ಬಳ್ಳಾರಿ / ಕಂಪ್ಲಿ : ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯ ಯೋಜನೆಯಾದ ಸಾಮಾಜಿಕ, ಶೈಕ್ಷಣಿಕ, ಆರ್ಥಿಕ ಗಣತಿ ಕಾರ್ಯಕ್ಕೆ ಈಗಾಗಲೇ ಎರಡು ಸಲ ಸಮಯವನ್ನು ವಿಸ್ತರಣೆ ಮಾಡಿದ್ದರೂ ಸಹಿತ ಇನ್ನು ಮುಗಿಯುತ್ತಿಲ್ಲ. ಇದಕ್ಕೆ ಹತ್ತು ಹಲವು ಕಾರಣಗಳಿವೆ ಎನ್ನುತ್ತಾರೆ ಗಣತಿದಾರರು.
ಕಂಪ್ಲಿ ತಾಲ್ಲೂಕಿನಲ್ಲಿ ಇದುವರೆಗೂ ಶೆ.77.8 ರಷ್ಟು ಸಮೀಕ್ಷೆ ಮುಗಿದಿದೆ. ಇನ್ನು ಶೇ.23 ರಷ್ಟು ಗಣತಿ ಬಾಕಿ ಇದ್ದು, ಗಣತಿದಾರರು ತಾಲ್ಲೂಕಿನ ಪಟ್ಟಣವೂ ಸೇರಿದಂತೆ ಗ್ರಾಮೀಣ ಪ್ರದೇಶಗಳಲ್ಲಿ ಮನೆ ಮನೆಗೆ ತಿರುಗುತ್ತಿದ್ದರೂ ಸಹಿತ ಗಣತಿ ಕಾರ್ಯ ಮಾತ್ರ ಮುಗಿಯುತ್ತಿಲ್ಲ. ಅ.18ರವರೆಗೂ ಸಮೀಕ್ಷೆಗೆ ಸಮಯಾವಕಾಶವಿದ್ದರೂ ಸಹಿತ ಅಷ್ಟರೊಳಗೆ ಮುಗಿಯುವ ಸಾಧ್ಯತೆಯೂ ಕಡಿಮೆ ಎನ್ನುವಂತಾಗಿದೆ. ಯಾಕೆಂದರೆ ಪಟ್ಟಣವೂ ಸೇರಿದಂತೆ ಗ್ರಾಮೀಣ ಪ್ರದೇಶಗಳಲ್ಲಿ ಮನೆಗಳು ಖಾಲಿ ಇರುವುದು, ಆ ಮನೆಯ ಮಾಲೀಕರು ಪತ್ತೆಯಾಗದಿರುವುದು, ಬೇರೆ ಬೇರೆ ಊರುಗಳಿಗೆ ವಲಸೆ ಹೋಗಿರುವುದು ಸೇರಿದಂತೆ ಹಲವಾರು ಕಾರಣಗಳಿಂದ ಸಮೀಕ್ಷೆ ಪೂರ್ಣಗೊಳ್ಳುತ್ತಿಲ್ಲವೆಂದು ಗಣತಿದಾರರು ಹೇಳುತ್ತಾರೆ. ಇನ್ನು ಕೆಲವು ಕಡೆಗಳಲ್ಲಿ ಗಣತಿದಾರರಿಗೆ ನೀಡಿರುವ ಮನೆ ಮಾಲೀಕರ ಪೋನ್ ನಂಬರ್ಗಳು ತಾಳೆಯಾಗದಿರುವುದು, ಮೊದಲಿನ ಪೋನ್ ನಂಬರ್ಗಳನ್ನು ಬದಲಾಯಿಸಿರುವುದರಿಂದ ಸಮೀಕ್ಷೆಗೆ ಗುರುತಿಸಿರುವವನ್ನು ಸಂಪರ್ಕಿಸುವುದು ಗಣತಿದಾರರಿಗೆ ತಲೆ ನೋವಾಗಿದೆ.
ಊರುಗಳಲ್ಲಿ, ಪಟ್ಟಣದ ಬೀದಿಗಳಲ್ಲಿ ನೆಟ್ ವರ್ಕ್ ಸಮಸ್ಯೆ ಇರುವುದರಿಂದ ಬಹುತೇಕ ಗಣತಿದಾರರು ಊರ ಹೊರಗಿನ ದೇವಸ್ಥಾನ, ಮಂದಿರ, ಬಯಲು ಪ್ರದೇಶಗಳಲ್ಲಿ ಕುಳಿತು, ಸಮೀಕ್ಷೆಗೆ ಗುರುತಿಸಿರುವವರನ್ನು ದೂರವಾಣಿ ಮೂಲಕ ಪತ್ತೆ ಹಚ್ಚಿ ಅವರ ವಿಳಾಸವನ್ನು ಪಡೆದು ಸಮೀಕ್ಷೆ ಮಾಡುವ ಹರಸಾಹವನ್ನು ಮಾಡುತ್ತಿದ್ದಾರೆ. ಆದರೆ, ಗಣತಿದಾರರಿಗೆ ನೀಡಿರುವ ದೂರವಾಣಿ ಸಂಖ್ಯೆಗಳು ಸೂಕ್ತವಾಗಿ ತಾಳೆಯಾಗತ್ತಿಲ್ಲ.ಇದರಿಂದಾಗಿ ತಾಲ್ಲೂಕಿನ ಗಣತಿ ಕಾರ್ಯಕ್ಕೆ ಹಿನ್ನೆಡೆಯಾಗಿದೆ ಎನ್ನುವ ಮಾತುಗಳು ಗಣತಿದಾರರಿಂದ ಕೇಳಿ ಬರುತ್ತಿವೆ. ಆದರೂ ಸಹಿತ ತಾಲ್ಲೂಕಿನಲ್ಲಿ ಗಣತಿಗೆ ನಿಯೋಜನೆಗೊಂಡ ಶಿಕ್ಷಕರು ಸೇರಿದಂತೆ ಎಲ್ಲಾ ಗಣತಿದಾರರು ಮನೆ, ಮನೆಗೆ ತೆರಳಿ ಗಣತಿಯಲ್ಲಿ ತೊಡಗಿರುವುದು ಕಂಡು ಬರುತ್ತಿದೆ.
ತಾಲ್ಲೂಕಿನಲ್ಲಿ ಇದುವರೆಗೂ ಶೇ.77.8ರಷ್ಟು ಸಮೀಕ್ಷೆ ಪೂರ್ಣಗೊಂಡಿದೆ. ತಾಲ್ಲೂಕಿನಲ್ಲಿ ಖಾಲಿ ಮನೆಯವರ ವಿಳಾಸ, ವಲಸೆ ಹೋಗಿರುವುವವರ ವಿಳಾಸವನ್ನು ಪತ್ತೆ ಹಚ್ಚಿ ಸಮೀಕ್ಷೆಯನ್ನು ಪೂರ್ಣಗೊಳಿಸಲಾಗುತ್ತಿದೆ, ಸರ್ಕಾರ ನಿಗಧಿ ಪಡಿಸಿರುವ ಸಮಯದೊಳಗೆ ತಾಲ್ಲೂಕಿನ ಸಾಮಾಜಿಕ, ಶೈಕ್ಷಣಿಕ ಹಾಗೂ ಆರ್ಥಿಕ ಸಮೀಕ್ಷೆಯನ್ನು ಪೂರ್ಣಗೊಳಿಸಲಾಗುವುದು.
- ಜೂಗಲ್ ಮಂಜುನಾಯಕ, ತಹಶೀಲ್ದಾರರು, ಕಂಪ್ಲಿ.
ವರದಿ : ಜಿಲಾನಸಾಬ್ ಬಡಿಗೇರ್



















