ಕರ್ನಾಟಕ ದ್ರಾಕ್ಷಿ ಮತ್ತು ದ್ರಾಕ್ಷಿ ರಸ ಮಂಡಳಿಗೆ ₹100 ಕೋಟಿ ಘೋಷಣೆ
ವಿಜಯಪುರ: ನಗರ ಶಾಸಕರಾದ ಬಸನಗೌಡ ರಾ ಪಾಟೀಲ ಯತ್ನಾಳ ಅವರ ಮನವಿ ಮೇರೆಗೆ ಮುಖ್ಯಮಂತ್ರಿ ಬಸವರಾಜ ಮೊಮ್ಮಾಯಿ ಅವರು ಬಜೆಟ್ ದಲ್ಲಿ ಕರ್ನಾಟಕ ದ್ರಾಕ್ಷಿ ಮತ್ತು ದ್ರಾಕ್ಷಾ ರಸ ಮಂಡಳಿ ಅಭಿವೃದ್ಧಿಗೆ ಮತ್ತೆ ₹100 ಕೋಟಿ ಮಂಜೂರು ಮಾಡಿರುವುದು ದ್ರಾಕ್ಷಿ ಬೆಳೆಗಾರರಿಗೆ ಸಂತಸ ತಂದಿದೆ ಎಂದು ಕರ್ನಾಟಕ ರಾಜ್ಯ ದ್ರಾಕ್ಷಿ ಬೆಳೆಗಾರರ ಸಂಘದ ಸದಸ್ಯರಾದ ಎಂ.ಎಸ್.ರುದ್ರಗೌಡರ ತಿಳಿಸಿದ್ದಾರೆ.
ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ದ್ರಾಕ್ಷಿ ವಿಜಯಪುರ ಜಿಲ್ಲೆಯಲ್ಲಿ 75 ಸಾವಿರ ಎಕರೆಗಿಂತಲೂ ಹೆಚ್ಚು ಪ್ರದೇಶದಲ್ಲಿ ದ್ರಾಕ್ಷಿ ಬೆಳೆಯಲಾಗುತ್ತದೆ. ಆದರೆ, ಉತ್ತಮ ಮಾರುಕಟ್ಟೆ ಹಾಗೂ ಕೋಲ್ಡ್ ಸ್ಟೋರೇಜ್ ಗಳ ಸಮಸ್ಯೆಯಿಂದ ದ್ರಾಕ್ಷಿ ಬೆಳೆಗಾರರಿಗೆ ತೊಂದರೆ ಆಗುತ್ತಿತ್ತು. ಇದನ್ನು ಮನಗಂಡು ನಗರ ಶಾಸಕರ ನೇತೃತ್ವದಲ್ಲಿ ದ್ರಾಕ್ಷಿ ಬೆಳೆಗಾರರ ನಿಯೋಗ ಮುಖ್ಯಮಂತ್ರಿಗಳನ್ನು ಭೇಟಿ ಮಾಡಿ, ದ್ರಾಕ್ಷಿ ಬೆಳೆ ಉತ್ತೇಜನಕ್ಕೆ ಕರ್ನಾಟಕ ದ್ರಾಕ್ಷಿ ಮತ್ತು ದ್ರಾಕ್ಷಿ ರಸ ಮಂಡಳಿ ಮಂಜೂರಾತಿಗೆ ಮನವಿ ಮಾಡಿಕೊಳ್ಳಲಾಗಿತ್ತು. ಅದಕ್ಕೆ ಸ್ಪಂದಿಸಿ, ಮಂಜೂರಾತಿ ಮಾಡಿ ಘೋಷಣೆ ಮಾಡಿದಲ್ಲದೆ, ರೂ.35 ಕೋಟಿ ಅನುದಾನ ನೀಡಿದ್ದರು.
ಸುಮಾರು 141 ಎಕರೆ ಪ್ರದೇಶದಲ್ಲಿ ನಿರ್ಮಾಣಗೊಳ್ಳಲಿರುವ ಪಾರ್ಕ್ ಆದಷ್ಟು ಶೀಘ್ರ ಮುಗಿಸಬೇಕೆಂಬ ಮಹಾದಾಸೆಯಿಂದ, ಈಚೆಗೆ ವಿಜಯಪುರ ನಗರದಲ್ಲಿ ನಡೆದ ಪತ್ರಕರ್ತರ ಸಮ್ಮೇಳನಕ್ಕೆ ಆಗಮಿಸಿದ್ದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು, ಶಾಸಕ ಬಸನಗೌಡರ ಮೂಲಕ ಬಜೆಟ್ ನಲ್ಲಿ ರೂ. 100 ಕೋಟಿ ಅನುದಾನ ನೀಡುವಂತೆ ಮನವಿ ಸಲ್ಲಿಸಲಾಗಿತ್ತು. ಅದಕ್ಕೂ ಸಹ ಸಕಾರಾತ್ಮಕ ಸ್ಪಂದಿಸುವ ಮೂಲಕ ಮುಖ್ಯಮಂತ್ರಿ ಗಳು ಅನುದಾನ ಘೋಷಿಸಿದ್ದಾರೆ.
ಈ ಅನುದಾನದಿಂದ ಈ ಭಾಗದ ರೈತರ ಬಹಳ ದಿನಗಳ ಕನಸು ನನಸಾಗುವ ಮೂಲಕ ದ್ರಾಕ್ಷಿ ಬೆಳೆಗೆ ಉತ್ತಮ ಬೆಲೆ ದೊರೆಯುತ್ತದೆ. ಅಂತರಾಷ್ಟ್ರೀಯ ಮಟ್ಟದ ಮಾರುಕಟ್ಟೆಯಾಗಿ ಹೊರಹೊಮ್ಮಲಿದೆ. ಜಿಲ್ಲೆಯ ಅಭಿವೃದ್ಧಿ ಸಹ ಪೂರಕವಾಗಲಿದೆ. ಈ ಮಹತ್ತರ ಕಾರ್ಯಕ್ಕೆ ಕಾರಣಿಕರ್ತರಾದ ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳರು ಹಾಗೂ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಅಭಿನಂದನೆ ಸಲ್ಲಿಸುವುದಾಗಿ ತಿಳಿಸಿದ್ದಾರೆ.