ನವದೆಹಲಿ: ಡಿಜಿಟಲ್ ಪಾವತಿ ಸುರಕ್ಷತೆಯನ್ನು ಹೆಚ್ಚಿಸಲು ಯುಪಿಐ (UPI) ವ್ಯವಸ್ಥೆಯಲ್ಲಿ ಹೊಸ ಬದಲಾವಣೆಯನ್ನು ತರಲು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (RBI) ಚಿಂತನೆ ನಡೆಸುತ್ತಿದೆ. ಈ ಪ್ರಸ್ತಾವನೆಯಂತೆ, 10,000 ರೂ.ಗಿಂತ ಹೆಚ್ಚು ಮೊತ್ತವನ್ನು ವರ್ಗಾಯಿಸುವಾಗ ಹಣ ತಕ್ಷಣವೇ ಕಡಿತವಾಗದೇ, ಒಂದು ಗಂಟೆಯ ಬಳಿಕ ಅಂತಿಮವಾಗಿ ವರ್ಗಾವಣೆಯಾಗುವ ವ್ಯವಸ್ಥೆ ಇರಬಹುದು.
ಈ ಕ್ರಮದ ಉದ್ದೇಶ ಡಿಜಿಟಲ್ ವಂಚನೆ ಹಾಗೂ ತಪ್ಪಾಗಿ ನಡೆಯುವ ಹಣ ವರ್ಗಾವಣೆಗಳನ್ನು ನಿಯಂತ್ರಿಸುವುದಾಗಿದೆ. ಹೊಸ ನಿಯಮ ಜಾರಿಗೆ ಬಂದರೆ, ನೀವು ಕಳುಹಿಸಿದ ಹಣವನ್ನು ಬ್ಯಾಂಕ್ ಒಂದು ಗಂಟೆ ಕಾಲ ‘ಹೋಲ್ಡ್’ನಲ್ಲಿ ಇಡುತ್ತದೆ. ಈ ಅವಧಿಯಲ್ಲಿ ಯಾವುದಾದರೂ ತಪ್ಪು ಸಂಭವಿಸಿದರೆ, ಗ್ರಾಹಕರು ಪಾವತಿಯನ್ನು ರದ್ದುಪಡಿಸುವ ಅವಕಾಶ ಪಡೆಯುತ್ತಾರೆ.
ಆರ್ಬಿಐ ಮಾಹಿತಿ ಪ್ರಕಾರ, ದೇಶದಲ್ಲಿ ಹೆಚ್ಚಿನ ಮೊತ್ತದ ಯುಪಿಐ ವ್ಯವಹಾರಗಳಲ್ಲಿ ವಂಚನೆ ಹಾಗೂ ತಪ್ಪು ವರ್ಗಾವಣೆ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಈ ಕ್ರಮದ ಅಗತ್ಯತೆ ಎದುರಾಗಿದೆ. ಕಳೆದ ವರ್ಷ ಡಿಜಿಟಲ್ ವಂಚನೆ ಪ್ರಕರಣಗಳು ದೊಡ್ಡ ಪ್ರಮಾಣದಲ್ಲಿ ದಾಖಲಾಗಿರುವುದೂ ಇದಕ್ಕೆ ಕಾರಣವಾಗಿದೆ.
ಆದರೆ, ಈ ಬದಲಾವಣೆ ಸಾಮಾನ್ಯ ದಿನನಿತ್ಯದ ಪಾವತಿಗಳಿಗೆ ಅನ್ವಯವಾಗುವುದಿಲ್ಲ. ಅಂಗಡಿಗಳ ಖರೀದಿ, EMI ಪಾವತಿ, ಮ್ಯೂಚುವಲ್ ಫಂಡ್ SIP, LIC ಪ್ರೀಮಿಯಂ ಹಾಗೂ ಸಬ್ಸ್ಕ್ರಿಪ್ಷನ್ ಪಾವತಿಗಳು ಎಂದಿನಂತೆ ನಿರಂತರವಾಗಿ ನಡೆಯುತ್ತವೆ. ಅಲ್ಲದೆ, ಬಳಕೆದಾರರು ವಿಶ್ವಾಸಾರ್ಹ ವ್ಯಕ್ತಿಗಳ ಪಟ್ಟಿಯನ್ನು ಸೃಷ್ಟಿಸಿ, ಅವರಿಗೆ ಹಣವನ್ನು ಯಾವುದೇ ವಿಳಂಬವಿಲ್ಲದೆ ಕಳುಹಿಸುವ ಅವಕಾಶವೂ ಇರಲಿದೆ.
ಈ ನಿಯಮವು ಮುಖ್ಯವಾಗಿ ಹೊಸ ಅಥವಾ ಅನುಮಾನಾಸ್ಪದ ವ್ಯವಹಾರಗಳಿಗೆ ಮಾತ್ರ ಅನ್ವಯಿಸುವ ಸಾಧ್ಯತೆ ಇದೆ.
ವರದಿ ವಿಠ್ಠಲ ಖೋಕಾಟೆ




















