ. ಈ ಹಬ್ಬದ ಇನ್ನೊಂದು ವೈಶಿಷ್ಟವೆಂದರೆ,ಎಲ್ಲಾ ವಯೋಮಾನದವರು ತಮಟೆ (ಹಲಗೆ) ಬಾರಿಸುತ್ತಾ ಅದರ ಸದ್ದಿಗೆ ಹೆಜ್ಜೆ ಹಾಕಿ ಸಂಭ್ರಮಿಸುವುದು ಗಮನ ಸೆಳೆಯುತ್ತದೆ. ಕತ್ತಲ ರಾತ್ರಿಯಂದು ಮಸೀದಿ ಮುಂದೆ ಅಗೆದಿರುವ ಅಲಾಯಿ ಕುಣಿಯ ಅಗ್ನಿಗೆ ಉಪ್ಪು ಸುರಿದು ತಮ್ಮ ಕಷ್ಟ ತೀರಿಸುವಂತೆ ಪ್ರಾರ್ಥಿಸುವುದು ವಿಶೇಷವೆನಿಸಲಿದೆ.
ವರದಿ : ಜಿಲಾನಸಾಬ್ ಬಡಿಗೇರ



















