ಬಳ್ಳಾರಿ / ಕಂಪ್ಲಿ : ಸಮೀಪದ ಕೋಟೆ ಪ್ರದೇಶದಲ್ಲಿರುವ ಶ್ರೀ ಸ್ವಾಮಿ ವಿವೇಕಾನಂದ ಶಾಲೆಯಲ್ಲಿ ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಹಾಗೂ ದೇಶದ ಹೆಮ್ಮೆಯ ಮಾಜಿ ಪ್ರಧಾನಿ ಲಾಲ್ ಬಹುದ್ದೂರ್ ಶಾಸ್ತ್ರೀಜಿ ಅವರ ಜಯಂತಿಯನ್ನು ಅತ್ಯಂತ ಶ್ರದ್ಧಾಭಕ್ತಿ ಹಾಗೂ ಸಡಗರದಿಂದ ಆಚರಿಸಲಾಯಿತು.
ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ನಿವೃತ್ತ ಶಿಕ್ಷಕರಾದ ಫಣಿ ಸೋಮಪ್ಪ ರವರು ಮಹನೀಯರ ಭಾವಚಿತ್ರಗಳಿಗೆ ಪುಷ್ಪನಮನ ಸಲ್ಲಿಸಿ ಮಾತನಾಡಿದರು.
‘ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟ ಮಹಾತ್ಮ ಗಾಂಧೀಜಿ ಅವರ ಅಹಿಂಸಾ ತತ್ವ ಹಾಗೂ “ಜೈ ಜವಾನ್, ಜೈ ಕಿಸಾನ್” ಘೋಷಣೆಯ ಮೂಲಕ ದೇಶದ ಸ್ವಾಭಿಮಾನ ಎತ್ತಿಹಿಡಿದ ಲಾಲ್ ಬಹುದ್ದೂರ್ ಶಾಸ್ತ್ರಿ ಅವರ ಸರಳತೆ, ಪ್ರಾಮಾಣಿಕತೆ ಮತ್ತು ದೇಶಪ್ರೇಮದ ಆದರ್ಶಗಳು ಇಂದಿನ ತಲೆಮಾರಿಗೆ ಅತ್ಯಂತ ಪ್ರಸ್ತುತವಾಗಿವೆ. ವಿದ್ಯಾರ್ಥಿಗಳು ಕೇವಲ ಅಂಕ ಗಳಿಕೆಗೆ ಸೀಮಿತವಾಗದೆ, ಇಂತಹ ಮಹಾನ್ ನಾಯಕರ ನೈತಿಕ ಮೌಲ್ಯಗಳನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಂಡು ದೇಶದ ಉತ್ತಮ ಪ್ರಜೆಗಳಾಗಬೇಕು’ ಎಂದು ಕರೆ ನೀಡಿದರು. ಸಿವಿ ರಾಮನ್ ಸಂಸ್ಥೆಯ
ಸಂಸ್ಥಾಪಕರಾದ ಎಚ್.ಸಿ. ರಾಮಕೃಷ್ಣ ಅವರು ಮಾತನಾಡಿ, ಶಾಲಾ ಹಂತದಲ್ಲೇ ಮಹನೀಯರ ಆದರ್ಶಗಳನ್ನು ನೆನಪಿಸುವ ಇಂತಹ ಕಾರ್ಯಕ್ರಮಗಳು ಮಕ್ಕಳಲ್ಲಿ ದೇಶಭಕ್ತಿಯನ್ನು ಜಾಗೃತಗೊಳಿಸುತ್ತವೆ ಎಂದರು.
ಶಾಲೆಯ ಮುಖ್ಯಗುರುಗಳಾದ ಬಿ. ಜಿಲಾನ್ ಸಾಬ್ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಇದೇ ಸಂದರ್ಭದಲ್ಲಿ ವಿದ್ಯಾರ್ಥಿಗಳಿಂದ ದೇಶಭಕ್ತಿ ಗೀತೆಗಳ ಗಾಯನ ಹಾಗೂ ಮಹನೀಯರ ಜೀವನ ಕುರಿತು ಕಿರು ಭಾಷಣ ಸ್ಪರ್ಧೆಗಳು ನಡೆದವು. ಕಾರ್ಯಕ್ರಮದಲ್ಲಿ ಶಾಲೆಯ ಸಹ ಶಿಕ್ಷಕಿಯರಾದ ಫಣಿ ಅಮೃತ, ಕೊಲ್ಕರ್ ಜಯಶ್ರೀ, ಖಾಜಬನಿ, ಡಿ. ಉಮಾ ಹಾಗೂ ಶಾಲೆಯ ಸಹಾಯಕಿ ಶರ್ಮಸ್ ಬೀ ಉಪಸ್ಥಿತರಿದ್ದರು. ವಿದ್ಯಾರ್ಥಿಗಳು ಮತ್ತು ಪೋಷಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.
ಶಾಲೆಯ ಸಹ ಶಿಕ್ಷಕಿ ಕೆ. ಶ್ವೇತಾ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.
ವರದಿ : ಜಿಲಾನಸಾಬ್ ಬಡಿಗೇರ್




















