
ಜನಪರ ಆಶಯಗಳೊಂದಿಗೆ ನೂತನ ರಾಜಕೀಯ ಪಕ್ಷ, ಸಮಾಜಮುಖಿ ವೇದಿಕೆ ಆರಂಭ.
ಬೆಂಗಳೂರು: ನಗರದ ಬಸವನಗುಡಿಯ ಬುಲ್ ಟೆಂಪಲ್ ರಸ್ತೆಯಲ್ಲಿರುವ ಶ್ರೀ ದೊಡ್ಡ ಗಣಪತಿ ದೇವಸ್ಥಾನದಲ್ಲಿ ಬುಧವಾರ ಬೆಳಿಗ್ಗೆ ‘ಜನ ಶಾಸನ ಸಭಾ’ ಎಂಬ ನೂತನ ರಾಜಕೀಯ ಪಕ್ಷ ಹಾಗೂ ‘ಸೇವಾಗ್ರಹ’ ಎಂಬ ಸಮಾಜಮುಖಿ, ವಿವಿಧೋದ್ದೇಶಗಳ ವೇದಿಕೆಗೆ ಔಪಚಾರಿಕ ಚಾಲನೆ ನೀಡಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಸಂಸ್ಥಾಪಕ ಅಧ್ಯಕ್ಷ ಬಿಜ್ಜವರ ಲೋಕೇಶ್ ಅವರು, ಜನರ ಆಶಯಗಳಿಗೆ ಸ್ಪಂದಿಸುವುದು, ಪ್ರಜಾಸತ್ತಾತ್ಮಕ ಮೌಲ್ಯಗಳಿಗೆ ಆದ್ಯತೆ ನೀಡುವುದು ಹಾಗೂ ಸಮಾಜದಲ್ಲಿ ಸಕಾರಾತ್ಮಕ ಬದಲಾವಣೆ ತರುವ ಉದ್ದೇಶದಿಂದ ಈ ವಿನೂತನ ಪ್ರಯತ್ನಕ್ಕೆ ಮುಂದಾಗಲಾಗಿದೆ ಎಂದು ಹೇಳಿದರು.
‘ಜನ ಶಾಸನ ಸಭಾ’ ನೂತನ ರಾಜಕೀಯ ಪಕ್ಷವಾಗಿ ಹಾಗೂ ‘ಸೇವಾಗ್ರಹ’ ಸಮಾಜಮುಖಿ, ವಿವಿಧೋದ್ದೇಶಗಳ ವೇದಿಕೆಯಾಗಿ ಕಾರ್ಯನಿರ್ವಹಿಸಲಿವೆ. ಜನಪರ ಚಿಂತನೆ, ಸಾಮಾಜಿಕ ಹೊಣೆಗಾರಿಕೆ ಮತ್ತು ಸಾರ್ವಜನಿಕ ಹಿತಾಸಕ್ತಿಯನ್ನು ಕೇಂದ್ರವಾಗಿಟ್ಟುಕೊಂಡು ವಿವಿಧ ಚಟುವಟಿಕೆಗಳನ್ನು ಕೈಗೊಳ್ಳುವ ಆಶಯವನ್ನು ಈ ಸಂಸ್ಥೆಗಳು ಹೊಂದಿವೆ ಎಂದು ತಿಳಿಸಿದರು.




















