ಬಾಗಲಕೋಟೆ:ಶಿರೂರ ಯುವಕರು ಇತಿಹಾಸ ಕುರುಹು ಉಳಿಸಿ, ಬೆಳೆಸಿ
ಅಭಿಯಾನವನ್ನು ಹಮ್ಮಿಕೊಂಡಿದ್ದು, ಇಂದು ಊರಿನ ದೇವಸ್ಥಾನದ ಗುಡ್ಡದ ಮೇಲಿನ ಹುಡೆಯನ್ನು ಶ್ರೀ ಮರಿಮಹಾಂತ ಚನ್ನವೀರ ಸ್ವಾಮೀಜಿಗಳ ನೇತೃತ್ವದಲ್ಲಿ ಸ್ವಚ್ಛಗೊಳಿಸುವ ಕಾರ್ಯ ಮಾಡಿದರು.
ಕಾರ್ಯಕ್ರಮದಲ್ಲಿ ಶ್ರೀ ಗಳು ಮಾತನಾಡಿ ಶಿರೂರ ಯುವಕರು ಇತಿಹಾಸ ಪ್ರಜ್ಞೆಯನ್ನು ಹೊಂದಬೇಕು. ನಮ್ಮ ಸುತ್ತಮುತ್ತಲಿನ ಸ್ಥಳಗಳನ್ನು ಸ್ವಚ್ಛವಾಗಿ ಇಟ್ಟುಕೊಳ್ಳಬೇಕು.ಈ ಅಭಿಯಾನವನ್ನು ಪ್ರತಿ ರವಿವಾರ ಹಮ್ಮಿಕೊಳ್ಳಲಾಗುವುದು. ಶಾಲೆ, ಗುಡಿ ಗುಂಡಾರಗಳನ್ನು ಸ್ವಚ್ಛ ಮಾಡುವುದರೊಂದಿಗೆ ಜನರನ್ನು ಜಾಗೃತರನ್ನಾಗಿಸುವುದು ಈ ಕಾರ್ಯಕ್ರಮದ ಮುಖ್ಯ ಉದ್ದೇಶವಾಗಿದೆ ನಮ್ಮ ನಾಡಿನ ಭವ್ಯತೆಯನ್ನು ಸಾರುವ ಇತಿಹಾಸದ ಕುರುಹುಗಳನ್ನು ನಮ್ಮ ಮುಂದಿನ ಪೀಳಿಗೆಗೆ ಉಳಿಸಿ ರಕ್ಷಿಸುವುದು ಪ್ರತಿಯೊಬ್ಬರ ಕರ್ತವ್ಯವಾಗಿದೆ.
ಇತಿಹಾಸವೆಂದರೆ ಬರಿ ರಾಜರ ಕಥೆಯಲ್ಲ ಅದು ನಮ್ಮ ಬದುಕಿನ ಚರಿತ್ರೆಯಾಗಿದೆ. ಪ್ರತಿ ಮನೆಯು ತನ್ನದೇ ಆದ ಇತಿಹಾಸವನ್ನು ಹೊಂದಿರುತ್ತದೆ. ಈ ನಾಡಿನಲ್ಲಿ ಬಹು ಸಂಸ್ಕೃತಿ ಬಿಂಬಿಸುವ ಕಲ್ಲುಗಳಿವೆ. ಅವು ಮೌನವಾಗಿ ಕೂಗುತ್ತಿದ್ದರೂ ಆ ಕೂಗನ್ನು ಕೇಳುವ ಕಿವಿಗಳಿಲ್ಲ. ನಾಡಿನ ಅಮೂಲ್ಯ ಸಂಪತ್ತುಗಳಾದ ಶಾಸನಗಳು, ಕೋಟೆ ಕೊತ್ತಲಗಳು, ದೇಗುಲಗಳು, ಸ್ಮಾರಕಗಳು, ನಾಣ್ಯಗಳು ನಮ್ಮವರ ಹಿಂದಿನ ಚರಿತ್ರೆಯನ್ನು ತಿಳಿಸುವ ದಾಖಲೆಗಳಾಗಿವೆ. ಇವುಗಳು ನಾಶವಾದರೆ ನಮ್ಮ ಪರಂಪರೆಯೇ ಹಾಳಾದಂತೆ, ನಮ್ಮ ಸುತ್ತಲು ನಮಗೆ ಕಾಣಿಸದ ಇಂತಹ ಚರಿತ್ರೆಗಳ ಬಗ್ಗೆ ನಮಗೆ ಲಕ್ಷವಿರಬೇಕು ಎಂದರು. ಇನ್ನು ಕಾರ್ಯಕ್ರಮದಲ್ಲಿ ಪ್ರವೀಣ್ ಹಡಪದ, ಶ್ರೀಧರ ಪತ್ತಾರ, ಶಂಕರ್ ಹಡಪದ, ಪ್ರವೀಣ್ ಧೂಪದ, ವೀರೇಶ್ ಪತ್ತಾರ ಮತ್ತಿತರ ಯುವಕರು ಇದ್ದರು.