ಎರಡು ಸಾವಿರ ವರ್ಷಗಳಲ್ಲಿ ಅನೇಕ ಏಳುಬೀಳುಗಳನ್ನು ಕಂಡು ಕೊಪ್ಪಳದ ಹೆಸರನ್ನು ಇನ್ನೂ ಹಸಿರಾಗಿ ಉಳಿಸಿದ ಕೀರ್ತಿ ಮಠಕ್ಕೆ ಸಲ್ಲಿಸುತ್ತದೆ.ಶ್ರೀ ಮಠಕ್ಕೂ ಒಂದು ಸಾವಿರ ವರ್ಷದ ಇತಿಹಾಸವಿದೆ ಭವ್ಯ ಪರಂಪರೆಯಿದೆ,ಅಪಾರ ಶಿಷ್ಯ ಸಂಪತ್ತಿದೆ.ಈ ನಾಡಿನ ಧಾರ್ಮಿಕ, ಸಾಮಾಜಿಕ ಮತ್ತು ಸಾಂಸ್ಕೃತಿಕ ಕೇಂದ್ರವಾಗಿರುವ ಗೌರವವಿದೆ. ಸರ್ವಧರ್ಮ ಸಮನ್ವತೆಯ ರಚಿಸುತ್ತಾ ಬಂದಿರುವ ದವಳಗಿರಿ ನಗರಕ್ಕೆ ಕಳಸಪ್ರಾಯವಾಗಿರುವುದೇ ಶ್ರೀಗವಿಮಠ…
ಸಾಮಾಜಿಕ ಮತ್ತು ಶೈಕ್ಷಣಿಕ ಅಭಿವೃದ್ಧಿಯಲ್ಲಿ ಮಠಮಾನ್ಯಗಳ ಕೊಡುಗೆ ಸ್ಮರಣೀಯ.ಅಸಮಾನತೆ,ಅಸ್ಪೃಶ್ಯತೆ ಹೋಗಲಾಡಿಸಲು ಮಠಗಳು ಅವಿರತವಾಗಿ ಕಾರ್ಯನಿರ್ವಹಿಸುತ್ತಿವೆ.ಶೈಕ್ಷಣಿಕ ಕ್ಷೇತ್ರದಲ್ಲಿ ಸರ್ಕಾರಕ್ಕೆ ಪರ್ಯಾಯವಾಗಿ ಕಾರ್ಯಗಳನ್ನು ಮಾಡುವುದರಲ್ಲಿ ಸಂಸ್ಥಾನ ಶ್ರೀ ಗವಿಮಠ ಒಂದಾಗಿದೆ.ಗವಿಮಠ ಭಕ್ತಿ ಶ್ರದ್ಧೆಯ ಸಹ್ಯಾದ್ರಿಯಾಗಿ ಮಾರ್ಪಟ್ಟಿದೆ,ತನ್ನ ಪರಂಪರೆಯುದ್ದಕ್ಕೂ ಯಾವುದೇ ವಿವಾದಗಳಿಗೆ ಸಿಲುಕದೆ ಮೇಲ್ಪಂಕ್ತಿಯನ್ನು ಕಾಪಾಡಿಕೊಂಡು ಬಂದಿದೆ ಜನಮಾನಸದಲ್ಲಿ ಉತ್ತುಂಗ ಸ್ಥಾನದಲ್ಲಿರುವ ಶ್ರೀಮಠವು ಖಾಸಗಿಯಾಗಿ ಸಾಕಷ್ಟು ಅಭಿವೃದ್ಧಿ ಕಾರ್ಯಕ್ರಮಗಳನ್ನು ಮಾಡುತ್ತಾ ಎಲ್ಲರಿಗೂ ಒಪ್ಪಿಗೆಯಾಗುವ ರೀತಿಯಲ್ಲಿ ಸಮಾಜಮುಖಿ ಕಾರ್ಯಗಳನ್ನು ಮಾಡುತ್ತಾ ಬಂದಿದೆ.ನೀರಾವರಿ,ಅರಣ್ಯ,ಜಲಸಂರಕ್ಷಣೆ,ಲಕ್ಷದೀಪೋತ್ಸವ ಮತ್ತು ಸಾಮಾಜಿಕ ಪಿಡುಗುಗಳಾದ ಬಾಲ್ಯವಿವಾಹ,ಮಾನಸಿಕ ಶಾಂತಿ ಮತ್ತು ಸದ್ಭಾವನಾ ಯಾತ್ರೆ ಮಾಡುತ್ತಾ ಬಂದಿರುವುದು ಶ್ರೀಗವಿಮಠದ ಹೆಮ್ಮೆಯ ವಿಷಯವಾಗಿದೆ.ಇದಲ್ಲದೆ ಅರಿವು,ಆಚಾರ,ಶೀಲ ಶಿಕ್ಷಣ,ಸಂಸ್ಕೃತಿ,ಸಂಸ್ಕಾರಗಳನ್ನು ನೀಡುತ್ತಾ ಬರುತ್ತಿದೆ.
ಭಕ್ತ ದೇವನಿಗಾಗಿ ಕಾಯುವುದಿಲ್ಲ ದೇವನೇ ಭಕ್ತನ ಬರುವಿಕೆಗಾಗಿ ಕಾಯುವ ಭಕ್ತ ಮಂದಿರ ಶ್ರೀಗವಿಮಠ
ಕೊಪ್ಪಳದ ಗವಿಮಠದ ಬೆಟ್ಟ-ಗುಡ್ಡಗಳ ನಯನ ಮನೋಹರ ಪರಿಸರ, ಇಲ್ಲಿನ ಕಲ್ಲು-ಕಲ್ಲುಗಳಲ್ಲೂ ಇರುವ ಜೀವ ಚೈತನ್ಯ,ಸೂಸುವ ತಂಗಾಳಿ, ಆಹ್ಲಾದಕರ ವಾತಾವರಣ,ನೈಸರ್ಗಿಕ ಆರೋಗ್ಯದ ಪರಿಸರ ಸೃಷ್ಟಿಸಿದೆ. ಇಲ್ಲಿನ ಪ್ರತಿಯೊಂದು ಕಲ್ಲು-ಗುಡ್ಡ-ಕಟ್ಟೆಯಲ್ಲಿ ಆರೋಗ್ಯಕಾರಿ ಅಂಶಗಳಿವೆ.ಪ್ರತಿಯೊಂದರಲ್ಲೂ ಜೀವಸೆಲೆ ಉಕ್ಕಿಸುವ ಪಾಠವಿದೆ. ಇಂತಹ ಇತಿಹಾಸವಿರುವ ಕೊಪ್ಪಳ ಶ್ರೀ ಗವಿಮಠದ ಪರಂಪರೆಯ ಹಿಂದಿನ ಶ್ರೀಗಳಾದ ಲಿಂ.ಶಿವಶಾಂತವೀರ ಸ್ವಾಮೀಜಿ ಅವರು ಆಯುರ್ವೇದ ಆಸ್ಪತ್ರೆ ಸ್ಥಾಪಿಸುವ ಮೂಲಕ ತಮ್ಮ ಗುರುಗಳ ಪರಂಪರೆಯನ್ನು ಮುಂದುವರಿಸಿದ್ದಾರೆ.
ಕೊಪ್ಪಳದ ಗವಿಮಠಕ್ಕೂ ಸಾಮಾಜಿಕ ಪರಿವರ್ತನೆಗೂ ಅವಿನಾಭಾವ ಸಂಬಂಧ.ಪೀಠಕ್ಕೆ ಸೇರಿದ ಪ್ರತಿಯೊಬ್ಬರೂ ಇದನ್ನು ಬೆಳೆಸುತ್ತಲೇ ಬಂದಿದ್ದಾರೆ.ಅದರಲ್ಲಿಯೂ 15ನೇ ಶ್ರೀಗಳಿಂದ ಶುರುವಾದ ಸಾಮಾಜಿಕ, ಸಾಂಸ್ಕೃತಿಕ ಹಾಗೂ ಶೈಕ್ಷಣಿಕ ಚಟುವಟಿಕೆಗಳು ದಿನಕಳೆದಂತೆ ವಿಸ್ತರಿಸುತ್ತಲೇ ಇವೆ.
ಗವಿಮಠ ಪೀಠ ಪರಂಪರೆಯ 11ನೇ ಶ್ರೀಗಳಾದ ಶ್ರೀ ಗವಿಸಿದ್ಧೇಶ್ವರ ಮಹಾಸ್ವಾಮಿಗಳ ಕರ್ತೃ ಗದ್ದುಗೆಯೇ ಶ್ರೀ ಗವಿಮಠದ ಆರಾಧ್ಯ ದೈವ.
ಈ ಶತಮಾನದ ಆರಂಭದಲ್ಲಿ ಗವಿಮಠದ 15ನೇ ಶ್ರೀಗಳಾದ ಶ್ರೀ ಶಿವಶಾಂತವೀರ ಮಹಾಸ್ವಾಮಿಗಳು (ಗಡ್ಡದಜ್ಜನವರು), 16ನೇ ಪೀಠಾಧಿಪತಿಗಳಾದ ಶ್ರೀ ಮರಿಶಾಂತವೀರ ಮಹಾಸ್ವಾಮಿಗಳ ಗುರುಗಳಾಗಿದ್ದರು.ಅವರು ಹಾಕಿಕೊಟ್ಟ ಘನ ಮಾರ್ಗದಲ್ಲಿ ಸ್ವಾತಂತ್ರ್ಯಾನಂತರ ಭಾರತದಲ್ಲಿ,ಕತ್ತಲ ನಾಡಾಗಿದ್ದ ಕೊಪ್ಪಳದಲ್ಲಿ ಅಕ್ಷಯ ಜ್ಯೋತಿಯಾಗಿ ಬೆಳಗಿ ಗವಿಮಠವನ್ನು ಸಾಮಾಜಿಕ,ಜನಪರ,ಶೈಕ್ಷಣಿಕ, ಸಾಹಿತ್ಯಕ,ಸಾಂಸ್ಕೃತಿಕ ಕೇಂದ್ರವಾಗಿ ಪರಿವರ್ತಿಸಿ ಕ್ರಾಂತಿಯನ್ನೇ ಉಂಟು ಮಾಡಿದರು.ಅಂದಿನಿಂದ ಶಿಕ್ಷಣದ ಅರಿವಿನ ಹರವು ವಿಸ್ತರಿಸಿತು, ಸಾಂಸ್ಕೃತಿಕ ಕೇಂದ್ರವಾಗಿ,ಸಾಹಿತ್ಯದ ನೆಲೆಬೀಡಾಗಿ ಕೊಪ್ಪಳ ಬದಲಾಗತೊಡಗಿತು.
ಶ್ರೀ ಮರಿಶಾಂತ ವೀರ ಮಹಾಸ್ವಾಮಿಗಳು ಆಯುರ್ವೇದ ಪಂಡಿತರೂ, ಸ್ವತಃ ಸಾಹಿತ್ಯ ಪ್ರೇಮಿಗಳೂ ಆಗಿದ್ದರು.ಅವರ ಮುಂದುವರಿದ ಹೆಜ್ಜೆಗಳು 17ನೇ ಪೀಠಾಧಿಪತಿಗಳಾದ ಶ್ರೀ ಶಿವಶಾಂತವೀರ ಮಹಾಸ್ವಾಮಿಗಳ ಕಾಲದಲ್ಲಿ ಮತ್ತಷ್ಟು ಉಜ್ವಲವಾಗುತ್ತಾ ಹೋದವು.
ಮೂಲತಃ ಶಿಕ್ಷಕರಾಗಿದ್ದ ಇವರು ಆಯುರ್ವೇದ ಪಂಡಿತರೂ,ಸ್ವತಃ ಕವಿಗಳೂ ಆಗಿದ್ದರು.ಶ್ರೀಗವಿಮಠದ ನೆರಳು ಇವರ ಕಾಲದಲ್ಲಿ ಇನ್ನಷ್ಟು ಚಾಚಿ ಈ ನೆಲದ ಎಲ್ಲ ಕ್ಷೇತ್ರಗಳು ಗಟ್ಟಿಯಾಗುವತ್ತ ಸಾಗಿದವು. ಇವರ ಕವಿಹೃದಯ ಹದವಾಗಿ ಹರಿದು ಈ ನೆಲದ ಸಾಹಿತ್ಯ ಕ್ಷೇತ್ರ ಗಟ್ಟಿಯಾಗುತ್ತ ಸಾಗಿತು.
ಲಿಂ.ಶಿವಶಾಂತವೀರ ಮಹಾಸ್ವಾಮಿಗಳು ದಿನಾಂಕ 17-05-1931ರಲ್ಲಿ ಸೂಡಿ ಗ್ರಾಮದಲ್ಲಿ ಜನಿಸಿದರು.ತಂದೆ ಜಗದೀಶ್ವರಯ್ಯ ಜುಕ್ತಿಹಿರೇಮಠ, ತಾಯಿ ಬಸಮ್ಮ,ಸಾಕಿ ಬೆಳೆಸಿದ ತಾಯಿ ಶಾವಮ್ಮ,ಇವರು ದಿನಾಂಕ: 27-04-1966ರಂದು ಗವಿಮಠದ 17ನೇ ಪೀಠಾಧಿಪತಿಗಳಾದರು.ಇವರ ಮೂಲ ಹೆಸರು ಉಮಾಪತಿದೇವರು.ಇವರ ಗುರುಗಳು ಮತ್ತು ಶ್ರೀ ಗವಿಮಠದ 16ನೇ ಪೀಠಾಧಿಪತಿಗಳು ಆದ ಲಿಂ.ಮರಿಶಾಂತವೀರ ಮಹಾಸ್ವಾಮಿಗಳು ಇವರಿಗೆ ಶಿವಶಾಂತವೀರ ಮಹಾಸ್ವಾಮಿಗಳೆಂದು ಕರೆದರು.ಸನ್ಯಾಸ ಮಾರ್ಗವು ಎಂತಹ ಕಠಿಣ ಮಾರ್ಗ ಎಂಬುದನ್ನು ತಿಳಿದುಕೊಂಡೇ ನಡುಗುತ್ತಲೇ ಸನ್ಯಾಸ ಸ್ವೀಕರಿಸಿದ್ದರಿಂದ ಅವರು ಯಶಸ್ವಿ ವಿರಕ್ತ ಸ್ವಾಮಿಗಳಾಗಿ ನಿರ್ಮಲ ಚರಿತ್ರೆ ಕಟ್ಟಿಕೊಂಡಿದ್ದರು.ಆ ಮೂಲಕ ನಾಡಿನಲ್ಲಿಯೇ ಗವಿಮಠಕ್ಕೆ ಕೀರ್ತಿ ತಂದಿದ್ದಾರೆ.ಇವರ ಕಾಲದಲ್ಲಿ ಮಹಾದ್ವಾರ ನಿರ್ಮಾಣ,ತೇರು ನಿರ್ಮಾಣ,ಶ್ರೀ ಗವಿಸಿದ್ಧೇಶ್ವರ ಕಲ್ಯಾಣ ಮಂಟಪ,ಪಕ್ಕದಲ್ಲಿ ಅತಿಥಿಗಳಿಗಾಗಿ ವಸತಿಗೃಹಗಳ ನಿರ್ಮಾಣ, ಹೊಸದಾಗಿ ಟ್ರಸ್ಟ ಆಫೀಸ್,ಆಯುರ್ವೇದ ಮೆಡಿಕಲ್ ಕಾಲೇಜು ಆರಂಭಗೊಂಡಿತ್ತು.ಶಿಕ್ಷಕರಾಗಿ ಕೆಲಸ ಮಾಡಿದ್ದರಿಂದಲೇ ಅವರು ಗುರು ಮರಿಶಾಂತರು ಹೊತ್ತಿಸಿದ ಅಕ್ಷರ ಜ್ಯೋತಿಯನ್ನು ಈ ಪ್ರದೇಶದ ಎಲ್ಲೆಡೆ ಬೆಳಗಿದರು.ಇನ್ನಿತರ ಶಿಕ್ಷಣ ಸಂಸ್ಥೆಗಳನ್ನು ಕಟ್ಟಿ ಬೆಳೆಸಲು ಮುಂದಾದರು.
ಶಿವಶಾಂತವೀರ ಮಹಾಸ್ವಾಮಿಗಳ ಚರಿತ್ರೆ ತೆರೆದ ಪುಟ:
ಲಿಂಗಪೂಜೆ,ಜಪ-ತಪ, ಶಿವಯೋಗ,ಪವಾಡ ಸದೃಶ್ಯ ಘಟನೆಗಳಿಗೆ ಗವಿಮಠವು ಸಾಕ್ಷಿಯಾಗಲು ಶಿವಶಾಂತವೀರ ಮಹಾಸ್ವಾಮಿಗಳ ಪಾತ್ರ ದೊಡ್ಡದು.ದಿ. 26-03-2003ರಂದು ಲಿಂಗೈಕ್ಯರಾಗುವವರೆಗೆ ಗುರುಗಳು ತಮಗೊಪ್ಪಿಸಿದ ಕೆಲಸವನ್ನು ನಿರಂತರವಾಗಿ ನೆರವೇರಿಸುತ್ತಾ,ನಂತರದ ಜವಾಬ್ದಾರಿಯನ್ನು ಅತ್ಯಂತ ಯೋಗ್ಯ ವ್ಯಕ್ತಿಗೆ ಒಪ್ಪಿಸಿ ಹೋದರು.
ತಮ್ಮ ಗುರುಗಳಾದ ಲಿಂ.ಮರಿಶಾಂತವೀರ ಮಹಾಸ್ವಾಮಿಗಳು ಪ್ರಾರಂಭಿಸಿದ ಅನ್ನ,ಅರಿವು,ಆಧ್ಯಾತ್ಮ,ಆರೋಗ್ಯ ಈ ಎಲ್ಲಾ ರೀತಿಯ ದಾಸೋಹ ಪರಂಪರೆಗಳ ಸಂಕಲ್ಪಗಳನ್ನು ನಿರಂತರವಾಗಿ ಮುಂದುವರೆಸಿದ್ದ ಲಿಂ.ಶಿವಶಾಂತವೀರ ಮಹಾಸ್ವಾಮಿಗಳು ಗವಿಮಠದ ಸರ್ವತೋಮುಖ ಅಭಿವೃದ್ಧಿ ಮಾಡಿದ್ದಾರೆ.
ಆಯುರ್ವೇದ ಮಹಾವಿದ್ಯಾಲಯ:
ನೈಸರ್ಗಿಕ ಚಿಕಿತ್ಸಾ ಪದ್ಧತಿಯಲ್ಲಿ ಅಪಾರ ಆಸಕ್ತಿ ಹೊಂದಿದ್ದ
ಲಿಂ.ಶಿವಶಾಂತವೀರ ಮಹಾಸ್ವಾಮಿಗಳು ಆಯುರ್ವೇದಿಕ್ ಕಾಲೇಜನ್ನು ಸ್ಥಾಪಿಸುವ ಇಚ್ಛೆ ಹೊಂದಿದ್ದರು.ಆದರೆ,ಅದಕ್ಕೆ ಬೇಕಾದ ಸೌಲಭ್ಯಗಳು ಇರಲಿಲ್ಲ.ಹೀಗಿರುವಾಗ 1993ರಲ್ಲಿ ತಮ್ಮ ಷಷ್ಟ್ಯಬ್ದಿಪೂರ್ತಿ ಸಮಾರಂಭವನ್ನು ನಡೆಸಲು ಭಕ್ತರು ಹಾಗೂ ಶ್ರೀ ಗವಿಸಿದ್ಧೇಶ್ವರ ಕೃಪಾ ಫೋಷಿತ ವಿದ್ಯಾರ್ಥಿಬಳಗದವರು ಕೇಳಿಕೊಂಡಾಗ,‘ಕೊಪ್ಪಳ ಗವಿಮಠವು ಆಯುರ್ವೇದದ ಚಿಕಿತ್ಸೆಗೆ ಪ್ರಸಿದ್ಧವಾಗಿದೆ.ಕರ್ತೃ ಶ್ರೀ ಗವಿಸಿದ್ಧೇಶ್ವರ ಸ್ವಾಮಿಗಳು ಹೈದರಾಬಾದನ ಮೀರಾಲಂನ ಕುಷ್ಟರೋಗ ಕಳೆದದ್ದರಿಂದ 1801ರಲ್ಲಿ ಹಿರೇಬಗನಾಳ ಜಹಗೀರ ಗ್ರಾಮವಾಗಿ ಬಂದಿದೆ.ನಮ್ಮ ಗುರುಗಳಾದ ಲಿಂ.ಮರಿಶಾಂತವೀರ ಮಹಾಸ್ವಾಮಿಗಳು ಆಯುರ್ವೇದದಲ್ಲಿ ಪರಿಣಿತಿಯನ್ನು ಪಡೆದವರಾಗಿದ್ದರು.ನಾವು ಕೂಡಾ ಅವರ ಗರಡಿಯಲ್ಲಿ ಬೆಳೆದವರಾದ್ದರಿಂದ ನಮಗೂ ಆಯುರ್ವೇದದ ಚಿಕಿತ್ಸೆಯಲ್ಲಿ ಆಸಕ್ತಿ ಇದೆ.ಆಯುರ್ವೇದದಲ್ಲಿ ಚಿಕಿತ್ಸೆಗಾಗಿ ಆಸ್ಪತ್ರೆ ಮಾಡುವದಾದರೆ ನಾವು ಒಪ್ಪುತ್ತೇವೆ’ ಎಂದು ಹೇಳಿದರು.
ಹೀಗಾಗಿ,ಅವರ ಷಷ್ಟ್ಯಬ್ದಪೂರ್ತಿ ಸಮಾರಂಭದ ವರ್ಷವೇ ಆಯುರ್ವೇದ ಕಾಲೇಜಿನ ಕಟ್ಟಡಕ್ಕೆ ಶಂಕು ಸ್ಥಾಪನೆ ಮಾಡಲಾಯಿತು. ಮುಂದೆ ಸುಸಜ್ಜಿತವಾಗಿ 1996ರಲ್ಲಿ ಶ್ರೀ ಗವಿಸಿದ್ಧೇಶ್ವರ ಆಯುರ್ವೇದ ಮಹಾವಿದ್ಯಾಲಯ ಆರಂಭಗೊಂಡಿತು. ಉತ್ತಮ ಪ್ರಾಧ್ಯಾಪಕ ಹಾಗೂ ಸಿಬ್ಬಂದಿ ಹೊಂದಿರುವ ಕಾಲೇಜಿಗೆಂದು ಆಯುರ್ವೇದೀಯ ಗಿಡಮೂಲಿಕೆಗಳ ಉದ್ಯಾನವನ್ನು ಈಗಿನ ಪೀಠಾಧಿಪತಿಗಳಾದ ಶ್ರೀ ಅಭಿನವ ಗವಿಸಿದ್ಧೇಶ್ವರ ಮಹಾಸ್ವಾಮಿಗಳು ನಿರ್ಮಿಸಿದ್ದಾರೆ.ಈ ಆಯುರ್ವೆದ ಕಾಲೇಜು ಮತ್ತು ಆಸ್ಪತ್ರೆ ಈ ಭಾಗದ ಬಹು ದೊಡ್ಡ ಆಯುರ್ವೇದ ಕೇಂದ್ರವಾಗಿ ಹೊರ ಹೊಮ್ಮಿದೆ.
ಕೊಪ್ಪಳದ ತೇಜಸ್,ಸಮಾಜಮುಖಿ ಚಿಂತನೆಯ,ಗವಿಮಠದ ಕ್ರಾಂತಿಯಲ್ಲಿ ಒಬ್ಬರಾದ,ಅಭಿನವ ಗವಿಸಿದ್ದೇಶ್ವರ ಮಹಾಸ್ವಾಮಿಗಳವರನ್ನ ಪೀಠಾಧಿಪತಿಗಳನ್ನ ಮಾಡಿರುವುದೇ ಪೂಜ್ಯಶ್ರೀಗಳು.
– ಶಿವನಗೌಡ ಪೊಲೀಸ್ ಪಾಟೀಲ
ಲೇಖಕರು
ಉಪನ್ಯಾಸಕರು, ಕೊಪ್ಪಳ
984564637