
ನಂಜನಗೂಡು : 12ನೇ ಅಂತರರಾಷ್ಟ್ರೀಯ ಯೋಗ ದಿನಾಚರಣೆಯನ್ನು ಯೋಗ ಹಬ್ಬವಾಗಿ ನಂಜನಗೂಡು ಪಟ್ಟಣದ ದಳವಾಯಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಪ್ರಶಾಂತ ವಾತಾವರಣದಲ್ಲಿ ಇಂದು ಬೆಳಿಗ್ಗೆ 7:00 ರಿಂದ 9 ಗಂಟೆ ತನಕ ಸಂಭ್ರಮದಿಂದ ಮಕ್ಕಳು ಶಿಕ್ಷಕರು ಯೋಗ ಮಾಡುವುದರ ಮೂಲಕ ಹಬ್ಬವಾಗಿ ಆಚರಿಸಿದರು. ಯೋಗಭ್ಯಾಸವನ್ನು ಮಕ್ಕಳಿಗೆ ಶಾಲೆಯ ದೈಹಿಕ ಹಾಗೂ ಯೋಗ ಶಿಕ್ಷಕರಾದ ನಾಗೇಶ್ ನಾಯಕ ಅವರು ವೃಕ್ಷಾಸನ, ಪಾದ ಹಸ್ತಾಸನ, ಅರ್ಧ ಚಕ್ರಾಸನ ಮೊದಲಾದ ಹಲವು ಯೋಗಗಳನ್ನು ಮಕ್ಕಳಿಗೆ ಅಭ್ಯಾಸ ಮಾಡಿಸಿದರು.
ಮಕ್ಕಳು ಸಹ ಬಹಳ ಖುಷಿಯಿಂದ, ಉಲ್ಲಾಸಿತರಾಗಿ ಯೋಗಗಳನ್ನು ಅಭ್ಯಾಸ ಮಾಡಿದರು.
ಶಾಲೆಯ ಬಡ್ತಿ ಮುಖ್ಯ ಶಿಕ್ಷಕರಾದ ಶ್ರೀಮತಿ ಲೀಲಾವತಿಯವರು ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡುತ್ತಾ ಯೋಗ ಎಲ್ಲರ ಜೀವನದ ಅವಿಭಾಜ್ಯ ಅಂಗವಾಗಿದೆ ಬಾಲ್ಯದಿಂದ ಹಿಡಿದು ವೃದ್ದಾಪ್ಯದ ತನಕ ಯೋಗಭ್ಯಾಸವನ್ನು ಮಾಡಬಹುದೆಂದರು. ಬಾಲ್ಯದಿಂದಲೇ ಯೋಗಾಭ್ಯಾಸವನ್ನು ಕಲಿಯುವುದು ಅಭ್ಯಾಸ ಮಾಡುವುದು ತುಂಬಾ ಒಳ್ಳೆಯದು. ಯೋಗಾಭ್ಯಾಸ ಮಾಡುವುದರಿಂದ ಆರೋಗ್ಯ ಚೆನ್ನಾಗಿರುತ್ತದೆ, ಮನಸು ಶಾಂತವಾಗಿರುತ್ತದೆ, ಯೋಗ ಬಲ್ಲವನಿಗೆ ರೋಗವಿಲ್ಲ, ಬೆಳಿಗ್ಗೆ ಸಂಜೆ ಯೋಗ ಮಾಡುವುದು ತುಂಬಾ ಉಪಯೋಗಕಾರಿಯಾಗಿದೆ ಮಕ್ಕಳು ಯೋಗವನ್ನು ಕಡ್ಡಾಯವಾಗಿ ಪ್ರತಿದಿನ ಅಭ್ಯಾಸ ಮಾಡಬೇಕೆಂದರು.




















