ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಸೇವೆ ಮತ್ತು ಸಂಸ್ಕಾರಕ್ಕೆ ಸಂದ ಗೌರವ : ಗವಿಮಠದ ಶ್ರೀಗಳಿಂದ ಮೈಸೂರು ದಸರಾ ಮಹೋತ್ಸವ.

ಈ ವರ್ಷದ ನಮ್ಮ ನಾಡಹಬ್ಬ ದಸರಾ ನಮಗೆ ಅತ್ಯಂತ ವಿಶೇಷವಾದ ಮೇರು ಸಡಗರವನ್ನುಂಟು ಮಾಡಿದೆ. ಯಾಕೆಂದರೆ ನಡೆದಾಡುವ ದೇವರು ಎಂದೇ ಖ್ಯಾತಿವೆತ್ತ ನಮ್ಮ ಕೊಪ್ಪಳದ ಗವಿಮಠ ಶ್ರೀಗಳು ಈ ವರ್ಷದ ಮೈಸೂರು ದಸರಾ ಹಬ್ಬವನ್ನು ಉದ್ಘಾಟನೆ ಮಾಡಿ ದಸರಾ ಮಹೋತ್ಸವಕ್ಕೆ ಚಾಲನೆ ನೀಡಲಿದ್ದಾರೆ ಎಂಬ ಸಂಗತಿಯು ನಮಗಷ್ಟೇ ಅಲ್ಲ ಇಡೀ ನಾಡಿಗೆ ಈ ಸಡಗರ, ಸಂಭ್ರಮವನ್ನುಂಟು ಮಾಡುತ್ತಿದೆ.
ಹೌದು, 2026 ರ ಮೈಸೂರು ದಸರಾ (ನಾಡಹಬ್ಬ) ಉತ್ಸವವನ್ನು ಕೊಪ್ಪಳದ ಗವಿಮಠದ 18ನೇ ಪೀಠಾಧಿಪತಿಗಳಾದ ಶ್ರೀ ಅಭಿನವ ಗವಿಸಿದ್ಧೇಶ್ವರ ಮಹಾಸ್ವಾಮೀಜಿಗಳವರು ಉದ್ಘಾಟಿಸಲಿದ್ದಾರೆಂದು ಕರ್ನಾಟಕದ ಮುಖ್ಯಮಂತ್ರಿ ಶ್ರೀ ಡಿ.ಕೆ. ಶಿವಕುಮಾರ್ ಅವರು ಅಧಿಕೃತ ಘೋಷಣೆಯನ್ನು ವಿಧಾನ ಸಭೆಯಲ್ಲಿ ಪ್ರಕಟಿಸುತ್ತಿದ್ದಂತೆಯೇ ನಮಗಾದ ಸಂತೋಷ, ಸಡಗರ, ಸಂಭ್ರಮ ಅಷ್ಟಿಷ್ಟಲ್ಲ. ಕರ್ನಾಟಕದ “ನಡೆಯುವ ದೇವರು” ಎಂದೇ ಭಕ್ತರಿಂದ ಕರೆಯಿಸಿಕೊಳ್ಳಲ್ಪಡುವ ಶ್ರೀಗಳು, 2026ರ ಅಕ್ಟೋಬರ್ 11 ರಂದು ಚಾಮುಂಡಿ ಬೆಟ್ಟದ ಶ್ರೀ ಚಾಮುಂಡೇಶ್ವರಿ ದೇವಸ್ಥಾನದಲ್ಲಿ ಬೆಳಿಗ್ಗೆ 11:50 ರಿಂದ ಮಧ್ಯಾಹ್ನ 12:13 ರ ನಡುವಿನ ಶುಭ ಮುಹೂರ್ತದಲ್ಲಿ ದಸರಾ ಮಹೋತ್ಸವಕ್ಕೆ ಚಾಲನೆ ನೀಡಲಿದ್ದಾರೆ.
ಸನ್ಮಾನ್ಯ ಮುಖ್ಯಮಂತ್ರಿಗಳ ಈ ನಿರ್ಧಾರವು ಅತ್ಯಂತ ಸೂಕ್ತವಾಗಿದ್ದು, ಯಾವುದೇ ಗೊಂದಲಕ್ಕೆ ದಾರಿ ಮಾಡಿಕೊಡಲಿಲ್ಲ. ಕಾರಣ ಪೂಜ್ಯ ಶ್ರೀಗಳ ಮಹಿಮೆಯನ್ನು ಅರಿಯದವರು ಯಾರೂ ಇಲ್ಲ. ಅವರ ದಾರ್ಮಿಕ, ಸಾಮಾಜಿಕ, ಶೈಕ್ಷಣಿಕ, ಆಧ್ಯಾತ್ಮಿಕ ಕೆಲಸ ಕಾರ್ಯಗಳು ಅವರ ಶ್ರೇಷ್ಠ ವ್ಯಕ್ತಿತ್ವವು ಎಂತದ್ದು ಎಂದು ಸಾಬೀತು ಪಡಿಸುತ್ತವೆ.
ಪ್ರತಿವರ್ಷ ದಸರಾ ಉದ್ಘಾಟನೆ ಮಾಡುವವರನ್ನು ಆಯ್ಕೆ ಮಾಡಿದಾಗ ಸಾಮಾನ್ಯವಾಗಿ ಒಂದಿಲ್ಲೊಂದು ಆರೋಪಗಳು, ಟೀಕೆಗಳು ಮತ್ತು ಗೊಂದಲಗಳು ಸೃಷ್ಟಿಯಾಗಿರುತ್ತಿದ್ದವು. ಆದರೆ ಈ ವರ್ಷಕ್ಕೆ ಆಯ್ಕೆ ಮಾಡಿದ ಶ್ರೀಗಳ ಬಗ್ಗೆ ಯಾರೂ, ಎಲ್ಲಿಯೂ ಒಂಚೂರು ಚಕಾರವೆತ್ತದೆ ಭಕ್ತಿಪೂರ್ವಕವಾಗಿ, ಭಾವನಾತ್ಮಕವಾಗಿ, ಅಭಿಮಾನದಿಂದ ಒಪ್ಪಿಕೊಂಡು ಸಂಭ್ರಮಿಸಲು ಕಾರಣ ಶ್ರೀಗಳ ಮೇರು ವ್ಯಕ್ತಿತ್ವ…!!
ಶ್ರೀ ಗವಿಸಿದ್ದೇಶ್ವರ ಮಠ ಅಥವಾ ಗವಿಮಠವು ಕೊಪ್ಪಳದ ಪೂರ್ವ ಬೆಟ್ಟದ ಮೇಲಿರುವ ಸುಮಾರು ಒಂದು ಸಾವಿರ ವರ್ಷಗಳ ಭವ್ಯವಾದ ಇತಿಹಾಸ ಮತ್ತು ಅಗಾಧವಾದ ಪರಂಪರೆಯನ್ನು ಹೊಂದಿರುವ ಇಂದಿಗೂ ಜನಮಾನಸದಲ್ಲಿ ಭಕ್ತಿ, ಭಾವ, ಅಭಿಮಾನಗಳನ್ನು ಉಳಿಸಿಕೊಂಡು, ಬೆಳೆಸಿಕೊಂಡು ಮುನ್ನಡೆಯುತ್ತಿರುವ ನಾಡಿನ ಹೆಮ್ಮೆಯ ಮಹಾಸಂಸ್ಥಾನವಾಗಿದೆ. ಇದು ತ್ರಿವಿಧ ದಾಸೋಹದ (ಅನ್ನ, ಅರಿವು, ಆಧ್ಯಾತ್ಮ) ಗಂಗೋತ್ರಿಯಾಗಿದೆ.
ಕರ್ನಾಟಕದ ಅಗ್ರಮಾನ್ಯ ಮಠ ಪರಂಪರೆಯ ಸಂಸ್ಥಾನಗಳಲ್ಲಿ ಕೊಪ್ಪಳದ ಶ್ರೀ ಗವಿಸಿದ್ದೇಶ್ವರ ಮಠವು ಈಗ ಅಗ್ರಗಣ್ಯ ಸ್ಥಾನವನ್ನು ಪಡೆದುಕೊಂಡಿದೆ ಎಂದರೆ ತಪ್ಪಾಗಲಾರದು. ಇದಕ್ಕೆ ಮುಖ್ಯ ಕಾರಣ ಶ್ರೀಗಳ ಕಾರ್ಯವೈಖರಿ ಅಭೂತಪೂರ್ವವಾಗಿದ್ದು ಜನಸಾಮಾನ್ಯರ ನಡುವೆ ಅಪಾರವಾದ ಹೆಮ್ಮೆ, ಅಭಿಮಾನ, ಭಕ್ತಿಭಾವವನ್ನು ಮೂಡಿಸುವಂತಾಗಿದೆ. ಇಂತಹ ಪರಮಪೂಜ್ಯ ಶ್ರೀಗಳಿಂದ ದಸರಾ ಕಾರ್ಯಕ್ರಮ ಉದ್ಘಾಟನೆ ಆಗುತ್ತಿರುವುದು ಅತ್ಯಂತ ಸಮಂಜಸವಾಗಿದ್ದು, ದಸರಾ ಹಬ್ಬವು ಮಹತ್ವಪೂರ್ಣ ಅರ್ಥವನ್ನು ಪಡೆದುಕೊಂಡಂತಾಗಿದೆ. ಯಾಕೆಂದರೆ ಶ್ರೀಗಳ ಅಪಾರವಾದ ಮಹಿಮೆಯನ್ನು ಅತ್ಯದ್ಭುತವಾದ ರೀತಿಯಲ್ಲಿ ಸಾರುವ ಸಾವಿರಾರು ಕೆಲಸ, ಕಾರ್ಯಗಳು ಜನಮಾನಸದಲ್ಲಿ ಉಳಿದಿದ್ದು, ಅವರ ವೃತ್ತಿಘನತೆಯನ್ನು ಎತ್ತಿ ತೋರಿಸುತ್ತದೆ. ಹಾಗಾದರೆ ನಾವೀಗ ಇಂತಹ ಸರ್ವಶ್ರೇಷ್ಠ ಶ್ರೀಗಳ ಬಗ್ಗೆ ಒಂದಿಷ್ಟು ಮಾಹಿತಿಯನ್ನು ಪಡೆದುಕೊಳ್ಳೋಣ.
“ಸುಮಾರು 40 ವರ್ಷಗಳ ಹಿಂದೆ ವಿದ್ಯಾಭ್ಯಾಸಕ್ಕಾಗಿ ಗವಿಮಠದ ಬಾಗಿಲು ತಟ್ಟಿದ ಒಬ್ಬ ಪುಟ್ಟ ಬಾಲಕ, ಇಂದು ವಿಶ್ವವಿಖ್ಯಾತ ಮೈಸೂರು ದಸರಾವನ್ನು ಉದ್ಘಾಟಿಸುವ ಗೌರವಕ್ಕೆ ಪಾತ್ರರಾಗಿದ್ದಾರೆಂದರೆ ಅವರ ಸಾಧನೆ ಮತ್ತು ಮಹಿಮೆ ಎಂತಹದ್ದು ಎಂಬುದು ಪ್ರತಿಯೊಬ್ಬರಿಗೂ ಮನದಟ್ಟಾಗುತ್ತಿದೆ.
ಕೊಪ್ಪಳದ ಶ್ರೀ ಗವಿಮಠದ ಪರಮಪೂಜ್ಯ ಶ್ರೀ ಅಭಿನವ ಗವಿಸಿದ್ಧೇಶ್ವರ ಮಹಾಸ್ವಾಮಿಗಳು ಕಲಬುರಗಿ ಜಿಲ್ಲೆಯ ಹಾಗರಗುಂಡಗಿ ಗ್ರಾಮದಲ್ಲಿ ‘ಪರ್ವತಯ್ಯ’ ಎಂಬ ಹೆಸರಿನಲ್ಲಿ ಜನಿಸಿದರು.
ಶ್ರೀಗಳು ಬಾಲ್ಯದಲ್ಲಿಯೇ ವಿದ್ಯಾಭ್ಯಾಸಕ್ಕಾಗಿ ಕೊಪ್ಪಳದ ಗವಿಮಠಕ್ಕೆ ಬಂದರು. ಅವರ ಶಿಸ್ತು, ಸರಳತೆ ಮತ್ತು ಆಧ್ಯಾತ್ಮಿಕ ಒಲವನ್ನು ಗುರುತಿಸಿದ 17ನೇ ಪೀಠಾಧಿಪತಿಗಳಾದ ಪರಮಪೂಜ್ಯ ಶ್ರೀ ಶಿವಶಾಂತವೀರ ಮಹಾಸ್ವಾಮಿಗಳು ಅವರಿಗೆ ಮಾರ್ಗದರ್ಶನ ನೀಡಿ ಪ್ರೋತ್ಸಾಹಿಸುವುದರ ಮೂಲಕ ಅವರಲ್ಲಿದ್ದ ಆಧ್ಯಾತ್ಮಿಕ ಹಾಗೂ ನಾಯಕತ್ವದ ಗುಣಗಳನ್ನು ಅರಿತು, ತಮ್ಮ ಮುಂದಿನ ಪಟ್ಟಾಧಿಕಾರಿಯ ಯೋಜನೆಯನ್ನು ಸೂಕ್ತವಾಗಿ, ಸಮರ್ಪಕವಾಗಿ ಮಾಡುತ್ತಿದ್ದೆನೆಂಬ ಸಾರ್ಥಕ ಭಾವವನ್ನು ಪಡೆದುಕೊಂಡಿದ್ದರು. ಹೀಗಾಗಿ ಅವರನ್ನು “ಪರುತದೇವರು” ಎಂದು ನಾಮಕರಣ ಮಾಡುವುದರ‌ ಮೂಲಕ ತಮ್ಮ ಉತ್ತರಾಧಿಕಾರಿಯನ್ನಾಗಿ‌ ಮಾಡಿದರು. ಅಂದೇ ನಮ್ಮ ಕೊಪ್ಪಳದ ಇತಿಹಾಸದಲ್ಲಿ ಅಗೋಚರವಾದ ಶಕ್ತಿಯೊಂದು ಪ್ರಪಂಚಕ್ಕೆ ಒಳಿತನ್ನು ಮಾಡಲೆಂದು ಹುಟ್ಟಿಕೊಂಡಿತು.
ಕನ್ನಡ, ಸಂಸ್ಕೃತ, ತತ್ವಶಾಸ್ತ್ರ ಮತ್ತು ಇಂಗ್ಲಿಷ್ ಸಾಹಿತ್ಯದಲ್ಲಿ ಉನ್ನತ ಶಿಕ್ಷಣ ಪಡೆದ ಶ್ರೀಗಳು, ಗುಲಬರ್ಗಾ ವಿಶ್ವವಿದ್ಯಾಲಯದ 6ನೇ ರ್ಯಾಂಕ್ ವಿಜೇತರಾಗಿದ್ದರು ಎಂದರೆ ಅವರಲ್ಲಿರುವ ಜಾಣ್ಮೆ ಎಂತದ್ದು ಎಂಬುದು ನಮಗೆ ಸ್ಪಷ್ಟವಾಗಿ ಗೋಚರಿಸುತ್ತದೆ.
2002 ರಲ್ಲಿ ಗವಿಮಠದ 18ನೇ ಪೀಠಾಧಿಪತಿಯಾಗಿ ಅಧಿಕಾರ ಸ್ವೀಕರಿಸಿದ ​ಶ್ರೀ ಅಭಿನವ ಗವಿಸಿದ್ಧೇಶ್ವರ ಸ್ವಾಮೀಜಿಗಳು ಮಠದ ಪೀಠವನ್ನು ಏರಿದ ನಂತರ ‘ದಾಸೋಹ’ ರಂಗದಲ್ಲಿ ಮಹತ್ವದ ಕ್ರಾಂತಿಕಾರಿ ಬದಲಾವಣೆಗಳನ್ನು ತಂದರು.​
ಅನ್ನದಾಸೋಹದ ಮೂಲಕ ಗವಿಮಠಕ್ಕೆ ಬರುವ ಪ್ರತಿಯೊಬ್ಬ ಭಕ್ತನಿಗೂ, ವಿದ್ಯಾರ್ಥಿಗೂ ನಿರಂತರ ಅನ್ನದಾಸೋಹ ನಡೆಸುತ್ತಿದ್ದಾರೆ. ಹೀಗೆ ಪ್ರತಿದಿನ ಸಾವಿರಾರು ಜನರು ಮತ್ತು ಪ್ರಸಿದ್ಧ ಗವಿಮಠದ ಜಾತ್ರೆಯ ಸಂದರ್ಭದಲ್ಲಿ ಲಕ್ಷಾಂತರ ಭಕ್ತರು ಪ್ರಸಾದ ಸ್ವೀಕರಿಸುತ್ತಾರೆ. ಹಾಗೆಯೇ
​ಅಕ್ಷರ ದಾಸೋಹ ಅಂದರೆ ಶೈಕ್ಷಣಿಕ ಕ್ಷೇತ್ರದಲ್ಲಿ ಕ್ರಾಂತಿಯನ್ನುಂಟು ಮಾಡಿರುವ ಶ್ರೀಗಳು ಗ್ರಾಮೀಣ ಮತ್ತು ಬಡ ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ನೀಡಲು ಪ್ರಾಥಮಿಕ ಹಂತದಿಂದ ಉನ್ನತ ಶಿಕ್ಷಣದವರೆಗೂ ಶಾಲಾ-ಕಾಲೇಜುಗಳು, ಉಚಿತ ವಸತಿ ನಿಲಯಗಳು ಮತ್ತು ‘ಶ್ರೀ ಗವಿಸಿದ್ದೇಶ್ವರ ಗುರುಕುಲ’ವನ್ನು ಸ್ಥಾಪಿಸಿರುವುದು ಬಡಮಕ್ಕಳ ಮೇಲೆ ಇವರಿಗಿರುವ ಕಾಳಜಿಯನ್ನು ಎತ್ತಿ ತೋರಿಸುತ್ತದೆ.
​ಪರಿಸರ ಕಾಳಜಿಯಲ್ಲೂ ಶ್ರೀಗಳು ಎತ್ತಿದ ಕೈ. ‘ಜಲ ಕಾಯಕ’ವನ್ನು ಮಾಡುತ್ತಾ ಜಲ‌ಋಷಿ ಎಂದೇ ಖ್ಯಾತಿವೆತ್ತ ಶ್ರೀಗಳ ಅತ್ಯಂತ ಪ್ರಸಿದ್ದ ಕಾರ್ಯವೆಂದರೆ ಅದು ಪರಿಸರ ಸಂರಕ್ಷಣೆ ಮತ್ತು ನೀರು ಉಳಿಸುವ ಅಭಿಯಾನವಾಗಿದೆ.
​ಕೆರೆಗಳ ಹೂಳೆತ್ತುವಿಕೆ ಕಾರ್ಯದಲ್ಲಿ ಬಾಗಲಕೋಟೆ, ಕೊಪ್ಪಳ ಹಾಗೂ ಸುತ್ತಮುತ್ತಲಿನ ಭಾಗಗಳಲ್ಲಿ ಒಣಗಿಹೋಗಿದ್ದ ಮತ್ತು ಹೂಳು ತುಂಬಿದ್ದ ಕೆರೆಗಳನ್ನು ಜ‌ನಸಹಕಾರದೊಂದಿಗೆ ಹೂಳೆತ್ತಿಸಿ, ಮರುಜೀವ ನೀಡಿದ ದೈವಸ್ವರೂಪಿ ಇವರು.
ವೃಕ್ಷ ದಾಸೋಹದ ಮೂಲಕವೂ ಕೂಡಾ ಕೋಟ್ಯಂತರ ಸಸಿಗಳನ್ನು ನೆಟ್ಟು ಬೆಳೆಸಲು ಜನರಲ್ಲಿ ಜಾಗೃತಿ ಮೂಡಿಸುತ್ತಿದ್ದಾರೆ. ಜಾತ್ರೆಗಳಲ್ಲಿ ಭಕ್ತರಿಗೆ ಪ್ರಸಾದದ ರೂಪದಲ್ಲಿ ಸಸಿಗಳನ್ನು ವಿತರಿಸುವ ವಿನೂತನ ಸಂಪ್ರದಾಯವನ್ನು ಪ್ರಾರಂಭಿಸಿದ ಹಿರಿಮೆ ಇವರದ್ದು.
​ಉನ್ನತವಾದ ಶಿಕ್ಷಣ ಪಡೆದಿದ್ದರೂ ಕೂಡಾ ಸರಳತೆ ಮತ್ತು ಸಮಾಜ ಸುಧಾರಣೆ, ​ಆಡಂಬರವಿಲ್ಲದ ಜೀವನ ಇವರ ಮೇರು ವ್ಯಕ್ತಿತ್ವಕ್ಕೆ ಜ್ವಲಂತ ಸಾಕ್ಷಿಯಾಗಿವೆ. ಯಾವುದೇ ಪ್ರಚಾರದ ಹಂಬಲವಿಲ್ಲದೆ ಸದಾ ಸಮಾಜದ ಏಳ್ಗೆಗಾಗಿ ಶ್ರಮಿಸುತ್ತಿದ್ದಾರೆ. ಅದರಲ್ಲೂ ಕೊಪ್ಪಳದ ​ಜಾತ್ರೆಯನ್ನು ಸಮಾಜಮುಖಿ ಕ್ರಾಂತಿಯನ್ನಾಗಿಸಿ ಉತ್ತರ ಭಾರತದ ಮಹಾಕುಂಭಮೇಳ ಎನ್ನುವ ಹಾಗೆ ಮಾಡಿದ ಕೀರ್ತಿ ಶ್ರೀಗಳಿಗೆ ಸಲ್ಲುತ್ತಿದೆ. ಇಡೀ ವಿಶ್ವವೇ ನಮ್ಮ ಕೊಪ್ಪಳದತ್ತ ತಿರುಗಿ ನೋಡುವಂತೆ ಮಾಡಿದ ಶ್ರೇಯವನ್ನು ನಾವು ಮರೆಯಲೆಂತು ಸಾಧ್ಯ..!!
ಗವಿಮಠದ ವಾರ್ಷಿಕ ಮಹಾರಥೋತ್ಸವ ಮತ್ತು ಜಾತ್ರೆಯನ್ನು ಕೇವಲ ಧಾರ್ಮಿಕ ಆಚರಣೆಯಾಗಿರಿಸದೆ, ರಕ್ತದಾನ, ನೇತ್ರದಾನ, ಪರಿಸರ ಜಾಗೃತಿ ಹಾಗೂ ದುಶ್ಚಟಗಳ ಮುಕ್ತ ಅಭಿಯಾನವನ್ನಾಗಿ ಪರಿವರ್ತಿಸಿದ್ದಾರೆ.
ಒಟ್ಟಾರೆ ಸರ್ವತೋಮುಖವಾದ, ಶ್ರೇಷ್ಠ ವ್ಯಕ್ತಿತ್ವದ, ವಿನಯಶೀಲರಾದ ಶ್ರೀಗಳು ​ಅನ್ನದಾಸೋಹ, ಶಿಕ್ಷಣ, ಪರಿಸರ ಕಾಳಜಿಯಂತಹ ಸಮಾಜ ಸೇವೆಯನ್ನೇ ತಮ್ಮ ಜೀವನದ ಧ್ವೇಯವನ್ನಾಗಿಸಿಕೊಂಡು ಇಂದು ವಿಶ್ವವಿಖ್ಯಾತ ಮೈಸೂರು ದಸರಾಗೆ ಚಾಲನೆ ನೀಡುತ್ತಿರುವುದು ಕೇವಲ ಒಬ್ಬ ಸ್ವಾಮೀಜಿಯ ಪಯಣವಲ್ಲ, ಸೇವೆ ಮತ್ತು ಸಂಸ್ಕಾರಕ್ಕೆ ನಾಡು ಸಲ್ಲಿಸುತ್ತಿರುವ ಗೌರವ ಇದಾಗಿದೆ. ​
ಮೈಸೂರು ದಸರಾ ಮಹೋತ್ಸವವನ್ನು ಉದ್ಘಾಟಿಸುತ್ತಿರುವ ಪರಮಪೂಜ್ಯ ಶ್ರೀ ಅಭಿನವ ಗವಿಸಿದ್ಧೇಶ್ವರ ಮಹಾಸ್ವಾಮಿಗಳಿಗೆ ಈಗಾಗಲೇ ಮೈಸೂರು ಜಿಲ್ಲಾಡಳಿತದಿಂದ ಹೃತ್ಪೂರ್ವಕವಾದ, ಭವ್ಯವಾದ ಸ್ವಾಗತ ಮತ್ತು ಆಮಂತ್ರಣ ದೊರೆತಿದ್ದು, ಅವರ ಕಾರ್ಯಕ್ರಮದ ಬಗ್ಗೆ ಗೌರವಪೂರ್ವಕ ತಯಾರಿಯೂ ಕೂಡಾ ಸಮರ್ಪಕವಾಗಿ ನಡೆಯುತ್ತಿದೆ.
ಆದ್ದರಿಂದ ಕೊಪ್ಪಳದ ಜನತೆಯಾದ ನಾವೆಲ್ಲರೂ ಈ ವರ್ಷದ ದಸರಾ ಮಹೋತ್ಸವದಲ್ಲಿ ತಪ್ಪದೇ ಭಾಗಿಯಾಗಿ ನಮ್ಮ ಹೆಮ್ಮೆಯ ಗವಿಮಠದ ಶ್ರೀಗಳು ಉದ್ಘಾಟಿಸುವ ದಸರಾ ಮಹೋತ್ಸವವನ್ನು ಕಣ್ತುಂಬಿಕೊಳ್ಳಲು ಮೈಸೂರಿನತ್ತ ಎಲ್ಲರೂ ಸಡಗರ , ಸಂಭ್ರಮದಿಂದ ಒಂದಾಗಿ‌ ಹೆಮ್ಮೆಯಿಂದ ಹೋಗೋಣ ಬನ್ನಿ..!!

  • ಶ್ರೀ ಶ್ರೀನಿವಾಸ.ಎನ್.ದೇಸಾಯಿ, ಶಿಕ್ಷಕರು.
    ಸ. ಮಾ. ಹಿ. ಪ್ರಾ. ಶಾಲೆ, ವಿದ್ಯಾನಗರ ಕುಷ್ಟಗಿ.
    ಮೊ.ನಂ- 9845808941
ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ

error: Content is protected !!