ಬೀದರ್:ಶ್ರೀ ಶಾಂತಿಕಿರಣ ಚಾರಿಟೇಬಲ್ ಟ್ರಸ್ಟ್ (ರಿ.) ಅಡಿಯಲ್ಲಿ ಬರುವ ಶ್ರೀ ಸ್ವಾಮಿ ನರೇಂದ್ರ ಪದವಿ ಪೂರ್ವ ಕಾಲೇಜು ಬೀದರನಲ್ಲಿ ದಿನಾಂಕ:-08/04/2023 ರಂದು ಮಡಿವಾಳ ಮಾಚಿದೇವರ ಜಯಂತಿಯನ್ನು ಆಚರಿಸಲಾಯಿತು. ಈ ಕಾರ್ಯಕ್ರಮದಲ್ಲಿ ಕಾಲೇಜಿನ ಪ್ರಾಚಾರ್ಯೆರಾದ ಮಂಗಲಾ ಎನ್.ಎಮ್ ಮಡಿವಾಳ ಮಾಚಿದೇವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಮಾತನಾಡಿದ ಅವರು
ಕ್ರಿ.ಶ. 1120ರಿಂದ 1130ರ ಅವಧಿಯಲ್ಲಿ ವಿಜಯಪುರ ಜಿಲ್ಲೆಯ ಸಿಂದಗಿ ತಾಲೂಕಿನ ಹಿಪ್ಪರಗಿ ಗ್ರಾಮದಲ್ಲಿ ಮಡಿವಾಳ ಮಾಚಯ್ಯ ಜನಿಸಿದರು. ಪರ್ವತಯ್ಯ ಹಾಗೂ ಸುಜ್ಞಾನಾಂಬೆ ದಂಪತಿಗೆ ಜನಿಸಿದರು. ಕುಲದೈವ ಕಲಿದೇವರನ್ನು ಆರಾಧಿಸಿ ಸ್ಪೂರ್ತಿಯ ಸೆಲೆಯಾದರು. ಜಗದ್ಗುರು ಬಸವಣ್ಣ ಅವರಿಗಿಂತ ಮಡಿವಾಳ ಮಾಚಯ್ಯ ವಯಸ್ಸಿನಲ್ಲಿ ಹಿರಿಯರು, ವಚನಾಂಕಿತದಲ್ಲಿಯೂ ಈ ದೇವರ ಹೆಸರನ್ನು ಬಳಸಿಕೊಂಡಿದ್ದರು. ಇಂದಿಗೂ ಹಿಪ್ಪರಗಿಯಲ್ಲಿ ಕಲಿದೇವರ ಗುಡಿ ಇದೆ.ಪಾಲಕರ ವೃತ್ತಿಯನ್ನೇ ಮಡಿವಾಳ ಮಾಚಯ್ಯ ಅನುಸರಿಸಿದರು. ಶಕ್ತಿಶಾಲಿ ಆಜಾನುಬಾಹು ದೇಹ ಮತ್ತು ಮುಖದಲ್ಲಿ ದೈವ ತೇಜಸ್ಸು ಹೊಂದಿದ್ದರು. ‘ಮಲ್ಲಿಗವ್ವ’ ಎಂಬುವರನ್ನು ವಿವಾಹವಾದರು.
ಅಂದಿನ ಕಾಲದಲ್ಲಿ ಮಾಚಯ್ಯಯವರಿಗೆ ವಿದ್ಯೆ ಕಲಿಯಲು ಅವಕಾಶ ಸಿಗಲಿಲ್ಲ.ಮಲ್ಲಿಕಾರ್ಜುನ ಸ್ವಾಮೀಜಿ ಎಂಬುವರು ದಿವ್ಯ ವ್ಯಕ್ತಿತ್ವ, ಭಕ್ತಿ, ಶ್ರದ್ಧೆ ಗಮನಿಸಿ ಮಾಚಯ್ಯ ಅವರಿಗೆ ವಿದ್ಯೆ ಮತ್ತು ವೇದಶಾಸ್ತ್ರ ಕಲಿಸಿದರು. ಶಿಷ್ಯನ ಮಹಿಮೆ ತಿಳಿದ ಗುರುಗಳು ದೀಕ್ಷೆ ನೀಡಿ ಕ್ರಾಂತಿಗೆ ನಾಂದಿ ಹಾಡಿದರು. ಬಸವಣ್ಣ ನೇತೃತ್ವದಲ್ಲಿ ಶರಣರ ಆಂದೋಲನ ಪ್ರಾರಂಭವಾಗಿತ್ತು. ಬಸವಣ್ಣನವರ ಭಕ್ತಿ, ಕಾಯಕ ತತ್ವ, ದಾಸೋಹ, ಗುರುಲಿಂಗ ಮತ್ತು ಜಂಗಮ ಸೇವೆಗಳು ಎಲ್ಲ ಕಡೆಗೂ ಪ್ರಖ್ಯಾತವಾಗಿದ್ದವು. ಈ ವಿಚಾರ ತಿಳಿದು ಮಾಚಯ್ಯ, ಕಲಿದೇವರ ಗುರುಗಳ ಅಪ್ಪಣೆ ಪಡೆದು ಕಲ್ಯಾಣದೆಡೆಗೆ ಸಾಗಿದರು. ಕಲ್ಯಾಣಕ್ಕೆ ಬಂದ ಮೇಲೆ ಮಾಚಿದೇವ ಕಾಯಕವನ್ನು ಮುಂದುವರಿಸಿದರು. ಮೊದಲಿನಿಂದಲೂ ಸೂರ್ಯ ಹುಟ್ಟುವ ಮುನ್ನ ಎದ್ದು ತಮ್ಮ ಕಾರ್ಯ ಆರಂಭಿಸುತ್ತಿದ್ದರು. ಶುದ್ಧ ಶಿವಭಕ್ತರ ಕಾಯಕದಲ್ಲಿ ನಿಷ್ಠೆ ಉಳ್ಳವರ ಬಟ್ಟೆಗಳನ್ನು ಮಾತ್ರ ಮಡಿ ಮಾಡುತ್ತಿದ್ದರು. ಸೋಮಾರಿಗಳ, ಪರಾವಲಂಬಿಗಳ ಬಟ್ಟೆಗಳನ್ನು ಎಂದಿಗೂ ಮುಟ್ಟುತ್ತಿರಲಿಲ್ಲ. ಮಡಿಗೊಳಿಸಿದ ಬಟ್ಟೆಯನ್ನು ಯಾರೂ ಅಪವಿತ್ರ ಗೊಳಿಸಬಾರದೆಂದು ದಾರಿಯಲ್ಲಿ ಬರುವಾಗ ಗಂಟೆ ಬಾರಿಸುತ್ತಾ ಬರುತ್ತಿದ್ದರು. ಹೀಗಾಗಿ, ‘ವೀರಗಂಟೆ ಮಾಚಯ್ಯ’ ಎಂಬ ಹೆಸರು ಬಂತು.
ಶರಣರ ಸಂಪರ್ಕದಿಂದ ಮಹಾಪುರುಷ: ಮಡಿವಾಳ ಕುಲದಲ್ಲಿ ಹುಟ್ಟಿದ್ದರೂ ಮಾಚಯ್ಯ ಉತ್ತಮ ಶಿಕ್ಷಣ ಮತ್ತು ಶರಣರ ಸಂಪರ್ಕದಿಂದ ಮಹಾಪುರುಷರಾದರು. ಕಲ್ಯಾಣ ಕ್ರಾಂತಿಯ ಇತಿಹಾಸದಲ್ಲಿ ಮಾಚಯ್ಯ ಶ್ರೇಷ್ಠ ವ್ಯಕ್ತಿಗಳಲ್ಲಿ ಒಬ್ಬರು. ಜ್ಞಾನಜ್ಯೋತಿಯಿಂದ ಲೋಕವನ್ನು ಬೆಳಗಿಸಿದ ಮಾಚಯ್ಯ ‘ನುಡಿದಂತೆ ನಡೆದ, ನಡೆದಂತೆ ನುಡಿದ ಶರಣರಲ್ಲಿ ಒಬ್ಬರು. ಎಲ್ಲರೂ ಸಮಾನರು, ಎಲ್ಲರಿಗೂ ಸಮಾನ ಅಧಿಕಾರವಿದೆ ಎಂದು ತಿಳಿಸಿ ಸರ್ವರಿಗೂ ಆಧ್ಯಾತ್ಮಿಕ ಉನ್ನತಿ ಪಡೆಯುವಂತೆ ಪ್ರೋತ್ಸಾಹಿಸಿದರು. ಎಲ್ಲ ಶರಣರು ಮಾಚಯ್ಯನನ್ನು ‘ಮಾಚಿ ತಂದೆ’ ಎಂದು ಕರೆದಿದ್ದಾರೆ. ‘ಅನುಭವ ಮಂಟಪ’ ನಿರ್ವಣದ ಕಾರ್ಯದಲ್ಲಿ ಮಾಚಯ್ಯನವರ ಪಾತ್ರ ದೊಡ್ಡದು. ಮಾರ್ಮಿಕ ವಚನಗಳನ್ನು ರಚಿಸಿ ಕೊಡುಗೆ ನೀಡಿದ್ದಾರೆಂದು ನುಡಿದರು.
ಈ ಸಂದರ್ಭದಲ್ಲಿ ಶಶಿಕಾಂತ, ವಿರುಪಾಕ್ಷಿ ಮತ್ತು ಉಪನ್ಯಾಸಕರು ಹಾಗೂ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.