ಚಡಚಣದ ವಿದ್ಯಾನಗರ ಬಡಾವಣೆಯಲ್ಲಿ ಶನಿವಾರ ಶಾಸಕ ದೇವಾನಂದ ಚವ್ಹಾಣ ರಸ್ತೆ ನಿರ್ಮಾಣ ಕಾಮಗಾರಿಗಳಿಗೆ ಭೂಮಿ ಪೂಜೆ ನೆರವೇರಿಸಿದರು
ಚಡಚಣ: ಪಟ್ಟಣವೂ ಸೇರಿದಂತೆ ಮತಕ್ಷೇತ್ರದಲ್ಲಿ ಸಮರ್ಪಕ ಕುಡಿಯುವ ನೀರು ಪೂರೈಕೆ,ಉತ್ತಮ ರಸ್ತೆಗಳ ನಿರ್ಮಾಣ ಸೇರಿದಂತೆ ಮೂಲ ಸೌಲಭ್ಯ ಕಲ್ಪಿಸಲು ಪ್ರಥಮ ಆದ್ಯತೆ ನೀಡಿದ್ದೇನೆ ಎಂದು ಶಾಸಕ ದೇವಾನಂದ ಚವ್ಹಾಣ ಹೇಳಿದರು.ಪಟ್ಟಣದಲ್ಲಿ ಶನಿವಾರ ಪಟ್ಟಣ ಪಂಚಾಯ್ತಿ ವ್ಯಾಪ್ತಿಯಲ್ಲಿನ ವಿವಿಧ ಬಡವಾಣೆಗಳಲ್ಲಿ ಸುಮಾರು ₹40 ಲಕ್ಷ ವೆಚ್ಚದ ಕಾಮಗಾರಿಗಳಿಗೆ ಭೂಮಿ ಪೂಜೆ ನೆರವೇರಿಸಿ ಅವರು ಮಾತನಾಡಿದರು.
ಐದು ವರ್ಷಗಳಲ್ಲಿ ನಾನು ಸಾರ್ವಜನಿಕರಿಗೆ ನೀಡಿದ ಎಲ್ಲ ಭರವಸೆಗಳನ್ನು ಈಡೇರಿಸಿದ ತೃಪ್ತಿ ಇದೆ. ಕೋವಿಡ್ ಹಾಗೂ ಪ್ರವಾಹ ಪರಸ್ಥಿತಿಯಲ್ಲಿ ಹಲವಾರು ಕಾಮಗಾರಿಗಳು ಕುಂಟಿತಗೊಂಡಿದ್ದರೂ ಮುಂದೆ ಅವುಗಳೆಲ್ಲವನ್ನೂ ಆರಂಭಿಸಿದ್ದೇನೆ.ಎಲ್ಲಾ ಸಮುದಾಯ ಹಾಗೂ ಸಾರ್ವಜನಿಕರ ಸಮಸ್ಯೆಗಳಿಗೆ ಸ್ಪಂದಿಸಿದ್ದೇನೆ. ಕೊಟ್ಟ ಭರವಸೆಗಳನ್ನು ಪೂರೈಸಿದ್ದೇನೆ, ಮುಂದೆಯೂ ಜನರ ಸೇವೆಗೆ ಬದ್ಧನಾಗಿರುವೆ ಎಂದರು.
ಪಟ್ಟಣ ಪಂಚಾಯ್ತಿ ಮುಖ್ಯಾಧಿಕಾರಿ ಬಾಬಾಸಾಹೇಬ ತಾವಸೆ ಪ್ರಾಸ್ತಾವಿಕವಾಗಿ ಮಾತನಾಡಿ,ಪಟ್ಟಣದಲ್ಲಿ ಹಲವಾರು ಕಾಮಗಾರಿಗಳನ್ನು ಕೈಗೊಳ್ಳಲಾಗಿದೆ.15 ನೇ ಹಣಕಾಸು ಯೋಜನೆಯಡಿ ಪಟ್ಟಣದಲ್ಲಿ ಸಿ.ಸಿ.ರಸ್ತೆ ನಿರ್ಮಾಣ, ಒಳಚರಂಡಿ, ಮೂತ್ರಾಲಯಗಳ ನಿರ್ಮಾಣ, ರಸ್ತೆಗಳ ಸುಧಾರಣೆ ಕಾಮಗಾರಿಗಳಿಗೆ ಚಾಲನೆ ನೀಡಲಾಗುತ್ತಿದೆ ಎಂದರು
ಪಟ್ಟಣ ಪಂಚಾಯ್ತಿ ಮಾಜಿ ಅಧ್ಯಕ್ಷ ಬಾಬುಗೌಡ ಪಾಟೀಲ, ಮುಖಂಡರಾದ ರಾಜಶೇಖರ ಡೋಣಗಾಂವ, ಯೂನುಸ್ ಸಲಿ ಮಕಾನದಾರ, ಭೀಮಾಶಂಕರ ವಾಳಿಖಿಂಡಿ, ರಾಮ ಮಾಲಾಪೂರ, ಸಚಿನ್ ವಾಲಿ,ಧರೆಪ್ಪ ಬಿರಾದಾರ,ಸತೀಶ ಬಂಡಿ, ಶಿವಶಂಕರ ಡೋಣಜಮಠ,ಲಾಲಸಾಬ ಅತ್ತಾರ, ದೀಪಕ್ ಕದಂ,ಪಟ್ಟಣ ಪಂಚಾಯ್ತಿ ಎಂಜನಿಯರ್ ರವಿಕುಮಾರ ಇದ್ದರು.
ವರದಿ:ಶೀಶೈಲ ಬಬಲಾದಿ