ಬಳ್ಳಾರಿ / ಕಂಪ್ಲಿ : ರೈತರ ಸಮಸ್ಯೆ, ಕಾಲುವೆಗಳಿಗೆ ನೀರು ಹಾಗೂ ಕ್ಷೇತ್ರದ ಅಭಿವೃದ್ಧಿ ವಿಚಾರಗಳನ್ನು ಮುಂದಿಟ್ಟುಕೊಂಡು ಮಾಜಿ ಶಾಸಕ ಟಿ.ಎಚ್. ಸುರೇಶ್ ಬಾಬು ಅವರು ಹಾಲಿ ಶಾಸಕ ಜೆ.ಎನ್. ಗಣೇಶ್ ವಿರುದ್ಧ ಮಾಡಿರುವ ಆರೋಪಗಳು ರಾಜಕೀಯ ಪ್ರೇರಿತವಾಗಿದ್ದು, ವಾಸ್ತವಾಂಶಗಳಿಗೆ ವಿರುದ್ಧವಾಗಿವೆ ಎಂದು ಶಾಸಕ ಜೆ.ಎನ್. ಗಣೇಶ್ ಅವರ ಬೆಂಬಲಿಗ ಕಾಂಗ್ರೆಸ್ ಮುಖಂಡ ದೊಡ್ಡ ಬಸವರಾಜ್ ಬಡಗಿ ತೀವ್ರವಾಗಿ ಖಂಡಿಸಿದರು.
ಪಟ್ಟಣದಲ್ಲಿ ಬುಧವಾರ ಪತ್ರಕರ್ತರೊಂದಿಗೆ ಮಾತನಾಡಿ, ಕಾಲುವೆಗಳಿಗೆ ನೀರು ಹರಿಸುವುದು ಜಲಾಶಯಗಳ ನೀರಿನ ಮಟ್ಟ, ನೀರಿನ ಲಭ್ಯತೆ, ನೀರಾವರಿ ಇಲಾಖೆಯ ತಾಂತ್ರಿಕ ನಿರ್ಧಾರಗಳು, ಹಾಗೂ ಮೂರು ರಾಜ್ಯದ ಜೀವನಾಡಿಯಾದ ತುಂಗಭದ್ರೆಯಿಂದ ನೀರು ಹರಿಸಲು 3 ರಾಜ್ಯ ಸರ್ಕಾರದೊಂದಿಗೆ ಚರ್ಚಿಸುವುದು ಮತ್ತು ಸಂಬಂಧಪಟ್ಟ ಇಲಾಖೆಗಳ ಸಮನ್ವಯದ ಆಧಾರದ ಮೇಲೆ ನೀರು ಬಿಡುಗಡೆ ಮಾಡಲಾಗುತ್ತದೆ.
ಈ ವಾಸ್ತವಾಂಶ ತಿಳಿದಿದ್ದರೂ ಮಾಜಿ ಶಾಸಕರು ಸಂಪೂರ್ಣ ಹೊಣೆಯನ್ನು ಹಾಲಿ ಶಾಸಕರ ಮೇಲೆ ಹೊರಿಸುತ್ತಿರುವುದು ಜನರನ್ನು ದಾರಿ ತಪ್ಪಿಸುವ ಪ್ರಯತ್ನವಾಗಿದೆ. “ ಕಾಲುವೆಗೆ ನೀರು ಬಂದಿಲ್ಲ, ಶಾಸಕರನ್ನು ಊರೊಳಗೆ ಬಿಟ್ಟುಕೊಡಬೇಡಿ ” ಎಂಬ ಹೇಳಿಕೆ ಜವಾಬ್ದಾರಿಯುತ ಮಾಜಿ ಶಾಸಕರಿಗೆ ಶೋಭೆ ತರುವಂತಹದ್ದಲ್ಲ. ರೈತರ ಸಮಸ್ಯೆಗಳನ್ನು ಪರಿಹರಿಸುವ ಬದಲು ಜನರಲ್ಲಿ ಪ್ರಚೋದನೆ ಹಾಗೂ ದ್ವೇಷದ ವಾತಾವರಣ ನಿರ್ಮಿಸುವ ಪ್ರಯತ್ನ ನಡೆಯುತ್ತಿದೆ. ಶಾಸಕ ಜೆ.ಎನ್. ಗಣೇಶ್ ಅವರು ರೈತರ ನೀರಾವರಿ ಸಮಸ್ಯೆಗಳ ಕುರಿತು ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ನಿರಂತರವಾಗಿ ಚರ್ಚಿಸುತ್ತಿದ್ದು, ಅಗತ್ಯ ಕ್ರಮ ಕೈಗೊಳ್ಳುತ್ತಿದ್ದಾರೆ. ಕ್ಷೇತ್ರದ ಅಭಿವೃದ್ಧಿ ಹಾಗೂ ರೈತರ ಸಮಸ್ಯೆಗಳ ಕುರಿತು ಜನರ ಮುಂದೆ ಲೆಕ್ಕ ನೀಡಲು ಶಾಸಕರು ಸದಾ ಸಿದ್ಧರಾಗಿದ್ದಾರೆ. ಮಾಜಿ ಶಾಸಕರು ನಿಜವಾಗಿಯೂ ರೈತರ ಬಗ್ಗೆ ಕಾಳಜಿ ಹೊಂದಿದ್ದರೆ, ಮಾಧ್ಯಮಗಳ ಮೂಲಕ ಆರೋಪ ಮಾಡುವ ಬದಲು ಸಂಬಂಧಪಟ್ಟ ಇಲಾಖೆಗಳೊಂದಿಗೆ ಚರ್ಚಿಸಿ ಸಮಸ್ಯೆ ಪರಿಹಾರಕ್ಕೆ ಸಹಕರಿಸಬೇಕು. ಅಧಿಕಾರದಲ್ಲಿದ್ದ ಅವಧಿಯಲ್ಲಿ ತಮ್ಮಿಂದ ಕೈಗೊಂಡ ಅಭಿವೃದ್ಧಿ ಕಾರ್ಯಗಳ ವಿವರವನ್ನು ಜನರ ಮುಂದಿಡಬೇಕು. ಯಾರು ಎಷ್ಟು ಕೆಲಸ ಮಾಡಿದ್ದಾರೆ ಎಂಬುದನ್ನು ಕಂಪ್ಲಿ ಕ್ಷೇತ್ರದ ಜನತೆ ತೀರ್ಮಾನಿಸಲಿದ್ದಾರೆ ಹಾಗೂ ಕ್ಷೇತ್ರದಲ್ಲಿ ನಿಮ್ಮ ಕೊಡುಗೆ, ಅಭಿವೃದ್ದಿ ಏನು..? ಎಂದು ಬಸವರಾಜ್ ಟೀಕಿಸಿದರು.
“ಟೀಕೆಗಳು ಸಾಯುತ್ತವೆ-ಕೆಲಸಗಳು ಜೀವಿಸುತ್ತವೆ” ಎಂಬ ಶಾಸಕ ಗಣೇಶ್ ರವರ ಮಾತಿನಂತೆ “ಸುಳ್ಳು ಆರೋಪಗಳಿಗೆ ಉತ್ತರ ನೀಡುವುದಕ್ಕಿಂತ ಅಭಿವೃದ್ಧಿ ಕೆಲಸಗಳ ಮೂಲಕವೇ ಉತ್ತರ ನೀಡುತ್ತೇವೆ. ಕ್ಷೇತ್ರದ ಜನರ ಸಮಸ್ಯೆಗಳಿಗೆ ಸ್ಪಂದಿಸುವುದು ನಮ್ಮ ಆದ್ಯತೆ. ರಾಜಕೀಯ ಕಾರಣಕ್ಕಾಗಿ ರೈತರನ್ನು ತಪ್ಪುದಾರಿಗೆ ಎಳೆಯುವ ಪ್ರಯತ್ನವನ್ನು ಜನರು ಒಪ್ಪುವುದಿಲ್ಲ”. ಕಾಲುವೆ ನೀರು, ರೈತರ ಸಮಸ್ಯೆ ಹಾಗೂ ಕ್ಷೇತ್ರದ ಅಭಿವೃದ್ಧಿ ಕುರಿತು ಯಾವುದೇ ಬಹಿರಂಗ ಚರ್ಚೆಗೆ ಶಾಸಕ ಜೆ.ಎನ್. ಗಣೇಶ್ ಅವರು ಸಿದ್ಧರಾಗಿದ್ದಾರೆ. ಆರೋಪಗಳಿಂದ ಅಭಿವೃದ್ಧಿಯ ವೇಗವನ್ನು ತಡೆಯಲು ಸಾಧ್ಯವಿಲ್ಲ. ಜನರ ಆಶೀರ್ವಾದ ಹಾಗೂ ಸಹಕಾರದೊಂದಿಗೆ ಕ್ಷೇತ್ರದ ಅಭಿವೃದ್ಧಿ ಮುಂದುವರಿಯಲಿದೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ವರದಿ : ಜಿಲಾನಸಾಬ್ ಬಡಿಗೇರ್




















