ಮಡಿಕೇರಿ: ಕೊಡಗು ಜಿಲ್ಲೆಯ ಕುಶಾಲನಗರ ಮತ್ತು ಮಡಿಕೇರಿ ತಾಲೂಕುಗಳನ್ನು ಬರಪೀಡಿತ ತಾಲೂಕುಗಳೆಂದು ರಾಜ್ಯ ಸರ್ಕಾರ ಪರಿಗಣಿಸಿದೆ ಎಂದು ಶಾಸಕ ಡಾ. ಮಂತರ್ ಗೌಡ ತಿಳಿಸಿದ್ದಾರೆ.
ಅನಾವೃಷ್ಟಿಯಿಂದ ಜನ, ಜಾನುವಾರು ಮತ್ತು ಕೃಷಿ ಸಂಕಷ್ಟಕ್ಕೆ ಸಿಲುಕಿದ್ದು ಅವರ ನೆರವಿಗೆ ರಾಜ್ಯ ಸರ್ಕಾರ ಬದ್ಧವಾಗಿದೆ. ತಾಲೂಕಿನ ಜನತೆ ಆತಂಕಕ್ಕೆ ಒಳಗಾಗಬಾರದು, ಸರ್ಕಾರ ನಿಮ್ಮ ಜೊತೆಗಿದೆ ಎಂದು ಅವರು ಅಭಯ ನೀಡಿದ್ದಾರೆ.
ಮುಂದಿನ ದಿನಗಳಲ್ಲಿ ಕೇಂದ್ರ ಸರ್ಕಾರದ ಮಾನದಂಡದ ಅನುಸಾರ ಬರಪೀಡಿತ ಜಿಲ್ಲೆಗಳಿಗೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಆರ್ಥಿಕ ನೆರವು ನೀಡಲಿವೆ. ಕೇಂದ್ರ ಸರ್ಕಾರ ತಡ ಮಾಡದೆ ಕರ್ನಾಟಕದ ಬರಪೀಡಿತ ತಾಲೂಕುಗಳಿಗೆ ರಾಷ್ಟ್ರೀಯ ಪ್ರಕೃತಿ ವಿಕೋಪ ನಿಧಿ (NDRF) ಯಿಂದ ಅನಾವೃಷ್ಟಿ ಪರಿಹಾರ ಅನುದಾನ ನೀಡಬೇಕು. ಬರಪೀಡಿತ ರೈತರ ನೆರವಿನ ಹೊಣೆ ರಾಜ್ಯದ್ದಷ್ಟೇ ಕೇಂದ್ರದ್ದೂ ಆಗಿದೆ ಎಂದು ಶಾಸಕರು ಹೇಳಿದ್ದಾರೆ.
ಕೇಂದ್ರ ಸರ್ಕಾರ ಶೀಘ್ರವೇ ರಾಜ್ಯಕ್ಕೆ NDRF ನಿಧಿ ಬಿಡುಗಡೆ ಮಾಡಬೇಕು ಎಂದು ಶಾಸಕ ಡಾ. ಮಂತರ್ ಗೌಡ ಒತ್ತಾಯಿಸಿದ್ದಾರೆ.
ವರದಿ: ಪ್ರಿತುನ್ ಪೂವಣ್ಣ




















