ಹೆಸರಿನ ಮುಖದೊಳು ಕಂಗೊಳಿಸುವ ‘ಡಾಕ್ಟರ್’ ಪದವಿ”
ಕೆಲ ಜನ ಕೇಳ್ಪರು ವೈದ್ಯನೆಂದು ಎಲ್ಲಿದೆ ನಿಮ್ಮ ದವಾಖಾನೆಯೆಂದು…?
ಹೆಗಲೇರಿ ಕುಳಿತಿದೆ ಅಕ್ಷರ ಜ್ಞಾನದ ಮೌಲ್ಯ!
ವೈದ್ಯನಲ್ಲದಿದ್ದರೂ ರೋಗನಿವಾರಕ ನಾ ಜಗಕೆ…
ದಶಕಗಳ ಸೇವೆಯಲಿ ಸವೆದ ಹರಕು ಜೋಡುಗಳು,
ಹೆಸರಿಗಷ್ಟೇ ‘ಸಿರಿವಂತ’ ಸೇವೆಯೆಂಬ ವಿಲಾಸ!
ಮಿಠಾಯಿ ಅಂಗಡಿಯ ಕನ್ನಡಿ ಕಪಾಟಿನ ಅಂದದ ಸಾಲು ಕಂಡೊಡೆ ಬಾಯಿ ಚಪ್ಪರಿಸಿ ಸವಿಯುವ ಹಂಬವಿದ್ದರು ಜೇಬು ಖಾಲಿ…
ಬೇಕರಿಯ ಘಮಿಸುವ ಬಿಸಿ ಬ್ರೆಡ್ಡು-ಬನ್ನು,
ಆಸ್ವಾದಿಸುವ ತವಕವಿದ್ದರೂ
ಚಿಲ್ಲರೆಯ ಕಾಸು
ಇಂದಿರಾ ಕ್ಯಾಂಟಿನ್ ದಾರಿಯೇ ಕಣ್ಣೆದುರು ರಾಚುವುದು!
ಆಸೆಗಣ್ಣಿನ ಓಟ,
ಇಂದಿರಾ ಕ್ಯಾಂಟಿನ್ ಹುಡುಕಾಟವೇ ನಿತ್ಯಪಾಠ!
ಸಿಕ್ಕರೆ ಸಿದ್ಧಿಸುವುದು ಎರಡು ತುತ್ತಿನ ಕೂಳು..
ಎಲ್ಲೋ ದೂರದಿ ಕಾಯಕ ಮುಗಿಸಿ ಬಿಗುಮಾನದಿ ಮರಳಿದ ಪತಿಯ ದರ್ಶನ
ಮಡದಿಗೆ ಅಪರೂಪದ ಹಬ್ಬ!
ಎದೆ ಎತ್ತರಕೆ ಬೆಳೆದ ಮಕ್ಕಳ ಕಂಗಳಲಿ ಅರಿಯದ ನೋವು,
ಅಪ್ಪನ ಪರದಾಟ ಕಂಡು ಕರಗಿ ಹೋದವು ಆಸೆಗಳ ಹೂವು!..
ವರುಷದ ಕೆಲ ದಿನಗಳಷ್ಟೇ ದುಡಿಮೆಯ ಕೂಲಿ,
ಅದು ಮುಗಿದ ಮರುದಿನವೇ ಜೇಬೆಲ್ಲ ಖಾಲಿ ಖಾಲಿ.!
ಬೆವರು ಹರಿಸಿ ಅಕ್ಷರ ಜ್ಞಾನ ಬಿತ್ತಿದರೂ ಕೊನೆಗೆ,
ಹೆಗಲ ಮೇಲೆ ಉಳಿಯುವುದಷ್ಟೇ ಜ್ಞಾನದ ಖಾಲಿ ಚೀಲ!
ಬರಿಗೈಯ ಬಡ ಗುರುವಾದರೂ ಜಗಕೆ ನಾ ‘ಸಿರಿವಂತ’,
ಬರದಲಿ ನೊಂದು-ಬೆಂದು ಮಣ್ಣಾಗುವುದೇ ಬದುಕಿನ ಕೊನೆ ಬರಹ!…
– ಡಾ. ಸುರೇಶ್ ಎಸ್. ವಡಗಲಪುರ.




















