ಬೆಂಗಳೂರು: ಕರ್ನಾಟಕದ ಯುವ ಪೀಳಿಗೆ ಹಾಗೂ ಕನ್ನಡಿಗರು ಹೆಚ್ಚಿನ ಸಂಖ್ಯೆಯಲ್ಲಿ ಬ್ಯಾಂಕಿಂಗ್ ಕ್ಷೇತ್ರವನ್ನು ತಮ್ಮ ವೃತ್ತಿಜೀವನವನ್ನಾಗಿ ಆಯ್ದುಕೊಳ್ಳಬೇಕು. ಇದರಿಂದ ರಾಜ್ಯದ ಸಾಮಾನ್ಯ ಗ್ರಾಹಕರಿಗೆ ಸರ್ಕಾರದ ಯೋಜನೆಗಳನ್ನು ಮತ್ತು ವಿವಿಧ ಬ್ಯಾಂಕಿಂಗ್ ಉತ್ಪನ್ನಗಳನ್ನು ಅತ್ಯಂತ ಶೀಘ್ರವಾಗಿ ಹಾಗೂ ಸುಲಭವಾಗಿ ತಲುಪಿಸಲು ಸಾಧ್ಯವಾಗುತ್ತದೆ ಎಂದು ಬ್ಯಾಂಕರ್ಸ್ ಕನ್ನಡಿಗರ ಬಳಗದ ಅಧ್ಯಕ್ಷ ಶ್ರೀ ಎಂ. ವೆಂಕಟೇಶ ಶೇಷಾದ್ರಿಯವರು ಅಭಿಪ್ರಾಯಪಟ್ಟರು.
ಶ್ರೀಯುತರು ಬ್ಯಾಂಕರ್ಸ್ ಕನ್ನಡಿಗರ ಬಳಗ ಮತ್ತು ಬೆಂಗಳೂರಿನ ಕೆನರಾ ಬ್ಯಾಂಕ್ ಮಾಹಿತಿ ತಂತ್ರಜ್ಞಾನ ತರಬೇತಿ ಸಂಸ್ಥೆಯವರು ಜಂಟಿಯಾಗಿ ಆಯೋಜಿಸಿದ್ದ ಕ್ವಿಜ್ ಸ್ಪರ್ಧೆಯ ವಿಜೇತರಿಗೆ ಬಹುಮಾನ ವಿತರಿಸಿ ಮಾತನಾಡುತ್ತಿದ್ದರು.
ಇತ್ತೀಚಿನ ವರ್ಷಗಳಲ್ಲಿ ಬ್ಯಾಂಕಿಂಗ್ ವಲಯದಲ್ಲಿ ಸ್ಥಳೀಯ ಭಾಷೆ ಮತ್ತು ಸಂವಹನದ ಕೊರತೆಯಿಂದಾಗಿ ಗ್ರಾಹಕರು, ವಿಶೇಷವಾಗಿ ಗ್ರಾಮೀಣ ಭಾಗದ ಜನರು ಮತ್ತು ಹಿರಿಯ ನಾಗರಿಕರು ಹಲವು ಸವಾಲುಗಳನ್ನು ಎದುರಿಸುತ್ತಿದ್ದಾರೆ. ಗ್ರಾಹಕರೊಂದಿಗೆ ಅವರ ಮಾತೃಭಾಷೆಯಲ್ಲಿ ವ್ಯವಹರಿಸುವುದರಿಂದ ಡಿಜಿಟಲ್ ಬ್ಯಾಂಕಿಂಗ್, ಸಾಲ ಸೌಲಭ್ಯಗಳು, ವಿಮೆ ಮತ್ತು ಉಳಿತಾಯ ಯೋಜನೆಗಳಂತಹ ಬ್ಯಾಂಕಿಂಗ್ ಉತ್ಪನ್ನಗಳನ್ನು ಗ್ರಾಹಕರಿಗೆ ಮನವರಿಕೆ ಮಾಡಿಕೊಟ್ಟು, ಆರ್ಥಿಕ ಸಾಕ್ಷರತೆಯನ್ನು ಹೆಚ್ಚಿಸಬಹುದು ಎಂದು ಅವರು ವಿವರಿಸಿದರು.
ಕೆನರಾ ಬ್ಯಾಂಕ್ ಮಾಹಿತಿ ತಂತ್ರಜ್ಞಾನ ತರಬೇತಿ ಸಂಸ್ಥೆಯ ನಿರ್ದೇಶಕ ಸುರೇಶ್ ಟಿ ರವರು ಮಾತನಾಡಿ ಕೆನರಾ ಬ್ಯಾಂಕು ಯುವಕರ ಸಬಲೀಕರಣಕ್ಕಾಗಿ ಆರ್ಸೆಟಿ ಮತ್ತು ರುಡ್ಸೆಟಿ ಸಂಸ್ಥೆಗಳ ಜೊತೆಗೆ, ಕುಶಲಕರ್ಮಿಗಳ ತರಬೇತಿ ಸಂಸ್ಥೆ ಹಾಗೂ ಮಾಹಿತಿ ತಂತ್ರಜ್ಞಾನ ಸಂಸ್ಥೆಗಳಂತಹ ವಿಶೇಷ ತರಬೇತಿ ಕೇಂದ್ರಗಳನ್ನು ಸ್ಥಾಪಿಸಿದೆ. ಈ ಪೈಕಿ ಬೆಂಗಳೂರಿನ ಕೆನರಾ ಬ್ಯಾಂಕ್ ಮಾಹಿತಿ ತಂತ್ರಜ್ಞಾನ ಸಂಸ್ಥೆಯು ಇದುವರೆಗೆ ಸುಮಾರು 9,200 ಶಿಕ್ಷಣಾರ್ಥಿಗಳಿಗೆ ಯಶಸ್ವಿಯಾಗಿ ತರಬೇತಿ ನೀಡಿದೆ ಎಂದು ಅವರು ತಿಳಿಸಿದರು.
ಬ್ಯಾಂಕರ್ಸ್ ಕನ್ನಡಿಗರ ಬಳಗದ ಕಾರ್ಯದರ್ಶಿ ಶ್ರೀ ಕೆ ಜಿ ಸಂಪತ್ ಕುಮಾರ್ ರವರು ಮಾತನಾಡಿ, “ವಿದ್ಯಾರ್ಥಿಗಳು ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸೂಕ್ತ ತಯಾರಿ ನಡೆಸಬೇಕು. ನಿರಂತರ ಮತ್ತು ಪ್ರಾಮಾಣಿಕ ಪ್ರಯತ್ನಗಳಿಂದ ಮಾತ್ರವೇ ಜೀವನದಲ್ಲಿ ಯಶಸ್ಸು ಸಿಗಲು ಸಾಧ್ಯ ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
ಸಂಸ್ಥೆಯ ಸಿಬ್ಬಂದಿ ವರ್ಗದವರಾದ ವೆಂಕಟೇಶ ಬಾಬು ಎಮ್ , ಅನುಶ್ರೀ ಎನ್ ಮತ್ತು ಪುಷ್ಪ ಎ ಎಸ್ ಉಪಸ್ಥಿತರಿದ್ದರು.
ವರದಿ: ಕೊಡಕ್ಕಲ್ ಶಿವಪ್ರಸಾದ್.




















