ಬೀದರ್, ಅ. 15: ಬೀದರ್ ಪಶುವೈದ್ಯಕೀಯ ಕಾಲೇಜು ಮೈದಾನದಲ್ಲಿ ನಿನ್ನೆ ನಡೆದ ಜಿಲ್ಲಾ ಮಟ್ಟದ ಕ್ರೀಡಾಕೂಟದಲ್ಲಿ ವಾಡಗಾಂವ್ (ಡಿ) ಸರ್ಕಾರಿ ಪ್ರಾಥಮಿಕ ಶಾಲೆಯ ಹುಡುಗಿಯರ ಕಬಡ್ಡಿ ತಂಡ ಅತ್ಯುತ್ತಮ ಪ್ರದರ್ಶನ ನೀಡಿ ಜಿಲ್ಲಾ ಮಟ್ಟದ ಚಾಂಪಿಯನ್ ಆಗಿದೆ. ಈ ಜಯದೊಂದಿಗೆ ತಂಡವು ವಿಭಾಗ ಮಟ್ಟದ ಸ್ಪರ್ಧೆಗೆ ಆಯ್ಕೆಯಾಗಿದೆ.
ತಂಡದ ವಿಜಯದಲ್ಲಿ ಮುಖ್ಯೋಪಾಧ್ಯಾಯರು ಹಾಗೂ ಶಾಲಾ ಸಿಬ್ಬಂದಿಯ ಪ್ರೋತ್ಸಾಹ ಮತ್ತು ಬೆಂಬಲ ಮಹತ್ತರ ಪಾತ್ರ ವಹಿಸಿದೆ. ವಿದ್ಯಾರ್ಥಿನಿಯರ ಶಿಸ್ತಿನ ಆಟ, ಒಗ್ಗಟ್ಟು ಮತ್ತು ಉತ್ತಮ ತಂಡ ಮನೋಭಾವ ಈ ಸಾಧನೆಯ ಮೂಲ ಅಂಶಗಳಾಗಿವೆ.
ದೈಹಿಕ ಶಿಕ್ಷಣ ಶಿಕ್ಷಕಿ ಮಿಸ್ ಸೊಂಕಂಬಳೆ ಪಂಚಶೀಲಾ ಅವರ ವಿಶಿಷ್ಟ ಮಾರ್ಗದರ್ಶನ ಮತ್ತು ತರಬೇತಿ ತಂಡದ ಯಶಸ್ಸಿಗೆ ಕಾರಣವಾಗಿದೆ.
ಈ ಜಯದ ಹಿನ್ನೆಲೆಯಲ್ಲಿ ಶಾಲಾ ಸಮುದಾಯವು ಎಲ್ಲಾ ವಿದ್ಯಾರ್ಥಿನಿಯರು ಮತ್ತು ಶಿಕ್ಷಕಿಯರಿಗೆ ಹೃತ್ಪೂರ್ವಕ ಅಭಿನಂದನೆಗಳನ್ನು ತಿಳಿಸಿದೆ.
- ಕರುನಾಡ ಕಂದ ಪತ್ರಿಕೆ




















