ಪರಿಸರ ಉಳಿದರೆ ಮಾತ್ರ ಮನುಕುಲದ ಉಳಿವು: ಡಾ.ಎರ್ರಿಸ್ವಾಮಿ ಅಭಿಮತ
ಸಿಂಧನೂರು :ಅನಾದಿಕಾಲದಿಂದಲೂ ಮನುಕುಲವನ್ನು ಸಾಕಿ-ಸಲುಹಿದ ನಮ್ಮ ಈ ಪರಿಸರವನ್ನು ವಿನಾಸ ಮಾಡುತ್ತಿದ್ದೇವೆ. ಪರಿಸರ ಉಳಿಸಿದರೆ ಮಾತ್ರ ಮನುಕುಲದ ಉಳಿವು ಸಾಧ್ಯವಾಗುತ್ತದೆ ಎಂದು ಪರಿಸರ ವಿದ್ವಾಂಸ ಮತ್ತು ಸತೀಶ್ ಜಾರಕಿಹೊಳಿ ಫೌಂಡೇಷನ್ನ ತಾವರಗೇರಾ ಸ್ಪರ್ಧಾತ್ಮಕ ಕೇಂದ್ರದ ಸಂಪನ್ಮೂಲ ವ್ಯಕ್ತಿಗಳಾದ ಡಾ||ಎರ್ರಿಸ್ವಾಮಿ ಅಭಿಪ್ರಾಯ ವ್ಯಕ್ತಪಡಿಸಿದರು.
ತಾಲೂಕಿನ ಕಲಮಂಗಿ ಹಾಗೂ ವೀರಾಪುರ ಗ್ರಾಮಗಳ ಸರ್ಕಾರಿ ಪ್ರೌಢಶಾಲೆಗಳ ಸಂಯುಕ್ತಾಶ್ರಯದಲ್ಲಿ ಸಾಲುಮರದ ತಿಮ್ಮಕ್ಕ ಇಕೋ ಕ್ಲಬ್ಗಳ ವತಿಯಿಂದ ‘ವನಭೇಟಿ’ ಕಾರ್ಯಕ್ರಮದ ಅಂಗವಾಗಿ ಉಮಲೂಟಿ ಸಮೀಪದ ಸತೀಶ ಜಾರಕಿಹೊಳಿ ಫೌಂಡೇಷನ್ ಅಡಿಯ ನಡೆಯುತ್ತಿರುವ ‘ಬುದ್ಧ ವಿಹಾರ’ ಕೇಂದ್ರದ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ, ವಿಶೇಷ ಉಪನ್ಯಾಸ ನೀಡುತ್ತಾ, ಮುಂದಿನ ಪೀಳಿಗೆ ಸುಂದರ ಮತ್ತು ಸುರಕ್ಷಿತ ಪರಿಸರವನ್ನು ಬಿಟ್ಟು ಕೊಡಬೇಕಾಗಿದೆ. ಪರಿಸರವನ್ನು ಹಾಳುಮಾಡುವುದರಿಂದ ಮನುಷ್ಯ ಜೀವಕ್ಕೆ ಅಪಾಯವಿದೆ. ಪಕ್ಕದ ವಿಜಯನಗರ-ಬಳ್ಳಾರಿ ಜಿಲ್ಲೆಗಳ ಸಂಡೂರ ಮತ್ತು ಸುತ್ತ-ಮುತ್ತ ನಡೆದ ಗಣಿಗಾರಿಕೆಯ ಪರಿಣಾಮ ಪರಿಸರ ನಾಶದ ಜೊತೆಗೆ ಇನ್ನೂ ಕೂಡ ಅನೇಕರು ಶ್ವಾಸಕೋಶ ಸಂಬಂಧಿತ ಮತ್ತು ಇನ್ನಿತರ ಕಾಯಿಲೆಗಳಿಂದ ಬಳಲಿ ಸಾವನ್ನಪ್ಪಿದ್ದಾರೆ. ಅನೇಕರು ಇನ್ನೂ ಸಹ ಅನೇಕ ಕಾಯಿಲೆಗಳಿಂದ ಬಳಲುತ್ತಿದ್ದಾರೆ. ಆದ್ದರಿಂದ ಇಂದಿನ ಯುವಕರು ಮತ್ತು ವಿದ್ಯಾರ್ಥಿಗಳು ಪರಿಸರವನ್ನು ಸುಸ್ಥಿರಗೊಳಿಸುವಲ್ಲಿ ಪ್ರತಿಯೊಬ್ಬರೂ ಕೈಜೋಡಿಸಬೇಕು ಎಂದು ಹೇಳುತ್ತಾ, ಕೇಂದ್ರ ಮತ್ತು ರಾಜ್ಯ ಸರ್ಕಾರದ ವಿವಿಧ ಇಲಾಖೆಗಳ ನೇಮಕಾತಿಗಳಿಗೆ ನಡೆಸುವ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಈ ಕೇಂದ್ರದಲ್ಲಿ ಉಚಿತವಾಗಿ ತರಬೇತಿಯನ್ನು ನೀಡಲಾಗುತ್ತಿದೆ. ಇದರ ಸೌಲಭ್ಯವನ್ನು ಪ್ರತಿಯೊಬ್ಬರೂ ಪಡೆದುಕೊಳ್ಳಬೇಕು ಎಂದರು.
ಕಲಮಂಗಿ ಶಾಲೆಯ ಆಂಗ್ಲ ಭಾಷಾ ಶಿಕ್ಷಕರಾದ ವೀರೇಶ ಗೋನವಾರ ಅವರು ಮಾತನಾಡುತ್ತಾ, ಪ್ರಸ್ತುತ ವರ್ಷದಲ್ಲಿ ಇಕೋ ಕ್ಲಬ್ ಅಡಿಯಲ್ಲಿ ಕಾರ್ಯನಿರ್ವಹಿಸಲು ಅತ್ಯುತ್ತಮ ಅನೇಕ ಕಾರ್ಯಚಟುವಟಿಕೆಗಳನ್ನು ನೀಡಲಾಗಿದೆ. ವಿದ್ಯಾರ್ಥಿಗಳು ಇವುಗಳ ಸದುಯೋಗವನ್ನು ಪಡೆದುಕೊಳ್ಳಬೇಕು. ನಾಳೆಯ ದಿನಗಳಿಗೆ ಇಂದಿನಿಂದಲೇ ಪರಿಸರವನ್ನು ಚೊಕ್ಕಟವಾಗಿ ಇಟ್ಟುಕೊಳ್ಳಬೇಕು. ಮಾನವನ ದುರಾಶೆ ಮತ್ತು ಅವೈಜ್ಞಾನಿಕ ಆಲೋಚನೆ, ಯೋಜನೆಗಳಿಂದ ಪರಿಸರನ್ನು ಹಾಳು ಮಾಡುತ್ತಿದ್ದೇವೆ. ಇದನ್ನು ಪ್ರತಿಯೊಬ್ಬರೂ ಅರ್ಥಮಾಡಿಕೊಂಡು ಪರಿಸರದ ಸಂರಕ್ಷಣೆಯಲ್ಲಿ ಮುಂದಾಗಬೇಕೆಂದು ಈ ಬುದ್ಧವಿಹಾರದ ಪರಿಸರವನ್ನು ತುಂಬಾ ಅಚ್ಚುಕಟ್ಟಾಗಿ ನಿರ್ವಹಿಸಿದ್ದಾರೆ. ಈ ಭಾಗದಲ್ಲಿ ಓದು ಮತ್ತು ತರಬೇತಿಗೆ ಹೇಳಿಮಾಡಿಸಿದ ಸ್ಥಳವಾಗಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಕಲಮಂಗಿ ಪ್ರೌಢಶಾಲೆಯ ಮುಖ್ಯಗುರು ಮಲ್ಲಪ್ಪ ಬಾದರ್ಲಿ, ವೀರಾಪುರ ಪ್ರೌಢಶಾಲೆಯ ಮುಖ್ಯಗುರು ಬಸವರಾಜ ಹುಡೇದ, ಶಿಕ್ಷಕರಾದ ರವಿಚಂದ್ರ, ಬಸವರಾಜ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
ಸನ್ಮಾನ: ಈ ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದ ಸ್ಪರ್ಧಾತ್ಮಕ ಪರೀಕ್ಷೆಗಳ ಉಚಿತ ತರಬೇತಿ ಕೇಂದ್ರದ ಸಂಪನ್ಮೂಲ ವ್ಯಕ್ತಿಗಳಾದ ಡಾ.ಎರ್ರಿಸ್ವಾಮಿ ಇವರನ್ನು ಆತ್ಮೀಯವಾಗಿ ಗೌರವಿಸಿ ಸನ್ಮಾಸಿಲಾಯಿತು.
ವೀಕ್ಷಣೆ-ಮಾಹಿತಿ: ಬುದ್ಧ ವಿಹಾರ ಕ್ಯಾಂಪಸ್ನಲ್ಲಿ ಬೆಳೆದಿರುವ ಸಪೋಟಾ, ನೇರಳೆ, ಮಾವು, ಬೇವು, ಕರಿಬೇವು, ಸೀತಾಫಲ, ಅಂಜೂರ, ತೆಂಗು, ಅರಳಿಮರ, ಬಸಿರುಗಿಡ, ವಿವಿಧ ಅಲಂಕಾರಿಕ ಸಸ್ಯಗಳು ಸೇರಿದಂತೆ 120ಕ್ಕೂ ಹೆಚ್ಚಿನ ಪ್ರಬೇಧದ ಸಸ್ಯವರ್ಗಗಳನ್ನು ವಿದ್ಯಾರ್ಥಿಗಳು ವೀಕ್ಷಣೆ ಮಾಡಿದರು. ಈ ಸಸ್ಯಪ್ರಬೇಧಗಳ ಕುರಿತಾದ ಮಾಹಿತಿಯನ್ನು ಕಲಮಂಗಿ ಪ್ರೌಢಶಾಲೆಯ ಇಕೋ ಕ್ಲಬ್ ಘಟಕದ ಮಾರ್ಗದರ್ಶಿ ಶಿಕ್ಷಕರು ಹಾಗೂ ವಿಜ್ಞಾನ ಶಿಕ್ಷಕಿ ರೂಪಾ ವಿದ್ಯಾರ್ಥಿಗಳಿಗೆ ಸಸ್ಯಗಳ ಹೆಸರು ಮತ್ತು ಅವುಗಳ ಉಪಯೋಗಳ ಬಗ್ಗೆ ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿದರು.
ಮೆಚ್ಚುಗೆ: ಈ ಉಚಿತ ತರಬೇತಿ ಕೇಂದ್ರ ಮತ್ತು ಇಲ್ಲಿನ ಪರಿಸರದ ಕುರಿತು ಭಾಗವಹಿಸಿದ ವಿದ್ಯಾರ್ಥಿಗಳು ಮತ್ತು ಶಿಕ್ಷಕರು ಮೆಚ್ಚುಗೆಯ ಮಾತುಗಳನ್ನಾಡಿದರು.
- ಕರುನಾಡ ಕಂದ ಪತ್ರಿಕೆ




















