8 ಗಂಟೆಗಳ ಮುನ್ನ ಜನಿಸಿದ ಮಗುವಿಗೆ ಮೃತ ತಂದೆಯನ್ನು ತೋರಿಸಿದ ಕುಟುಂಬಸ್ಥರು.
ಮಹಾರಾಷ್ಟ್ರ: ಆಗಷ್ಟೇ ಮಗುವಿಗೆ ಜನ್ಮ ನೀಡಿದ ಪತ್ನಿ.
ನವಜಾತ ಶಿಶುವನ್ನು ನೋಡಬೇಕಿದ್ದ ಪತಿಯ ನಿಧನ.!
ಈ ಘಟನೆ ಯಾರೊಂದಿಗೂ ನಡೆದರೂ ಅದು ನಿಜಕ್ಕೂ ದುರಂತ. ಇಂತಹ ಒಂದು ಹೃದಯವಿದ್ರಾವಕ ಘಟನೆ ಮಹಾರಾಷ್ಟ್ರದಲ್ಲಿ ನಡೆದಿರುವುದು ವರದಿಯಾಗಿದೆ.
ಮಹಾರಾಷ್ಟ್ರದ ಸತಾರಾ ಜಿಲ್ಲೆಯಲ್ಲಿ ಭಾರತೀಯ ಸೇನೆಯಲ್ಲಿದ್ದ ಯೋಧರೊಬ್ಬರು ಭೀಕರ ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದಾರೆ. ಕುಟುಂಬದಲ್ಲಿ ಸಂತಸ ಮನೆಮಾಡಿದ ವೇಳೆಯೇ ಈ ಘಟನೆ ನಡೆದಿದ್ದು, ಇಡೀ ಊರಿಗೇ ಊರೇ ದುಃಖದಲ್ಲಿ ಮುಳುಗಿದೆ.
ಆಗಿದ್ದೇನು?:
ಸತಾರಾ ತಾಲೂಕಿನ ಡೇರ್ ಗ್ರಾಮದ ನಿವಾಸಿ ಪ್ರಮೋದ್ ಪರಶುರಾಮ್ ಜಾಧವ್ ಸಿಕಂದರಾಬಾದ್-ಶ್ರೀನಗರ ವಲಯದಲ್ಲಿ ಭಾರತೀಯ ಸೇನೆಯಲ್ಲಿ ನಿಯೋಜನೆಗೊಂಡಿದ್ದರು.
ಇತ್ತೀಚೆಗೆ ಪ್ರಮೋದ್ ಪತ್ನಿಯ ಹೆರಿಗೆ ದಿನಾಂಕ ಸಮೀಪಕ್ಕೆ ಬಂದ ಹಿನ್ನೆಲೆ ರಜೆ ಕೇಳಿ ಊರಿಗೆ ಬಂದಿದ್ದರು.
ಪತ್ನಿ ಹೆರಿಗೆ ನೋವಿನಿಂದ ಆಸ್ಪತ್ರೆಗೆ ದಾಖಲಾಗಿದ್ದರು. ಪ್ರಮೋದ್ ವೈಯಕ್ತಿಕ ಕೆಲಸದ ನಿಮಿತ್ತ ವಧೆ ಫಾಟಾ ಕಡೆಗೆ ತನ್ನ ಬೈಕ್ನಲ್ಲಿ ತೆರಳುತ್ತಿದ್ದರು. ಈ ವೇಳೆ ಪುರುಷ್ ಭಿಕ್ಷಕರಿಹೋಂ ಬಳಿ, ಟೆಂಪೋವೊಂದು ಪ್ರಮೋದ್ ಅವರ ಬೈಕ್ಗೆ ಢಿಕ್ಕಿ ಹೊಡೆದಿದೆ. ಅಪಘಾತದ ರಭಸಕ್ಕೆ ಪ್ರಮೋದ್ ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಭಾನುವಾರ (ಜ.11)ರ ಮುಂಜಾನೆ ಜಾಧವ್ ಅವರ ಪಾರ್ಥಿವ ಶರೀರವನ್ನು ಅವರ ಹುಟ್ಟೂರಿಗೆ ತರಲಾಯಿತು. ಅದೇ ಸಮಯದಲ್ಲಿ, ಅವರ ಪತ್ನಿ ಹೆಣ್ಣು ಮಗುವಿಗೆ ಜನ್ಮ ನೀಡಿದರು.
ಸರ್ಕಾರಿ ಗೌರವದೊಂದಿಗೆ ಅಂತ್ಯಕ್ರಿಯೆ ನಡೆಸಲು ಸ್ಥಳೀಯ ಆಡಳಿತ ಮುಂದಾಗಿದೆ. ಈ ವೇಳೆ ಅಂತಿಮ ದರ್ಶನಕ್ಕೆ ಅಪಾರ ಮಂದಿ ಬಂದಿದ್ದಾರೆ.
ಆಗಷ್ಟೇ ಮಗುವಿಗೆ ಜನ್ಮ ನೀಡಿದ್ದ ಪ್ರಮೋದ್ ಅವರ ಪತ್ನಿ ಸ್ಟೇಚರ್ನಲ್ಲಿ ಬಂದಿದ್ದಾರೆ. ಅವರ ಜತೆಗೆ ಹುಟ್ಟಿದ ಕೆಲವೇ ಗಂಟೆಗಳಾಗಿದ್ದ ಪುಟ್ಟ ಮಗುವನ್ನು ಕೈಯಲ್ಲಿ ಹಿಡಿದು ಬಂದಿದ್ದು, ಮೃತ ತಂದೆಯ ಮೊದಲ ಹಾಗೂ ಅಂತಿಮ ದರ್ಶನವನ್ನು ಮಾಡಿಸಿದ್ದಾರೆ.
ಪತ್ನಿ ಪತಿಯ ಪಾರ್ಥಿವ ಶರೀರದ ಮೇಲೆ ಕೈಯಿಟ್ಟು ಬಿಕ್ಕಿ ಬಿಕ್ಕಿ ಅತ್ತಿದ್ದಾರೆ. ಮಗು ಏನು ಅರಿಯದೆ ಆಪ್ತರ ಕೈಯಲ್ಲಿ ಮಲಗಿದೆ.
ಈ ದೃಶ್ಯ ಹೃದಯವಿದ್ರಾವಕ ಘಟನೆಯ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಅನೇಕರು ವಿಡಿಯೋ ನೋಡಿ ವಿಧಿಯನ್ನು ಶಪಿಸಿದ್ದಾರೆ.
ವರದಿ : ಜಿಲಾನಸಾಬ್ ಬಡಿಗೇರ್




















