ಬೆಂಗಳೂರು : ಸಾರ್ವಜನಿಕ ಆರೋಗ್ಯ ಹಿತದೃಷ್ಟಿಯಿಂದ ಕರ್ನಾಟಕ ಸರ್ಕಾರವು ತಂಬಾಕು ಮತ್ತು ನಿಕೋಟಿನ್ ಯುಕ್ತ ಗುಟ್ಕಾ ಹಾಗೂ ಪಾನ್ ಮಸಾಲಾ ಉತ್ಪನ್ನಗಳನ್ನು ಒಂದು ವರ್ಷದ ಅವಧಿಗೆ ರಾಜ್ಯಾದ್ಯಂತ ನಿಷೇಧಿಸಿದೆ. ಆಹಾರ ಸುರಕ್ಷತೆ ಮತ್ತು ಔಷಧ ಆಡಳಿತ ಇಲಾಖೆಯು ಆಗಸ್ಟ್ 10ರಂದು ಹೊರಡಿಸಿದ ಅಧಿಸೂಚನೆಯನ್ವಯ ನಿಯಮ ಉಲ್ಲಂಘಿಸುವವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದ್ದು, ವ್ಯಸನಮುಕ್ತ ಕರ್ನಾಟಕಕ್ಕೆ ಸಹಕರಿಸಲು ಮನವಿ ಮಾಡಿದೆ.
ಆಹಾರ ಸುರಕ್ಷತೆ ಮತ್ತು ಔಷಧ ಆಡಳಿತ ಇಲಾಖೆ ರಾಜ್ಯಾದ್ಯಂತ ಕಳಪೆ ಹೋಟೆಲ್ಗಳು ಹಾಗೂ ನಿಯಮಬಾಹಿರ ಕಾಸ್ಮೆಟಿಕ್ (ಸೌಂದರ್ಯವರ್ಧಕ) ಉದ್ಯಮಗಳ ವಿರುದ್ಧ ಸರಣಿ ದಾಳಿ ನಡೆಸಿ ಬಿಸಿ ಮುಟ್ಟಿಸಿದ್ದ ಬೆನ್ನಲ್ಲೇ ಸಾರ್ವಜನಿಕರ ಆರೋಗ್ಯ ರಕ್ಷಣೆ ಹಾಗೂ ವ್ಯಸನಮುಕ್ತ ಕರ್ನಾಟಕ ನಿರ್ಮಾಣದ ನಿಟ್ಟಿನಲ್ಲಿ ರಾಜ್ಯ ಸರ್ಕಾರವು ಒಂದು ಮಹತ್ವದ ನಿರ್ಧಾರ ಕೈಗೊಂಡಿದೆ. ತಂಬಾಕು ಮತ್ತು ನಿಕೋಟಿನ್ ಹೊಂದಿರುವ ಗುಟ್ಕಾ ಹಾಗೂ ಪಾನ್ ಮಸಾಲಾ ಉತ್ಪನ್ನಗಳ ತಯಾರಿಕೆ, ಸಂಗ್ರಹಣೆ, ಸಾಗಣೆ, ವಿತರಣೆ ಮತ್ತು ಮಾರಾಟವನ್ನು ರಾಜ್ಯಾದ್ಯಂತ ಒಂದು ವರ್ಷದ ಅವಧಿಗೆ ಸಂಪೂರ್ಣವಾಗಿ ನಿಷೇಧಿಸಲಾಗಿದೆ.
ಆಗಸ್ಟ್ 10ರಿಂದಲೇ ಜಾರಿ
ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಕಾಯ್ದೆ-2006ರ ಕಲಂ 30(2)(a) ಸೇರಿದಂತೆ Food Safety and Standards Regulations, 2011ರ ನಿಯಮ 2.3.4 ಅಡಿಯಲ್ಲಿ ಈ ಕಠಿಣ ಕ್ರಮ ಜರುಗಿಸಲಾಗಿದೆ. ಆಹಾರ ಸುರಕ್ಷತೆ ಮತ್ತು ಔಷಧ ಆಡಳಿತ ಇಲಾಖೆಯು 2026ರ ಆಗಸ್ಟ್ 10ರಂದು ಈ ಸಂಬಂಧ ಅಧಿಕೃತ ಅಧಿಸೂಚನೆ ಹೊರಡಿಸಿದ್ದು, ಅಧಿಸೂಚನೆ ಹೊರಡಿಸಿದ ದಿನಾಂಕದಿಂದಲೇ ಈ ಆದೇಶ ಜಾರಿಗೆ ಬಂದಿದೆ. ಪ್ಯಾಕ್ ಮಾಡಿದ ಅಥವಾ ಪ್ರತ್ಯೇಕವಾಗಿ ಮಾರಾಟ ಮಾಡುವ ಎಲ್ಲಾ ಮಾದರಿಯ ನಿಷೇಧಿತ ತಂಬಾಕು ಉತ್ಪನ್ನಗಳ ಮೇಲೆಯೂ ಇಲಾಖೆ ತೀವ್ರ ನಿಗಾ ಇರಿಸಿದೆ.
ವರದಿ : ಜಿಲಾನಸಾಬ್ ಬಡಿಗೇರ್



















