
ಬೆಳಗಾವಿ: ಅಥಣಿ ಇತ್ತೀಚೆಗೆ ಅಥಣಿ, ಕಾಗವಾಡ ಮತ್ತು ಐಗಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದ ಹಲವು ಜಟಿಲ ಪ್ರಕರಣಗಳನ್ನು ಯಶಸ್ವಿಯಾಗಿ ಭೇದಿಸಿದ ಪೊಲೀಸ್ ಅಧಿಕಾರಿಗಳಿಗೆ ಬೆಳಗಾವಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಾದ ಭೀಮಾಶಂಕರ್ ಗುಳೇದ್ ಅವರು ಪ್ರಶಂಸಾ ಪತ್ರ ನೀಡಿ ಗೌರವಿಸಿದರು. ಯಾವುದೇ ಸಣ್ಣ ಸುಳಿವು ಇಲ್ಲದಿದ್ದರೂ, ಸತತ ಪ್ರಯತ್ನದಿಂದ ಅಪರಾಧಿಗಳನ್ನು ಪತ್ತೆಹಚ್ಚಿ ಬಂಧಿಸಿದ ಪೊಲೀಸರ ಕಾರ್ಯವೈಖರಿಗೆ ಮೆಚ್ಚುಗೆ ವ್ಯಕ್ತಪಡಿಸಿದರು.

ಅಥಣಿ ಪಟ್ಟಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಪ್ರಶಂಸಾ ಪತ್ರಗಳನ್ನು ವಿತರಿಸಲಾಯಿತು. ಅಥಣಿ ಡಿ ವೈ ಎಸ್ ಪಿ ಪ್ರಶಾಂತ ಮುನ್ನೋಳಿ ಅವರ ನೇತೃತ್ವದಲ್ಲಿ ನಡೆದ ಈ ಸಮಾರಂಭದಲ್ಲಿ ಅಥಣಿ ತಹಶೀಲ್ದಾರರಾದ ಸಿದ್ರಾಯ ಭೋಸಗಿ, ಸಿಪಿಐ ಸಂತೋಷ ಹಳ್ಳೂರ, ರಾಯಬಾಗ ಸಿಪಿಐ ಬಾಳಪ್ಪ ಮಂಟೂರ, ಅಥಣಿ ತಾಲೂಕ ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ಗಳಾದ ಶಿವಾನಂದ ಕಲ್ಲಾಪುರ್ ಉಪಸ್ಥಿತರಿದ್ದು ಸಿಬ್ಬಂದಿಗಳಿಗೆ ಪ್ರಶಂಸೆ ಪತ್ರಗಳನ್ನು ವಿತರಿಸಿದರು.
ಅಥಣಿ ಪೊಲೀಸ ತಂಡವು ಭೇದಿಸಿದ ಪ್ರಮುಖ ಪ್ರಕರಣ ಗಳೆಂದರೆ ಚೈನ್ ಸ್ನಾಚಿಂಗ್ (ಸರಗಳ್ಳತನ), ಜ್ಯೂವೆಲರಿ ಶಾಪ್ ಕಳವು ಯತ್ನ ಮತ್ತು ಕೊಲೆಗಳಂತಹ ಗಂಭೀರ ಪ್ರಕರಣಗಳನ್ನು ಯಾವುದೇ ಸುಳಿವು ಇಲ್ಲದೆ ಭೇದಿಸುವಲ್ಲಿ ಯಶಸ್ವಿಯಾಗಿದೆ. ಈ ಸಾಧನೆಯನ್ನು ಗುರುತಿಸಿ, ಎಸ್.ಪಿ ಅವರು ಪ್ರಶಂಸಾ ಪತ್ರಗಳನ್ನು ನೀಡಿ ಗೌರವಿಸಿದರು.
ಸಾರ್ವಜನಿಕರ ಸುರಕ್ಷತೆಯನ್ನು ಕಾಪಾಡುವಲ್ಲಿ ಪೊಲೀಸರು ವಹಿಸಿದ ಬದ್ಧತೆ ಮತ್ತು ಕಾರ್ಯಕ್ಷಮತೆಯನ್ನು ಗಣ್ಯರು ಶ್ಲಾಘಿಸಿದರು.
ಇದೇ ವೇಳೆ ಅಥಣಿಯ ತಹಶೀಲ್ದಾರ್ ಹಾಗೂ ದಂಡಾಧಿಕಾರಿಗಳಾದ ಸಿದ್ದರಾಯ್ ಬೋಸಗಿ ಅವರು ಮಾತನಾಡಿ ಪೊಲೀಸ್ ಅಧಿಕಾರಿಗಳು ಸಿಬ್ಬಂದಿಗಳು ತಮ್ಮ ಕುಟುಂಬ ಸದಸ್ಯರಿಂದ ದೂರ ಉಳಿದು ,ಧಾರ್ಮಿಕ ಉತ್ಸವ, ಸಾಮಾಜಿಕ ಕಾರ್ಯಗಳಲ್ಲಿ, ಹೋರಾಟ, ಸೇರಿದಂತೆ ಎಲ್ಲರಿಗೂ ಬಂದೋಬಸ್ತ್ ಒದಗಿಸುವ ಇವರ ಕಾರ್ಯ ಅಭಿನಂದನಾರ್ಹ ಎಂದು ಹೇಳಿದರು.
ಸಿ ಪಿ ಐ ಸಂತೋಷ್ ಹಳ್ಳೂರ್ ಅವರು ಮಾತನಾಡಿ. ಅಥಣಿ ಪೊಲೀಸ್ ಠಾಣೆಯ ಸಿಬ್ಬಂದಿಗಳು ಚಾಣಾಕ್ಷರಾಗಿರುವುದರಿಂದಲೇ ಒಂದೇ ವರ್ಷದಲ್ಲಿ ಅನೇಕ ಅಪರಾಧ ಪ್ರಕರಣಗಳನ್ನು ಪತ್ತೆ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ಹೇಳಿದರು ಮತ್ತು ಡಿವೈಎಸ್ಪಿ ಪ್ರಶಾಂತ್ ಮುನ್ನೋಳಿ ಸರ್ ಅವರ ಮಾರ್ಗದರ್ಶನದಲ್ಲಿ ಇತ್ತೀಚಿಗಷ್ಟೇ ಅಥಣಿ ಪಟ್ಟಣದ ತ್ರಿಮೂರ್ತಿ ಜ್ಯೂವೆಲರ್ಸ್ ದರೋಡೆ ಯತ್ನ ಪ್ರಕರಣವನ್ನು ನಮ್ಮ ಸಿಬ್ಬಂದಿ ಕೆಲವೇ ಗಂಟೆಗಳಲ್ಲಿಯೇ ಭೇದಿಸುವಲ್ಲಿ ಯಶಸ್ವಿಯಾಗಿದ್ದರೆ, ಇದರಿಂದ ಜನಸಾಮಾನ್ಯರಲ್ಲಿ ವಿಶ್ವಾಸ ಮತ್ತು ಧೈರ್ಯ ಹೆಚ್ಚಿದೆ ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ಐಗಳಿ ಪೊಲೀಸ ಠಾಣೆ ಅಪರಾಧ ವಿಭಾಗದ ಪಿ.ಎಸ್.ಐ ಕುಮಾರ ಹಾಡಕರ, ಪಿ.ಎಸ್.ಐ ಚಂದ್ರಶೇಖರ ಸಾಗನೂರ . ಅಥಣಿ ಪೊಲೀಸ ಠಾಣೆ ಅಪರಾಧ ವಿಭಾಗ ಪಿ.ಎಸ್.ಐ ತಳವಾರ, ಸೇರಿದಂತೆ ಹಲವರು ಪೊಲೀಸ್ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.
ವರದಿಗಾರ. ವಿಠ್ಠಲ ಖೋಕಾಟೆ, ಅಥಣಿ.



















