
ಕಂಪ್ಲಿ: ಮಹಿಳೆಯರು ಸ್ವ-ಉದ್ಯೋಗ ಕೈಗೊಳ್ಳುವ ಮೂಲಕ ಆರ್ಥಿಕ ಅಭಿವೃದ್ಧಿ ಸಾಧಿಸಬೇಕು. ಆ ಮೂಲಕ ಸ್ವಾವಲಂಬಿಗಳಾಗಿ ಜೀವನ ನಿರ್ವಹಿಸಲು ಸಾಧ್ಯ ಎಂದು ಪಿಡಿಒ ಶಿಲ್ಪಾರಾಣಿ ಹೇಳಿದರು.
ತಾಲೂಕಿನ ನಂ.10 ಮುದ್ದಾಪುರ ಗ್ರಾಮದ ಹಳೇ ಪಂಚಾಯಿತಿಯಲ್ಲಿ ಸಂಜೀವಿನಿ ಮುದ್ದಾಪುರ ಗ್ರಾಪಂ ಮಟ್ಟದ ಮಹಿಳಾ ಒಕ್ಕೂಟದ ನೇತೃತ್ವದಲ್ಲಿ ಗ್ರಾಪಂ ಸಹಯೋಗದಲ್ಲಿ ಆಯೋಜಿಸಿದ್ದ ಸಂಜೀವಿನಿ ಒಕ್ಕೂಟದ ವಾರ್ಷಿಕ ಸಾಮಾನ್ಯ ಸಭೆ ಹಾಗೂ ಮಾದಕ ಜಾಗೃತಿ ಅಭಿಯಾನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿ, ಸ್ತ್ರೀ-ಶಕ್ತಿ ಸೇರಿದಂತೆ ಒಕ್ಕೂಟದ ಮಹಳೆಯರು ಸರಕಾರದ ಸಾಲ-ಸೌಲಭ್ಯಗಳನ್ನು ಸದ್ಬಳಕೆ ಮಾಡಿಕೊಂಡು ಸ್ವ-ಉದ್ಯೋಗ ಕೈಗೊಳ್ಳಬೇಕು. ಆ ಮೂಲಕ ಸಮಾಜದ ಮುಖ್ಯವಾಹಿನಿಗೆ ಬರಬೇಕು ಎಂದರು.
ಒಕ್ಕೂಟದ ಅಧ್ಯಕ್ಷೆ ಶಕುಂತಲಮ್ಮ ಕಾರ್ಯಕ್ರಮದ ಅಧ್ಯಕ್ಷತೆವಹಿಸಿ ಮಾತನಾಡಿ, ಇಂದಿನ ದಿನಮಾನದಲ್ಲಿ ಮಹಿಳೆಯರು ಮುಖ್ಯವಾಹಿನಿಗೆ ಬರುತ್ತಿದ್ದಾರೆ. ಶಿಕ್ಷಣದೊಂದಿಗೆ ಮತ್ತು ಸ್ವ-ಉದ್ಯೋಗದೊಂದಿಗೆ ಆರ್ಥಿಕವಾಗಿ ಅಭಿವೃದ್ಧಿ ಹೊಂದಲು ಮುಂದಾಗಬೇಕು ಎಂದರು.
ನಂತರ ತಾ. ಪಂ. ಯ ತಾಲೂಕ ಸಂಪನ್ಮೂಲ ಶ್ರೀಗೌರಿ ಮಾತನಾಡಿ, ಮಹಿಳಾ ಮಣಿಗಳು ಸರ್ಕಾರದ ಪ್ರತಿಯೊಂದು ಯೋಜನೆಗಳ ಸದುಪಯೋಗದೊಂದಿಗೆ ಉತ್ತಮ ಬದುಕು ಕಟ್ಟಿಕೊಳ್ಳಬೇಕು ಎಂದು ಸಲಹೆ ನೀಡಿದರು. ಮಂಜುಳಾ ಅವರು ವಾರ್ಷಿಕ ಸಾಮಾನ್ಯ ಸಭೆಯ ವರದಿಯನ್ನು ಮಂಡಿಸಿದರು. ತದ ನಂತರ ವಿವಿಧ ಸ್ಪರ್ಧೆಯಲ್ಲಿ ವಿಜೇತ ಮಹಿಳೆಯರಿಗೆ ಬಹುಮಾನ ವಿತರಿಸಿದರು.
ಈ ಸಂದರ್ಭದಲ್ಲಿ ಒಕ್ಕೂಟದ ಕಾರ್ಯದರ್ಶಿ ಸುಧಾ, ಪಂಚಾಯಿತಿಯ ಅಧ್ಯಕ್ಷೆ ಸೋಮೇಶ್ವರಿ ಪರಶುರಾಮ, ಉಪಾಧ್ಯಕ್ಷೆ ಜಡೆ ಸಾವಿತ್ರಮ್ಮ ಮಹಾದೇವಪ್ಪ, ತಾಲೂಕು ಮಹಿಳಾ ಒಕ್ಕೂಟದ ಸಂಯೋಜಕಿ ಪಾರ್ವತಿ ಸೇರಿದಂತೆ ಮಹಿಳೆಯರು ಪಾಲ್ಗೊಂಡಿದ್ದರು.
ವರದಿ : ಜಿಲಾನಸಾಬ್ ಬಡಿಗೇರ್




















