ಮಡಿಕೇರಿ : ಮೂರು ವಿಭಿನ್ನ ಯೋಗಾಸನಗಳ ಮೂಲಕ ಮದೆನಾಡಿನ ವಿದ್ಯಾರ್ಥಿನಿ ಸಿಂಚನಾ ಗೋಲ್ಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್ ಮಾಡಿದ್ದಲ್ಲದೆ, ಈ ಮೂಲಕ ಯೋಗಪ್ರದರ್ಶನದಲ್ಲಿ 18 ಅಂತರರಾಷ್ಟ್ರೀಯ ದಾಖಲೆಗಳನ್ನು ಮಾಡಿರುವ ಕೀರ್ತಿಗೆ ಪಾತ್ರಳಾದಳು.
ದೇವರಕೊಲ್ಲಿಯ ಶ್ರೀ ಚಾಮುಂಡೇಶ್ವರಿ ದೇವಸ್ಥಾನದ ಕಲಾಮಂದಿರದಲ್ಲಿ ಜರುಗಿದ ಗೋಲ್ಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್‌ಗಾಗಿನ ಯೋಗ ಪ್ರದರ್ಶನದಲ್ಲಿ ಮದೆನಾಡಿನ ಬಿಜೆಯಸ್ ಶಾಲೆಯ 7 ನೇ ತರಗತಿ ವಿದ್ಯಾರ್ಥಿನಿ ಸಿಂಚನಾ ಮೂರು ಯೋಗ ಪ್ರದರ್ಶನಗಳನ್ನು ಮಾಡುವ ಮೂಲಕ ಗೋಲ್ಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್‌ನಲ್ಲಿ ಸ್ಥಾನ ಪಡೆದಳು. ಡಿಂಬಾಸನದಲ್ಲಿ 5 ನಿಮಿಷ ಸತತವಾಗಿ ಚಲಿಸುವುದು, ಧನುರಾಸನ ಭಂಗಿಯಲ್ಲಿ ತಿರುಗುವುದು ಮತ್ತು 1 ನಿಮಿಷ ಕಾಲ ಸುತ್ತ ಡಿಂಬಾಸನವನ್ನು ಮಾಡುವ ಮೂಲಕ ಮೂರು ವಿಶ್ವದಾಖಲೆಗಳನ್ನು ಏಕವೇದಿಕೆಯಲ್ಲಿ ಮಾಡಿದ ಹಿರಿಮೆಗೆ ಸಿಂಚನಾ ಪಾತ್ರಳಾದಳು.
ಯೋಗಸಾಧನೆ ಮಾಡಿದ ಸಿಂಚನಾ ಮಾತನಾಡಿ, ಮೂರು ವಿಶ್ವದಾಖಲೆಗಳ ಸಾಧನೆ ಹೆಮ್ಮೆ ತಂದಿದೆ. ಮತ್ತಷ್ಟು ಸಾಧನೆಗಳನ್ನು ಮಾಡಲು ಸ್ಫೂರ್ತಿ ದೊರಕಿದೆ ಎಂದಳು.
ಸಿಂಚನಾಳ ತಾಯಿ ರೇಣುಕಾ ಕೀರ್ತಿ ಮಾತನಾಡಿ, 3 ವರ್ಷದವಳಿರುವಾಗಲೇ ಸಿಂಚನಾಳಿಗೆ ಸರಳ ವ್ಯಾಯಾಮ ಕಲಿಸಿದೆ. ನಂತರ ಹಂತಹಂತವಾಗಿ ವಿವಿಧ ಆಸನಗಳನ್ನು ಪರಿಚಯಿಸಿದೆ. ತರುವಾಯವೇ ಕಠಿಣ ಯೋಗತರಬೇತಿ ನೀಡಿದೆ ಎಂದು ವಿವರಿಸಿದರು. ವಿವಿಧ ಶಾಲೆಗಳಲ್ಲಿ ಯೋಗ ಕಾರ್ಯಕ್ರಮಗಳನ್ನು ಸಿಂಚನಾಳಿಂದ ನೀಡುವುದಾಗಿಯೂ ರೇಣುಕಾ ಘೋಷಿಸಿದರು.
ವರದಿ: ಪ್ರಿತುನ್ ಪೂವಣ್ಣ




















