
“ಮನೆ ಮನೆಗೆ ಪೊಲೀಸ್” ಭೇಟಿ, ಸಾರ್ವಜನಿಕರಿಗೆ ಅರಿವು ಮೂಡಿಸುವ ಕಾರ್ಯ.
ಯಾದಗಿರಿ/ಗುರುಮಠಕಲ್: ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರ ಸಮಸ್ಯೆಗಳನ್ನು ಆಲಿಸಿ,ಪರಿಹಾರ ಸೂಚಿಸಲು ಕರೆಯಲಾಗುವ ಕುಂದುಕೊರತೆ ಸಭೆ ಇಂದು ಪಟ್ಟಣದ ವಾರ್ಡ್ 12, 13 ರ ಸರಕಾರಿ ಶಾಲೆಯಲ್ಲಿ ನಡೆಯಿತು.
ಸಭೆಯ ಅಧ್ಯಕ್ಷತೆ ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಪೃಥ್ವಿಕ್ ಶಂಕರ್ ವಹಿಸಿದ್ದರು, ಉಳಿದಂತೆ ವಿವಿಧ ಇಲಾಖೆಯ ಅಧಿಕಾರಿಗಳದ dysp ಸುರೇಶ್ ಎನ್, ಉಪ ತಹಶೀಲ್ದಾರ್ ನರಸಿಂಹಸ್ವಾಮಿ, ತಾಲೂಕ ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿಗಳಾದ ಅಂಬರೀಶ್ ಪಾಟೀಲ್, ಆರಕ್ಷಕ ನಿರೀಕ್ಷಕರಾದ ವೀರಣ್ಣ ದೊಡ್ಡಮನಿ ಭಾಗಿಯಾಗಿದ್ದರು.
ಪಟ್ಟಣ ಹಾಗೂ ತಾಲೂಕಿನ ವಿವಿಧ ಸಮಸ್ಯೆ ಕುರಿತು ಹಾಗೂ ಸಭೆಗೆ ಪುರಸಭೆ ಮುಖ್ಯಾಧಿಕಾರಿ ಗೈರಾಗಿರುವ ಅಸಮಾಧಾನ ಹೊರ ಹಾಕಿದರು, ಸವಿವರವಾಗಿ ಸಭೆಯಲ್ಲಿ ಸ್ಥಳೀಯ ವಿವಿಧ ದಲಿತ ಸಂಘಟನೆಯ ಮುಖಂಡರು ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಪೃಥ್ವಿಕ್ ಶಂಕರ್ ಅವರಿಗೆ ಸಮಸ್ಯೆಗಳ ಕುರಿತು ವಿವರಿಸಿದರು.
ತಾಲೂಕಿನ ಚಿನ್ನಾಕರ ಗ್ರಾಮದ ದಲಿತರಿಗೆ ಸೇರಿದ ಜಾಗವನ್ನು ಗ್ರಾಮ ಪಂಚಾಯಿತಿ ನಿರ್ಮಿಸಲು ಮುಂದಾಗಿದ್ದು, ಪರ್ಯಾಯ ಜಾಗದಲ್ಲಿ ನಿರ್ಮಾಣ ಆಗಲಿ ಎಂದು ದಲಿತ ಸಂಘರ್ಷ ಸಮಿತಿ ಜಿಲ್ಲಾ ಸಂಚಾಲಕ ಹಾಗೂ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಜಿಲ್ಲಾ ಜಾಗೃತಿ ಮತ್ತು ಉಸ್ತುವಾರಿ ಸಮಿತಿ ಸದಸ್ಯ ಮರೆಪ್ಪ ಚಟ್ಚನಕೇರಿ ದೂರಿದರು.
ಕೊಂಕಲ ಗ್ರಾಮದಲ್ಲಿ ದಲಿತರ ಮೇಲೆ ಮೇಲೆ ದೌರ್ಜನ್ಯ ಏಸಗುತ್ತಿರುವ ಅವರ ಮೇಲೆ ಸಿವಿಲ್, ಕ್ರಿಮಿನಲ್ ಮೊಕದ್ದಮೆ ಹಾಕಿ ಅವರಿಗೆ ತೊಂದರೆ ನೀಡುತ್ತಿರುವ ಹಾಗೂ ಅವರ ಭೂಮಿಯನ್ನು ಒತ್ತುವರಿ ಮಾಡಿಕೊಂಡಿರುವ ದೇವಿಂದ್ರಪ್ಪ ಕೊಂಕಲ್ ಅವರ ಮೇಲೆ ಕ್ರಮ ತೆಗೆದುಕೊಳ್ಳಲು, ಗಡಿಪಾರು ಮಾಡಲು ಅಶೋಕ್ ಅಂಬೇಡ್ಕರ್ ಹಾಗೂ ರಂಗಸ್ವಾಮಿ ಮನವಿ ಮಾಡಿದರು.
ಕೊನೆಯದಾಗಿ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಜಿಲ್ಲಾ ಅಧೀಕ್ಷಕರಾದ ಪೃಥ್ವಿಕ್ ಶಂಕರ್ ರಸ್ತೆ ಸಂಚಾರಿ ನಿಯಮಗಳ ಪರಿಪಾಲನೆ, ಸೈಬರ್ ಅಪರಾಧಗಳ ತಡೆ ಹಾಗೂ ಕೂಡಲೆ 1930 ಸಹಾಯವಾಣಿಗೆ ಕರೆ ಮಾಡಲು ಸಲಹೆ ಮತ್ತು
“ಮನೆ ಮನೆಗೆ ಪೊಲೀಸ್” ಎಂಬ ವಿನೂತನ ಉಪಕ್ರಮದ ಅಂಗವಾಗಿ ಪಟ್ಟಣದ ಮನೆಗಳಿಗೆ ಭೇಟಿ ನೀಡಿ ಕುಟುಂಬ ಸದಸ್ಯರಿಂದ ಅಗತ್ಯ ಮಾಹಿತಿಯನ್ನು ಪಡೆದು ಮನೆ ಮನೆಗೆ ಪೊಲೀಸ್ ಕಾರ್ಯಕ್ರಮದ ಉದ್ದೇಶದ ಕುರಿತು ಸಾರ್ವಜನಿಕರಲ್ಲಿ ಅರಿವು ಮೂಡಿಸುವ ಕಾರ್ಯಕ್ರಮ ಕುರಿತಾಗಿ ತಿಳಿಸಿದರು. ಕಾರ್ಯಕ್ರಮದ ನಂತರ ಅಲ್ಲಿನ ವಾರ್ಡ್ ಮನೆಗಳಿಗೆ ತೆರಳಿ ಮಾಹಿತಿ ನೀಡಿದರು.
ಸಭೆಯಲ್ಲಿ ಬಾಬು ತಲಾರಿ, ಮಾಣಿಕ್ ಮುಕುಡಿ, ಅನಂತಪ್ಪ ಮುಕುಡಿ, ವೆಂಕಟಪ್ಪ, ಮಲ್ಲಿಕಾರ್ಜುನ ಸೈದಾಪುರ್,ದಲಿತ ಮುಖಂಡರು ಹಾಗೂ ಇಲಾಖೆಯ ಚಂದ್ರರೆಡ್ಡಿ ಮುನ್ನೂರ, ಶರಣಪ್ಪ ಪಸರ, ರಾಜು ಕಲಾಲ್, ಶಿವರಾಮರೆಡ್ಡಿ, ನರೇಂದ್ರರೆಡ್ಡಿ ಹಾಜರಿದ್ದರು.
ವೃದ್ಯಾಪ್ಯ ಸಹಾಯ ಧನ ಹಾಗೂ ಅಂಗವಿಕಲರ ಮಾಸಿಕ ಸಹಾಯ ಧನ ಸರಿಯಾದ ಸಮಯಕ್ಕೆ ಬಾರದಿರುವುದು. ಹೆಚ್ಚು ಬೆಳಕಿರುವ ಬೀದಿ ದೀಪಗಳ ಅಳವಡಿಕೆಗೆ ಮನವಿ.
- ಲಾಲಪ್ಪ ತಲಾರಿ.
ಪಟ್ಟಣದಲ್ಲಿ ಹೆಚ್ಚಿದ ಯುವಕರ ಅತಿಯಾದ ವ್ಯಸನ, ಗ್ರಾಮಗಳಲ್ಲಿ ಸಾರಾಯಿ ತಯಾರಿಕೆ ಮಾರಾಟಕ್ಕೆ ಕಡಿವಾಣ ಹಾಕಿ
- ಭೀಮಶಪ್ಪ ಕೇಳಮನಿ.
ಚಿಂತನಹಳ್ಳಿ ಸೇರಿದಂತೆ ಗ್ರಾಮಗಳಲ್ಲಿನ ಅಸ್ಪೃಶ್ಯತೆ ನಿವಾರಣೆಗೆ ಎಲ್ಲಾ ಗ್ರಾಮಗಳ ಭೇಟಿ ನೀಡಿ.
- ಭೀಮಶಪ್ಪ ಗುಡಿಸೇ.
ವರದಿ: ಜಗದೀಶ್ ಕುಮಾರ್ ಭೂಮಾ.



















