
ಅಂಗನವಾಡಿ ಕೇಂದ್ರಗಳಲ್ಲಿ ಗರ್ಭಿಣಿಯರಿಗೆ ಸೀಮಂತ ಸಂಭ್ರಮ; ಅಪೌಷ್ಟಿಕತೆ ಮುಕ್ತ ತಾಲ್ಲೂಕಿಗೆ ಅಧಿಕಾರಿಗಳ ಕರೆ
ಬಳ್ಳಾರಿ / ಕಂಪ್ಲಿ: “ಗರ್ಭಿಣಿಯರು ಯಾವುದೇ ಕಾರಣಕ್ಕೂ ಮನೆಯಲ್ಲಿಯೇ ಹೆರಿಗೆ ಮಾಡಿಸಿಕೊಳ್ಳುವ ಸಾಹಸಕ್ಕೆ ಕೈಹಾಕಬಾರದು. ಸುರಕ್ಷಿತ ಹೆರಿಗೆಗಾಗಿ ಸಮೀಪದ ಸರ್ಕಾರಿ ಆಸ್ಪತ್ರೆಗಳನ್ನೇ ಆಶ್ರಯಿಸಬೇಕು” ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಅಧಿಕಾರಿಗಳು ಮನವಿ ಮಾಡಿದರು.
ಇಲ್ಲಿನ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಹಾಗೂ ಅಜೀಮ್ ಪ್ರೇಮ್‌ಜೀ ಫೌಂಡೇಷನ್ ಸಂಯುಕ್ತಾಶ್ರಯದಲ್ಲಿ ಕಂಪ್ಲಿ ಪಟ್ಟಣದ ‘ಎ’ ಮತ್ತು ‘ಬಿ’ ವಲಯ ಹಾಗೂ ದೇವಸಮುದ್ರ ಗ್ರಾಮ ಪಂಚಾಯತಿ ವ್ಯಾಪ್ತಿಯ ಅಂಗನವಾಡಿ ಕೇಂದ್ರಗಳಲ್ಲಿ ಹಮ್ಮಿಕೊಳ್ಳಲಾಗಿದ್ದ ‘ಪೋಷಣ್ ಮಾಸಾಚರಣೆ ಅಭಿಯಾನ’ ಮತ್ತು ಗರ್ಭಿಣಿಯರ ಸೀಮಂತ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಎದೆಹಾಲು ಅಮೃತ ಸಮಾನ:
“ಗರ್ಭಾವಸ್ಥೆಯಲ್ಲಿ ಕಾಲಕಾಲಕ್ಕೆ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳುವುದು ಅತ್ಯಗತ್ಯ. ನವಜಾತ ಶಿಶುಗಳಿಗೆ ರೋಗನಿರೋಧಕ ಶಕ್ತಿ ನೀಡುವ ತಾಯಿಯ ಎದೆಹಾಲು ಅಮೃತಕ್ಕೆ ಸಮಾನವಾಗಿದ್ದು, ತಾಯಂದಿರು ತಪ್ಪದೇ ಎದೆಹಾಲು ಉಣಿಸಬೇಕು” ಎಂದು ಜಾಗೃತಿ ಮೂಡಿಸಿದರು.
ಅಪೌಷ್ಟಿಕತೆ ಮುಕ್ತ ತಾಲ್ಲೂಕಾಗಲಿ :
ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಅಜೀಮ್ ಪ್ರೇಮ್‌ಜೀ ಫೌಂಡೇಷನ್‌ನ ಜಿಲ್ಲಾ ಸಂಯೋಜಕ ಬಸವನಗೌಡ ಮಾತನಾಡಿ, “ಗರ್ಭಿಣಿಯರು ಅಂಗನವಾಡಿ ಕೇಂದ್ರಗಳಲ್ಲಿ ವಿತರಿಸುವ ಪೌಷ್ಟಿಕ ಆಹಾರವನ್ನು ಸದುಪಯೋಗಪಡಿಸಿಕೊಳ್ಳಬೇಕು. ತಾಲ್ಲೂಕಿನಲ್ಲಿ ಅಪೌಷ್ಟಿಕತೆ ನಿರ್ಮೂಲನೆಗೆ ಇಲಾಖೆ ತೀವ್ರ ನಿಗಾ ವಹಿಸಬೇಕು” ಎಂದರು.
ಸಂಸ್ಥೆಯ ಪ್ರತಿನಿಧಿ ರಾಘವೇಂದ್ರ ಮಾತನಾಡಿ, ಇಲಾಖೆಯ ಈ ಕಾರ್ಯಕ್ಕೆ ಫೌಂಡೇಷನ್ ಸದಾ ಸಹಕಾರ ನೀಡಲಿದೆ ಎಂದರು.
ಇಲಾಖೆಯ ಮೇಲ್ವಿಚಾರಕಿ ಲತೀಫಾ ಬೇಗಂ ಮಾತನಾಡಿ, ತಾಲ್ಲೂಕಿನಾದ್ಯಂತ ತಾಯಿ-ಮಗುವಿನ ಆರೋಗ್ಯ ಕಾಪಾಡುವ ನಿಟ್ಟಿನಲ್ಲಿ ಪೋಷಣ್ ಮಾಸಾಚರಣೆ ಅಭಿಯಾನದ ಮೂಲಕ ಜಾಗೃತಿ ಮೂಡಿಸಲಾಗುತ್ತಿದೆ ಎಂದು ವಿವರಿಸಿದರು.
ಸಂಭ್ರಮದ ಸೀಮಂತ :
ಇದೇ ಸಂದರ್ಭದಲ್ಲಿ ಕಾರ್ಯಕ್ರಮಕ್ಕೆ ಆಗಮಿಸಿದ್ದ ಗರ್ಭಿಣಿಯರಿಗೆ ಇಲಾಖೆಯ ವತಿಯಿಂದ ಹೂ ಮುಡಿಸಿ, ಉಡಿ ತುಂಬುವ ಮೂಲಕ ಸಾಂಪ್ರದಾಯಿಕ ಸೀಮಂತ ಕಾರ್ಯವನ್ನು ಸಂಭ್ರಮದಿಂದ ನೆರವೇರಿಸಲಾಯಿತು.
ಕಾರ್ಯಕ್ರಮದಲ್ಲಿ ಆರೋಗ್ಯ ಇಲಾಖೆಯ ಸಿಬ್ಬಂದಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಮೇಲ್ವಿಚಾರಕರು, ಅಂಗನವಾಡಿ ಕಾರ್ಯಕರ್ತೆಯರು, ಸಹಾಯಕಿಯರು ಹಾಗೂ ಗರ್ಭಿಣಿ-ಬಾಣಂತಿಯರು ಉಪಸ್ಥಿತರಿದ್ದರು.
ವರದಿ : ಜಿಲಾನಸಾಬ್ ಬಡಿಗೇರ್




















