ಇಂಡಿ ಪಟ್ಟಣದ ಪೊಲೀಸ್ ಪರೇಡ್ ಮೈದಾನದಲ್ಲಿ ಶನಿವಾರ ಏರ್ಪಡಿಸಿದ್ದ ಪ್ರಜಾಧ್ವನಿ ಯಾತ್ರೆಯಲ್ಲಿ ಶಾಸಕ ಯಶವಂತ ರಾಯಗೌಡ ಪಾಟೀಲ, ಸಿದ್ದರಾಮಯ್ಯ, ಎಂ.ಬಿ ಪಾಟೀಲ ಅವರನ್ನು ಮಾಜಿ ಸೈನಿಕರು ಹೂಹಾರ ಹಾಕಿ ಸನ್ಮಾನಿಸಿದರು.ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಪಡಿತರದಾರರಿಗೆ 10 ಕೆ.ಜಿ. ಅಕ್ಕಿ ಉಚಿತ ಕೊಡುತ್ತೇವೆ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದರು.ಇಂಡಿ ಪಟ್ಟಣದ ಪೊಲೀಸ್ ಪರೇಡ್ ಮೈದಾನದಲ್ಲಿ ಶನಿವಾರ ಏರ್ಪಡಿಸಿದ್ದ ಪ್ರಜಾಧ್ವನಿ ಯಾತ್ರೆಯಲ್ಲಿ ಅವರು ಮಾತನಾಡಿದರು.
ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಪ್ರತಿ ಕುಟುಂಬಕ್ಕೆ 200 ಯುನಿಟ್ ವಿದ್ಯುತ್, ಮನೆಯ ಯಜಮಾನಿಗೆ ಪ್ರತಿ ತಿಂಗಳು ₹2 ಸಾವಿರ ನೀಡಲಾಗುವುದು ಎಂದರು.ರಾಜ್ಯದ ನೀರಾವರಿ ಯೋಜನೆಗಳ ಅನುಷ್ಠಾನಕ್ಕೆ ಐದು ವರ್ಷಗಳಲ್ಲಿ ₹2 ಲಕ್ಷ ಕೋಟಿ ಅನುದಾನ ನೀಡಲಾಗುವುದು ಎಂದರು.ನಮ್ಮ ಭರವಸೆ ಈಡೇರಿಸಲು ಸಾಧ್ಯವಾಗದಿದ್ದರೆ ಒಂದು ಸೆಕೆಂಡ್ ಕೂಡ ಅಧಿಕಾರದಲ್ಲಿ ಇರುವುದಿಲ್ಲ.ಬಿಜೆಪಿ ಬಜೆಟ್ ಹೆಸರಲ್ಲಿ ಚುನಾವಣಾ ಪ್ರಣಾಳಿಕೆ ಮಂಡಿಸಲು ಮುಂದಾಗಿದೆ. ನಾವು ಬಂದು ಪೂರ್ಣ ಪ್ರಮಾಣದ ಬಜೆಟ್ ಮಂಡಿಸುತ್ತೇವೆ ಎಂದರು.
ಬಿಜೆಪಿ ಸರ್ಕಾರ ರಸ್ತೆ ದುರಸ್ತಿ ಮಾಡಿಲ್ಲ. ಸಿಂದಗಿ ಶಾಸಕ ಭೂಸನೂರ ರಸ್ತೆಯನ್ನೇ ಸರಿಯಾಗಿ ಇಟ್ಟುಕೊಂಡಿಲ್ಲ. ಇಂತ ಬಿಜೆಪಿಗೆ ವೋಟ್ ಹಾಕಬೇಕಾ ಎಂದು ಪ್ರಶ್ನಿಸಿದರು.
ಬಿಜೆಪಿಯಂತೆ ವಚನಭ್ರಷ್ಟ ಕೆಲಸ ಮಾಡಲ್ಲ. 600 ಭರವಸೆ ನೀಡಿದ್ದರು. ಕೇವಲ 50 ಭರವಸೆ ಈಡೇರಿಸಿದ್ದಾರೆ ಎಂದರು.
₹1ಲಕ್ಷದ ವರೆಗೆ ರೈತರ ಸಾಲ ಮನ್ನಾ ಮಾಡುತ್ತೇನೆ ಎಂದು ಬಿಜೆಪಿಯವರು ಭರವಸೆ ನೀಡಿದ್ದರು. ಜನರಿಗೆ ಸುಳ್ಳು ಹೇಳಿದ ವಚನ ಭ್ರಷ್ಟರಿಗೆ ವೋಟ್ ಕೊಡುತ್ತೀರಾ? ಎಂದು ಪ್ರಶ್ನಿಸಿದರು.
ಕಾಂಗ್ರೆಸ್ ಸರ್ಕಾರ ಜಾರಿಗೆ ತಂದಿದ್ದ ಕಾರ್ಯಕ್ರಮಗಳಿಗೆ ಬಿಜೆಪಿ ಸರ್ಕಾರ ಅನುದಾನ ನೀಡದೇ ಬಂದ್ ಮಾಡಿದ್ದಾರೆ. ಮನೆಹಾಳ ಸರ್ಕಾರ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಪ್ರತ್ಯೇಕ ಜಿಲ್ಲೆ ಬೇಡಿಕೆ: ಶಾಸಕ ಯಶವಂತ ರಾಯಗೌಡ ಪಾಟೀಲರು ಮಾತನಾಡಿ ಇಂಡಿಯನ್ನು ಪ್ರತ್ಯೇಕ ಜಿಲ್ಲೆಯನ್ನಾಗಿ ಮಾಡಿಕೊಡಬೇಕು ಎಂದು ಸಿದ್ದರಾಮಯ್ಯ ಬಳಿ ಮನವಿ ಮಾಡಿದರು.
ವರದಿ:ಶೀಶೈಲ ಬಬಲಾದಿ