ಇಂಡಿ: ಶಾಸಕರಾದ ಶ್ರೀ ಯಶವಂತರಾಯಗೌಡ ಪಾಟೀಲ್ ಇವರು ಮಾಜಿ ಮುಖ್ಯಮಂತ್ರಿಗಳಾದ ಶ್ರೀ ಸಿದ್ದರಾಮಯ್ಯನವರನ್ನು ಮತ್ತು ಕಾಂಗ್ರೆಸ್ ನ ಇತರ ನಾಯಕರನ್ನು ಅತಿ ವಿಜೃಂಭಣೆಯಿಂದ ಸ್ವಾಗತಿಸಿದರು. ಶ್ರೀ ಸಿದ್ದರಾಮಯ್ಯನವರಿಗೆ ಮತ್ತು ಕಾಂಗ್ರೆಸ್ ನ ಎಲ್ಲಾ ನಾಯಕರಿಗೂ ಇಂಡಿ ಮಹಿಳಾ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರು ನಿರ್ಮಲಾ ತಳಕೇರಿ ಅವರು ಆರತಿಯನ್ನು ಬೆಳಗುವುದರ ಮೂಲಕ ವೇದಿಕೆ ಮೇಲೆ ಸ್ವಾಗತಿಸಿದರು.
ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಇಂಡಿ ಶಾಸಕರಾದ ಶ್ರೀಯಶವಂತರಾಯ ಗೌಡ ಪಾಟೀಲ್ ಇಂಡಿ ತಾಲ್ಲೂಕು ಜಿಲ್ಲೆಯಾಗುವ ಎಲ್ಲಾ ಮೌಲ್ಯಗಳನ್ನು ಹೊಂದಿದ್ದು,ಇದನ್ನು ಜಿಲ್ಲೆಯನ್ನಾಗಿ ಮಾಡಲು ಒತ್ತಾಯಿಸುತ್ತೇವೆ ಎಂದು ಹೇಳಿದರು.
ನಡೆದಾಡುವ ದೇವರೆಂದೇ ಹೆಸರುವಾಸಿ ಆದ ಶ್ರೀ ಸಿದ್ದೇಶ್ವರ ಸ್ವಾಮೀಜಿ ಅವರನ್ನು ನೆನೆಯುತ್ತ ಭಾವುಕರಾದ ಶಾಸಕರು,ಅವರ ಆದರ್ಶಗಳನ್ನು ನಾವು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಇಂತಹ ಪುಣ್ಯವಂತರು ನಮ್ಮ ನಾಡಿನಲ್ಲಿ ಹುಟ್ಟಿ ನಮ್ಮ ನಾಡನ್ನು ಶ್ರೀಮಂತಗೊಳಿಸಿದ್ದಾರೆ ಎಂದರು.
ಬಳಿಕ ಚುನಾವಣೆಯನ್ನು ಉದ್ದೇಶಿಸಿ ಮಾತನಾಡಿದ ಶಾಸಕರು,ರಾಜಕಾರಣ ಎನ್ನುವುದು ಒಂದು ಸೇವಾಕ್ಷೇತ್ರ, ಇಲ್ಲಿ ಪಕ್ಷಕ್ಕಿಂತ ಪ್ರೀತಿ ದೊಡ್ಡದು ಎಂದು ತೋರಿಸಿಕೊಟ್ಟಿದೆ ಎಂದರು.
ನಂತರದಲ್ಲಿ ಮಾತನಾಡಿದ ಮಾಜಿ ಮುಖ್ಯಮಂತ್ರಿ ಶ್ರೀ ಸಿದ್ದರಾಮಯ್ಯ ಬಿಜೆಪಿ ಅಂತಹ ಭ್ರಷ್ಟ ಸರ್ಕಾರ ಹಿಂದೆಂದೂ ನೋಡಿಲ್ಲ,40% ಸರ್ಕಾರವು ಜನರ ಯಾವುದೇ ಬೇಡಿಕೆಗಳನ್ನು ಈಡೇರಿಸಿಲ್ಲ ಮತ್ತು ಜನತಾದಳ ಎಂದೂ ಕೂಡ ಅಧಿಕಾರಕ್ಕೆ ಬರುವುದಿಲ್ಲ. ಕುಮಾರಸ್ವಾಮಿ ಕುರಿತು ಕೊಟ್ಟ ಕುದುರೆಯನ್ನು ಏರದವನು ವೀರನೂ ಅಲ್ಲ-ಶೂರನೂ ಅಲ್ಲ ಎಂದು ವ್ಯಂಗ್ಯ ಮಾಡಿದ್ದಾರೆ.
ಪೂರ್ವದಲ್ಲಿ ಸೂರ್ಯ ಹುಟ್ಟುವುದು ಎಷ್ಟು ಸತ್ಯವೋ ಅಷ್ಟೇ ಸತ್ಯ ಮುಂದಿನ ಬಾರಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರುತ್ತದೆ ಎಂದರು.
ನಂತರದಲ್ಲಿ ಬಿಜೆಪಿ ಪಕ್ಷ ತೊರೆದು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾದ ಪಾಪು ಕಿಟಲಿ ಹಾಗೂ ಭೀಮನ ಗೌಡ್ರು ಉರ್ಪ್ ದಾದಾ ಗೌಡ್ರು ಪಾಟೀಲ್ ಇವರನ್ನು ಮತ್ತು ಜೆಡಿಎಸ್ ತೊರೆದು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾದ ನಾಯಕರನ್ನು ಹಾರ್ದಿಕವಾಗಿ ಸ್ವಾಗತಿಸಿಕೊಂಡರು.
ಶ್ರೀಯಶವಂತರಾಯ ಗೌಡ ಪಾಟೀಲರು ಇಂಡಿ ಮತಕ್ಷೇತ್ರದಲ್ಲಿ 50,000 ಮತಗಳ ಅಂತರದಲ್ಲಿ ಗೆದ್ದು ಬರುವರು ಎಂದು ಆಶ್ವಾಸನೆ ನೀಡಿದರು ಜನರು ಸಹ ನಮ್ಮ ಶಾಸಕರನ್ನು ಮುಂದಿನ ಬಾರಿ ಸಚಿವರನ್ನಾಗಿ ಮಾಡಬೇಕೆಂದು ಘೋಷಣೆಗಳನ್ನು ಕೂಗಿದರು.
ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ 165 ಭರವಸೆಗಳನ್ನು ನೀಡಿ 158 ಭರವಸೆಗಳನ್ನು ಮತ್ತು 30 ಹೆಚ್ಚುವರಿ ಭರವಸೆಗಳನ್ನು ಈಡೇರಿಸುವುದಾಗಿ ಹೇಳಿದರು.
ಈ ನಾಡು ಅಭಿವೃದ್ಧಿಯಾಗಬೇಕಾದರೆ
ಈ ಬಾರಿ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ನಿಮ್ಮ ಮತಗಳನ್ನು ನೀಡಿ ಎಂದು ಜನರಿಗೆ ಹೇಳಿದರು.
ಸಭೆಯಲ್ಲಿ ಶಾಸಕರಾದ ಶ್ರೀ ಯಶವಂತರಾಯ ಗೌಡ ಪಾಟೀಲ್, ಮಾಜಿ ಮುಖ್ಯಮಂತ್ರಿಗಳಾದ ಶ್ರೀ ಸಿದ್ದರಾಮಯ್ಯ, ಮಾಜಿ ಸಚಿವರಾದ ಶ್ರೀ ಎಂ ಬಿ ಪಾಟೀಲ್, ಮಾಜಿ ಸಚಿವೆಯಾದ ಉಮಾಶ್ರೀ ಮತ್ತು ಹಲವಾರು ಸಚಿವರು ಶಾಸಕರು ಜಿಲ್ಲಾ ಪಂಚಾಯತ್ ಸದಸ್ಯರು ತಾಲೂಕು ಪಂಚಾಯತ್ ಸದಸ್ಯರು ಗ್ರಾಮ ಪಂಚಾಯತ್ ಅಧ್ಯಕ್ಷರು ಮತ್ತಿತರರು ಸಭೆಯಲ್ಲಿ ಉಪಸ್ಥಿತರಿದ್ದರು.
ವರದಿ. ಅರವಿಂದ್ ಕಾಂಬಳೆ