ಬಳ್ಳಾರಿ / ಕಂಪ್ಲಿ : ಪಟ್ಟಣದ 8/9ನೇ ವಾರ್ಡಿನ ಕೆಇಬಿ ಪಕ್ಕದಲ್ಲಿರುವ ಆರಾಧ್ಯ ದೇವತೆ ಶ್ರೀ ಕಾಳಿಕಾದೇವಿ ದೇವಿ ಗಂಗೆಸ್ಥಳ ಮೆರವಣಿಗೆ ಅತ್ಯಂತ ಶ್ರದ್ಧಾಭಕ್ತಿಯಿಂದ ಶುಕ್ರವಾರ ಜರುಗಿತು.
ಇಲ್ಲಿನ ಕಂಪ್ಲಿ-ಕೋಟೆಯ ತುಂಗಭದ್ರಾ ನದಿಯಲ್ಲಿ ಗಂಗೆಪೂಜೆ ಸಲ್ಲಿಸಿದ ನಂತರ ಆರಂಭಗೊಂಡ ಮೆರವಣಿಗೆ ಪಟ್ಟಣ ಪ್ರಮುಖ ರಸ್ತೆಗಳಲ್ಲಿ ಸಾಗಿ, ನಡುವಲ ಮಸೀದಿ, ಡಾ.ರಾಜಕುಮಾರ ಮುಖ್ಯರಸ್ತೆ, ಮಾರೆಮ್ಮ ಗುಡಿ, ಅಂಬೇಡ್ಕರ್ ವೃತ್ತದ ಮೂಲಕ ಕಾಳಿಕಾದೇವಿ ದೇವಿ ಸನ್ನಿಧಾನದಲ್ಲಿ ಸಂಪನ್ನಗೊಂಡಿತು. ಈ ಮೆರವಣಿಗೆಯಲ್ಲಿ ಸುಮಂಗಲಿಯರ ಕುಂಭ, ಕಳಸ, ಡೊಳ್ಳು ಕುಣಿತ, ಮಂಗಳವಾದ್ಯ ಸೇರಿದಂತೆ ವಿವಿಧ ಕಲಾ ಪ್ರಕಾರಗಳು ಪಾಲ್ಗೊಂಡಿದ್ದವು. ಇಲ್ಲಿನ ಗಂಗೆಸ್ಥಳ ನಿಮಿತ್ಯ ದೇವಿಯ ಸನ್ನಿಧಾನದಲ್ಲಿ ಹೂವಿನ ಅಲಂಕಾರ, ಮಹಾಮಂಗಳಾರತಿ ಸೇರಿದಂತೆ ವಿವಿಧ ಧಾರ್ಮಿಕ ಕೈಂಕಾರ್ಯಗಳು ನೆರವೇರಿದವು. ಸಾಕಷ್ಟು ಭಕ್ತರು ದೇವಸ್ಥಾನಕ್ಕೆ ಭೇಟಿ ನೀಡಿ, ಕಾಯಿ, ಕರ್ಪೂರ ಅರ್ಪಿಸಿ, ದೇವಿಯ ಕೃಪೆಗೆ ಪಾತ್ರರಾದರು.
ಈ ಸಂದರ್ಭದಲ್ಲಿ ಕಾಳಿಕಾದೇವಿ ದೇವಸ್ಥಾನ ಸಮಿತಿಯವರು ಸೇರಿದಂತೆ ಸಕಲ ಸದ್ಭಕ್ತರು ಹಾಗೂ ಸಾರ್ವಜನಿಕರು ಪಾಲ್ಗೊಂಡಿದ್ದರು.
ವರದಿ : ಜಿಲಾನಸಾಬ್ ಬಡಿಗೇರ್



















