ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಭಕ್ತ ಶ್ರೇಷ್ಠ ಕನಕದಾಸರು

ಒಮ್ಮೆ ಉಡುಪಿಯ ಶ್ರೀಕೃಷ್ಣ ಮಠದ ಮುಖ್ಯಸ್ಥರಾದ ವ್ಯಾಸರಾಜರು ತಮ್ಮ ಎಲ್ಲಾ ಶಿಷ್ಯಂದಿರನ್ನು ಕರೆದು
” ನಿಮಗೆಲ್ಲರಿಗೂ ನಾನೀಗ ಒಂದು ಬಾಳೆಹಣ್ಣನ್ನು ಕೊಡುತ್ತೇನೆ. ನೀವು ತಿನ್ನುವ ಈ ಬಾಳೆಹಣ್ಣನ್ನು ಯಾರೂ ನೋಡಬಾರದು. ಒಂದು ವೇಳೆ ನೀವು ತಿನ್ನುವ ಬಾಳೆಹಣ್ಣನ್ನು ಯಾರಾದರೂ ನೋಡಿದರೆಂದರೆ ನೀವು ಸೋತಂತೆಯೇ ಸರಿ. ಅಷ್ಟೇ ಅಲ್ಲ ನಿಮಗೆ ಮೋಕ್ಷ ಕೂಡಾ ಇಲ್ಲದಂತಾಗುತ್ತದೆ. ಹೀಗಾಗಿ ಯಾರೂ ನೋಡದ ಹಾಗೆ ಈ ಬಾಳೆಹಣ್ಣನ್ನು ನೀವುಗಳೆಲ್ಲರೂ ತಿನ್ನಬೇಕು ” ಎಂದು ಎಲ್ಲರಿಗೂ ತಲಾ ಒಂದೊಂದು ಬಾಳೆಹಣ್ಣನ್ನು ಕೈಗಿತ್ತು ಕಳಿಸಿದರು.
ಎಲ್ಲಾ ಶಿಷ್ಯಂದಿರು ಗೋಡೆಯ ಮರೆಯಲ್ಲೋ, ಹೊದಿಕೆಯನ್ನು ಮೇಲೊದ್ದುಕೊಂಡೋ, ಕಣ್ಣು ಮುಚ್ಚಿಕೊಂಡು, ನಿರ್ಜನ ಪ್ರದೇಶಕ್ಕೆ ತೆರಳಿ ಹಾಗೂ ಇನ್ನೂ ಏನೇನೋ ಕಸರತ್ತನ್ನು ಮಾಡಿ ಹಣ್ಣನ್ನು ತಿಂದುಕೊಂಡು ಬಂದು ಗುರುಗಳಿಗೆ ವಿವರಿಸುತ್ತಾ ಬಹುಶಃ ಗುರುಗಳು ತಮಗೇನೇ ಬಹುಮಾನ ನೀಡಬಹುದೆಂದು ಒಳಗೊಳಗೆ ಖುಷಿಯಾಗಿದ್ದುಕೊಂಡು ಮಾತಾಡಿಕೊಳ್ಳತೊಡಗಿದ್ದರು. ಆದರೂ ಅವರಿಗೆ ಎಲ್ಲೋ ಒಂದು ಕಡೆ ತಳಮಳ ವ್ಯಕ್ತವಾಗುತ್ತಲೇ ಇತ್ತು.
ಆಗ ಭಕ್ತ ಶ್ರೇಷ್ಠನಾದ ಕನನದಾಸನು ಬಾಳೆಹಣ್ಣನ್ನು ತಿನ್ನದೇ ಕೈಯಲ್ಲಿ ಹಿಡಿದುಕೊಂಡು ಬಂದು ವ್ಯಾಸರಾಯರ ಕೈಗಿತ್ತು ವಿನಯಪೂರ್ವಕವಾಗಿ ಸುಮ್ಮನೇ ನಿಂತುಬಿಡುತ್ತಾನೆ. ಆಗ ಉಳಿದ ಶಿಷ್ಯರು “ಇಂತಹ ಒಂದು ಸಣ್ಣ ಬಾಳೆಹಣ್ಣನ್ನು ಯಾರೂ ನೋಡದ ಹಾಗೆ ತಿನ್ನಲಾಗದ ನಿನ್ನಿಂದ ಉಳಿದ ಸಾಧನೆಯಾದರೂ ಹೇಗೆ ತಾನೇ ಮಾಡಲು ಸಾಧ್ಯ..?” ಎಂದು ವ್ಯಂಗ್ಯವಾಗಿ ಹೇಳುತ್ತಿರುವುದನ್ನು ಗಮನಿಸಿದ ಗುರುಗಳು ಅವರೆಲ್ಲರನ್ನೂ ಕಣ್ಸನ್ನೆಯಲ್ಲಿಯೇ ಗದರಿಸುತ್ತಾರೆ. ಗುರುಗಳು ಹೇಳುತ್ತಿರುವುದನ್ನು ಗಂಭೀರವಾಗಿ ಪರಿಗಣಿಸಿ ಶಿಷ್ಯಂದಿರೆಲ್ಲರೂ ಬಾಯಿ ಮುಚ್ಚಿಕೊಂಡು ಸುಮ್ಮನಾದರು. ನಂತರ ಕನಕದಾಸನ ಕಡೆಗೆ ತಿರುಗಿ ” ಯಾಕಪ್ಪಾ ಕನಕ..!! ಯಾರೂ‌ ನೋಡದ ಹಾಗೆ ಈ ಬಾಳೆಹಣ್ಣನ್ನು ತಿನ್ನಲು ಸಾಧ್ಯವಾಗಲಿಲ್ಲವೇ ನಿನಗೆ..? ” ಎಂದು ಕನಕನು ಅವರ ಕೈಗಿತ್ತ ಬಾಳೆಹಣ್ಣನ್ನು ತೋರಿಸುತ್ತಾ ಪ್ರಶ್ನಿಸಿದರು.
ಆಗ ಕನಕನು ” ಗುರುಗಳೇ ಯಾರೂ ನೋಡದ ಹಾಗೆ ಬಾಳೆಹಣ್ಣನ್ನು ತಿನ್ನಲು ಸಾಧ್ಯವೇ ಇಲ್ಲ ” ಎನ್ನುತ್ತಾರೆ. ಆಗ ಅಲ್ಲಿ ನೆರದಿದ್ದ ಉಳಿದ ಜನರೆಲ್ಲರೂ ವ್ಯಂಗ್ಯವಾಗಿ ನಗಲಾರಂಭಿಸಿದರು. ಆಗ ಮತ್ತೊಮ್ಮೆ ” ಅದ್ಹೇಗೆ ಸಾಧ್ಯವಿಲ್ಲ ಎಂದು ಹೇಳುತ್ತೀಯಾ, ಇವರೆಲ್ಲರೂ ಹೇಳಿದ ಹಾಗೆ ನೀನು ಕೂಡಾ ಎಲ್ಲೋ ಮರೆಯಲ್ಲಿ ಹೋಗಿ ಹಣ್ಣನ್ನು ತಿಂದು ಬಂದರೆ ಆಗುತ್ತಿತ್ತಲ್ಲವೇ ” ಎಂದು ಮಾರ್ಮಿಕವಾಗಿ ಪ್ರಶ್ನಿಸಿದರು.
ಆಗ ಕನಕನು ತನ್ನ ಸ್ಪಷ್ಟವಾದ ಉತ್ತರವನ್ನು ಕೊಡುತ್ತಾನೆ. ” ಗುರುಗಳೇ ನನಗೆ ಈ ಹಣ್ಣನ್ನು ಯಾರೂ ನೋಡದ ಹಾಗೇ ತಿನ್ನಲು ಸಾಧ್ಯವಾಗಲಿಲ್ಲ. ಯಾಕೆಂದರೆ ಈ ಜಗತ್ತಿನ ಅಣು-ರೇಣು-ತೃಣ- ಕಾಷ್ಠಗಳಲ್ಲಿ ಆ ಭಗವಂತನಿದ್ದಾನೆ. ಆ ದೇವರು ಸರ್ವಾಂತರ್ಯಾಮಿ. ಆತನಿಲ್ಲದ ಜಾಗವು ಯಾವುದಿದೆ ಸ್ವಾಮಿ..? ಅವನ ಕಣ್ಣು ತಪ್ಪಿಸಿ ತಿನ್ನುವುದಾದರೂ ಹೇಗೆ ಗುರುಗಳೆ..? ನಾನು ಅದೆಷ್ಟೇ ಕದ್ದುಮುಚ್ಚಿ ಹಣ್ಣನ್ನು ತಿಂದರೂ ಕೂಡಾ ಆ ಭಗವಂತ ನಾನು ತಿನ್ನುವ ಹಣ್ಣನ್ನು ನೋಡಿಯೇ ನೋಡುತ್ತಾನೆ ಎಂಬುದು ನನ್ನ ಧೃಡ ಸಂಕಲ್ಪ ಗುರುಗಳೇ..!! ” ಎಂಬುದನ್ನು ಸೊಗಸಾಗಿ, ನೈಜವಾಗಿ ಅಷ್ಟೇ ಮಾರ್ಮಿಕವಾಗಿ ಹೇಳುತ್ತಾನೆ.
ಆಗ ಗುರುಗಳು ಕನಕನ ಉತ್ತರದಿಂದ ತುಂಬಾ ಸಂತುಷ್ಟರಾಗಿ ಮುಖದಲ್ಲಿ ನಗುವಿನ ಮಂದಹಾಸ ಬೀರುತ್ತಾ ಮೆಚ್ಚುಗೆಯಿಂದ , ಹೆಮ್ಮೆಯಿಂದ ” ನಿನ್ನ ಶ್ರೇಷ್ಠವಾದ ಭಕ್ತಿಗೆ ನಾನಷ್ಟೇ ಅಲ್ಲ ಇಡೀ ಬ್ರಹ್ಮಾಂಡವೇ ನಿನ್ನ ಅಚಲವಾದ , ಶ್ರೇಷ್ಠವಾದ ಭಕ್ತಿಗೆ ಮೆಚ್ಚಿಕೊಂಡಿದೆ. ನನಗಂತೂ ನಿನ್ನ ಈ ಉತ್ತರದಿಂದ ನಿನ್ನಂತಹ ಒಬ್ಬ ಶಿಷ್ಯನಿದ್ದಾನೆ ಎಂಬುದಾಗಿ ಬಹಳಷ್ಟು ಹೆಮ್ಮೆ ಎನಿಸುತ್ತಿದೆ. ನಿನ್ನತಹ ಶ್ರೇಷ್ಠ ಭಕ್ತನನ್ನು ಪಡೆದ ನಾನೇ ಧನ್ಯ” ಎಂದು ಹರ್ಷೋದ್ಘಾರದೊಂದಿಗೆ ಕನಕನಿಗೆ ರಾಜ ಮನ್ನಣೆ ನೀಡಿ ಇಂದಿನಿಂದ ನೀ‌ನು ಕನಕ ಮಾತ್ರ ಅಲ್ಲ, ಭಕ್ತ ಶ್ರೇಷ್ಠ ಕನಕದಾಸ ಎಂದು ನಾಮಕರಣ ಮಾಡಿದರು. ಒಟ್ಟಾರೆ ಈ ಘಟನೆಯು ಕನಕದಾಸರ ಪ್ರಾಮಾಣಿಕತೆ ಮತ್ತು ಅವರಲ್ಲಿ ಇರುವ ಶ್ರೇಷ್ಠ ಭಕ್ತಿಯನ್ನು ಪ್ರತಿಬಿಂಬಿಸುವ ಕೈಗನ್ನಡಿಯಾಗಿದೆ.
ಹೀಗಾಗಿಯೇ ನಾವು ಇಂದು ಭಕ್ತಿಯ ಪರಾಕಾಷ್ಠೆಯನ್ನು ಉದಾಹರಿಸುವಾಗಲೆಲ್ಲಾ ಭಕ್ತ ಶ್ರೇಷ್ಠ ಕನಕನನ್ನು ಸ್ಮರಿಸಲೇಬೇಕಾಗುತ್ತದೆ. ಇಂತಹ ಶ್ರೇಷ್ಠ ಸಂತನ ಜನ್ಮದಿನದಂದು ನಮ್ಮ ರಾಜ್ಯ ಸರ್ಕಾರವು 2008 ರಿಂದ ಕನಕದಾಸರ ಜಯಂತಿಯನ್ನು ಆಚರಿಸಿಕೊಂಡು ಬರುತ್ತಿರುವುದು ಅರ್ಥಪೂರ್ಣವಾಗಿದೆ ಅಷ್ಟೇ ಔಚಿತ್ಯವೂ ಕೂಡಾ ಹೌದು.
ಇಂತಹ ಶ್ರೇಷ್ಠ ಸಂತನೊಬ್ಬ ತನ್ನ ಅಗಾಧವಾದ ದಿವ್ಯಶಕ್ತಿಯಿಂದ ಹರಿದಾಸ ಸಂತನಾಗಿ, ಸಮಾಜ ಸುಧಾರಕನಾಗಿ, ಶ್ರೇಷ್ಠ ದಾರ್ಶನಿಕನಾಗಿ, ಕವಿಯಾಗಿ ಮತ್ತು ಒಬ್ಬ ಪ್ರಭಾವಶಾಲಿ ಸಂಗೀತಗಾರನಾಗಿ ದಾಸಶ್ರೇಷ್ಠ ಕನಕದಾಸ ಎಂಬ ಹೆಸರಿನೊಂದಿಗೆ ಪ್ರಚಲಿತನಾಗುತ್ತಾನೆ.
ಈ ಮಹಾನ ಚೇತನವು ಕರ್ನಾಟಕದ ಹಾವೇರಿ ಜಿಲ್ಲೆಯ ಬಾಡ ಎಂಬ ಗ್ರಾಮದಲ್ಲಿ ಕುರುಬ ಸಮಾಜದಲ್ಲಿ 1509 ರಲ್ಲಿ ಜನಿಸಿದರು. ಇವರ ಮೊದಲ ಹೆಸರು ತಿಮ್ಮಪ್ಪನಾಯಕ. ಇವರ ತಂದೆ- ತಾಯಿ
ಆರಂಭದಲ್ಲಿ ಕನಕದಾಸರು ಒಬ್ಬ ಧೀರ ಯೋಧರಾಗಿ ಕಾರ್ಯ ನಿರ್ವಹಿಸುತ್ತಿದ್ದರು ಎಂಬುದು ಬಹಳಷ್ಟು ಜನರಿಗೆ ಗೊತ್ತಿರಲಿಕ್ಲಿಲ್ಲ. ಒಮ್ಮೆ ನಡೆದ ಒಂದು ಯುದ್ಧದಲ್ಲಿ ಗಂಭೀರವಾಗಿ ಗಾಯಗೊಂಡು ಅಧ್ಬುತವಾಗಿ, ಪವಾಡ ಸದೃಶವಾಗಿ ಬದುಕುಳಿದರು. ತದ ನಂತರದಲ್ಲಿ ಈ ನಶ್ವರವಾದ ಲೌಕಿಕ ಜೀವನವನ್ನು ತ್ಯಜಿಸಿ ಭಕ್ತಿ ಮಾರ್ಗದಲ್ಲಿ ಮುನ್ನಡೆದು ಅಪಾರವಾದ ಹೆಸರನ್ನು ಪಡದುಕೊಂಡರು. ಇದಕ್ಕೆ ಮುಖ್ಯ ಕಾರಣೀಕರ್ತರಾಗಿ ಕನಕದಾಸರ ಭಕ್ತನಿಗೆ ಮಾರ್ಗದರ್ಶನ ನೀಡಿ ಅವರ ಬಾಳಿನಲ್ಲಿ ವ್ಯಾಸರಾಯರು ಬೀರಿದ ಪ್ರಭಾವದಿಂದ ಆಧ್ಯಾತ್ಮಿಕ ಜೀವನದಲ್ಲಿ ಅಪಾರವಾದ ಯಶಸ್ಸನ್ನು ಸಾಧಿಸಿದರು. ಅದರ ಪರಿಣಾಮವಾಗಿ ಅನೇಕ ಕೀರ್ತನೆಗಳು, ಉಗಾಭೋಗಗಳು ಮತ್ತು ಭಕ್ತಿಮಾರ್ಗದ ಹಲವು ಕೃತಿಗಳನ್ನು ರಚಿಸಿದರು. ಅವುಗಳೇ ಇಂದಿನ ಸಮಾಜಕ್ಕೆ ಅಮೂಲ್ಯವಾದ ಸಂದೇಶಗಳನ್ನು ನೀಡುತ್ತಲಿವೆ.
ಇವರು ಕೇವಲ ಒಬ್ಬ ಕವಿಯಾಗಿ, ಸಂತನಾಗಿ ಮತ್ತು ಭಕ್ತರಾಗಿರದೇ ಸಮಾಜ ಸುಧಾರಕರಾಗಿಯೂ ಗುರುತಿಸಿಕೊಂಡಿದ್ದಾರೆಂದರೆ ತಪ್ಪಾಗಲಿಕ್ಕಿಲ್ಲ. ಇವರು ಜಾತಿ ವ್ಯವಸ್ಥೆಯ ಬಗ್ಗೆ ಹಾಗೂ ಸಮಾಜದಲ್ಲಿರುವ ಅಂಧಶ್ರದ್ಧೆಗಳನ್ನು ವಿರೋಧಿಸಿ, ಅವುಗಳನ್ನು ಹೊಡೆದೋಡಿಸುವಲ್ಲಿ ಪ್ರಮುಖವಾದರು. ಅಂತೆಯೇ ಮಾನವೀಯ ಮೌಲ್ಯಗಳಿಗೆ ಒತ್ತು ನೀಡಿ ಇದರ ಬಗ್ಗೆ ಜನರಲ್ಲಿ ಪ್ರಚಾರ ಮಾಡುತ್ತಾ ಅವರನ್ನು ಭಕ್ತಿಮಾರ್ಗದ ಮತ್ತು ನೈತಿಕ ನೆಲೆಗಟ್ಟಿನ ದಾರಿಯಲ್ಲಿ ನಡೆಯವಂತೆ ಮಾಡಿದ ಕೀರ್ತಿ ಕನಕದಾಸರಿಗೆ ಸಲ್ಲುತ್ತದೆ. “ಕುಲ ಕುಲ ಕುಲವೆಂದು ಹೊಡೆದಾಡದಿರಿ ನಿಮ್ಮ ಕುಲದ ನೆಲೆಯನೇನು ಬಲ್ಲಿರಾ..!? ” ಎಂಬುದು ಕನಕದಾಸರ ಜನಪ್ರಿಯ ಸಂದೇಶವಾಗಿದೆ.
ಇವರ ಮೋಹನ ತರಂಗಿಣಿ, ನಳಚರಿತ್ರೆ, ಹರಿಭಕ್ತಸಾರ, ರಾಮಧಾನ್ಯ ಚರಿತೆ ಎಂಬ ಕೃತಿಗಳು ಈಗಲೂ ಜನಪ್ರಿಯವಾಗಿದ್ದು, ಜನಸಾಮಾನ್ಯರ ಬದುಕಿಗೆ ದಾರಿದೀಪವಾಗಿವೆ. ಇವರು ತಮ್ಮ ವಚನಗಳಲ್ಲಿ ತಮ್ಮ ಆರಾಧ್ಯ ದೈವನಾದ ‘ಆದಿಕೇಶವ’ ಎಂಬ ಅಂಕಿತನಾಮದೊಂದಿಗೆ ಹಲವಾರು ವಚನಗಳನ್ನು ರಚಿಸಿದ್ದಾರೆ. ಇವುಗಳಲ್ಲಿ ನಾವು ನೈತಿಕ ಮೌಲ್ಯಗಳ ಹಾಗೂ ಸಾಮಾಜಿಕ ಕಳಕಳಿಯ ಅಂಶಗಳನ್ನು ಕಾಣಬಹುದಾಗಿದೆ.
ಹೀಗೆ ಕನಕದಾಸರು ತಮ್ಮ ಜೀವನಪರ್ಯಂತ ಸಮಾಜ ಸುಧಾರಕರಾಗಿ ನಮ್ಮ ಒಳಿತಿಗಾಗಿ ಬದುಕಿ ಒಳ್ಳೆಯ ಆದರ್ಶ ಗುಣಗಳನ್ನು ಮತ್ತು ಶ್ರೇಷ್ಠ ಭಕ್ತಿಯಿಂದ ಮುಕ್ತಿ ಮಾರ್ಗವನ್ನು ‌ಕಂಡುಕೊಳ್ಳುವಲ್ಲಿ ಈಗಿನ ವಾಸ್ತವ ಪ್ರಪಂಚಕ್ಕೆ ತಮ್ಮದೇ ಆದ ಅಪಾರವಾದ ಕೊಡುಗೆಯನ್ನು ನೀಡಿ ಅಮರರಾಗಿದ್ದಾರೆ. ಇಂತಹ ಭಕ್ತಶ್ರೇಷ್ಠರನ್ನು ಸ್ಮರಣೆ ಮಾಡುತ್ತಾ ನಮ್ಮ ಜೀವನವನ್ನು ಹಸನಾಗಿಸಿಕೊಳ್ಳೋಣ.
ಕನಕದಾಸರ ಜಯಂತಿಯನ್ನು ಕೇವಲ ಸರ್ಕಾರದ ವತಿಯಿಂದ ಮಾಡಲಾಗುವ ಆದೇಶದಂತೆ ಕಾಟಾಚಾರಕ್ಕೆಂಬಂತೆ ಆಚರಿಸುವಂತಾಗಬಾರದು. ಇದರಲ್ಲಿ ಎಲ್ಲಾ ಸಮುದಾಯದ ಜನರು ಪಾಲ್ಗೊಂಡು ಕನಕದಾಸರ ಆದರ್ಶ ಗುಣಗಳನ್ನು ಅಳವಡಿಸಿಕೊಳ್ಳಬೇಕು. ನಮ್ಮಲ್ಲಿರುವ ಕೆಲವು ನ್ಯೂನತೆಗಳನ್ನು ಹೋಗಲಾಡಿಸಿಕೊಳ್ಳಲು ಇಂತಹ ಶ್ರೇಷ್ಠ ಸಂತರ ದಿನಾಚರಣೆನ್ನು ಅರ್ಥಪೂರ್ಣವಾಗಿ ಆಚರಿಸುವಂತಾಗಬೇಕು. ಅವರು ಹಾಕಿಕೊಟ್ಟ ಮಾರ್ಗದಲ್ಲಿ ನಾವೆಲ್ಲರೂ ಮುನ್ನಡೆಯಬೇಕು.
ಶಾಲಾ-ಕಾಲೇಜುಗಳಲ್ಲಿ ಈ ದಿನಾಚರಣೆಯನ್ನು ಪರಿಣಾಮಕಾರಿಯಾಗಿ ಆಚರಿಸುವ ನಿಟ್ಟಿನಲ್ಲಿ ಮತ್ತು ವಿದ್ಯಾರ್ಥಿಗಳಿಗೆ ಕನಕದಾಸರ ಜೀವನ ಚರಿತ್ರೆಯನ್ನು ಸವಿಸ್ತಾರವಾಗಿ ತಿಳಿಸಿಕೊಡುವ ಸೂಕ್ತವಾದ ಕಾರ್ಯಕ್ರಮಗಳು ಜರುಗಬೇಕು. ಆಗ ಮಾತ್ರ ಈ ಒಂದು ದಿನಾಚರಣೆಯು ಸಾರ್ಥಕವಾಗುತ್ತದೆ. ಹೀಗಾಗಿ ಎಲ್ಲರೂ ಕನಕದಾಸರ ಹರಿಭಕ್ತಿಸಾರ ಮಾರ್ಗದಲ್ಲಿ ಮುನ್ನಡೆಯೋಣ. ಅವರ ಸಂದೇಶಗಳನ್ನು ಅರಿತುಕೊಂಡು ಸಮಾನತೆಯ ಸದ್ಭಾವನೆಯೊಂದಿಗೆ ಮತ್ತು ಮಾನವ ಕೇಂದ್ರಿತ ಚಿಂತನೆಯೊಂದಿಗೆ ನಮ್ಮ ಜೀವನವನ್ನು ಸಾರ್ಥಕ ಪಡಿಸಿಕೊಳ್ಳೋಣ.

  • ಶ್ರೀನಿವಾಸ.ಎನ್.ದೇಸಾಯಿ, ಶಿಕ್ಷಕರು.
    ಸ. ಮಾ. ಹಿ. ಪ್ರಾ. ಶಾಲೆ, ವಿದ್ಯಾನಗರ ಕುಷ್ಟಗಿ.
ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ

error: Content is protected !!