ನಜ್ಮಾ ಬಹಳ ಚಿಕ್ಕ ವಯಸ್ಸಿನಲ್ಲಿ ರಾಜಕೀಯ ಕ್ಷೇತ್ರದಲ್ಲಿ ಪ್ರವರ್ಧಮಾನಕ್ಕೆ ಬಂದವರು. ತಮ್ಮ ವೈಯುಕ್ತಿಕ ಸಾಮರ್ಥ್ಯ ಮತ್ತು ವರ್ಚಸ್ಸಿನಿಂದ ರಾಜಕೀಯದಲ್ಲಿ ಈ ವೇಗದಲ್ಲಿ ಬೆಳೆದ ಮತ್ತೊಬ್ಬ ಮಹಿಳಾ ರಾಜಕಾರಣಿ ಬಹುಶಃ ಕರ್ನಾಟಕದ ರಾಜಕೀಯ ಚರಿತ್ರೆಯಲ್ಲಿ ಪಕ್ಷಾತೀತವಾಗಿ ಮತ್ತು ಧರ್ಮಾತೀತವಾಗಿ ಇಲ್ಲ ಎಂದೇ ಹೇಳಬಹುದು. ಬೆರೆಳೆಣಿಕೆಯಷ್ಟಿರುವ ಹೆಚ್ಚಿನ ಈ ವಯಸ್ಸಿನ ರಾಜಕಾರಣಿಗಳು ಕುಟುಂಬಿಕರ ಯಾ ಪಕ್ಷ ನಾಯಕರ ನೆರಳಲ್ಲಿ ಬೆಳೆದವರು. ನಜ್ಮಾ ವಯಸ್ಸು ರಾಜಕೀಯದ ಪ್ರಾಥಮಿಕ ಪಾಠ ಓದುವ ವಯಸ್ಸಾದರೂ ರಾಜಕೀಯದಲ್ಲಿ ಅವರ ಪಕ್ವತೆ ಮತ್ತು ಪ್ರಬುದ್ಧತೆಗೆ ಇವರ ರಾಜಕೀಯ ವಿರೋಧಿಗಳೇ ಬೆಚ್ಚಿಬಿದ್ದಿರುವುದು ಸುಳ್ಳಲ್ಲ. ರಾಜಕೀಯದಲ್ಲಿದ್ದರೂ ನಾಡಿನ ಸಾಮರಸ್ಯ ಪ್ರಜ್ಞೆಯನ್ನು ನಜ್ಮಾ ಸಮರ್ಥವಾಗಿ ಪ್ರತಿನಿಧಿಸುತ್ತಿರುವುದು ಸಂತೋಷದ ವಿಚಾರ.
ತಮ್ಮ ಸಿದ್ಧಾಂತವು ಸಮಸ್ತ ಸಮಾಜವನ್ನು ಬೆಸೆಯುವ ಸಿದ್ಧಾಂತ ಎಂಬುದು ದೃಢ ನಂಬಿಕೆಯಾಗಿರುವ ಕಾರಣಕ್ಕೆ ಏನೋ, ನಜ್ಮಾ ತಮ್ಮ ವಿಚಾರವನ್ನು ಗಟ್ಟಿ ಧ್ವನಿಯಲ್ಲಿ ಮೊಳಗಿಸುತ್ತಾರೆ. ಈಗೀಗ, ಅದು ಯಾವುದೇ ರಾಜಕೀಯ ಪಕ್ಷದವರಾಗಲಿ ಅವರಲ್ಲಿ ಸೈದ್ಧಾಂತಿಕ ಬದ್ಧತೆ ಕಡಿಮೆ. ಪ್ರಸ್ತುತ ರಾಜಕೀಯ ವ್ಯವಸ್ಥೆ ತೀರ ಆಕ್ರಮಣಕಾರಿಯಾಗಿದ್ದರೂ ಇವರು ಮಾತ್ರ ಸಂಯಮದಿಂದಲೇ ತಮಗನಿಸಿದ್ದನ್ನು ಹೇಳುತ್ತಿದ್ದಾರೆ. ರಾಜಕೀಯ ಸಾಧಕ ಅಬ್ದುಲ್ ನಜೀರ್ ಸಾಬ್ ರವರ ನಂತರ ಕರ್ನಾಟಕದ ಮುಸ್ಲಿಂ ರಾಜಕೀಯ ಪ್ರಾತಿನಿಧಿತ್ವ ಅಷ್ಟು ಸಮಾಧಾನಕರವಾಗಿಲ್ಲ. ಅಪ್ರಬುದ್ಧ ಮತ್ತು ಅಸಂಬದ್ಧ ರಾಜಕೀಯ ಪ್ರಾತಿನಿಧ್ಯದ ಕಾರಣದಿಂದಲೇ ಕರ್ನಾಟಕದ ಮುಸ್ಲಿಂ ಸಮುದಾಯ ಹಿಂದೆಂದಿಗಿಂತಲೂ ಇಂದು ಹೆಚ್ಚು ರಾಜಕೀಯ ಶೋಷಣೆಗೊಳಗಾಗಿದೆ.
ಕರ್ನಾಟಕದ ಮುಸ್ಲಿಮರ ಪಾಲಿನ ಇಂಥ ವಿಷಮ ಕಾಲಘಟ್ಟದಲ್ಲಿ ನಜ್ಮಾ ರಾಜಕೀಯದ ಬಾನಂಗಳದಲ್ಲಿ ಆಶಾಕಿರಣವಾಗಿ ಗೋಚರಿಸುತ್ತಿರುವುದು ಸುಳ್ಳಲ್ಲ. ಇವರು ಪ್ರತಿನಿಧಿಸುವ ರಾಜಕೀಯ ಪಕ್ಷ ಮತ್ತು ಸಮುದಾಯ ಇವರನ್ನು ಅದೆಷ್ಟು ಎತ್ತರಕ್ಕೆ ಬೆಳೆಸಬಲ್ಲುದು ಎಂದು ಕಾದು ನೋಡಬೇಕಿದೆ. ಇವರ ಸಾಮರ್ಥ್ಯದ ಬಗ್ಗೆ ಅನುಮಾನವಿಲ್ಲ. ಆದರೆ ಕುತಂತ್ರ ರಾಜಕಾರಣವೇ ತಂತ್ರವೆಂದು ಪರಿಗಣಿತವಾಗಿರುವ ಈಗಿನ ಕರಾಳ ರಾಜಕಾರಣದಲ್ಲಿ ಕಾಲಕಾಲದ ಪ್ರತಿರೋಧವನ್ನು ನಜ್ಮಾ ಮೀರಿ ಮಿನುಗಬಲ್ಲರೆ ಎಂಬುದು ಪ್ರಶ್ನೆ. ಹೊಸ ಜವಾಬ್ದಾರಿ ಹೊತ್ತಿರುವ ನಜ್ಮಾಗೆ ಶುಭಾಶಯ. ನಿಮ್ಮದೇ ಪರಿವಾರದ ಅಬ್ದುಲ್ ನಜೀರ್ ಸಾಬ್ ನಿಮಗೆ ಆದರ್ಶವಾಗಲಿ. ತನ್ನ ಸ್ವಸಾಮರ್ಥ್ಯದ ಮೂಲಕ ಕರ್ನಾಟಕದ ರಾಜಕಾರಣಕ್ಕೆ ಅಬ್ಬರದ ಪ್ರವೇಶದ ನಿಮ್ಮನ್ನು ಪಕ್ಷವೊಂದರ ಉನ್ನತ ಸ್ಥಾನದಲ್ಲಿ ನೋಡಿ ಖುಷಿಯಾಯಿತು.ಅರ್ಹ ಆಯ್ಕೆ. ಸದುಪಯೋಗವಾಗಲಿ…