ಬಳ್ಳಾರಿ / ಕಂಪ್ಲಿ : ಡಾ. ಅಬುಲ್ ಕಲಾಂ ಅಜಾದ್ ಸಮಿತಿ ವತಿಯಿಂದ ಮಂಗಳವಾರ ಮೌಲಾನ ಅಬುಲ್ ಕಲಾಂ ಆಜಾದ್ ಜಯಂತಿಯನ್ನು ಹೊಸಬಸ್ ನಿಲ್ದಾಣ ಹತ್ತಿರ ಆಚರಿಸಲಾಯಿತು. ಅಧ್ಯಕ್ಷ ಐ. ಹೊನ್ನೂರಸಾಬ್ ಮಾತನಾಡಿ ಸ್ವಾತಂತ್ರ್ಯ ಹೋರಾಟಗಾರ, ರಾಷ್ಟ್ರೀಯ ನಾಯಕ, ಸ್ವತಂತ್ರ ಭಾರತದ ಪ್ರಥಮ ಶಿಕ್ಷಣ ಸಚಿವರಾಗಿದ್ದರು.
ಅ ಸಂದರ್ಭದಲ್ಲಿ 1951 ರಲ್ಲಿ ಐಐಟಿ, 1953 ರಲ್ಲಿ ಯುಜಿಸಿ ಸೇರಿದಂತೆ ಹಲವಾರು ವಿಶ್ವವಿದ್ಯಾಲಯಗಳನ್ನು ಸ್ಥಾಪನೆ ಮಾಡುವ ಮೂಲಕ ಭವಿಷ್ಯ ಭಾರತದ ಶಿಕ್ಷಣಕ್ಕೆ ಭದ್ರಬುನಾದಿ ಹಾಕಿದ್ದಾರೆ. ಧರ್ಮ ಆಧಾರಿತ ದೇಶ ವಿಭಜನೆಗೆ ಅವರು ಎಂದೂ ಒಪ್ಪಿರಲಿಲ್ಲ. ಅವರು ರಾಷ್ಟ್ರೀಯವಾದಿ ಆಗಿಯೇ ಇದ್ದರು.
‘ಖಿಲಾಫತ್ ಚಳವಳಿಯ ನಾಯಕತ್ವ ವಹಿಸುವ ಮೂಲಕ ಗಾಂಧೀಜಿ ಅವರಿಗೆ ಹತ್ತಿರವಾಗಿದ್ದರು. ಅಲ್ಲದೆ ತಮ್ಮ 35ನೇ ವರ್ಷದಲ್ಲಿ ಕಾಂಗ್ರೆಸ್ ಅಧ್ಯಕ್ಷರಾಗಿ ಪಕ್ಷವನ್ನು ಮುನ್ನಡೆಸಿದ್ದರು. 1942ರಲ್ಲಿ ಕ್ವಿಟ್ ಇಂಡಿಯಾ ಚಳವಳಿ ನೇತೃತ್ವವಹಿಸಿ ಸೆರೆವಾಸ ಅನುಭವಿಸಿದ್ದರು. ಅವರ ಇತಿಹಾಸವನ್ನು ಯುವಜನರಿಗೆ ತಿಳಿಸುವ ಕೆಲಸ ಆಗಬೇಕು, ಹಾಗೆಯೇ ಆದಷ್ಟು ಶೀಘ್ರವಾಗಿ ಡಾ. ಅಬುಲ್ ಕಲಾಂ ಅಜಾದ್ ರವರ ವೃತ್ತವನ್ನು ನಿರ್ಮಾಣ ಮಾಡಬೇಕೆಂದು ವಿನಂತಿಸಿದರು.
ಶಿಕ್ಷಕ ಸೈಯದ್ ಉಮೇಸ್ ಸಾಹೇಬ್ ಖಾದ್ರಿ ಮಾತನಾಡಿ ‘ನೆಹರೂ ಜನ್ಮದಿನಾಚರಣೆಯನ್ನು ಮಕ್ಕಳ ದಿನಾಚರಣೆಯನ್ನಾಗಿ, ಆಜಾದ್ ಅವರ ಜನ್ಮದಿನಾಚರಣೆಯನ್ನು ಶಿಕ್ಷಣ ದಿನಾಚರಣೆಯನ್ನಾಗಿ ಆಚರಿಸಲಾಗುತ್ತಿದೆ. ಸ್ವಾತಂತ್ರ್ಯ ಹೋರಾಟದಲ್ಲಿ ಪಾಲ್ಗೊಂಡಿದ್ದರು ಎಂಬ ವಿಚಾರವನ್ನು ಹೊರತುಪಡಿಸಿದಂತೆ ಆಜಾದ್ ಅವರ ಬಗ್ಗೆ ಹೆಚ್ಚಿನ ಮಾಹಿತಿಗಳು ಸಿಗುವುದಿಲ್ಲ. ಅವರ ಬಗ್ಗೆ ಹೆಚ್ಚಿನ ಅಧ್ಯಯನಗಳು ನಡೆಬೇಕು, ಆಜಾದ್ ಎಂದಿಗೂ ಧಾರ್ಮಿಕ ಮತೀಯ ಭಾವನೆಗಳನ್ನು ಹೊಂದಿರಲಿಲ್ಲ. ರಾಷ್ಟ್ರೀಯ ಭಾವನೆಗಳ ಮೂಲಕ ಸಮಾಜದ ಏಕೀಕರಣಕ್ಕೆ ಮುಂದಾಗಿದ್ದರು’ ಎಂದರು.
ಪಟ್ಟಣದ ಡಾ. ಅಬುಲ್ ಕಲಾಂ ಆಜಾದ್ ಶಾಲೆಯ ವಿದ್ಯಾರ್ಥಿಗಳಿಗೆ ಚಿತ್ರಕಲೆ, ಉರ್ದು, ಕನ್ನಡ ಭಾಷೆಯ ಚರ್ಚೆ, ಪ್ರಬಂಧ, ಭಾಷಣ ಸ್ಪರ್ಧೆಗಳಲ್ಲಿ ವಿಜೇತ ವಿದ್ಯಾರ್ಥಿಗಳಿಗೆ ಬಹುಮಾನವನ್ನು ವಿತರಿಸಲಾಯಿತು.
ಈ ಸಂದರ್ಭದಲ್ಲಿ ಪುರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ಉಸ್ಮಾನ್, ಅಂಜುಮನ್ ಸಂಸ್ಥೆಯ ಅಧ್ಯಕ್ಷ ಕಡಪ ಮಸ್ತಾನವಲಿ, ಪ್ರಮುಖರಾದ ಮೈಮುದಸಾಬ್, ಕೆ ವಾಹಿದಸಾಬ್, ಬಾವಿಕಟ್ಟೆ ಬಾಬುಸಾಬ್, ಕೆ. ಮೆಹಬೂಬ್, ನವಾಬಸಾಬ್, ಬಾಳೆಕಾಯಿ ಜಾಫರ್ ಸಾಬ್, ಅಕ್ಕಿ ಜಿಲಾನ್, ಮೊಹಮ್ಮದ್ ರಫೀಕ್, ರಿಯಾಜ್ ಅಹಮದ್, ಸಮಿತಿಯ ಉಪಾಧ್ಯಕ್ಷ ಸೈಯದ್ ರಾಜಸಾಬ್, ಪ್ರಧಾನ ಕಾರ್ಯದರ್ಶಿ ರಾಜಭಕ್ಷಿ, ಮೆಹಬೂಬ್, ಹಸನ್, ರಿಯಾಜ್, ನಬಿ ಬೆಳಗೋಡ, ಮಾಭಾಷಾ ಸೇರಿದಂತೆ ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಇದ್ದರು.
ವರದಿ : ಜಿಲಾನಸಾಬ್ ಬಡಿಗೇರ್



















