ಮಾವು ಪ್ರದರ್ಶನ-ಮಾರಾಟ ಮೇಳಕ್ಕೆ ಅದ್ದೂರಿ ಚಾಲನೆ
ರೈತರಿಂದ ನೇರ ಮಾರಾಟಕ್ಕೆ ಅವಕಾಶ – ಸಾರ್ವಜನಿಕರಿಂದ ಉತ್ತಮ ಪ್ರತಿಕ್ರಿಯೆ.
ಬೆಳಗಾವಿ, ಮೇ 8: ಬೇಸಿಗೆಯ ಸಿಹಿ ಹಣ್ಣಾದ ಮಾವಿನ ಸುವಾಸನೆಯಿಂದ ಬೆಳಗಾವಿ ನಗರ ಕಂಗೊಳಿಸುತ್ತಿದ್ದು, ನಗರದ ಕ್ಲಬ್ ರಸ್ತೆಯಲ್ಲಿರುವ ತೋಟಗಾರಿಕಾ ಇಲಾಖೆ ಆವರಣದಲ್ಲಿ ಜಿಲ್ಲಾ ಪಂಚಾಯತ್ ಹಾಗೂ ತೋಟಗಾರಿಕಾ ಇಲಾಖೆಯ ಸಹಯೋಗದಲ್ಲಿ ಆಯೋಜಿಸಿರುವ ಮೂರು ದಿನಗಳ “ಮಾವು ಪ್ರದರ್ಶನ ಮತ್ತು ಮಾರಾಟ ಮೇಳ”ಕ್ಕೆ ಶುಕ್ರವಾರ ಬೆಳಗಾವಿ ಉತ್ತರ ವಲಯ ಪೊಲೀಸ್ ಮಹಾನಿರೀಕ್ಷಕ ಚೇತನಸಿಂಗ್ ರಾಠೋರ್ ಅವರು ಚಾಲನೆ ನೀಡಿದರು.
ಮೇಳ ಉದ್ಘಾಟಿಸಿ ಮಾತನಾಡಿದ ಅವರು, ರೈತರು ಬೆಳೆದ ಗುಣಮಟ್ಟದ ಮಾವಿನ ಹಣ್ಣುಗಳನ್ನು ಯಾವುದೇ ಮಧ್ಯವರ್ತಿಗಳಿಲ್ಲದೆ ನೇರವಾಗಿ ಗ್ರಾಹಕರಿಗೆ ತಲುಪಿಸುವ ಉದ್ದೇಶದಿಂದ ಈ ಮೇಳವನ್ನು ಆಯೋಜಿಸಲಾಗಿದೆ ಎಂದು ಹೇಳಿದರು. ಇಂತಹ ಮೇಳಗಳು ರೈತರಿಗೆ ಉತ್ತಮ ಆದಾಯ ತರುವ ಜೊತೆಗೆ ಸಾರ್ವಜನಿಕರಿಗೆ ಕಡಿಮೆ ದರದಲ್ಲಿ ಉತ್ತಮ ಗುಣಮಟ್ಟದ ಹಣ್ಣುಗಳನ್ನು ಖರೀದಿಸುವ ಅವಕಾಶ ಒದಗಿಸುತ್ತವೆ ಎಂದರು.
ಬೆಳಗಾವಿ ಜಿಲ್ಲೆಯ ಜನತೆ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ರೈತರಿಗೆ ಪ್ರೋತ್ಸಾಹ ನೀಡಬೇಕು. ಸ್ಥಳೀಯ ರೈತರ ಉತ್ಪನ್ನಗಳನ್ನು ಖರೀದಿಸುವ ಮೂಲಕ ಕೃಷಿ ಕ್ಷೇತ್ರಕ್ಕೆ ಬೆಂಬಲ ನೀಡಬೇಕು ಎಂದು ಮನವಿ ಮಾಡಿದರು.
ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಾಹುಲ್ ಶಿಂಧೆ ಮಾತನಾಡಿ, ಬೆಳಗಾವಿ ಜಿಲ್ಲೆಯ ವಿವಿಧ ತಾಲೂಕುಗಳ ಜೊತೆಗೆ ಧಾರವಾಡ ಜಿಲ್ಲೆಯ ಹಲವಾರು ಭಾಗಗಳಿಂದ ರೈತರು ತಮ್ಮ ಮಾವಿನ ಹಣ್ಣುಗಳನ್ನು ಮಾರಾಟಕ್ಕೆ ತಂದಿದ್ದಾರೆ ಎಂದು ಹೇಳಿದರು. ಇದಲ್ಲದೆ ಮಹಾರಾಷ್ಟ್ರದ ದೇವಗಡ ಹಾಗೂ ಪಂಡರಪುರ ಭಾಗದ ರೈತರೂ ಭಾಗವಹಿಸಿದ್ದು, ಮೇಳಕ್ಕೆ ವಿಶೇಷ ಮೆರುಗು ತಂದಿದ್ದಾರೆ ಎಂದು ತಿಳಿಸಿದರು.
ಮೇಳದಲ್ಲಿ ಅಲ್ಫಾನ್ಸೋ, ಕೇಸರ್, ಗೋವಾ ಮಂಕೂರ, ಮಲ್ಲಿಕಾ, ಬಿಟ್ಕಿ ಸೇರಿದಂತೆ ಅನೇಕ ಪ್ರಸಿದ್ಧ ತಳಿಯ ಮಾವಿನ ಹಣ್ಣುಗಳು ಮಾರಾಟಕ್ಕೆ ಲಭ್ಯವಿದ್ದು, ಜನರು ತಮಗೆ ಇಷ್ಟವಾದ ತಳಿಗಳನ್ನು ಆಯ್ಕೆ ಮಾಡಿಕೊಂಡು ಖರೀದಿಸುತ್ತಿರುವುದು ಗಮನ ಸೆಳೆಯಿತು.
40ಕ್ಕೂ ಹೆಚ್ಚು ತಳಿಗಳ ವಿಶೇಷ ಪ್ರದರ್ಶನ :
ಮೇಳದ ಪ್ರಮುಖ ಆಕರ್ಷಣೆಯಾಗಿ 40ಕ್ಕೂ ಹೆಚ್ಚು ವಿವಿಧ ತಳಿಯ ಮಾವಿನ ಹಣ್ಣುಗಳ ಪ್ರದರ್ಶನ ಏರ್ಪಡಿಸಲಾಗಿದೆ. ಸಾರ್ವಜನಿಕರು ಮಾವಿನ ವಿವಿಧ ತಳಿಗಳ ವೈಶಿಷ್ಟ್ಯತೆ, ರುಚಿ, ಉತ್ಪಾದನಾ ಪ್ರದೇಶ ಹಾಗೂ ಬೆಳೆ ವಿಧಾನಗಳ ಕುರಿತು ಮಾಹಿತಿ ಪಡೆದುಕೊಳ್ಳುವ ಅವಕಾಶ ಕಲ್ಪಿಸಲಾಗಿದೆ.
ಮೇ 8ರಿಂದ 10ರವರೆಗೆ ಮೂರು ದಿನಗಳ ಕಾಲ ನಡೆಯಲಿರುವ ಈ ಮೇಳಕ್ಕೆ ಈಗಾಗಲೇ ಸಾರ್ವಜನಿಕರಿಂದ ಉತ್ತಮ ಸ್ಪಂದನೆ ವ್ಯಕ್ತವಾಗಿದ್ದು, ಕುಟುಂಬ ಸಮೇತರಾಗಿ ಜನರು ಆಗಮಿಸಿ ಮಾವಿನ ಸವಿಯನ್ನು ಆಸ್ವಾದಿಸುತ್ತಿದ್ದಾರೆ.
ಸಾವಯವ ಮಾವುಗಳಿಗೆ ವಿಶೇಷ ಆದ್ಯತೆ :
ಸಾವಯವ ಕೃಷಿ ಪದ್ಧತಿಯಲ್ಲಿ ಬೆಳೆದ ಮಾವಿನ ಹಣ್ಣುಗಳನ್ನು ತೋಟಗಾರಿಕಾ ಇಲಾಖೆ ವಿಶೇಷವಾಗಿ ಗುರುತಿಸಿ ಮಾರಾಟಕ್ಕೆ ಅವಕಾಶ ನೀಡಿರುವುದು ಮತ್ತೊಂದು ವಿಶೇಷವಾಗಿದೆ. ಇದರಿಂದ ರೈತರಿಗೆ ನೇರ ಲಾಭ ದೊರೆಯುತ್ತಿದ್ದು, ಗ್ರಾಹಕರಿಗೂ ಗುಣಮಟ್ಟದ ಹಾಗೂ ಆರೋಗ್ಯಕರ ಹಣ್ಣುಗಳು ಲಭ್ಯವಾಗುತ್ತಿವೆ.
ಡಜನ್ಗೆ ರೂ.400 ರಿಂದ ರೂ.700ರವರೆಗೆ ವಿವಿಧ ತಳಿಯ ಮಾವುಗಳು ಮಾರಾಟವಾಗುತ್ತಿದ್ದು, ಮಾರುಕಟ್ಟೆ ದರಕ್ಕಿಂತ ಕಡಿಮೆ ಬೆಲೆಗೆ ಉತ್ತಮ ಗುಣಮಟ್ಟದ ಹಣ್ಣುಗಳು ಸಿಗುತ್ತಿರುವುದರಿಂದ ಸಾರ್ವಜನಿಕರು ಸಂತಸ ವ್ಯಕ್ತಪಡಿಸಿದರು.
ಗಣ್ಯರ ಉಪಸ್ಥಿತಿ :
ಕಾರ್ಯಕ್ರಮದಲ್ಲಿ ಗ್ಯಾರಂಟಿ ಯೋಜನೆಗಳ ಜಿಲ್ಲಾಧ್ಯಕ್ಷ ವಿನಯ ನಾವಲಗಟ್ಟಿ, ಬೆಳಗಾವಿ ನಗರ ಪೊಲೀಸ್ ಆಯುಕ್ತ ಭೂಷಣ ಬೋರಸೆ, ತೋಟಗಾರಿಕಾ ಇಲಾಖೆಯ ಜಂಟಿ ನಿರ್ದೇಶಕ ಮಹಾಂತೇಶ ಮುರಗೋಡ, ವಿವಿಧ ಅಧಿಕಾರಿಗಳು, ಸಿಬ್ಬಂದಿ, ರೈತರು ಹಾಗೂ ಸಾರ್ವಜನಿಕರು ಭಾಗವಹಿಸಿದ್ದರು.
ವರದಿ ವಿಠ್ಠಲ ಖೋಕಾಟೆ




















