ಕುಶಾಲನಗರ ನ್ಯಾಯಬೆಲೆ ಅಂಗಡಿಯಲ್ಲಿ ಇ ಕೆ.ವೈ.ಸಿ. ನವೀಕರಣ ವಿಳಂಬ ಸಾರ್ವಜನಿಕರ ದೂರಿನ ಮೇರೆಗೆ ದಿಢೀರ್ ಭೇಟಿ ನೀಡಿ ಪರಿಶೀಲನೆ ನಡೆಸಿದ ಕರವೇ!
ಕುಶಾಲನಗರ: ನ್ಯಾಯಬೆಲೆ ಅಂಗಡಿಯಲ್ಲಿ ಗ್ರಾಹಕರ ಕೆ.ವೈ.ಸಿ. ನವೀಕರಣ ಮಾಡಲು ವಿಳಂಬವಾಗುತ್ತಿದೆ ಎಂಬ ಸಾರ್ವಜನಿಕರ ಕೂಗು ಕೇಳಿಬಂದ ಹಿನ್ನೆಲೆಯಲ್ಲಿ ಕರ್ನಾಟಕ ರಕ್ಷಣಾ ವೇದಿಕೆಯ ಪದಾಧಿಕಾರಿಗಳು ದಿಢೀರ್ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಈ ಸಂದರ್ಭದಲ್ಲಿ ನ್ಯಾಯಬೆಲೆ ಅಂಗಡಿಯಲ್ಲಿ ಕುಮಾರ್ ಎಂಬ ಒಬ್ಬರೇ ಸಿಬ್ಬಂದಿ ಕಾರ್ಯ ನಿರ್ವಹಿಸುತ್ತಿರುವುದು ಗಮನಕ್ಕೆ ಬಂದಿದ್ದು, ಇವರಿಗೆ ಒಂದೇ ಸಮಯದಲ್ಲಿ ಹಲವು ಕೆಲಸಗಳನ್ನು ನಿರ್ವಹಿಸಬೇಕಾದ ಅನಿವಾರ್ಯತೆಯಿಂದಾಗಿ ಗ್ರಾಹಕರು ಹಲವು ಸಮಸ್ಯೆಗಳನ್ನು ಎದುರಿಸುತ್ತಿರುವುದು ಮೇಲ್ನೋಟಕ್ಕೆ ಕಂಡು ಬಂದಿದೆ.
ನಂತರ ಇಲ್ಲಿಯವರೆಗೆ ಎಷ್ಟು ಕೆ.ವೈ.ಸಿ. ನವೀಕರಣ ಮಾಡಲಾಗಿದೆ ಎಂದು ವಿಚಾರಿಸಿದಾಗ, ಸುಮಾರು 5,000 ಮಂದಿ ನ್ಯಾಯಬೆಲೆ ಅಂಗಡಿಯ ಗ್ರಾಹಕ ಫಲಾನುಭವಿಗಳಿದ್ದು, ಅದರಲ್ಲಿ 2,500 ಮಂದಿಯ ಕೆ.ವೈ.ಸಿ. ನವೀಕರಣ ಮಾಡಲಾಗಿದೆ.
ಬಾಕಿ ಉಳಿದಿರುವವರ ಕೆ.ವೈ.ಸಿ. ನವೀಕರಣ ಕಾರ್ಯವನ್ನು ಇದೇ ತಿಂಗಳ 17ರೊಳಗಾಗಿ ಪೂರ್ಣಗೊಳಿಸಬೇಕಾಗಿದೆ. ಆದರೆ ಸರ್ವರ್ ಸಮಸ್ಯೆಯಿಂದಾಗಿ ಈ ಕಾರ್ಯದಲ್ಲಿ ವಿಳಂಬವಾಗುತ್ತಿದೆ ಎಂದು ಸಿಬ್ಬಂದಿ ತಿಳಿಸಿದರು.
ಬಳಿಕ ಸಾರ್ವಜನಿಕರ ಮಾಹಿತಿಯ ಮೇರೆಗೆ ನ್ಯಾಯಬೆಲೆ ಅಂಗಡಿಯ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ ಜಗದೀಶ್ ಅವರಿಗೆ ಕರೆ ಮಾಡಿ ವಿಚಾರಿಸಲಾಯಿತು. ಇಲ್ಲಿ ಕುಮಾರ್ ಎಂಬ ಒಬ್ಬರೇ ಸಿಬ್ಬಂದಿ ಗೋದಾಮಿಗೆ ಬರುವ ಎಲ್ಲಾ ವಸ್ತುಗಳ ಲೆಕ್ಕವನ್ನು ನಿರ್ವಹಿಸುವುದು, ಕೆ.ವೈ.ಸಿ. ನವೀಕರಣ ಕಾರ್ಯಗಳನ್ನು ಮಾಡುವುದು ಹಾಗೂ ಸಂಜೆ 6 ಗಂಟೆಯ ಬಳಿಕ ಅರ್ಹ ಹಿರಿಯ ನಾಗರಿಕರ ಮನೆ ಬಾಗಿಲಿಗೆ ತೆರಳಿ ಪಡಿತರ ಹಂಚಿಕೆ ಮಾಡಬೇಕಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.
ಹೀಗಾಗಿ ಹೆಚ್ಚುವರಿ ಸಿಬ್ಬಂದಿಯನ್ನು ಸೋಮವಾರದೊಳಗೆ ನೇಮಕ ಮಾಡಿ, ಶೀಘ್ರವೇ ಕೆ.ವೈ.ಸಿ. ನವೀಕರಣ ಕಾರ್ಯವನ್ನು ಪೂರ್ಣಗೊಳಿಸಬೇಕು ಎಂದು ಅವರಲ್ಲಿ ಕ.ರ.ವೇ. ಒತ್ತಾಯಿಸಲಾಯಿತು.
ಈ ಸಂದರ್ಭದಲ್ಲಿ ಕರ್ನಾಟಕ ರಕ್ಷಣಾ ವೇದಿಕೆಯ ಜಿಲ್ಲಾ ಉಪಾಧ್ಯಕ್ಷರಾದ ಡಿ.ವಿ. ನಾಗೇಶ್, ಜಿಲ್ಲಾ ಉಪಾಧ್ಯಕ್ಷರಾದ ಕೆ.ಆರ್. ರಾಜೇಶ್, ಜಿಲ್ಲಾ ಮಹಿಳಾ ಪ್ರಧಾನ ಕಾರ್ಯದರ್ಶಿ ದಿವ್ಯಾ ದೇವಾಂಗ, ತಾಲ್ಲೂಕು ಅಧ್ಯಕ್ಷರಾದ ಹಾನಗಲ್ ರೂಪಾ ಗಣೇಶ್, ಕಾರ್ಯದರ್ಶಿ ಅನಿತಾ ದೇವಾಂಗ ಹಾಗೂ ಇನ್ನಿತರರು ಉಪಸ್ಥಿತರಿದ್ದರು.
ವರದಿ: ಪ್ರಿತುನ್ ಪೂವಣ್ಣ




















