ಭದ್ರಾವತಿ: ನಗರದ ವಿಶ್ವೇಶ್ವರಾಯ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆ ಮುಚ್ಚುವ ಆದೇಶದ ವಿರುದ್ಧ ಗುತ್ತಿಗೆ ಕಾರ್ಮಿಕರು ಕಾರ್ಖಾನೆ ಮುಂಭಾಗ ನಡೆಸುತ್ತಿರುವ ಅನಿರ್ಧಿಷ್ಟಾವಧಿ ಹೋರಾಟ ಮಂಗಳವಾರ ೨೦ನೇ ದಿನ ಪೂರೈಸಿದ್ದು, ಈ ನಡುವೆ ಹೋರಾಟದ ದಿಕ್ಕು ತಪ್ಪಿಸಲಾಗುತ್ತಿದೆ ಎಂಬ ಆತಂಕ ಇದೀಗ ಪ್ರಗತಿಪರ ಸಂಘಟನೆಗಳಲ್ಲಿ ಎದುರಾಗಿದೆ. ಈ ಹಿನ್ನಲೆಯಲ್ಲಿ ಮಂಗಳವಾರ ಸಂಜೆ ತುರ್ತು ಸಭೆ ನಡೆಸಲಾಯಿತು.
ಪ್ರಗತಿಪರ ಸಂಘಟನೆಯ ಪ್ರಮುಖರಾದ ಸುರೇಶ್ ಸಭೆಯಲ್ಲಿ ಮಾತನಾಡಿ, ಗುತ್ತಿಗೆ ಕಾರ್ಮಿಕರು ಕಳೆದ ೨೦ ದಿನಗಳಿಂದ ನಿರಂತರವಾಗಿ ಹೋರಾಟ ನಡೆಸುತ್ತಿದ್ದಾರೆ. ಆದರೆ ಇದಕ್ಕೆ ಪೂರಕವಾದ ಪ್ರತಿಕ್ರಿಯೆ ಯಾರಿಂದಲೂ ವ್ಯಕ್ತವಾಗುತ್ತಿಲ್ಲ. ಕಾಂಗ್ರೆಸ್, ಜೆಡಿಎಸ್ ಮತ್ತು ಬಿಜೆಪಿ ಪಕ್ಷ ಸೇರಿದಂತೆ ರಾಜಕೀಯ ಪಕ್ಷಗಳು ಹೋರಾಟವನ್ನು ರಾಜಕೀಯವಾಗಿ ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಇದರಿಂದಾಗಿ ಹೋರಾಟ ದಿಕ್ಕು ತಪ್ಪುವ ಸಾಧ್ಯತೆ ಹೆಚ್ಚಾಗಿದೆ. ಈ ಹಿನ್ನಲೆಯಲ್ಲಿ ನಾವುಗಳು ಜಾಗೃತರಾಗಿ ಹೋರಾಟ ನಡೆಸಬೇಕಾದ ಅನಿವಾರ್ಯತೆ ನಿರ್ಮಾಣವಾಗಿದೆ ಎಂದರು.
ರೈತ ಮುಖಂಡ ಯಶವಂತರಾವ್ ಘೋರ್ಪಡೆ ಮಾತನಾಡಿ, ಕಾರ್ಖಾನೆಗಳ ಅಭಿವೃದ್ಧಿ ವಿಚಾರದಲ್ಲಿ ಆಯಾ ಸಂದರ್ಭಗಳಲ್ಲಿ ಕೈಗೊಳ್ಳಬೇಕಾದ ಕಾರ್ಯಗಳನ್ನು ಕೈಗೊಳ್ಳದೆ ನಿರ್ಲಕ್ಷ್ಯ ಧೋರಣೆ ಅನುಸರಿಸಲಾಗುತ್ತಿದೆ. ರಾಜಕಾರಣವೇ ಕಾರ್ಖಾನೆಗಳ ಇಂದಿನ ಸ್ಥಿತಿಗೆ ಮೂಲ ಕಾರಣವಾಗಿದ್ದು, ಆಯಾ ಪಕ್ಷಗಳು ತಮ್ಮದೇ ಆದ ಧೋರಣೆಗಳನ್ನು ಹೊಂದಿವೆ. ರಾಜ್ಯ ಮತ್ತು ಕೇಂದ್ರ ಎರಡು ಸರ್ಕಾರಗಳು ಸಹ ಕಾರ್ಖಾನೆಗಳ ಅಭಿವೃದ್ಧಿ ವಿಚಾರದಲ್ಲಿ ನಿರ್ಲಕ್ಷ್ಯ ಧೋರಣೆ ಅನುಸರಿಸುತ್ತಿವೆ. ಈ ಹಿನ್ನಲೆಯಲ್ಲಿ ಎರಡು ಸರ್ಕಾರಗಳ ವಿರುದ್ಧ ಹೋರಾಟ ನಡೆಸಬೇಕೆಂದರು.
ಬಂಜಾರ ರೈತರ ಸಂಘದ ರಾಜ್ಯಾಧ್ಯಕ್ಷ ಕೃಷ್ಣನಾಯ್ಕ ಮಾತನಾಡಿ, ಹೋರಾಟ ನಿರಂತರವಾಗಿ ನಡೆಯಬೇಕು. ಅದರಲ್ಲೂ ಇದೀಗ ಬೃಹತ್ ಮಟ್ಟದ ಹೋರಾಟ ಹಮ್ಮಿಕೊಳ್ಳುವುದು ಅನಿವಾರ್ಯವಾಗಿದೆ. ಇಲ್ಲವಾದಲ್ಲಿ ಎರಡು ಕಾರ್ಖಾನೆಗಳನ್ನು ಉಳಿಸಿಕೊಳ್ಳುವುದು ಅಸಾಧ್ಯ ಎಂದರು.
ಸಭೆಯಲ್ಲಿ ದಲಿತ ಸಂಘರ್ಷ ಸಮಿತಿ ರಾಜ್ಯ ಖಜಾಂಚಿ ಸತ್ಯ, ಜಿಲ್ಲಾ ಸಂಚಾಲಕ ಚಿನ್ನಯ್ಯ, ಕೋಮು ಸೌಹಾರ್ದ ವೇದಿಕೆಯ ಜಿ. ರಾಜು, ಕರ್ನಾಟಕ ರಕ್ಷಣಾ ವೇದಿಕೆಯ ಮುರಳಿ, ಬಂಜಾರ ಸಂಘದ ಅಧ್ಯಕ್ಷ ಪ್ರೇಮ್‌ಕುಮಾರ್, ಸಿದ್ದಾರ್ಥ ಅಂಧರ ಕೇಂದ್ರದ ಅಧ್ಯಕ್ಷ ಶಿವಬಸಪ್ಪ, ಛಲವಾದಿ ಸಮಾಜದ ಜಯರಾಜ್, ಗೋಪಾಲ್, ಜಗದೀಶ್, ಅಕ್ಷರ ದಾಸೋಹ ನೌಕರರ ಸಂಘದ ಅಧ್ಯಕ್ಷೆ ಹನುಮಮ್ಮ,, ರೇಷ್ಮಬಾನು, ಜಾವಿದ್, ಎಚ್.ಎಂ ಖಾದ್ರಿ, ರಮೇಶ್, ಜೆಬಿಟಿ ಬಾಬು, ಅಸಾದುಲ್ಲಾ ಖಾನ್, ಖದೀರ್, ಗಂಗಾನಾಯ್ಕಗೊಂದಿ, ಯಲ್ಲೋಜಿರಾವ್, ಸಣ್ಣಯ್ಯ, ಎಂ. ನಾರಾಯಣ, ಐಸಾಕ್, ನಿತ್ಯಾನಂದ, ಧರ್ಮರಾಜ್ ಸೇರಿದಂತೆ ಹಲವರು ಸಭೆಯಲ್ಲಿ ಪಾಲ್ಗೊಂಡಿದ್ದರು.
ಕರುನಾಡ ಕಂದ ಜನ ಜಾಗೃತಿ ವೇದಿಕೆ (ರಿ.)
ಕರುನಾಡಕಂದ ಸುದ್ದಿಪತ್ರಿಕೆ ಮತ್ತು ಆನ್‌ಲೈನ್ ತಾಣದ "ಕರುನಾಡ ಕಂದ ಜನಜಾಗೃತಿ ವೇದಿಕೆಯ ವಿಶೇಷ ಪುಟಕ್ಕೆ ಭೇಟಿ ನೀಡಿ