ಸಂಪಾದಕರು: ಬಸವರಾಜ ಬಳಿಗಾರ

ಸಂಪರ್ಕ: 9986366909

ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಹಟ್ಟಿ ಗ್ರಾಮ (ರಾಯಚೂರು ಜಿಲ್ಲೆಯ ಲಿಂಗಸಗೂರು ತಾಲೂಕಿನ ಹಟ್ಟಿ ಚಿನ್ನದ ಗಣಿ)

ನನ್ನ ತಂದೆ ಹನುಮಂತಪ್ಪ ತಾಯಿ ಕಮಲಮ್ಮ ನಾನು ಉಮೇಶ. ಅಪ್ಪ ಸರಕಾರಿ ಶಾಲೆಗೆ ಒಂದನೇ ತರಗತಿಗೆ ಹಚ್ಚಲು ನನ್ನನ್ನು ಮತ್ತು ಅಕ್ಕ ಲಕ್ಷ್ಮೀ ನಮ್ಮಿಬ್ಬರನ್ನು ಖಾಲಿ 25 ರೂ. ಅಡ್ಮಿಷನ್ ಫೀಸ್ ಕಟ್ಟಿ ಸರಕಾರಿ ಶಾಲೆಲಿ ಹಚ್ಚಿದರು. ಟೈ ಬೆಲ್ಟ್ ಫೀಸ್ 25 ರೂ. ಮರುದಿನ ನಮ್ಮ ಅಪ್ಪ ಒಂದು ಪಾಟಿ, ಪೆನ್ಸಿಲ್, ಬ್ಯಾಗ್ ಕೊಡಿಸಿದರು. ಶಾಲೆಯಲ್ಲಿ ಪ್ರೇಯರ್ ಮಾಡಿ ಎಲ್ಲರೂ ಲೈನ್ ಮಾಡಿ ಹೋಗುತ್ತಿದ್ದರೆ, ನಾನು ಒಬ್ಬನೇ ಹೋಗುತ್ತಿದ್ದೆ. ನರಸಪ್ಪ ಸರ್ ನನಗೆ ಮೊದಲ ಬಾರಿ ಭುಜಕ್ಕೆ ಹೊಡೆದರು. ಒಂದು ದಿನ ನಲಿ ಕಲಿ ಕಲಿಸುತ್ತಿದ್ದರು. ಚಂದ್ರಮ್ಮ ಟೀಚರ್ ಅದೆ ವತ್ತಿಗೆ ಸಾಹೇಬ್ರು ಬಂದ್ರು ಎಂದು ಹೇಳಿದರು. ನಾನು ನಲಿ ಕಲಿ ಮಾಡುವುದು ಬಿಟ್ಟು ಸಾಹೇಬ್ರನ ನೋಡೋಕೆ ಹೋದೆ ಆ ಟೀಚರ್ ತಲೆಗೆ ಹೊಡೆದು ಒಳಗೆ ಹೋಗು ಎಂದರು. ನನಗೆ ಸರಿಯಾಗಿ ನೆನಪಿಲ್ಲ ನನಗೆ ತಿಳಿದ ಮಟ್ಟಿಗೆ ಒಂದನೇ ತರಗತಿಯಲ್ಲಿ ಅನ್ಸುತ್ತೆ ಕಸಬಾ ಲಿಂಗಸೂಗೂರು ಜಾತ್ರೆಯಲ್ಲಿ ಆ್ಯಕ್ಸಿಡೆಂಟ್ ( ರಸ್ತೆ ದಾಟಬೇಕಾದರೆ ಬೈಕ್ ಗುದ್ದಿತ್ತು.) ಆಗಿ ಕಾಲು ಅಸ್ತವ್ಯಸ್ತವಾಗಿತ್ತು. ಆದ ಕಾರಣ ಶಾಲೆಗೆ ಸರಿಯಾಗಿ ಹಾಜರಾಗಲು ಆಗಿರಲಿಲ್ಲ ನನ್ನ ಕಾಲು ಸರಿಯಾಗಿ ಮಾಡಿದ್ದು ಅಂಕಲಿಮಠ ಪಕ್ಕದ ಊರಾದ ವ್ಯಾಕರನಾಳದಲ್ಲಿ ನಾಟಿ ಔಷಧಿ ನೀಡುವ ಜನಪದ ವೈದ್ಯ. ಅಪ್ಪ ಕರೆದುಕೊಂಡು ಹೋಗಿ ಔಷಧಿ ಕೊಡಿಸಿದ್ದರು.

ಅಲ್ಲಿ ನನ್ನ ಕಾಲು ರಿಪೇರಿ ಆದ ತಕ್ಷಣ ಮತ್ತೆ ನಾನು ಶಾಲೆಗೆ ಹೋಗಬೇಕಾಯಿತು. ಅಷ್ಟರಲ್ಲೇ ದುರಾದೃಷ್ಣವೋ ಏನೋ ಒಂದು ದಿನ ಬೇಸಿಗೆಯಲ್ಲಿ ಮನೆಯ ಮುಂದಿನ ವಠಾರದಲ್ಲಿ ರಾತ್ರಿ ಮಲಗಿಕೊಂಡಿದ್ದಾಗ ತಲೆಗೆ ನಾಯಿ ಕಡ್ದು ಬಿಡ್ತು. ನಾಯಿ ಕಡ್ದಾಗ ಹೊಚ್ಚಿಕೊಂಡಿದ್ದ ಕೌದಿಯ ತುಂಬೆಲ್ಲ ನನ್ನ ರಕ್ತ ತುಂಬಿತ್ತು ಅವಾಗ ನನ್ನನ್ನು ಕಾಪಾಡಿದ್ದು ಇಡಿ ನಮ್ಮ ಓಣಿ ಮಂದಿ ನನ್ನಪ್ಪ ಅಣ್ಣನಿಗೆ ಏಯ್ ಶೇಖರ್ ಎಂದು ಹೆಸರಿಟ್ಟು ಆಗ ಕರೆದಿದ್ದಷ್ಟೇ ಮಾತ್ರ ಇನ್ನೂ ನೆನಪಿದೆ. ನಮ್ಮ ಓಣಿ ಮಂದಿಗೆ ಕನಸು ಬಿದ್ದಿತ್ತೋ ಏನೂ ಗೊತ್ತಿಲ್ಲ ಬಹಳ ಜನ ಬಂದಿದ್ದರು. ನನ್ನನ್ನು ರಾತ್ರಿಯಲ್ಲಿಯೇ ನಮ್ಮ ಊರಿನ ಹಟ್ಟಿ ಚಿನ್ನದ ಗಣಿ ಕಂಪನಿ ಆಸ್ಪತ್ರೆಗೆ ಕರೆದುಕೊಂಡು ಹೋದರು.

ಅಲ್ಲಿಯ ವೈದ್ಯರು ಎರಡು ಸೂಜಿ(ಇಂಜೆಕ್ಷನ್) ಹಾಕಿ ತಾಲೂಕು ಲಿಂಗಸುಗೂರು ಆಸ್ಪತ್ರೆಗೆ ಕಳಿಸಿದರು, ನನಗೆ ಆ್ಯಕ್ಸಿಡೆಂಟ್ ಆದಾಗ ಅದೇ ಆಸ್ಪತ್ರೆಯಲ್ಲಿ ಅಡ್ಮಿಟ್ ಆಗಿದ್ದೆ. ಮತ್ತೆ ನಾಯಿ ಕಡಿದಾಗ ಅದೇ ದವಾಖಾನೆಗೆ ಬರುವ ಒಂದು ವರ್ಷದಲ್ಲಿ, ರಾತ್ರಿ ಬಾತ್ ರೂಂ. ಬಂದಿತ್ತು ಶೇಖರ್ ಅಣ್ಣಂಗೆ ಹೇಳಿದೆ. ಬರೀ ಕೈ ತೋರಿಸಿದೆ. ಬಾತ್ ರೂಂ ಬಂದಿದೆ ಅಂತ ನನಗೆ ಮಾತಾಡೋಕೆ ಆಗುತ್ತಿರಲಿಲ್ಲ. ಕೈ ಸನ್ನೆ ಮಾಡಿ ನಾಲ್ಕು ಬೆರಳಿಟ್ಟು ಕೈ ತೋರಿಸಿದೆ. ಅಣ್ಣ ಬಾತ್ ರೂಂ. ಹುಡುಕುತ್ತಿದ್ದ ನಾನು ಕೈ ಮಾಡಿ ತೋರಿಸಿದೆ. ಈ ಕಡೆ ಇದೆ ಅಂತ ನನ್ನನ್ನು ಕರೆದು ಬಾತ್ ರೂಂ. ಮಾಡಿಸಿದ. ಬೆಳಗ್ಗೆ ಅಮ್ಮ ಮತ್ತು ಬಸವರಾಜ ಅಣ್ಣ ಆಸ್ಪತ್ರೆಗೆ ಬಂದು ಆಪರೇಷನ್ ಮಾಡಿಸಿದರು. ಅಮ್ಮ ಒಳಗೆ ಬರುತ್ತಿದ್ದರು. ನಾನು ಅಂಜುತ್ತೇನೆ ಅಂತ ಅಮ್ಮನಿಗೆ, ವೈದ್ಯರು ನೀವು ಇದ್ದರೆ ಭಯಬಿಳುತ್ತಾನೆ. ಹೊರಗೆ ಹೋಗಿ ಅಂತ ಕಳಿಸಿದರು. ನನಗೆ ಅವರ ಮೇಲೆ ಗಮನವೇ ಇರಲಿಲ್ಲ. ವೈದ್ಯರು ತಲೆಗೆ ಹೊಲಿಗೆ ಹಾಕುತ್ತಿರುವಾಗ ನಾನು ಬರೀ ಕಣ್ಣು ಪಿಳಪಿಳ ಅಂತ ಬಿಟ್ಕೊಂಡು ಮಲಗಿದ್ದೆ. ಆಪರೇಷನ್ ಮಾಡಿ ಕಳಿಸಿದರು. ಮೂರು ತಿಂಗಳವರೆಗೆ ಕನ್ನಡಿ ನೋಡ್ಕೊಬಾರದು, ಬಿಸಿಲು ಕಾಣಬಾರದು, ಟಿವಿ ನೋಡಬಾರದು, ಪತ್ಯೆ ಮಾಡಬೇಕು, ಜೋಳದ ರೊಟ್ಟಿ ಮತ್ತು ಗಟ್ಟಿ ಬೇಳೆ ತಿನ್ನಬೇಕೆಂದಿದ್ದರು. ಅನ್ನ ಕೂಡ ತಿನ್ನಬಾರದು ಆದರೂ ನಾನು ಕೆಲವು ದಿನಗಳ ನಂತರ ಹೊಟ್ಟೆ ಮತ್ತು ನಾಲಿಗೆಗಾಗಿ ತಾಳಲಾರದೆ ಚಕ್ಕುಲಿ ಮತ್ತು ಚಿತ್ರಾನ್ನ ಮನೆಯಲ್ಲಿ ಯಾರೂ ಇರಲಾರದ ಹೊತ್ತಲ್ಲಿ ತಿಂದಿದ್ದೆ. ವೈದ್ಯರು ಹೇಳಿದ ಹಾಗೆ ಎಲ್ಲವೂ ಅಮ್ಮ ನನ್ನನ್ನು ನೋಡಿಕೊಂಡರು ನನಗೆ ನಿಯಮಗಳನ್ನು ಪಾಲಿಸಿದರು.

ಇವಾಗ ನೋಡಿ ಶಾಲೆಯ ವಿಷಯಕ್ಕೆ ಬರೋಣ ಎರಡನೇ ತರಗತಿಯಲ್ಲಿ ಪರೀಕ್ಷೆ ಇದ್ದಾಗ ದಕ್ಷಿಣ ಭಾರತದ ಪವಿತ್ರ ಕ್ಷೇತ್ರ ಎನಿಸಿಕೊಂಡ ಶ್ರೀ ಗುರುಗುಂಟಾ ಅಮರೇಶ್ವರ ಜಾತ್ರೆಯಲ್ಲಿ ಇದ್ದೆ. ನಮ್ಮ ಕುಟುಂಬದ ಉದ್ಯೋಗ, ಅನ್ನದ ಮೂಲಾಧಾರವೇ ಜಾತ್ರೆಗಳು. ಜಾತ್ರೆಯಲ್ಲಿ ಚಿಲ್ಲರೆ ವ್ಯಾಪಾರಿಗಳಾಗಿ ಸ್ಟೇಷನರಿ ಅಂಗಡಿಯನ್ನು ಜೀವನೋಪಾಯಕ್ಕೆ ಹಾಕುತ್ತೇವೆ. ನನ್ನಕ್ಕ ಲಕ್ಷ್ಮೀ ಎಕ್ಸಾಂ ಬರಿಯೋಕೆ ಹೋದಳು. ಆದರೆ ನನ್ನನ್ನು ಕರೆದಳು ನನಗೆ ಊರಿಗೆ ಹೋಗೊಕೆ ಮನಸ್ಸಿರಲಿಲ್ಲ ಅದ್ಕೆ ಎಕ್ಸಾಂಗೆ ಹಾಜರಾಗಲಿಲ್ಲ. ಮೂರನೇ ತರಗತಿ ಪ್ರಾರಂಭವಾದಾಗ ಶಾಲೆಗೆ ಹೋದೆ ಎರಡನೇ ಕ್ಲಾಸ್ ಟೀಚರ್ ಹೆಸರು ನೆನಪಿಲ್ಲ ಅವರು ನನಗೆ ಗದರಿದರು ಯಾಕೇ ಪರೀಕ್ಷೆ ಬರೆದಿಲ್ಲ ಅಂತ ತಲೆಗೆ ಒಂದು ಏಟು ಹೊಡೆದು ಮೂರನೇ ತರಗತಿಗೆ ಕಳಿಸಿದರು ನಾನು ಅಕ್ಕ ಒಂದೇ ಕಡೆ ಕುಳಿತುಕೊಳ್ಳುತ್ತೀದ್ದೇವು. ನಾನು ಬಹಳ ಹಸಿದಡ್ಡ ನನಗೆ ನಾಲ್ಕನೇ ತರಗತಿಯವರಿಗೆ ಬರೆಯೋಕೆನೇ ಬರುತ್ತಿರಲಿಲ್ಲ. ನಾಲ್ಕನೇ ತರಗತಿಯಲ್ಲಿ ನಾನೇ ಬರೆಯೋದು ರೂಢಿಸಿಕೊಂಡೆ ಸರಕಾರಿ ಶಾಲೆಯಲ್ಲಿ ನಮಗೆ ಏನೂ ಹೇಳುತ್ತಿರಲಿಲ್ಲ ನನಗೆ ದಿನಾಲೂ ನಮ್ಮ ಅಮ್ಮ ಎರಡು ರೂಪಾಯಿ ಕೊಡುತ್ತಿದ್ದರು.

ನಮ್ಮ ಕುಟುಂಬದಲ್ಲಿ ಅರೆ ಅಲೆಮಾರಿತನ ಬೇರೂರುಬಿಟ್ಟಿದೆ. ಜಾತ್ರೆಯಲ್ಲಿ ಸ್ಟೇಷನರಿ ಅಂಗಡಿ ವ್ಯಾಪಾರ ಮಾಡೋರು ನಾನು ಕೂಡ ವ್ಯಾಪಾರ ಮಾಡುತ್ತೇನೆ. ನಾವು ದಿನಾಲೂ ಶಾಲೆಗೆ ಹೋಗಿ ಸಾಯಂಕಾಲ ಆದ್ರೆ ಸಾಕು ಜಾತ್ರೆಗೆ ಹೋಗುತ್ತಿದ್ದೇವು. ಅಲ್ಲೆ ನಮ್ಮೂರಿನ ಅಕ್ಕಪಕ್ಕದ ಊರಿನ ಜಾತ್ರೆಯಲ್ಲಿರುತ್ತಿದ್ದರು. ಪ್ರತಿದಿನ ಬೆಳಿಗ್ಗೆ ಜಾತ್ರೆಯಿಂದ ಮನೆಗೆ ಬಂದು ಶಾಲೆಗೆ ಹೋಗುತ್ತಿದ್ದೇವು ಸಾಯಂಕಾಲ ಶಾಲೆ ಬಿಟ್ಟ ನಂತರ ಮತ್ತೆ ಪಕ್ಕದ ಊರಿನ ಜಾತ್ರೆಗೆ ಹೋಗೋರು. ನಾನು ಮತ್ತು ಅಕ್ಕ ಆದರೆ ನಾನು ಏನೂ ಓದುತ್ತಿರಲಿಲ್ಲ ನನಗೆ ಅಆಇಈನೇ ಬರುತ್ತಿರಲಿಲ್ಲ ಅಕ್ಕ ಉಸ್ಯಾರು ಇದ್ದಳು ಚೆನ್ನಾಗಿ ಓದುತಿದ್ದಳು. ನಾನೇ ದಡ್ಡ ಅಂದ್ರೆ ದಡ್ಡ ಶಾಲೆಯಲ್ಲಿ ಹರಟೆ ಹೊಡೆದು ಸಾಯಂಕಾಲ ಜಾತ್ರೆಗೆ ಹೋಗುತ್ತಿದ್ದೆ. ನಾನು ಕಲಿಯುವ ಸರಕಾರಿ ಶಾಲೆಯಲ್ಲಿ ಏನು ಹೋಂವರ್ಕ್ ಕೊಡುತ್ತಿರಲಿಲ್ಲ. ಹಾಗಾಗಿ ನನಗೆ ಈ ಶಾಲೆಯಲ್ಲಿ ಏನೂ ಕಲಿಯಲಾಗಲಿಲ್ಲ. ನಾನೇ, ಪ್ರಯತ್ನ ಮಾಡಿ ನನ್ನ ಹೆಸರು ಮತ್ತು ಅಪ್ಪನದು ಕಲಿತುಕೊಂಡೆ ಇದೇನು ಯಾರೂ ಕಲಿಸಲಿಲ್ಲ. ನನ್ನ ಆಧಾರ್ ಕಾರ್ಡ್ ನೋಡಿ ಅದರಲ್ಲಿ ಇದ್ದ ಹಾಗೆ ಬರೆದು ಬರೆದು ರೂಢಿಮಾಡಿಕೊಂಡೆ ಕಲಿತುಕೊಂಡೆ ಕಲಿತೆ ನಾನೂ ಸರಕಾರಿ ಶಾಲೆಯಲ್ಲಿದ್ದಾಗ ಕಲ್ತಿದ್ದು ನನ್ನೆಸರು ಅಪ್ಪನ ಹೆಸರು ಮಾತ್ರ ಅದರಾಚೆಗೆ ಬೇರೆನೂ ಬರಲಿಲ್ಲ.

ಐದನೇ ತರಗತಿ ಮುಗಿತಾ ಬಂತು ನನ್ನ ಹಸಿಹಸಿ ದಡ್ಡತನ (ಅಕ್ಷರಜ್ಞಾನ) ನೋಡಿ ಅಣ್ಣ ಶಿವರಾಜ ಇವರನ್ನು ಹೀಗೆಯೇ ಸರಕಾರಿ ಶಾಲೆಯಲ್ಲಿಯೇ ಬಿಟ್ಟರೆ ಕಲಿಯಲ್ಲ ಮತ್ತೂ ಉದ್ಧಾರ ಆಗಲ್ಲ ಅನ್ಕೊಂಡನೇನೋ ಸೀದಾ ಪ್ರೈವೇಟ್ ಶಾಲೆಗೆ ಹಚ್ಚೋಣವೆಂದು ತೀರ್ಮಾನಿಸಿ, ಹಾಗೆಯೇ ಬಸವರಾಜ ಅಣ್ಣ ಶಾಲೆಯಲ್ಲಿ ಟಿಸಿ ಕೇಳಿದರೆ ಕೊಡಲ್ಲ ಅಂದಿದ್ದಾರೆ. ಹತ್ತಾರು ಬಾರೀ ಶಾಲೆಗೆ ಅಡ್ಡಾಡಿದರೂ ಟಿಸಿ ಕೊಡಲ್ಲ ಅಂತಿದ್ದಾರೆ. ನೀನೇ ಬಾ ಅಮ್ಮ ಟಿಸಿ ಕೊಡುತ್ತಿಲ್ಲ ಅಂದಾಗ ಅಮ್ಮ ಹೆಡ್‌ಮೇಡಂಗೆ ಶಾಲೆಗಚ್ಚಿ ಐದು ವರ್ಷವಾಯಿತು ಐದು ಅಕ್ಷರ ಕಲಿಸಿಲ್ಲ ನಿಮ್ಮ ಶಾಲೆ ಬೇಡ ನೀವು ಬೇಡ ಟಿಸಿ ಕೊಡಿ ಆಗ ಅಲ್ಲಿಯೇ ಇದ್ದ ಮತ್ತೊಬ್ಬ ಶಿಕ್ಷಕಿ ನಿಮ್ಮ ಮಕ್ಕಳಿಗೆ ಇವಾಗಿನಿಂದ ಮುಂದೆ ಕೂಡಿಸಿಕೊಂಡು ಕಲಿಸುತ್ತೇವೆ. ಟಿಸಿ ಕೇಳಬೇಡಿ ದಯವಿಟ್ಟು ಅಂದಾಗ, ಅಮ್ಮ ಐದು ವರ್ಷದಿಂದ ಕಲಿಸಲಾರದವರು ಇವಾಗ ಕಲಿಸುತ್ತಾರಂತೆ ನೀವು ಬೇಡ ನಿಮ್ಮ ಶಾಲೆಯೂ ಬೇಡ ಮೊದಲು ಟಿಸಿ ಕೊಡಿ ಅಂತ ಅಮ್ಮ ಸ್ವಲ್ಪ ಜೋರಾಗಿ ಮಾತಾಡಿ ಟಿಸಿ ತಂದರು. ಒಂದನೇ ತರಗತಿಯಿಂದ 5ನೇ ತರಗತಿಯವರಿಗೆ ಕಲ್ತಿದ್ದು ಸರಕಾರಿ ಶಾಲೆಯಲ್ಲಿ. ಆಗ ನನ್ನ ಜೊತೆ ಓದುವ ಸಹಪಾಠಿ ವಿದ್ಯಾರ್ಥಿಗಳು 20 ಜನರಲ್ಲಿ ಈಗ ಓದೋರು ಬರೀ ಇಬ್ಬರು ನಾನು ಮತ್ತು ಗೆಳೆಯ ಹುಡುಗರು ಗಾರೆ ಕೆಲಸ, ಇಬ್ಬರು ಗ್ಯಾರೇಜ್ ನಲ್ಲಿ ಕೆಲಸ ಮಾಡುತ್ತಿದ್ದಾರೆ. ಇನ್ನೂ ಮಿಕ್ಕವರು ಎಲ್ಲೆಲ್ಲೋ ಬಾಲಕಾರ್ಮಿಕರಾಗಿ ಕೆಲಸ ಮಾಡುತ್ತಿದ್ದಾರೆ. ನಾನು ಪ್ರಾಥಮಿಕ ಶಿಕ್ಷಣವನ್ನು ಕಲಿಯುವಾಗ ನನ್ನೂರು ಚಿನ್ನ ಅಗೆಯುತ್ತಿದ್ದರೂ ಗ್ರಾಮವೇ ಆಗಿತ್ತು. ಅದೀಗ ಪಟ್ಟಣವಾಗಿದೆ. ಚಿನ್ನದ ಗಣಿಯ ವ್ಯಾಪ್ತಿಯು ಕ್ಯಾಂಪ್ ಆಗಿ ಅಭಿವೃದ್ಧಿ ಕಾಣುತ್ತಿದೆ.

ಇದು ನನ್ನ ಸರಕಾರಿ ಶಾಲೆಯ ಐದು ವರ್ಷದ ಬಾಲ್ಯದ ಕತೆಯಿದು…

✍️ ಎಸ್. ಕೆ ಉಮೇಶ
ಕಲಾ ವಿಭಾಗ, ಪ್ರಥಮ ಪಿಯುಸಿ, ಕೆ. ಇ ಬೋರ್ಡ್ ಕಾಲೇಜ್, ಧಾರವಾಡ
9663802517

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ