ಹಾಸನ:- ಜ4. ಕನ್ನಡ ಭಾಷೆಗೆ ಸುಮಾರು ಮೂರು ಸಾವಿರಕ್ಕೂ ಹೆಚ್ಚು ವರ್ಷಗಳ ಇತಿಹಾಸವಿದ್ದು,
ಕನ್ನಡ ಲಿಪಿಗೆ ಐದು ನೂರು ವರ್ಷಗಳ ಇತಿಹಾಸವಿದೆ. ಕನ್ನಡ ಭಾಷೆಯು ಹಿಂದಿ ಹಾಗೂ ಆಂಗ್ಲ ಭಾಷೆಗಳಿಗಿಂತಲೂ ಪುರಾತನವಾಗಿದೆ ಎಂದು ಮೈಸೂರು ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಸಾಹಿತಿ, ಪತ್ರಕರ್ತ ಹಾಗೂ ಮೈಸೂರು ಜಿಲ್ಲಾ ಕನ್ನಡ ಜಾಗೃತಿ ಸಮಿತಿ ಸದಸ್ಯರಾದ ಡಾ.ಭೇರ್ಯ ರಾಮಕುಮಾರ್ ಬಣ್ಣಿಸಿದರು. ಹಾಸನ ಜಿಲ್ಲೆಯ ಅರಕಲಗೂಡಿನ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ವಿದ್ಯಾರ್ಥಿ ಸಂಘದ ಸಾಂಸ್ಕೃತಿಕ ಹಾಗೂ ಕ್ರೀಡಾ ಚಟುವಟಿಕೆಗಳ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡುತ್ತಿದ್ದ ಅವರು ಗ್ರಾಮೀಣ ಪ್ರದೇಶಗಳಲ್ಲಿ ಕನ್ನಡ ಜೀವಂತವಾಗಿದೆ.ಆದರೆ ನಗರ ಹಾಗೂ ತಾಲ್ಲೂಕು ಕೇಂದ್ರಗಳಲ್ಲಿ ಕನ್ನಡದ ಬಗ್ಗೆ ಅಸಡ್ಡೆ ತೀವ್ರವಾಗುತ್ತಿದೆ. ಉದ್ಯೋಗ ಹಾಗೂ ಆರ್ಥಿಕ ಪ್ರಗತಿಯ ಉದ್ದೇಶದಿಂದ ಯುವ ಜನತೆ ಹಾಗೂ ಪೋಷಕರು ಆಂಗ್ಲ ಮಾದ್ಯಮದ ಹಿಂದೆ ಬಿದ್ದಿದ್ದಾರೆ. ಇನ್ನು ರಾಜಧಾನಿ ಬೆಂಗಳೂರು ಐಟಿ-ಬಿಟಿ ಕಂಪೆನಿಗಳಿಂದಾಗಿ ಪರಭಾಷಿಗರ ತವರಾಗಿದೆ. ಅದೇ ರೀತಿ ದೊಡ್ಡದೊಡ್ಡ ಕಾಮಗಾರಿಗಳಲ್ಲಿ ಹೊರ ರಾಜ್ಯದವರೇ ಹೆಚ್ಚು ಕೆಲಸ ಮಾಡುತ್ತಿದ್ದು, ಅವರು ಕನ್ನಡ ಕಲಿಯುವ ಆಸಕ್ತಿ ತೋರುತ್ತಿಲ್ಲ .ಪರಿಸ್ಥಿತಿ ಹೀಗೇ ಮುಂದುವರೆದರೆ ಕನ್ನಡನಾಡಿನ ರಾಜಧಾನಿ ಬೆಂಗಳೂರಿನಲ್ಲಿ ಕನ್ನಡ ಭಾಷಿಗರು ಅಲ್ಪಸಂಖ್ಯಾತರಾಗುವುದರಲ್ಲಿ ಯಾವುದೇ ಸಂಶಯವಿಲ್ಲ ಎಂದವರು ಆತಂಕ ವ್ಯಕ್ತಪಡಿಸಿದರು.
ಬ್ಯಾಂಕ್ ಗಳು ಹಾಗೂ ಕೇಂದ್ರ ಸರ್ಕಾರಿ ಕಚೇರಿಗಳಲ್ಲಿ ಪರಭಾಷಿಗರ ಹಾವಳಿ ತೀವ್ರವಾಗಿದೆ. ರಾಷ್ಟ್ರೀಯ ಸ್ಪರ್ಧಾ ಪರೀಕ್ಷೆಗಳ ಮೂಲಕ ನೇಮಕಗೊಳ್ಳುವ ಬ್ಯಾಂಕ್ ಸಿಬ್ಬಂದಿ ಆರು ತಿಂಗಳೊಳಗಾಗಿ ಕನ್ನಡ ಭಾಷೆ ಕಲಿಯಬೇಕು. ಬ್ಯಾಂಕ್ ಗ್ರಾಹಕರೊಡನೆ ಕನ್ನಡ ಭಾಷೆಯಲ್ಲಿಯೇ ವ್ಯವಹರಿಸಬೇಕು ಎಂಬ ನಿಯಮವಿದೆ.ಆದರೆ ಪರಭಾಷಾ ಸಿಬ್ಬಂದಿ ಕನ್ನಡಭಾಷೆ ಕಲಿಯುವ ಸೌಜನ್ಯ ತೋರುತ್ತಿಲ್ಲ. ಕನ್ನಡಿಗರು ಬ್ಯಾಂಕ್ ಗಳಲ್ಲಿ ಹಾಗೂ ಕೇಂದ್ರ ಸರ್ಕಾರಿ ಕಚೇರಿಗಳಲ್ಲಿ ಕಡ್ಡಾಯವಾಗಿ ಕನ್ನಡವನ್ನೇ ಬಳಸಬೇಕು ಇದನ್ನು ವಿರೋಧಿಸಿದ ಸಿಬ್ಬಂದಿಗಳ ಮೇಲೆ ಲಿಖಿತ ದೂರು ನೀಡಬೇಕು. ಕನ್ನಡ ಕಲಿಯದ ಸಿಬ್ಬಂದಿಗಳನ್ನು ಕರ್ನಾಟಕದಿಂದಲೇಹೊರಹಾಕುವಂತೆ ಒತ್ತಾಯಿಸಬೇಕು ಎಂದು ಡಾ.ಭೇರ್ಯ ರಾಮಕುಮಾರ್ ಕಿವಿಮಾತು ನುಡಿದರು. ಕನ್ನಡಿಗರೆಲ್ಲರೂ ಕನ್ನಡ ಪತ್ರಿಕೆಗಳನ್ನು ಕೊಂಡು ಓದಬೇಕು. ಕನ್ನಡ ಪುಸ್ತಕಗಳನ್ನು ಓದಬೇಕು. ಕನ್ನಡ ಚಲನಚಿತ್ರಗಳನ್ನೇ ನೋಡಬೇಕು.
ತಮ್ಮೂರಿನ ಜಾನಪದ ಹಾಗೂ ಸಾಂಸ್ಕೃತಿಕ ವೈಭವಗಳನ್ನು ಚಿತ್ರೀಕರಿಸಿ, ದೃಶ್ಯ ಮಾದ್ಯಮಗಳು, ಮುಖಪುಟ ಹಾಗೂ ವಾಟ್ಸಪ್ ಗಳ ಮೂಲಕ ಜಗತ್ತಿನೆಲ್ಲೆಡೆ ಪ್ರಸಾರ ಮಾಡಬೇಕು.ಆಗ ನಮ್ಮ ಭವ್ಯ ಕನ್ನಡ ನಾಡು,ನುಡಿ ,ಸಂಸ್ಕೃತಿ ಬಹುಕಾಲ ಉಳಿಯುತ್ತದೆ. ಈ ಬಗ್ಗೆ ಕನ್ನಡಿಗರು ಜಾಗೃತಿ ವಹಿಸದಿದ್ದರೆ ಕನ್ನಡನಾಡು-ನುಡಿ ವಿನಾಶದತ್ತ ಸಾಗುತ್ತದೆ ಎಂದವರು ಎಚ್ಚರಿಕೆ ನೀಡಿದರು.
ಮತ್ತೊಬ್ಬ ಮುಖ್ಯ ಅತಿಥಿಗಳಾಗಿದ್ದ ಕನ್ನಡ ಪರ ಚಿಂತಕ ಡಾ.ಎಂ.ಆರ್.ವಿನಯ್ ಅವರು ಮಾತನಾಡಿ ಯುವಜನರು ಉತ್ತಮ ಸಾಮಾನ್ಯ ಜ್ಞಾನ, ಕಂಪ್ಯೂಟರ್ ಜ್ಞಾನ,ಆಂಗ್ಲ ಭಾಷಾ ಜ್ಞಾನ, ನಾಯಕತ್ವದ ಗುಣಗಳನ್ನೆ ಬೆಳೆಸಿಕೊಂಡು ಸ್ವಾವಲಂಬಿಗಳಾಗಬೇಕೆಂದು ಕರೆ ನೀಡಿದರು. ಹಳ್ಳಿಮೈಸೂರು ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರಿನ್ಸಿಪಾಲರಾದ ಕುಮಾರಸ್ವಾಮಿ ಅವರು ಮಾತನಾಡಿ ಯುವಜನರು ಬಸವಣ್ಣನವರ ಕಾಯಕ ತತ್ವ ಅನುಸರಿಸಿ ತಮ್ಮ ಬದುಕು ಕಟ್ಟಿಕೊಳ್ಳಬೇಕೆಂದು ಕರೆ ನೀಡಿದರು. ಕಾಲೇಜಿನ ಪ್ರಿನ್ಸಿಪಾಲರಾದ ಶ್ರೀಮತಿ ಗಾಯತ್ರಿ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು.
ಜೈನ ಚಿಂತಕ ಎಸ್.ಬಿ.ಗುಣಚಂದ್ರ ಕುಮಾರ್,
ಕಾಲೇಜಿನ ಸಿಬ್ಬಂದಿ ವರ್ಗದವರು, ಆಡಳಿತ ಮಂಡಳಿಯವರು ಸಮಾರಂಭದಲ್ಲಿ ಉಪಸ್ಥಿತರಿದ್ದರು.