ಜಗತ್ತಿನ ಬಹುತೇಕ ಜನರು ತಂತ್ರಜ್ಞಾನ ಮತ್ತು ಹೊಸ ಹೊಸ ಆವಿಷ್ಕಾರಗಳ ಅತಿಯಾದ ಬಳಕೆ ಮತ್ತು ಉಪಯೋಗದಿಂದ ಇಂದು ಮಾನಸಿಕ ಹಾಗೂ ದೇಹದ ಇನ್ನಿತರ ಖಾಯಿಲೆಗಳಿಗೆ ತುತ್ತಾಗುತ್ತಿದ್ದಾರೆ ಮತ್ತು ಇದು ಬರೀ ಮಾನವನ ಆರೋಗ್ಯಕ್ಕೆ ಸಂಬಂಧಿಸಿದ್ದಷ್ಟೇ ಅಲ್ಲದೇ ಸುತ್ತಲಿನ ವಾತಾವರಣಕ್ಕೂ,ಪ್ರಾಣಿ ಪಕ್ಷಿಗಳ ಬದುಕಿಗೂ ಮಾರಕವಾಗಿ ಪರಿಣಮಿಸಿದೆ.
ಹೊಸ ಹೊಸ ತಂತ್ರಜ್ಞಾನ ಮತ್ತು ಆವಿಷ್ಕಾರಗಳ ಬೆನ್ನಿಗೆ ಬಿದ್ದ ಮಾನವ ತನ್ನ ದಿನನಿತ್ಯದ ಕೆಲಸ ಕಾರ್ಯಗಳನ್ನೂ ಕೂಡ ನಡೆಸುಕೊಳ್ಳುವಲ್ಲಿ ತಂತ್ರಜ್ಞಾನಗಳ ಮೇಲೆ ಅತಿಯಾಗಿ ಅವಲಂಬಿತವಾಗಿರುವ ಸನ್ನಿವೇಶ ಇಂದು ನಮ್ಮೆದುರಿಗೆ ಸುಳಿದಿದೆ. ಮಾನವನ ಬದುಕಿಗೆ ಬೇಕಾದ ಪ್ರತಿಯೊಂದು ಕಾರ್ಯಗಳಿಗೆ ಇಂದು ತಂತ್ರಜ್ಞಾನ ಸಹಪಾಠಿಯಾಗಿ ನಿಂತಿದೆ.
ಇಂತಹ ತಂತ್ರಜ್ಞಾನದ ಯುಗದಲ್ಲಿ ಮೊಬೈಲ್ ಎಂಬ ಒಂದು ವಿಶೇಷ, ವಿಭಿನ್ನ ಹಾಗೂ ವಿಚಿತ್ರವಾದಂತಹ ತಂತ್ರಜ್ಞಾನ ಇಂದು ಪ್ರತಿಯೊಬ್ಬ ಮಾನವನನ್ನು ಆಳುವಂತಾಗಿದೆ. ಪ್ರತೀ ಕ್ಷಣವೂ ಮೊಬೈಲ್ ಬಳಕೆ ಇಲ್ಲದ ವ್ಯಕ್ತಿಯನ್ನು ಹುಡುಕಿದರೆ ಅದು ಜಗತ್ತಿನ ತುಂಬಾ ಕಷ್ಟಕರವಾದ ಸಂಶೋಧನೆಯಾಗಿರುತ್ತದೆ. ಜಗತ್ತಿನಲ್ಲಿ ಎಷ್ಟು ತಂತ್ರಜ್ಞಾನಗಳು ಅನಾವರಣಗೊಂಡಿವೆಯೋ ಅಷ್ಟೇ ಮಾನವನ ಆರೋಗ್ಯದ ಮೇಲೆ ಪ್ರಭಾವಬೀರುತ್ತವೆ. ಮೊಬೈಲ್ ಎನ್ನುವುದು ಅಂಗೈಯೊಳಗಿನ ಒಂದು ಚಿಕ್ಕ ತಂತ್ರಜ್ಞಾನದ ಸಾಧನೆಯದರೂ ಅದು ಇಡೀ ಜಗತ್ತನ್ನೇ ಅಂಗೈಯಲ್ಲಿ ತೋರಿಸುವಂತಹ ತಂತ್ರವನ್ನು ಒಳಗೊಂಡಿದೆ ಮತ್ತು ಅಂತಹ ವಿಭಿನ್ನ ತಂತ್ರಜ್ಞಾನದಿಂದ ನಾವು ಏನು ಬೇಕಾದರೂ ಕ್ಷಣಾರ್ದಾದಲ್ಲೇ ಪಡೆದುಕೊಳ್ಳಬಹುದು. ಇಂತಹ ಮೊಬೈಲ್ ತಂತ್ರಜ್ಞಾನದಿಂದ ಜಗತ್ತಿನಲ್ಲಿ ಏನೆಲ್ಲಾ ನಡಿಯಬೇಕೋ ಅದೆಲ್ಲಾ ನಡಿಯುತ್ತೆ, ಏನೆಲ್ಲಾ ನಡಿಯಬಾರದೋ ಅದೆಲ್ಲಾ ನಡಿಯುತ್ತೆ ಹಾಗೂ ಸಮಾಜದ ಮೇಲೆಯೂ ಕೆಟ್ಟ ಹಾಗೂ ಒಳ್ಳೆಯತನದ ಪ್ರಭಾವಬೀರುತ್ತದೆ ಆದರೇ ಮಾನವನು ಅದನ್ನು ಉಪಯೋಗಿಸಿಕೊಳ್ಳುವುದರ ಮೇಲೆ ಅವಲಂಬಿತವಾಗಿರುತ್ತದೆ. ಆದರೇ ಅವಶ್ಯಕತೆಗಿಂತ ಅತೀಯಾಗಿ ಮೊಬೈಲ್ ನ್ನು ಉಪಯೋಗಿಸುತ್ತಿದ್ದೇವೆ ಜೊತೆಗೆ ಗೊತ್ತಿಲ್ಲದೇ ಹಲವಾರು ಖಾಯಿಲೆಗಳಿಗೆ ತುತ್ತಾಗುತ್ತಿದ್ದೇವೆ. ಮುಖ್ಯವಾಗಿ ಮನುಷ್ಯನಿಗೆ ಬೇಕಾಗಿದ್ದು ಅವನ ಮಾನಸಿಕ ಸ್ಥಿತಿ, ಮಾನಸಿಕ ಸ್ಥಿತಿ ಸರಿಯಾಗಿದ್ದರೆ ಮಾತ್ರ ಮನುಷ್ಯ ಏನನ್ನು ಬೇಕಾದರೂ ಸಾಧಿಸಲು ಸಾಧ್ಯ. ಹೀಗಿರುವಾಗ ಅತಿಯಾದ ಮೋಬೈಲ್ ಬಳಕೆಯಿಂದ ಮಾನವನ ಮೃದು ಮನಸ್ಸಿನ ಮೇಲೆ ಒತ್ತಡ ಬಿದ್ದು ಅವನ ಆರೋಗ್ಯ ಸ್ಥಿತಿಗೂ ಕಾರಣವಾಗುತ್ತದೆ. ಇತ್ತೀಚಿಗಂತೂ ಚಿಕ್ಕ ಮಕ್ಕಳ ಕೈಯಲ್ಲಿ ಮೊಬೈಲ್ ಇಲ್ಲ ಅಂದ್ರೆ ಮಕ್ಕಳು ಊಟ ಮಾಡುವುದಿಲ್ಲ ನಿದ್ರೆ ಮಾಡುವುದಿಲ್ಲ. ಸ್ವಲ್ಪ ಕೆಲವು ವರ್ಷಗಳ ಹಿಂದಿನ ದಿನಗಳನ್ನು ನೆನಪಿಸಿಕೊಂಡರೆ ಆಗ ಮಕ್ಕಳು ಅತ್ತಾಗ ಅವರ ಕೈಯಲ್ಲಿ ಯಾವುದು ಆಟದ ಬೊಂಬೆಯೋ ಆಟಿಕೆ ವಸ್ತುಗಳನ್ನೊ ಕೊಟ್ಟು ಅವರ ಗಮನವನ್ನು ಅವುಗಳ ಮೇಲಿರಿಸಿ ಸುಮ್ಮನಿರಿಸುವುದು ಮತ್ತು ಊಟ ಮಾಡಲು ತಿರಸ್ಕರಿಸಿದಾಗ ಚಂದ್ರನನ್ನು ತೋರಿಸಿಯೋ ಅಥವಾ ನಾಯಿ ಬರುತ್ತೆ ಹಾಗೆ ಹೀಗೆ ಅಂತ ಏನೇನೋ ಹೇಳಿ ಊಟ ಮಾಡಿಸಿ ಜೋಗುಳದಲ್ಲಿ ತಾಯಿ ಲಾಲಿ ಹಾಡಿ ಮಗುವನ್ನು ಮಲಗಿಸುವಂತಹ ಕಾಲವಿತ್ತು ಆದರೇ ಇಂದು ಅದೆಲ್ಲಾ ಬದಲಾಗಿ ವಿರುದ್ಧ ದಾರಿಯಲ್ಲಿ ನಡಿಯುತ್ತಿದೆ ಅದಕ್ಕೆಲ್ಲಾ ಮೂಲ ಮಂತ್ರ ಈ ಮೊಬೈಲ್ ಎಂಬ ತಂತ್ರ. ಪ್ರತೀ ಕ್ಷಣವೂ ಮಕ್ಕಳ ಕೈಯಲ್ಲಿ ಮೊಬೈಲ್ ಇಲ್ಲವೆಂದರೆ ಅವತ್ತು ಆ ಮಗು ಊಟ ಮಾಡುವುದಿಲ್ಲ, ನಿದ್ದೆ ಮಾಡುವುದಿಲ್ಲ ಮೇಲಾಗಿ ಯಾರನ್ನೂ ನೆಮ್ಮದಿಯಿಂದ ಇರಲು ಬಿಡುವುದಿಲ್ಲ ಅತ್ತು ಅತ್ತು ಆರೋಗ್ಯದಲ್ಲಿ ಏರುಪೇರಾಗಿ ಆಸ್ಪತ್ರೆ ಸೇರುವುದಂತೂ ಖಚಿತ ಹೀಗೆ ಮೊಬೈಲ್ ಒಂದು ಬಿಟ್ಟರೂ ಬಿಡದ ಈ ಮಾಯೆ ಎಂಬಂತಾಗಿ ಮೊಬೈಲ್ ಮನುಷ್ಯನಿಗೆ ಮರಳೋ, ಮನುಷ್ಯ ಮೊಬೈಲ್ ಗೆ ಮರಳೋ ಎಂಬ ಪ್ರಶ್ನೆ ಕಾಡುವಂತಾಗಿದೆ.
ಮೊಬೈಲ್ ಬಳಕೆಯಿಂದಾಗುವ ದುಷ್ಪರಿಣಾಮಗಳು :
ಕಣ್ಣಿನ ಮೇಲೆ ಪರಿಣಾಮ :- ಮುಖ್ಯವಾಗಿ ಚಿಕ್ಕಮಕ್ಕಳ ಹಠಕ್ಕೆ ಅವರ ಕೈಯಲ್ಲಿ ಮೊಬೈಲ್ ಕೊಟ್ಟು ಗೇಮ್ ಹಚ್ಚಿ ಕೊಟ್ಟು ನಮ್ಮ ಕೆಲಸದಲ್ಲಿ ನಾವು ನಿರತರಾಗುವುದರಿಂದ ಮಕ್ಕಳು ಮೊಬೈಲ್ ಉಪಯೋಗಿಸುವಾಗ ಮೊಬೈಲ್ ಸ್ಕ್ರೀನ್ ಬಹಳ ಬ್ರೈಟ್ಟ್ನೆಸ್ ಹೊಂದಿರುವುದರಿಂದ ಮಕ್ಕಳ ಕಣ್ಣುಗಳ ಮೇಲೆ ಕೆಟ್ಟ ಪರಿಣಾಮ ಬೀರಿ ದೃಷ್ಟಿ ಹೀನತೆ, ಕಣ್ಣು ಹುರಿ, ತಲೆನೋವು ಹೀಗೆ ಮುಂತಾದ ಕಾರಣಗಳಿಗೆ ತುತ್ತಾಗಿ ಚಿಕ್ಕಮಕ್ಕಳಿಗೆ ಕನ್ನಡಕ ಧರಿಸುವಂತಹ ಸಾಧ್ಯತೆಗಳು ಹೆಚ್ಚಾಗಿ ಕುರುಡುತನವಾಗಬಹುದು ಮತ್ತು ಇದು ಯುವಕರ ಆರೋಗ್ಯದ ಮೇಲೆಯೂ ಪ್ರಭಾವ ಬೀರಿ ದೂರದೃಷ್ಟಿ, ಸಮೀಪದೃಷ್ಟಿ ಎಂಬಂತಹ ಖಾಯಿಲೆಗೆ ತುತ್ತಾಗುತ್ತಾರೆ ಮತ್ತು ತಲೆನೋವು,ಸಿಟ್ಟು, ಚಂಚಲತೆ, ಲಕ್ಷ್ಯ, ಗಮನಕ್ಕೆ ಕೊರತೆಯುಂಟಾಗುತ್ತದೆ.
ಕಿವಿ: ಅತೀಯಾಗಿ ಮೊಬೈಲ್ ಒಳಗೆ ಮಾತನಾಡುವುದರಿಂದ, ಅತಿಯಾದ ಸೌಂಡ್ ಇಟ್ಟು ಹಾಡು ಕೇಳುವುದರಿಂದ, ಇಯರ್ ಫೋನ್ ಹಾಕಿ ಡಿಜೆ ಹಾಡುಗಳನ್ನು ಬಹಳ ಸೌಂಡ್ ಇಟ್ಟುಕೊಳ್ಳುವುದರಿಂದ ಹಾಗೂ ತಾಸುಗಟ್ಟಲೆ ಮಾತನಾಡುವಾಗ ಮೊಬೈಲ್ ಬಿಸಿಯಾಗಿ ಕಿವಿಗೆ ಬಿಸಿ ತಾಕುವುದು ಇಂತಹ ಕಾರಣಗಳಿಂದ ಕಿವಿಯ ಭಾಗಕ್ಕೆ ತೊಂದರೆಯಾಗಿ ಕಿವಿ ಕೇಳದಂತಾಗಿ ಕಿವುಡುತನಕ್ಕೂ ಕಾರಣವಾಗುತ್ತದೆ.
ಬಾಯಿ : ಅತೀಯಾಗಿ ಮೊಬೈಲ್ ನಲ್ಲಿ ತಾಸುಗಟ್ಟಲೆ ಮಾತನಾಡುವುದರಿಂದ ಬಾಯಿಗೂ ಹಾಗೂ ದವಡೆಗೂ ಆಯಾಸವಾಗಿ ಗಂಟಲಿನಲ್ಲಿ ನೀರಿನಂಶ ಕಡಿಮೆಯಾಗಿ ಗಂಟಲು ಆರುವುದು ಮತ್ತು ಡಿಹೈಡ್ರೇಷನ್ ಆಗುತ್ತದೆ.
ಚರ್ಮ : ಅತೀಯಾಗಿ ಮೊಬೈಲ್ ಬಳಕೆ ಮಾಡುವಾಗ ಮೊಬೈಲ್ ಅತೀ ಬಿಸಿಯಾಗಿ ಬ್ಯಾಟರಿ ಬ್ಲಾಸ್ಟ್ ಆಗಬಹುದು ಅದರಿಂದ ದೇಹದ ಯಾವುದೇ ಭಾಗ ನ್ಯೂನತೆಗೆ ಕಾರಣವಾಗಬಹುದು ಮತ್ತು ಬಿಸಿಯಾದ ಮೊಬೈಲ್ ಉಪಯೋಗಿಸುವುದರಿಂದ ಚರ್ಮದ ಸ್ಪರ್ಶಜ್ಞಾನ ಕಡಿಮೆಯಾಗುತ್ತದೆ ಮತ್ತು ಚರ್ಮದಲ್ಲಿನ ನೀರಿನಂಶ ಮತ್ತು ರಕ್ತ ಸುಟ್ಟು ಅಲರ್ಜಿಗೂ ಕಾರಣವಾಗಬಹುದು.
ಮೆದುಳು : ಅತೀಯಾಗಿ ಮೊಬೈಲ್ ಒಳಗೆ ಮಾತನಾಡುವುದರಿಂದ, ಯಾವಾಗಲೂ ಮೊಬೈಲ್ ಸ್ಕ್ರೀನ್ ನೋಡುವುದರಿಂದ (ರಾತ್ರಿವೇಳೆಯಲ್ಲಿ ಮಾತ್ರ ಬ್ರೈಟ್ಟ್ನೆಸ್ ಕಡಿಮೆ ಇರಬೇಕು), ಬಿಸಿಯಾದ ಮೊಬೈಲ್ ಉಪಯೋಗಿಸುವುದರಿಂದ ಕಣ್ಣಿಗೂ ಆಯಾಸವಾಗಿ, ಕಿವಿಯ ತಮಟೆಯ ಮೇಲೆ ಒತ್ತಡ ಬೀರಿ, ಚರ್ಮದ ಮೇಲೆಯೂ ಪರಿಣಾಮ ಬೀರಿ ನಂತರ ಮೆದುಳಿನ ಮೇಲೆಯೂ ಒತ್ತಡ ಬಿದ್ದಾಗ ಮೆದುಳಿನ ನರಗಳು ಆಯಾಸವಾಗಬಹುದು ಮತ್ತು ಮೆದುಳಿಗೆ ಅನಾವಶ್ಯಕ ಕೆಲಸ ಕೊಟ್ಟಾಗ ತಲೆನೋವು, ಸಿಟ್ಟು, ಚಂಚಲತೆ, ದೃಢ ನಿರ್ಧಾರ ಹಾಳಾಗಬಹುದು, ವಿಚಾರ ಶಕ್ತಿ ಹಾಳಾಗಬಹುದು, ಜ್ಞಾನ ಪಡೆದುಕೊಳ್ಳುವ ಶಕ್ತಿ ಕಡಿಮೆಯಾಗಬಹುದು, ಏಕಾಗ್ರತೆ ಕುಂಠಿತಗೊಳ್ಳಬಹುದು, ಮಾನಸಿಕ ಒತ್ತಡ ಹೆಚ್ಚಾಗಿ ಮನುಷ್ಯ ಮಾನಸಿಕ ರೋಗಕ್ಕೂ ತುತ್ತಾಗಬಹುದು ಮತ್ತು ದೇಹದ ಬೆಳವಣಿಗೆಯ ಮೇಲೂ ಪರಿಣಾಮಬೀರಬಹುದು.
ಅಂಡಾನುವಿನ ಮೇಲೆ ಪರಿಣಾಮ : ಅತಿಯಾದ ಮೊಬೈಲ್ ಬಳಕೆಯಿಂದ ಹಾಗೂ ಈ ಮೇಲಿನ ಎಲ್ಲಾ ಅಂಶಗಳಿಂದ ಹೆಣ್ಣು ಮತ್ತು ಗಂಡಿನ ಅಂಡಾನು ಹಾಗೂ ಸಂತಾನೋತ್ಪತ್ತಿಯ ಸಮಯದಲ್ಲಿ ಗಂಡು- ಹೆಣ್ಣಿನ ಲೈಂಗಿಕ ಕ್ರಿಯೆಯಲ್ಲಿ ಬಿಡುಗಡೆಯಗುವ ಹಾರ್ಮೋನ್ ಗಳಾದ ಇಸ್ಟ್ರೋಜನ್ ಮತ್ತು ಪ್ರಾಜೆಸ್ಟಿರೋನ್ ಮೇಲೂ ಪರಿಣಾಮ ಬೀರುತ್ತದೆ ಎಂಬುದು ಸಾಬೀತಾಗಿದೆ. ಹೀಗೆ ಮೊಬೈಲ್ ಗಳಂತಹ ಇನ್ನಿತರ ತಂತ್ರಜ್ಞಾನ ಸಾಧನಗಳ ಅತಿಯಾದ ಬಳಕೆಯಿಂದ ಮಾನವನ ಮುಖ್ಯವಾದ ಅಂಗಾಗಳ ಮೇಲೆ ಅತಿಯಾದ ಪರಿಣಾಮಬೀರುತ್ತದೆ.ಇಂತಹ ಕಾರಣಕ್ಕಾಗಿಯೇ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯು ಜನರಲ್ಲಿ ಜಾಗೃತಿ ಮೂಡಿಸುವುದಕ್ಕಾಗಿ ಅಕ್ಟೋಬರ್ 10 ರಂದು ಮಾನಸಿಕ ಆರೋಗ್ಯ ದಿನ ಎಂದು ಆಚರಿಸಲಾಗುತ್ತಿದೆ.
ಈ ಎಲ್ಲಾ ಅಂಶಗಳನ್ನು ಮನಗಂಡು ನಾವು ನಮ್ಮ ದಿನನಿತ್ಯದ ಮತ್ತು ಮಿತ್ಯ ಮೊಬೈಲ್ ಬಳಕೆಯ ಮೇಲೆ ಗಮನ ಹರಿಸಿ ನಮ್ಮ ಆರೋಗ್ಯವನ್ನು ನಾವು ಮೂಡುಪಾಗಿಟ್ಟುಕೊಳ್ಳಬೇಕಿದೆ ಮತ್ತು ಮೊಬೈಲ್ ಇಡೀ ಜಗತ್ತನ್ನು ಅಂಗೈಯಲ್ಲಿ ತೋರಿಸಿ ನಮ್ಮ ಆರೋಗ್ಯವನ್ನು ಕಸಿದು ಕೊಳ್ಳುವಂತಹ ಹುನ್ನಾರಕ್ಕೆ ನಾವು ತುತ್ತಾಗದಿರೋಣ. “ನಮ್ಮ ಆರೋಗ್ಯ ನಮ್ಮ ಕೈಯಲ್ಲಿ, ಮಿತವಾಗಿ ಮೊಬೈಲ್ ಬಳಸಿ ಹಿತವಾಗಿ ಜೀವಿಸಿ”.
ಅತಿಯಾದ ಮೊಬೈಲ್ ನಲ್ಲಿ ತಲ್ಲಿನರಾಗುವುದನ್ನು ಬಿಟ್ಟು ಸ್ವಲ್ಪ ಸಮಯ ಸಂಬಂಧಿಕರು, ಸ್ನೇಹಿತರು, ಅಕ್ಕಪಕ್ಕದವರೊಂದಿಗೆ ಪರಸ್ಪರವಾಗಿ ಬೆರೆಯುವುದು, ಮತ್ತೊಬ್ಬರ ಕಷ್ಟ ಸುಖದ ಬಗ್ಗೆ ಮಾತನಾಡುವುದಾಗಲಿ ಅಥವಾ ಬೇರೊಬ್ಬರಿಗೆ ಸಹಾಯ ಮಾಡುವುದಾಗಲಿ, ದಿನಾಲು ಸ್ವಲ್ಪ ಸಮಯ ಮೊಬೈಲ್ ಬಿಟ್ಟು ಧ್ಯಾನದಲ್ಲಿ ಮುಳುಗುವುದು, ಸುತ್ತಲಿನ ಪರಿಸರದೊಂದಿಗೆ ಬೆರೆಯುವುದು, ಒಳ್ಳೆಯ ವಾತಾವರಣದಲ್ಲಿ ಒಬ್ಬಂಟಿಯಾಗಿ ಕುಳಿತು ಪಶು ಪಕ್ಷಿಗಳ ಇಂಚರವನ್ನು ಆಲಿಸುವುದು, ಬಿಡುವಿದ್ದಾಗ ಒಳ್ಳೆಯ ಪುಸ್ತಕಗಳನ್ನು ಓದುವುದು, ವಿಭಿನ್ನ ವಿಚಾರಗಳ ಬಗ್ಗೆ ತಿಳಿಯುವುದು ಬರೆಯುವುದು ಹಿರಿಯರೊಂದಿಗೆ ಬೆರೆತು ವಿಶೇಷ ವಿಚಾರಗಳ ಬಗ್ಗೆ ಚರ್ಚೆ ಮಾಡುವುದು, ಚಿಕ್ಕ ಮಕ್ಕಳ ಜೊತೆಗೆ ಆಟ ಆಡುವುದು, ಗ್ರಾಮೀಣ ಕ್ರೀಡೆಗಳನ್ನು ಆಡುವುದು ಇಂತಹ ಹವ್ಯಾಸಗಳನ್ನು ನಾವು ಮೈಗೂಡಿಸಿಕೊಂಡಾಗ ನಮ್ಮ ಮಾನಸಿಕ ಆರೋಗ್ಯದ ಜೊತೆಗೆ ದೈಹಿಕ ಆರೋಗ್ಯವೂ ಹಿತವಾಗಿರುತ್ತದೆ.
ಲೇಖಕರು :
ಹನುಮಂತ ದಾಸರ ಹೊಗರನಾಳ
ಭಾರತ ಸೇವಾರತ್ನ ರಾಷ್ಟ್ರ ಪ್ರಶಸ್ತಿ ಪುರಸ್ಕೃತರು.
One Response
ತುಂಬಾ ಧನ್ಯವಾದಗಳು ಸರ್