ಬೆಂಗಳೂರು: ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯಿಂದ ಮಾಧ್ಯಮ ಮಾನ್ಯತೆ ಪಡೆದಿರುವ ತಾಲೂಕು ಮಟ್ಟದಲ್ಲಿ ಪತ್ರಕರ್ತರಿಗೆ ವೃತ್ತಿ ನಿರತ ಚಟುವಟಿಕೆಗಳ ಸಂಬಂಧ ತಮ್ಮ ಜಿಲ್ಲೆಯಾದ್ಯಂತ ಉಚಿತವಾಗಿ ಬಸ್ಗಳಲ್ಲಿ ಸಂಚರಿಸಲು ಅನುಕೂಲವಾಗುವಂತೆ ಉಚಿತ ಬಸ್ಪಾಸ್ ನೀಡಲು ಅರ್ಜಿಗಳನ್ನು ಆಹ್ವಾನಿಸಲಾಗಿದೆ.
ಪತ್ರಕರ್ತರು ತಾವು ಕಾರ್ಯ ನಿರ್ವಹಿಸುತ್ತಿರುವ ಮಾಧ್ಯಮ ಸಂಸ್ಥೆಗಳಿಂದ ಸೇವಾ ಪ್ರಮಾಣಪತ್ರ, ಶಿಫಾರಸ್ಸು ಪತ್ರ ಮತ್ತು 11 ತಿಂಗಳುಗಳ ವೇತನಪತ್ರ (ಲೈನೇಜ್/ಸಂಭಾವನೆ/ಕಮೀಷನ್ ಪಡೆದಿರುವ ದಾಖಲೆ)ಗಳನ್ನು ಅಥವಾ ವೇತನ ಜಮೆ ಆಗಿರುವ ಮಾಹಿತಿ ಇರುವಂತಹ ಬ್ಯಾಂಕ್ ಸ್ಟೇಟ್ಮೆಂಟ್ ಲಗತ್ತಿಸಿ ʼಸೇವಾಸಿಂಧುʼಪೋರ್ಟಲ್ (https://sevasindhu.karnataka.gov.in) ಮೂಲಕ ಆನ್ಲೈನ್ನಲ್ಲಿ ಅರ್ಜಿಗಳನ್ನು ಸಲ್ಲಿಸಬಹುದು.
ಆನ್ಲೈನ್ನಲ್ಲಿ ಸಲ್ಲಿಸಲಾದ ಅರ್ಜಿ ಮತ್ತು ಲಗತ್ತಿಸಲಾಗಿರುವ ದಾಖಲೆಗಳ ಒಂದು ಪ್ರತಿಯನ್ನು ಆಯಾ ಜಿಲ್ಲೆಯ ವಾರ್ತಾಧಿಕಾರಿಗಳ ಕಚೇರಿಗೆ ಸಲ್ಲಿಸಬೇಕು. ಸ್ವೀಕೃತ ಅರ್ಜಿಗಳನ್ನು ಆಯ್ಕೆ ಸಮಿತಿಯ ಸಭೆಯಲ್ಲಿ ಪರಿಶೀಲಿಸಿ ಬಸ್ ಪಾಸ್ ಮಂಜೂರು ಮಾಡಲಾಗುವುದು.
ರಾಜ್ಯದ ಎಲ್ಲಾ ತಾಲ್ಲೂಕುಗಳ ಅರ್ಹ ಪತ್ರಕರ್ತರು ಕೂಡಲೇ ಸೇವಾಸಿಂಧು ಪೋರ್ಟಲ್ ಮೂಲಕ ಅರ್ಜಿಗಳನ್ನು ಸಲ್ಲಿಸುವುದರ ಮೂಲಕ ಇದರ ಸದುಪಯೋಗ ಪಡೆದುಕೊಳ್ಳಬಹುದು ಎಂದು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಆಯುಕ್ತರಾದ ಹೇಮಂತ್ ನಿಂಬಾಳ್ಕರ್ ಅವರು ತಿಳಿಸಿದ್ದಾರೆ.
ವರದಿ: ಕೊಡಕ್ಕಲ್ ಶಿವಪ್ರಸಾದ್



















