ಚಾಮರಾಜನಗರ/ ಹನೂರು: ಶಾಸಕ ಎಂ.ಆರ್.ಮಂಜುನಾಥ್ ಪಟ್ಟಣದ ಲೋಕೋಪಯೋಗಿ ವಸತಿ ಗೃಹ ಸಭಾಂಗಣದಲ್ಲಿ ಸಾಮೂಹಿಕ ನಾಯಕತ್ವ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ರೈತ ಸಂಘದ ಮುಖಂಡರುಗಳ ಜೊತೆ ಸಭೆ ನಡೆಸಿ ರೈತರ ಸಮಸ್ಯೆಯನ್ನು ಆಲಿಸಿದರು.
ಈ ವೇಳೆ ಮಾತನಾಡಿದ ಶಾಸಕರು, ನೀರಿನ ಸಮಸ್ಯೆ ಬಗೆಹರಿಸಲು ಈಗಾಗಲೇ ಸಂಬಂಧ ಪಟ್ಟ ಇಲಾಖೆಯ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ನೀರಿನ ಸಮಸ್ಯೆ ಇರುವಂತಹ ಗ್ರಾಮಗಳಿಗೆ ಟ್ಯಾಂಕರ್ ಮೂಲಕ ನೀರು ತಲುಪಿಸಲು ಕ್ರಮ ಕೈಗೊಳ್ಳಲಾಗಿದೆ.
ಮಲೈಮಹದೇಶ್ವರ ಬೆಟ್ಟವನ್ನು ಹುಲಿ ಸಂರಕ್ಷಿತ ಪ್ರದೇಶ ಘೋಷಣೆ ಮಾಡುವ ಬಗ್ಗೆ ಸರ್ಕಾರ ಸರಿಯಾದ ತೀರ್ಮಾನ ತೆಗೆದುಕೊಳ್ಳಬೇಕು ಅಲ್ಲಿನ ಮೂಲ ನಿವಾಸಿಗಳಿಗೆ ತೊಂದರೆಯಾಗದೇ ಇರುವ ಬಗ್ಗೆ ಕ್ರಮವಹಿಸಬೇಕು.
ಅರಣ್ಯ ಇಲಾಖೆಯ ಅಧಿಕಾರಿಗಳು ಕಾಡು ಪ್ರಾಣಿಗಳ ಹಾವಳಿ ತಡೆಗಟ್ಟುವಲ್ಲಿ ವಿಫಲರಾಗಿರುವ ಬಗ್ಗೆ ಮಾತನಾಡಿದ ಶಾಸಕರು ರೈತರ ಮೇಲೆ ಅರಣ್ಯ ಇಲಾಖೆ ಅಧಿಕಾರಿಗಳು ದಬ್ಬಾಳಿಕೆ ನಡೆಸುವ ಅಧಿಕಾರಿಗಳಿಗೆ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.
ಚಂಗಡಿ ಗ್ರಾಮ ಸ್ಥಳಾಂತರಕ್ಕೆ ಒತ್ತು:
ಕಾಡಂಚಿನ ಗ್ರಾಮವಾದ ಚಂಗಡಿ ಗ್ರಾಮವನ್ನು ಬೇರೆಡೆಗೆ ಸ್ಥಳಾಂತರವಾಗದಿರುವುದರಿಂದ ಮಾನವ ಮತ್ತು ವನ್ಯಜೀವಿ ಸಂಘರ್ಷ ತಪ್ಪುತ್ತದೆ. ಈ ಸಂಬಂಧ ಚಂಗಡಿ ಗ್ರಾಮವನ್ನು ಬೇರೆಡೆಗೆ ಸ್ಥಳಾಂತರಿಸಿ ಜಾಗ ನಿಗದಿ ಮಾಡಲಾಗಿದ್ದು ಸರ್ಕಾರದ ಹಂತದಲ್ಲಿ ಇದೆ ಎಂದರು.
ರೈತ ಬೆಳೆದ ಬೆಳೆಗೆ ವೈಜ್ಞಾನಿಕ ಬೆಲೆ ನಿಗದಿ ಪಡಿಸುವನಿಟ್ಟಿನಲ್ಲಿ ಸರ್ಕಾರದ ಉನ್ನತ ಮಟ್ಟದ ಅಧಿಕಾರಿಗಳ ಜೊತೆ ಚರ್ಚಿಸಿ ಕ್ರಮ ತೆಗೆದುಕೊಳ್ಳುವುದಾಗಿ ತಿಳಿಸಿದರು.
ಕಾಡಂಚಿನ ಗ್ರಾಮಗಳಲ್ಲಿ ರೈತರಿಗೆ ಮೂಲಭೂತ ಸೌಕರ್ಯಗಳ ಕಲ್ಪಿಸುವ ಕುರಿತು ಮಾತನಾಡಿದ ಶಾಸಕರು ರೈತರಿಗೆ ಎಲ್ಲಾ ರೀತಿಯ ಮೂಲಭೂತ ಸೌಕರ್ಯಗಳ ಅಭಿವೃದ್ಧಿಗೆ ಬದ್ದನಾಗಿದ್ದೇನೆ ಎಂದು ಭರವಸೆ ನೀಡಿದರು.
ಇದೇ ಸಂದರ್ಭದಲ್ಲಿ ರೈತ ಸಂಘದ ಮುಖಂಡರುಗಳಾದ ಹೊನ್ನೂರು ಪ್ರಕಾಶ್, ಗುಂಡ್ಲುಪೇಟೆ ತಾಲೂಕು ಅಧ್ಯಕ್ಷ ಷಣ್ಮುಖ ಸ್ವಾಮಿ, ಚಾಮರಾಜನಗರ ತಾಲ್ಲೂಕು ಅಧ್ಯಕ್ಷ ಬಸವಣ್ಣ,ಜಿಲ್ಲಾ ಉಪಾಧ್ಯಕ್ಷ ಮಹೇಶ್ (ಹಸುಗುಳಿ) ಹನೂರು ಮಾದಪ್ಪ, ಚಂಗಡಿ ಕರಿಯಪ್ಪ, ಶಾಂತ್ ಕುಮಾರ್, ವಿನಿಸ್, ಅಮೋಘ್ ಹಾಗೂ ಇನ್ನಿತರರು ಉಪಸ್ಥಿತರಿದ್ದರು.
ವರದಿ :ಉಸ್ಮಾನ್ ಖಾನ್



















